ಕರ್ನಾಟಕ ಬಿಜೆಪಿ  
ರಾಜಕೀಯ

ಕೋರ್ ಕಮಿಟಿ ಸಭೆಯಲ್ಲಿ ಶಿಸ್ತು ಉಲ್ಲಂಘನೆ ಚರ್ಚೆ: ಕರ್ನಾಟಕ ಬಿಜೆಪಿ ನಿಯಂತ್ರಿಸುತ್ತಿರುವ ಆ ಕಾಣದ 'ಕೈ' ಯಾವುದು?

ಇದರೊಂದಿಗೆ ಮತ್ತೊಂದು ಗಂಭೀರ ಪ್ರಶ್ನೆಯೂ ಉದ್ಭವಿಸಿದೆ—ರಾಜ್ಯ ನಾಯಕತ್ವದ ವಿರುದ್ಧ ಕಾಲಕಾಲಕ್ಕೆ ಬಹಿರಂಗವಾಗಿ ವ್ಯಕ್ತವಾಗುವ ಅಸಮಾಧಾನದ ಹಿಂದೆ ಪಕ್ಷದೊಳಗಿನ ಕಾಣದ ಒಳಜಗಳವೇ ಕಾರಣವೇ ಎಂಬ ಸಂದೇಹ ಉಂಟಾಗುತ್ತಿದೆ.

ಬೆಂಗಳೂರು: ರಾಜ್ಯ ಬಿಜೆಪಿ ಹಲವು ರಾಜಕೀಯ ಹಾಗೂ ಸಂಘಟನಾ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಪಕ್ಷದ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ವೇದಿಕೆಯಾದ ಕೋರ್ ಕಮಿಟಿ ತನ್ನ ಅಮೂಲ್ಯ ಸಮಯವನ್ನು ಶಿಸ್ತು ಉಲ್ಲಂಘನೆ ಕುರಿತು ಚರ್ಚಿಸಲು ಏಕೆ ಮೀಸಲಿಡಬೇಕಾಯಿತು ಎಂಬ ಪ್ರಶ್ನೆ ಪಕ್ಷದೊಳಗೆ ಹಾಗೂ ಬೆಂಬಲಿಗರ ವಲಯದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.

ಭಾನುವಾರ ನಡೆದ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯ ಘಟಕದಲ್ಲಿ ಹೆಚ್ಚುತ್ತಿರುವ ಶಿಸ್ತು ಉಲ್ಲಂಘನೆ ಪ್ರಕರಣಗಳ ಬಗ್ಗೆ ಸಾಕಷ್ಟು ಸಮಯ ಚರ್ಚೆ ನಡೆದಿರುವ ವರದಿಗಳ ಬಳಿಕ, ಬಿಜೆಪಿ ಬೆಂಬಲಿಗರ ವಾಟ್ಸಾಪ್ ಗುಂಪುಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ಚರ್ಚೆ ಜೋರಾಗಿದೆ.

ಇದರೊಂದಿಗೆ ಮತ್ತೊಂದು ಗಂಭೀರ ಪ್ರಶ್ನೆಯೂ ಉದ್ಭವಿಸಿದೆ—ರಾಜ್ಯ ನಾಯಕತ್ವದ ವಿರುದ್ಧ ಕಾಲಕಾಲಕ್ಕೆ ಬಹಿರಂಗವಾಗಿ ವ್ಯಕ್ತವಾಗುವ ಅಸಮಾಧಾನದ ಹಿಂದೆ ಪಕ್ಷದೊಳಗಿನ ಕಾಣದ ಒಳಜಗಳವೇ ಕಾರಣವೇ ಎಂಬ ಸಂದೇಹ ಉಂಟಾಗುತ್ತಿದೆ.

ಆದರೆ, ಬಿಜೆಪಿಯ ಹಿರಿಯ ಮೂಲಗಳ ಪ್ರಕಾರ, ಇವು ಆಕಸ್ಮಿಕ ಭಾವನಾತ್ಮಕ ಪ್ರತಿಕ್ರಿಯೆಗಳಲ್ಲ; ಬದಲಾಗಿ, ಅಧಿಕಾರಕ್ಕಾಗಿ ನಡೆಯುತ್ತಿರುವ ಯೋಜಿತ ಸಂಘರ್ಷದ ಭಾಗವಾಗಿದೆ.

ಇವು ಸಹಜವಾಗಿ ವ್ಯಕ್ತವಾಗುವ ಅಸಮಾಧಾನವಲ್ಲ; ಉದ್ದೇಶಪೂರ್ವಕವಾಗಿ ಸೃಷ್ಟಿಸುವ ಪ್ರತಿಭಟನೆಗಳು. ಇದರ ಹಿಂದಿರುವ ಪ್ರಮುಖ ವ್ಯಕ್ತಿ ದೆಹಲಿಯಲ್ಲಿದ್ದು, ರಾಷ್ಟ್ರೀಯ ಸಂಘಟನೆಯಲ್ಲಿ ಅತ್ಯಂತ ಪ್ರಭಾವಶಾಲಿ ಸ್ಥಾನದಲ್ಲಿದ್ದಾರೆ. ರಾಜ್ಯದಲ್ಲಿ ಅವರ ಹೆಸರನ್ನೇ ಯಾರೂ ಉಲ್ಲೇಖಿಸಲು ಧೈರ್ಯವಿಲ್ಲ ಇನ್ನು ಕ್ರಮ ಕೈಗೊಳ್ಳುವುದು ದೂರದ ಮಾತು ಎಂದು ಬಿಜೆಪಿಯ ಉನ್ನತ ಮೂಲವೊಂದು ತಿಳಿಸಿದೆ.

ರಾಜ್ಯ ಬಿಜೆಪಿ ಉಸ್ತುವಾರಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ್ ರಾವ್ ವಿರುದ್ಧ "ಗೋ ಬ್ಯಾಕ್ ಮುರಳೀಧರ್" ಎಂಬ ಘೋಷಣೆಗಳು ಕೇಳಿಬಂದಿದ್ದೇ ಮೊದಲ ಶಿಸ್ತು ಉಲ್ಲಂಘನೆಯ ಘಟನೆ ಎಂದು ಮೂಲಗಳು ಹೇಳಿವೆ.

ಇತ್ತೀಚೆಗೆ, ವಿಧಾನ ಪರಿಷತ್ ಚುನಾವಣೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ವಕ್ತಾರ ಎಂ.ಜಿ. ಮಹೇಶ್ ಅವರು ರಾಜ್ಯ ಸಂಘಟನಾ ನಾಯಕತ್ವದ ವಿರುದ್ಧ ಬಹಿರಂಗವಾಗಿ ಟೀಕೆ ಮಾಡಿದ್ದರು. ಮತ್ತೋರ್ವ ಹಿರಿಯ ನಾಯಕರೂ ತಮ್ಮ ಅಸಮಾಧಾನವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಿದ್ದರು.

ಶಿಸ್ತು ಉಲ್ಲಂಘನೆಯಲ್ಲಿ ತೊಡಗುವವರು ಒಂದೇ ಅಧಿಕಾರ ಕೇಂದ್ರಕ್ಕೆ ಸೇರಿದವರು. ಆ ಗುಂಪಿನ ನಿರೀಕ್ಷೆಗೆ ವಿರುದ್ಧವಾಗಿ ನೇಮಕಾತಿ ಅಥವಾ ನಾಮನಿರ್ದೇಶನವಾದಾಗಲೆಲ್ಲ ಟೀಕೆ ಆರಂಭವಾಗುತ್ತದೆ ಎಂದು ಮೂಲವೊಂದು ತಿಳಿಸಿದೆ.

ಇತ್ತೀಚಿನ ವಿವಾದಕ್ಕೆ ರಘು ಕೌಟಿಲ್ಯ ಅವರನ್ನು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆ ಮಾಡಿರುವುದು ಕಾರಣವಾಗಿದೆ. ಹಿಂದಿನ ಚುನಾವಣೆಯಲ್ಲಿ ಆರ್ಥಿಕ ನಷ್ಟ ಅನುಭವಿಸಿದ್ದ ಇತರೆ ಹಿಂದುಳಿದ ವರ್ಗದ (OBC) ನಾಯಕ ರಘು ಕೌಟಿಲ್ಯ ಅವರಿಗೆ ಸಂಘಟನಾ ಮಟ್ಟದಲ್ಲಿ ಪರಿಹಾರವಾಗಿ ಈ ಸ್ಥಾನ ನೀಡಬೇಕು ಎಂಬ ಅಭಿಪ್ರಾಯಕ್ಕೆ ರಾಜ್ಯ ನಾಯಕತ್ವ ಬೆಂಬಲ ನೀಡಿತ್ತು ಎಂದು ಮೂಲಗಳು ಹೇಳಿವೆ.

ಈ ನಿರ್ಧಾರದಿಂದ, ತಾವೂ ಒಬಿಸಿ ಸಮುದಾಯದವರಾಗಿರುವ ಎಂ.ಜಿ. ಮಹೇಶ್ ನಿರಾಶೆಗೊಂಡು ಬಹಿರಂಗ ಟೀಕೆ ನಡೆಸಿದರು ಎನ್ನಲಾಗಿದೆ.

ಈ ಹಿಂದೆ, ಮಾಜಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಪಕ್ಷದ ನಾಯಕತ್ವವನ್ನು ಬೆಂಬಲಿಸಿದ್ದ ಸಂದರ್ಭದಲ್ಲಿ, ಬಿ.ಎಸ್. ಯಡಿಯೂರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ, ಬಳಿಕ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಬೆಳವಣಿಗೆಗಳ ಸಂದರ್ಭದಲ್ಲಿಯೂ ಇದೇ ರೀತಿಯ ಬಹಿರಂಗ ಅಸಮಾಧಾನ ವ್ಯಕ್ತವಾಗಿತ್ತು ಎಂದು ಮೂಲಗಳು ನೆನಪಿಸಿವೆ.

ಮಾಜಿ ಶಾಸಕ ನಿರ್ಮಲ್ ಕೆ. ಸುರಾಣ ಅವರ ಹೆಸರನ್ನು ರಾಜ್ಯ ಘಟಕವು ಪದೇ ಪದೇ ಶಿಫಾರಸು ಮಾಡಿದ್ದನ್ನೂ ಪಕ್ಷದೊಳಗಿನ ಎರಡು ಬಣಗಳ ನಡುವಿನ ಪೈಪೋಟಿಯ ಭಾಗವಾಗಿಯೇ ಕೆಲವರು ಪರಿಗಣಿಸಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಎರಡು ಬಣ

ಪಕ್ಷದ ಕಾರ್ಯಕರ್ತರ ಪ್ರಕಾರ, ರಾಜ್ಯ ಬಿಜೆಪಿ ಪ್ರಸ್ತುತ ಎರಡು ಪ್ರತ್ಯೇಕ ಅಧಿಕಾರ ಕೇಂದ್ರಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಒಂದು ಬಣವನ್ನು ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮುನ್ನಡೆಸುತ್ತಿದ್ದರೆ, ಮತ್ತೊಂದು ಬಣವನ್ನು ದೆಹಲಿಯಲ್ಲಿರುವ ಹಿರಿಯ ಸಂಘಟನಾ ನಾಯಕರು ಪರೋಕ್ಷವಾಗಿ ನಿಯಂತ್ರಿಸುತ್ತಿದ್ದಾರೆ ಎನ್ನಲಾಗಿದೆ.

ಒಂದು ಬಣ ಪಕ್ಷದೊಳಗೇ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ, ಅಂತಿಮವಾಗಿ ನಾಯಕತ್ವದ ನಿರ್ಧಾರವನ್ನು ಒಪ್ಪಿಕೊಳ್ಳುತ್ತದೆ. ಆದರೆ ಇನ್ನೊಂದು ಬಣ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತದೆ ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ದೆಹಲಿ ಮೂಲದ ಆ ಹಿರಿಯ ಸಂಘಟನಾ ನಾಯಕರಿಗೆ ಅವರ ಹಿನ್ನೆಲೆಯ ಕಾರಣದಿಂದ ವಿಶೇಷ ರಕ್ಷಣೆ ದೊರೆಯುತ್ತಿದೆ ಎಂಬ ಅಭಿಪ್ರಾಯವೂ ಕೆಲ ನಾಯಕರಲ್ಲಿದೆ. ಇದೇ ಕಾರಣದಿಂದ ಪಕ್ಷದೊಳಗೆ ಹಲವು ಆರೋಪಗಳು ಕೇಳಿಬಂದಿದ್ದರೂ, ಅವರ ಪಾತ್ರವನ್ನು ಪ್ರಶ್ನಿಸಲು ಸಂಘಟನೆ ಹಿಂದೇಟು ಹಾಕುತ್ತಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶೋಪಿಯಾನ್‌ ಎನ್‌ಕೌಂಟರ್‌: ಅಡಗಿಕುಳಿತಿದ್ದ LET ಉಗ್ರನ ಹೊಡೆದುರುಳಿಸಿದ ಸೇನಾಪಡೆ..!

ಬಾರೂಯೀಪುರ್ ಅತ್ಯಾಚಾರ ಪ್ರಕರಣ: ಪಾಪದ ಕೃತ್ಯಕ್ಕೆ ತಕ್ಕ ಶಿಕ್ಷೆ: ಅವನ ಮುಖ ನೋಡಲ್ಲ, ಶವ ಕೂಡ ಮನೆಗೆ ತರಲ್ಲ; ಆರೋಪಿ ತಾಯಿ ಮಾತು!

ಯೋಗ್ಯ ವ್ಯಕ್ತಿಗಳು ಪರಿಷತ್ ಗೆ ಬರಬೇಕು- ಚಪಲ ತೀರಿಸಿಕೊಳ್ಳಲು ಬರ್ತಿದ್ದಾರೆ: ಸಿ.ಎನ್‌. ಮಂಜುನಾಥ್ ಕಣಕ್ಕಿಳಿಸುವ ತಂತ್ರ ಹೆಣೆದಿದ್ದೇ ನಾನು!

ನಿಜ್ಜರ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ ವಿರುದ್ಧ ಅಮೆರಿಕಾ ಚಾರ್ಜ್‌ಶೀಟ್, 24 ಮಂದಿ ಬಂಧನ..!

ಬಾರೂಯೀಪುರ್ ಬಾಲಕಿ ಅತ್ಯಾಚಾರ-ಕೊಲೆ ಪ್ರಕರಣ: ಸ್ಥಳ ಮಹಜರು ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಬಲಿ..!