ಬೆಂಗಳೂರು: ಕೈಗಾರಿಕೆಗಳು ಕರ್ನಾಟಕದಿಂದ ಬೇರೆ ರಾಜ್ಯಗಳಿಗೆ ಸ್ಥಳಾಂತರಗೊಳ್ಳುತ್ತಿವೆ ಎಂದು ಹೇಳುವ ಮೂಲಕ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸಚಿವ ಎಂ.ಬಿ. ಪಾಟೀಲ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತರ ರಾಜ್ಯಗಳು ಹೆಚ್ಚಿನ ಪ್ರೋತ್ಸಾಹಕಗಳನ್ನು ನೀಡುವ ಮೂಲಕ ಹೂಡಿಕೆದಾರರನ್ನು ಸೆಳೆಯಲು ಪೈಪೋಟಿ ನಡೆಸುತ್ತಿದ್ದರೂ ಕರ್ನಾಟಕಕ್ಕೆ ಪ್ರಮುಖ ಹೂಡಿಕೆಗಳು ಹರಿದುಬರುತ್ತಿವೆ ಎಂದು ಹೇಳಿದ್ದಾರೆ.
ಇದೇ ವೇಳೆ ಹೋಂಡಾ ಕಂಪನಿ ಕರ್ನಾಟಕದಿಂದ ಹೊರಹೋಗಲು ಚಿಂತನೆ ನಡೆಸುತ್ತಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಂಪನಿಯ ಪ್ರತಿನಿಧಿಗಳು ತಮ್ಮ ಇಲಾಖೆಯನ್ನು ಸಂಪರ್ಕಿಸಿ ಯಾವುದೇ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೋಂಡಾ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಬೇರೆ ರಾಜ್ಯಕ್ಕೆ ಸ್ಥಳಾಂತರಗೊಳ್ಳಲು ಯೋಜಿಸುತ್ತಿದ್ದಾರೆ ಎಂದು ಅವರು ಹೇಳುತ್ತಾರೆ. ಆದರೆ, ಕಂಪನಿಯ ಪ್ರತಿನಿಧಿಗಳು ನಮ್ಮನ್ನು ಭೇಟಿಯೇ ಆಗಿಲ್ಲ. ನಮ್ಮ ಇಲಾಖೆಯ ಮೂಲಕ ಅಗತ್ಯವಿರುವ ಎಲ್ಲ ಸಹಕಾರ ನೀಡಲು ಸಿದ್ಧರಿದ್ದೇವೆ. ಕುಮಾರಸ್ವಾಮಿ ಸಾಕಷ್ಟು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯಕ್ಕೆ ಹೂಡಿಕೆಗಳನ್ನು ಆಕರ್ಷಿಸಲು ಸಹಾಯ ಮಾಡಲು ಸಾಧ್ಯವಾಗದಿದ್ದರೆ, ಕನಿಷ್ಠ ಇಂತಹ ಆರೋಪಗಳನ್ನು ಮಾಡುವುದರಿಂದ ಕುಮಾರಸ್ವಾಮಿ ದೂರವಿರಬೇಕು ಎಂದು ತಿರುಗೇಟು ನೀಡಿದರು.
ಹೂಡಿಕೆದಾರರಿಗೆ ನೀಡುವ ಪ್ರೋತ್ಸಾಹಕಗಳ ಕುರಿತು ಮಾತನಾಡಿದ ಪಾಟೀಲ್, ಕರ್ನಾಟಕ ತನ್ನದೇ ಆದ ನೀತಿ ಮತ್ತು ನಿಯಮಾವಳಿಗಳನ್ನು ಹೊಂದಿದ್ದು, ಅದರಡಿ ಶೇ. 35ರಿಂದ 40ರಷ್ಟು ಪ್ರೋತ್ಸಾಹಕಗಳನ್ನು ನೀಡಲು ಅವಕಾಶವಿದೆ ಎಂದರು.
ಕೆಲವು ರಾಜ್ಯಗಳು ಶೇ. 50ರಿಂದ 55ರಷ್ಟು ಪ್ರೋತ್ಸಾಹಕಗಳನ್ನು ನೀಡುತ್ತಿರಬಹುದು. ಆದರೆ, ಆರ್ಥಿಕವಾಗಿ ಮತ್ತು ಹಣಕಾಸಿನ ದೃಷ್ಟಿಯಿಂದ ಕಾರ್ಯಸಾಧ್ಯವಲ್ಲದ ಭರವಸೆಗಳನ್ನು ಕರ್ನಾಟಕ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಲೆನ್ಸ್ಕಾರ್ಟ್ ಕಂಪನಿಯ ಉದಾಹರಣೆ ನೀಡಿದ ಅವರು, ಪ್ರಸ್ತಾಪಿತ ಬಂಡವಾಳ ಹೂಡಿಕೆಗಿಂತಲೂ ಹೆಚ್ಚಿನದಾದ ಶೇ. 120ರಷ್ಟು ಪ್ರೋತ್ಸಾಹಕಗಳನ್ನು ಕಂಪನಿ ಕೋರಿತ್ತು ಎಂದು ತಿಳಿಸಿದರು.
ಹೂಡಿಕೆದಾರರಿಗೆ ಸರ್ಕಾರ ಖಂಡಿತವಾಗಿಯೂ ಬೆಂಬಲ ನೀಡಲಿದೆ. ಆದರೆ, ಪ್ರತಿಯೊಂದು ಪ್ರಸ್ತಾವನೆಯನ್ನೂ ಅದರ ಅರ್ಹತೆಯ ಆಧಾರದ ಮೇಲೆ ಪರಿಶೀಲಿಸಲಾಗುವುದು ಎಂದರು.
ಕೇಂದ್ರ ಸರ್ಕಾರ ಮತ್ತು ಗುಜರಾತ್ ರಾಜ್ಯ ನೀಡಿದ ಹೆಚ್ಚಿನ ಪ್ರೋತ್ಸಾಹಕಗಳ ಕಾರಣದಿಂದ ಕರ್ನಾಟಕ ಕೆಲವು ಸೆಮಿಕಂಡಕ್ಟರ್ ಹೂಡಿಕೆಗಳನ್ನು ಕಳೆದುಕೊಂಡಿದೆ ಎಂದೂ ಆರೋಪಿಸಿದ್ದಾರೆ.
ಈ ನಡುವೆ, 2026ರಿಂದ 2031ರವರೆಗಿನ ಅವಧಿಗೆ ಹೊಸ ಏರೋಸ್ಪೇಸ್ ಮತ್ತು ರಕ್ಷಣಾ ನೀತಿಯನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು. ಹಿಂದಿನ ನೀತಿಯ ಅವಧಿ 2025ಕ್ಕೆ ಮುಕ್ತಾಯಗೊಂಡಿದೆ. ಹೊಸ ನೀತಿಯು ವಿಮಾನಗಳ ತಯಾರಿಕೆಗೆ ಮಾತ್ರ ಸೀಮಿತವಾಗದೆ, ಏರೋಸ್ಪೇಸ್ ಬಿಡಿಭಾಗಗಳ ಉತ್ಪಾದನೆ, ಪೂರಕ ಕೈಗಾರಿಕೆಗಳು ಮತ್ತು ಸಂಪೂರ್ಣ ಪೂರೈಕೆ ಸರಪಳಿಯ ಅಭಿವೃದ್ಧಿಗೆ ಒತ್ತು ನೀಡಲಿದೆ. ವಿಶೇಷವಾಗಿ ಮೈಸೂರಿನಲ್ಲಿ ಏರೋಸ್ಪೇಸ್ ಬಿಡಿಭಾಗಗಳ ಉತ್ಪಾದನೆಗೆ ಹೆಚ್ಚಿನ ಅವಕಾಶಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.
ನಾಗರಿಕ ವಿಮಾನಯಾನ ನೀತಿಗೆ ಅನುಮೋದನೆ ಸಾಧ್ಯತೆ
ಇದೇ ವೇಳೆ ರಾಜ್ಯ ಸರ್ಕಾರ ರೂಪಿಸಿರುವ ನಾಗರಿಕ ವಿಮಾನಯಾನ ನೀತಿಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯುವ ಸಾಧ್ಯತೆಯಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಾವಿರಾರು ಕೋಟಿ ರೂಪಾಯಿ ಸಾರ್ವಜನಿಕ ಹಣ ಹೂಡಿಕೆ ಮಾಡಿ ನಿರ್ಮಿಸಿರುವ ವಿಮಾನ ನಿಲ್ದಾಣಗಳು ಬಳಕೆಯಾಗದೆ ಉಳಿಯಬಾರದು ಮತ್ತು ವಿಮಾನಯಾನ ಸಂಪರ್ಕದ ಪ್ರಯೋಜನ ಪ್ರಯಾಣಿಕರು ಹಾಗೂ ಕೈಗಾರಿಕೆಗಳಿಗೆ ತಲುಪಬೇಕು ಎಂಬುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ.
ಶಿವಮೊಗ್ಗದಿಂದ ವಿಮಾನಯಾನ ಸೇವೆಗಳು ಸ್ಥಗಿತಗೊಂಡಿರುವುದಕ್ಕೆ ಕೇಂದ್ರ ಸರ್ಕಾರದ ಉಡಾನ್ ಯೋಜನೆಯೇ ಕಾರಣ ಎಂದು ಪಾಟೀಲ್ ಹೇಳಿದ್ದಾರೆ. ವಿಮಾನಯಾನ ಸೇವೆಯಲ್ಲಿ ವ್ಯತ್ಯಯ ಉಂಟಾಗಿರುವುದಕ್ಕೆ ರಾಜ್ಯ ಸರ್ಕಾರವನ್ನು ಹೊಣೆ ಮಾಡಲಾಗದು ಎಂದು ಹೇಳಿದರು.
ಕೇಂದ್ರ ಸರ್ಕಾರವು ಉಡಾನ್ ಯೋಜನೆಯಡಿ ನೀಡುತ್ತಿರುವ ಪ್ರೋತ್ಸಾಹಕ ಅವಧಿಯನ್ನು ಈಗಿರುವ ಮೂರು ವರ್ಷಗಳಿಂದ ಐದು ವರ್ಷಗಳಿಗೆ ವಿಸ್ತರಿಸಬೇಕು. ಆ ಬಳಿಕದ ಮತ್ತೊಂದು ಐದು ವರ್ಷಗಳ ಅವಧಿಗೆ ವಿಮಾನಯಾನ ಕಾರ್ಯಾಚರಣೆಯ ವೆಚ್ಚದಲ್ಲಿ ಶೇ. 50ರಷ್ಟು ಪಾಲನ್ನು ಭರಿಸಲು ಕರ್ನಾಟಕ ಸಿದ್ಧವಿದೆ ಎಂದು ತಿಳಿಸಿದರು.
ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸುಸ್ಥಿರವಾಗಲು ಕನಿಷ್ಠ 10 ವರ್ಷಗಳ ವೆಚ್ಚ ಹಂಚಿಕೆ ವ್ಯವಸ್ಥೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.