ಬೆಂಗಳೂರು: ನಮ್ಮ ಮನೆಯ ಮುಂದೆ ಕಸ ಸುರಿದರೂ ಪರವಾಗಿಲ್ಲ, ಸರ್ಕಾರ ತನ್ನ ಬಳಿ ಹಣವಿಲ್ಲ, ನಾವು ಪಾಪರ್ ಆಗಿದ್ದೇವೆ ಎಂದು ಘೋಷಿಸಿಕೊಳ್ಳುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಬಹಿರಂಗ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸ ವಿಲೇವಾರಿ ಮಾಡಲು ಅಡ್ಡಿಪಡಿಸಿದರೆ ಬಿಜೆಪಿ ಕಚೇರಿ ಹಾಗೂ ಅವರ ಪಕ್ಷದ ನಾಯಕರ ಮನೆ ಮುಂದೆ ಕಸ ಸುರಿಯುವುದಾಗಿ ನಗರ ಉಸ್ತುವಾರಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇಂತಹ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ ಎಂದು ತಿರುಗೇಟು ನೀಡಿದರು.
ಕಸ ವಿಲೇವಾರಿ ಮಾಡಲು ಸರ್ಕಾರಕ್ಕೆ ಯೋಗ್ಯತೆ ಇಲ್ಲ. ನಮ ಮನೆ ಮುಂದೆ ಕಸ ಹಾಕಿದರೂ ತೊಂದರೆಯಿಲ್ಲ. ಹಣ ಬಿಡುಗಡೆ ಮಾಡಲು ಹಣ ಇಲ್ಲ. ಜನರೇ ನಿಮಗೆ ಛೀಮಾರಿ ಹಾಕುತ್ತಾರೆಎಂದು ವಾಗ್ದಾಳಿ ನಡೆಸಿದರು.
ಡಿ.ಕೆ.ಶಿವಕುಮಾರ್ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ. ಸಮಸ್ಯೆ ಬಗೆಹರಿಸಲು ಹಣ ಬಿಡುಗಡೆ ಮಾಡಿ. ಕಸ ತಂದು ನಮ ಮನೆ ಮುಂದೆ, ಬಿಜೆಪಿ ಕಚೇರಿ ಮುಂದೆ ಹಾಕುತ್ತೇನೆ ಎಂದರೆ ಅದು ನಿಮ ದೌರ್ಬಲ್ಯ ಎಂದು ಕಿಡಿಕಾರಿದರು.