ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣಾ ಕಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದ 40 ಪರ್ಸೆಂಟ್ ಕಮಿಷನ್ ರೇಟ್ ಕಾರ್ಡ್ ವಿವಾದ ಇದೀಗ ಅಂತಿಮ ತಿರುವು ಪಡೆದುಕೊಂಡಿದೆ. ಬಿಜೆಪಿ ನಾಯಕರು ದಾಖಲಿಸಿದ್ದ ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಹೈಕೋರ್ಟ್ನಿಂದ ಬಹುದೊಡ್ಡ ಕಾನೂನು ಮುಕ್ತಿ ಸಿಕ್ಕಿದ್ದು, ಬಿಜೆಪಿ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ನ್ಯಾಯಾಲಯ ಸಂಪೂರ್ಣವಾಗಿ ರದ್ದುಗೊಳಿಸಿದೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಪ್ರಕರಣ?
2023ರ ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೆಲವೇ ದಿನಗಳ ಮುನ್ನ ಕಾಂಗ್ರೆಸ್ ಪಕ್ಷವು ಪತ್ರಿಕೆಗಳಲ್ಲಿ 40% ಕಮಿಷನ್ ಸರ್ಕಾರ, ಭ್ರಷ್ಟಾಚಾರ ರೇಟ್ ಕಾರ್ಡ್ ಹಾಗೂ ಟ್ರಬಲ್ ಇಂಜಿನ್ ಸರ್ಕಾರ ಎಂಬ ಜಾಹೀರಾತುಗಳನ್ನು ಪ್ರಕಟಿಸಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಹುದ್ದೆಗಳು ಮತ್ತು ಕಾಮಗಾರಿಗಳಿಗೆ ಇಂತಿಷ್ಟು ಕಮಿಷನ್ ದರ ನಿಗದಿಯಾಗಿದೆ ಎಂದು ಆರೋಪಿಸಿತ್ತು. ಆದರೆ, ಈ ಜಾಹೀರಾತುಗಳು ಸುಳ್ಳು ಮತ್ತು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ದುರುದ್ದೇಶದಿಂದ ಕೂಡಿದ್ದು ಎಂದು ಆರೋಪಿಸಿ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಸ್. ಕೇಶವ ಪ್ರಸಾದ್ ಅವರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ರಾಹುಲ್ ಗಾಂಧಿ ಹಾಗೂ ಕೆಪಿಸಿಸಿ ವಿರುದ್ಧ ಖಾಸಗಿ ಕ್ರಿಮಿನಲ್ ಮಾನನಷ್ಟ ದೂರು ದಾಖಲಿಸಿದ್ದರು. ಆದರೆ, ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕರು ಕ್ರಿಮಿನಲ್ ಅರ್ಜಿಯನ್ನು ಹೈಕೋರ್ಟಿನಲ್ಲಿ ಸಲ್ಲಿಸಿದ್ದರು.
ಇನ್ನು, ಕಾಂಗ್ರೆಸ್ ನಾಯಕರ ಅರ್ಜಿಗೆ ಕೌಂಟರ್ ಅರ್ಜಿ ಸಲ್ಲಿಸಿದ್ದ ರಾಜ್ಯ ಬಿಜೆಪಿ, ಜಾಹೀರಾತಿನಿಂದಾಗಿ ತಮಗೆ ಪ್ರತ್ಯುತ್ತರ ನೀಡಲು ಕಾಲಾವಕಾಶ ಸಿಗಲಿಲ್ಲ ಹಾಗೂ ಬಿಜೆಪಿಯ ಜನಪ್ರಿಯ 'ಡಬಲ್ ಎಂಜಿನ್ ಸರ್ಕಾರ' ಎಂಬ ಘೋಷಣೆಯ ಬದಲು 'ಟ್ರಬಲ್ ಎಂಜಿನ್ ಸರ್ಕಾರ' ಎಂಬ ಪದ ಬಳಸಿ ಅಪಪ್ರಚಾರ ಮಾಡಲಾಗಿದ್ದು, ಇದು ಪಕ್ಷದ ವರ್ಚಸ್ಸಿಗೆ ಮತ್ತು ಚುನಾವಣಾ ಫಲಿತಾಂಶಕ್ಕೆ ಧಕ್ಕೆ ತರುವ ದುರುದ್ದೇಶದಿಂದ ಕೂಡಿದೆ. ಅದರಲ್ಲೂ, ಈ ಅಪಪ್ರಚಾರದಿಂದಾಗಿಯೇ ಚುನಾವಣೆಯಲ್ಲಿ ಪಕ್ಷ 40 ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ಹೈಕೋರ್ಟ್ನಲ್ಲಿ ವಾದಿಸಿತ್ತು.
ಮುಂದುವರೆದು, ಪ್ರಕರಣ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಕಾಂಗ್ರೆಸ್ ನಾಯಕರ ಅರ್ಜಿಯ ವಿಚಾರಣೆ ನಡೆಸಿ, ಸಿದ್ದರಾಮಯ್ಯ ಅವರ ವಿರುದ್ಧದ ವಿಚಾರಣಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ. ಏತನ್ಮಧ್ಯೆ, ಈ ಹಿಂದೆ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಗಳಿಗೆ ತಡೆ ನೀಡಿತ್ತು. ಆ ವೇಳೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಅಂದಿನ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೆಪಿಸಿಸಿ ವಿರುದ್ಧದ ವಿಚಾರಣೆಗೂ ಹೈಕೋರ್ಟ್ ಮಧ್ಯಂತರ ತಡೆ ನೀಡಿತ್ತು. ಆದರೆ, ಪ್ರಸ್ತುತ ಆದೇಶವು ಸಿದ್ದರಾಮಯ್ಯ ಅವರಿಗೆ ಮಾತ್ರ ಅನ್ವಯಿಸಲಿದ್ದು, ಉಳಿದ ಆರೋಪಿಗಳ ಪ್ರತ್ಯೇಕ ಅರ್ಜಿಗಳು ಈ ಆದೇಶದ ವ್ಯಾಪ್ತಿಗೆ ಒಳಪಟ್ಟಿಲ್ಲ ಎನ್ನಲಾಗಿದೆ.
‘40% ಕಮಿಷನ್’ ತನಿಖಾ ವರದಿ..
ಮತ್ತೊಂದೆಡೆ, ಇದೇ 40% ಕಮಿಷನ್ ಆರೋಪದ ತನಿಖೆಗಾಗಿ ಕಾಂಗ್ರೆಸ್ ಸರ್ಕಾರ ರಚಿಸಿದ್ದ ನ್ಯಾಯಮೂರ್ತಿ ನಾಗಮೋಹನ್ ದಾಸ್ ಸಮಿತಿಯು ತನ್ನ ವರದಿಯನ್ನು ಸರ್ಕಾರಕ್ಕೆ ಕೆಲ ದಿನಗಳ ಹಿಂದೆ ಸಲ್ಲಿಸಿತ್ತು. ಇದರಲ್ಲಿ ಸಮಿತಿಯು, ಕಾಂಟ್ರಾಕ್ಟರ್ ಅಸೋಸಿಯೇಷನ್ ಮಾಡಿದ '40% ಕಮಿಷನ್' ಆರೋಪವನ್ನು ಸಂಪೂರ್ಣವಾಗಿ (100%) ಸಾಬೀತುಪಡಿಸಲು ಯಾವುದೇ ಗಟ್ಟಿ ಆಧಾರಗಳು ಲಭ್ಯವಾಗಿಲ್ಲ ಎಂದು ತಿಳಿಸಿತ್ತು. ಆದರೆ, ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಇರುವುದು ನಿಜ ಮತ್ತು ಹಿಂದಿನ ಸರ್ಕಾರದ ಅವಧಿಯಲ್ಲಿ ಟೆಂಡರ್ ಪ್ರಕ್ರಿಯೆಗಳಲ್ಲಿ ನಿಯಮ ಉಲ್ಲಂಘನೆ ಹಾಗೂ ಗಂಭೀರ ಅಕ್ರಮಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿತ್ತು.