ಬೆಂಗಳೂರು: ರಾಜ್ಯಪಾಲರ ಹುದ್ದೆಗೆ ಕಾಂಗ್ರೆಸ್ ಗೌರವ ನೀಡದೆ ನಡೆದುಕೊಳ್ಳುತ್ತಿದ್ದು, ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಎಲ್ಲಾ ನೀತಿ–ಕಾರ್ಯಕ್ರಮಗಳಿಗೆ ವಿರೋಧಿಸಿ ರಾಜ್ಯ ಜನತೆಗೆ ನಷ್ಟವುಂಟು ಮಾಡುತ್ತಿದ್ದಾರೆಂದು ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಗುರುವಾರ ಆರೋಪಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಮಂಡಲ ವಿಶೇಷ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣದ ವೇಳೆ ಕಾಂಗ್ರೆಸ್ ಶಾಸಕರು ಘೋಷಣೆ ಕೂಗಿ ಅಡ್ಡಿಪಡಿಸಿದ್ದು ತಪ್ಪು. ರಾಜ್ಯಪಾಲರ ಹುದ್ದೆ ಗೌರವಕ್ಕೆ ಪಾತ್ರವಾದುದು. ರಾಜ್ಯಪಾಲರು ತಮಗೆ ಸೂಕ್ತವೆನಿಸುವ ಭಾಷಣವನ್ನು ಓದುವ ಹಕ್ಕು ಹೊಂದಿದ್ದಾರೆ. ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಕಚೇರಿಯ ಗೌರವವನ್ನು ಕುಗ್ಗಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.
ಇದೇ ವೇಳೆ ಜೆಡಿಎಸ್ ಪಕ್ಷದ ಬೆಳ್ಳಿ ಹಬ್ಬದ ಅಂಗವಾಗಿ ಜನವರಿ 24ರಂದು ಹಾಸನದಲ್ಲಿ ಭಾರೀ ಸಮಾವೇಶವನ್ನು ಆಯೋಜಿಸಲಾಗುವುದು ಎಂದು ನಿಖಿಲ್ ಕುಮಾರಸ್ವಾಮಿ ಘೋಷಿಸಿದರು.
ರಾಮನಗರದಲ್ಲಿ ತಮ್ಮ 38ನೇ ಜನ್ಮದಿನದಂದು ಈ ಘೋಷಣೆ ಮಾಡಿದ ನಿಖಿಲ್, ಹಾಸನದಲ್ಲಿ ಜೆಡಿಎಸ್‌ನ ಬಲಿಷ್ಠತೆಯನ್ನು ಈ ಸಮಾವೇಶ ತೋರಿಸಲಿದೆ ಎಂದರು.
ಬಳಿಕ ರಾಜ್ಯದ ಅಭಿವೃದ್ಧಿಯ ಕುರಿತು ಕಾಂಗ್ರೆಸ್ ಹೇಳಿಕೆಗಳನ್ನು ಪ್ರಶ್ನಿಸಿದ ಅವರು, ರಾಮನಗರ ಕ್ಷೇತ್ರದ ರಸ್ತೆ ಸ್ಥಿತಿಗೆ ಸಂಬಂಧಿಸಿದಂತೆ ನನ್ನ ತಾಯಿ ಹಾಗೂ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ನಾಯಕರು ಟೀಕೆ ಮಾಡಿದ್ದರು. ಈಗ ಕಾಂಗ್ರೆಸ್ ಆಡಳಿತದಲ್ಲಿ ರಾಮನಗರದ ರಸ್ತೆಗಳ ಸ್ಥಿತಿ ಸುಧಾರಣೆಯಾಗಿದೆಯೇ? ಎಂದು ಪ್ರಶ್ನಿಸಿದರು.
ಹಾಸನದಲ್ಲಿ ತನ್ನ ನೆಲೆಯನ್ನು ಬಲಪಡಿಸಲು ಕಾಂಗ್ರೆಸ್ ಸಮಾವೇಶಗಳನ್ನು ನಡೆಸುತ್ತಿದೆ. ಜೆಡಿಎಸ್‌ನ ಬೆಳ್ಳಿ ಹಬ್ಬದ ಸಮಾವೇಶವು ಜನರ ಬೆಂಬಲವನ್ನು ಮತ್ತೊಮ್ಮೆ ದೃಢಪಡಿಸಲಿದೆ. ಈ ಸಮಾವೇಶಕ್ಕೆ ಅಪಾರ ಸಂಖ್ಯೆಯ ಜನರು ಸೇರುವ ನಿರೀಕ್ಷೆಯಿದೆ. ಬೆಳ್ಳಿ ಹಬ್ಬದ ಅಂಗವಾಗಿ ರಾಜ್ಯದಾದ್ಯಂತ ಜೆಡಿಎಸ್ ವಿವಿಧ ಸಮಾವೇಶಗಳು ಹಾಗೂ ಸಭೆಗಳನ್ನು ಆಯೋಜಿಸಲಿದೆ ಎಂದು ತಿಳಿಸಿದರು.
ಏತನ್ಮಧ್ಯೆ ಇತ್ತೀಚೆಗೆ ಹಾಸನದಲ್ಲಿ ನಡೆದ ಕಾಂಗ್ರೆಸ್‌ನ ಎರಡು ಸಮಾವೇಶಗಳಿಗೆ ಪ್ರತಿಯಾಗಿ ಈ ರ್ಯಾಲಿ ನಡೆಯಲಿದೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.