ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹುದ್ದೆಯನ್ನು ಉಳಿಸಿಕೊಳ್ಳುವಲ್ಲಿ ದಿನದಿಂದ ದಿನಕ್ಕೆ ಬಲಿಷ್ಠವಾಗುತ್ತಿದ್ದರೆ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಾಯಕತ್ವ ಬದಲಾವಣೆಯ ಬಗ್ಗೆ ಮೌನ ಕಾಯ್ದುಕೊಂಡಿರುವುದರಿಂದ, ಅವರ ಬೆಂಬಲದ ಪಾಳೆಯವು ತನ್ನ ಉತ್ಸಾಹವನ್ನು ಕಳೆದುಕೊಳ್ಳುತ್ತಿರುವಂತೆ ಇತ್ತೀಚೆಗೆ ಕಾಣುತ್ತಿದೆ.
ಅಸಹಾಯಕತೆ ತೋಡಿಕೊಳ್ಳುತ್ತಿರುವ ಡಿಕೆಶಿ ಬೆಂಬಲಿಗ ಶಾಸಕರು
ನವೆಂಬರ್ ಕ್ರಾಂತಿ, ಮುಖ್ಯಮಂತ್ರಿ ಹುದ್ದೆಯ ಬದಲಾವಣೆಯ ಊಹಾಪೋಹಗಳ ಮಧ್ಯೆ ಗಾಯದ ಮೇಲೆ ಉಪ್ಪು ಸವರಲು ಎಂಬಂತೆ ದಲಿತ ಸಚಿವರು ರ್ಯಾಲಿ ನಡೆಸಲು ಯೋಜಿಸಿದ್ದಾರೆ. ಅಹಿಂದ ಸಂಘಟನೆಯ ಸದಸ್ಯರು ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿಯಬೇಕು ಎಂದು ಹೈಕಮಾಂಡ್‌ಗೆ ಸಂದೇಶ ರವಾನಿಸಲು ಸಹಿ ಅಭಿಯಾನವನ್ನು ಪ್ರಾರಂಭಿಸುತ್ತಿದ್ದಾರೆ.
ಡಿ ಕೆ ಶಿವಕುಮಾರ್ ನಿಷ್ಠರಾಗಿರುವ ಕೆಲವು ಮೊದಲ ಬಾರಿಗೆ ಶಾಸಕರಾದವರು ಸಿದ್ದರಾಮಯ್ಯ ಪಾಳಯವನ್ನು ಎದುರಿಸಲು ಡಿಕೆಶಿಯವರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೆಂಬಲಿಸುತ್ತಿಲ್ಲ ಎಂದು ನಿರಾಶೆಗೊಂಡಿದ್ದಾರೆ. ತಮ್ಮ ಆಪ್ತ ವಲಯದಲ್ಲಿ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಡಿ ಕೆ ಸುರೇಶ್ ಹೇಳಿದ್ದೇನು?
ಈ ಮಧ್ಯೆ, 2023ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಧಿಕಾರ ಹಂಚಿಕೆಯ ಒಪ್ಪಂದದಂತೆ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಶ್ರೀರಕ್ಷಗೆ ನಿಲ್ಲುತ್ತಾರೆ, ತಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ ಎಂಬ ಆಶಾವಾದದಲ್ಲಿ ಶಿವಕುಮಾರ್ ಇದ್ದಾರೆ.
ಈ ಬಗ್ಗೆ ನಿನ್ನೆ ಪ್ರತಿಕ್ರಿಯೆ ನೀಡಿರುವ ಡಿ ಕೆ ಸುರೇಶ್, ನಮ್ಮಲ್ಲಿ ಆಶಾವಾದ ಇದೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಅದೃಷ್ಟವಿದ್ದರೆ ಅದು ಆಗುತ್ತದೆ, ಇಲ್ಲದಿದ್ದರೆ ಆಗುವುದಿಲ್ಲ. ಅವರು ಹೈಕಮಾಂಡ್ ಸೂಚನೆಯಂತೆ ಮುಂದಿನ ಹೆಜ್ಜೆ ಇಡುತ್ತಾರೆ ಎಂದರು.
ಸಿದ್ದರಾಮಯ್ಯನವರು 2028 ರ ವಿಧಾನಸಭಾ ಚುನಾವಣೆಯನ್ನು ಮುನ್ನಡೆಸುವುದರಲ್ಲಿ ಮತ್ತು ಚುನಾವಣೆಗಳಲ್ಲಿ ಸ್ಪರ್ಧಿಸುವುದರಲ್ಲಿ ಯಾವುದೇ ತಪ್ಪಿಲ್ಲ, ಅವರು ಚುರುಕಾಗಿದ್ದಾರೆ ಎಂದು ಡಿ ಕೆ ಸುರೇಶ್ ಹೇಳಿದರು. ಎಸ್‌ಸಿ/ಎಸ್‌ಟಿ ಸಚಿವರು ರ್ಯಾಲಿಯನ್ನು ಯೋಜಿಸುತ್ತಿರುವ ಬಗ್ಗೆ, ಇದು ಸ್ವಾಗತಾರ್ಹ ಕ್ರಮವಾಗಿದೆ ಏಕೆಂದರೆ ಇದು ಪಕ್ಷವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ ಮುಂದುವರಿಸಲು ಪ್ರಯತ್ನಿಸುತ್ತಿರುವ ಗುಂಪು ಮತ್ತು ದಲಿತ ಮುಖ್ಯಮಂತ್ರಿ ಬಗ್ಗೆ ಚರ್ಚೆಗಳು ಮುನ್ನೆಲೆಗೆ ಬರುತ್ತಿರುವ ಬಗ್ಗೆ ಕೇಳಿದಾಗ, ಡಿ ಕೆ ಶಿವಕುಮಾರ್ ವಿವಾದಕ್ಕೆ ಸಿಲುಕದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ. ಅನಗತ್ಯ ವಿಷಯಗಳ ಬಗ್ಗೆ ಮಾತನಾಡುವ ಮೂಲಕ ಅಮೂಲ್ಯ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಬೇಡಿ ಎಂದಷ್ಟೇ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಕೆ ಎನ್ ರಾಜಣ್ಣರಿಂದ ಸಿದ್ದರಾಮಯ್ಯಗೆ ಭೋಜನಕೂಟ
ಈ ಮಧ್ಯೆ, ಮಾಜಿ ಸಚಿವ ಕೆ.ಎನ್. ರಾಜಣ್ಣ ನವೆಂಬರ್ 7 ರಂದು ತುಮಕೂರಿಗೆ ಅಧಿಕೃತ ಭೇಟಿ ನೀಡುವ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಭೋಜನ ಕೂಟವನ್ನು ಆಯೋಜಿಸಲು ಮುಂದಾಗಿದ್ದಾರೆ. ರಾಜಣ್ಣ ಅವರು ಹೆಚ್ಚಿನ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಗೆ ಒತ್ತಾಯಿಸುತ್ತಿದ್ದಾರೆ.
ನವೆಂಬರ್ ನಂತರ ಅಧಿಕಾರದಲ್ಲಿ ಉಳಿಯುವ ವಿಶ್ವಾಸ ಸಿದ್ದರಾಮಯ್ಯಗೆ ಇಲ್ಲ
ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷಗಳನ್ನು ಪೂರೈಸುವ ನವೆಂಬರ್ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರದಲ್ಲಿ ಉಳಿಯುವ ವಿಶ್ವಾಸವಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಕರ್ನಾಟಕದಲ್ಲಿ ಸಿಎಂ ಕುರ್ಚಿಗಾಗಿ ಹೊಡೆದಾಟ ಪ್ರಾರಂಭವಾಗಿದೆ ಎಂದು ಹೇಳಿದರು.
ಈ ಹಿಂದೆ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ತಾವೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಹೇಳುತ್ತಿದ್ದರು. ಈಗ ಅವರು ಹೇಳುತ್ತಿದ್ದಾರೆ ಹೈಕಮಾಂಡ್‌ಗೆ ಬಿಟ್ಟದ್ದು ಎಂದು. ಕೆಲವು ಶಾಸಕರು ಡಿಕೆ ಶಿವಕುಮಾರ್ ಅವರನ್ನು ಸಿಎಂ ಆಗಬೇಕೆಂದು ಬಯಸುತ್ತಾರೆ. ಈ ಜಗಳವು ರಾಜ್ಯದ ಅಭಿವೃದ್ಧಿಯನ್ನು ನಿರ್ಲಕ್ಷಿಸಲು ಕಾರಣವಾಗಿದೆ ಎಂದರು.
ಕಾಂಗ್ರೆಸ್‌ನಲ್ಲಿನ ಈ ಆಂತರಿಕ ವೈಮನಸ್ಸಿನಿಂದ ರಾಜ್ಯ ಆಡಳಿತವು ಸಂಪೂರ್ಣವಾಗಿ ಕುಸಿದಿದೆ. ಅನೇಕ ಕಾಂಗ್ರೆಸ್ ಶಾಸಕರು ತಮ್ಮ ಪಕ್ಷದ ಹೈಕಮಾಂಡ್ ಅವರಿಗೆ ಅವಕಾಶ ನೀಡಿದರೆ ತಾವು ಸಿದ್ಧರಿದ್ದೇವೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿಯಾಗಲು ಆಶಿಸಿದ್ದಾರೆ. ಕರ್ನಾಟಕ, ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರಗಳು ಜಾರಿಗೆ ತಂದಿರುವ ಖಾತರಿ ಯೋಜನೆಗಳು ಅಭಿವೃದ್ಧಿ ದೃಷ್ಟಿಯಲ್ಲಿ ಸಂಕಷ್ಟಕ್ಕೆ ಸಿಲುಕಿಸಿವೆ ಎಂದು ವಿಜಯೇಂದ್ರ ಟೀಕಿಸಿದರು.