ನವದೆಹಲಿ: ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಸ್ಟಿಂಗ್ ಅಪರೇಷನ್, ಆಡಳಿತರೂಢ ಕಾಂಗ್ರೆಸ್ ಹಾಗೂ ಪ್ರತಿಪಕ್ಷಳಾದ ಜೆಡಿಎಸ್ ಮತ್ತು ಬಿಜೆಪಿ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ.
ಸಚಿವರನ್ನು ಗುರಿಯಾಗಿಸಿಕೊಂಡು 'ಸ್ಟಿಂಗ್ ಆಪರೇಷನ್' ನಡೆಸಲಾಗಿದೆ ಎಂದು ಆರೋಪಿಸಿದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು, ಈ ಬಗ್ಗೆ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.
ದೆಹಲಿಯ ಕರ್ನಾಟಕ ಭವನದ ಬಳಿ, ಕುಮಾರಸ್ವಾಮಿ ಆರೋಪದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್ ಅವರು. ಯಾವುದೇ ತನಿಖೆಗೆ ಅಗತ್ಯ ದಾಖಲೆಗಳನ್ನು ಒದಗಿಸಲು ಸಿದ್ಧ ಎಂದು ತಿರುಗೇಟು ನೀಡಿದರು.
"ಕುಮಾರಸ್ವಾಮಿ ಅವರು ಒಳ್ಳೆಯ ವಿಚಾರದ ಬಗ್ಗೆ ರಾಜ್ಯದ ಗಮನ ಸೆಳೆದಿದ್ದಾರೆ. ತುಂಬಾ ಸಂತೋಷ. ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ನಾನು ಏನೇನ್ ದಾಖಲೆ ಇದೆ ಆ ಎಲ್ಲಾ ದಾಖಲೆಗಳನ್ನು ಪಡೆದು ಅವರಿಗೆ ನೀಡುತ್ತೇನೆ. ತನಿಖೆ ಮಾಡಲು ಯಾರಿಗೋ ನೀಡಬೇಕು ಎಂದು ಹೇಳಿದ್ದಾರಲ್ಲ, ಅವರಿಗೆ ದಾಖಲೆಗಳನ್ನು ಕೊಡಲಿ" ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೂ ಗುರಿಯಾಗಿಸಿಕೊಂಡು ಮತ್ತು ಇತರ ರಾಜಕೀಯ ಎದುರಾಳಿಗಳನ್ನು ಗುರಿಯಾಗಿಸಿಕೊಂಡು ಸ್ಟಿಂಗ್ ಆಪರೇಷನ್ ಮಾಡಲಾಗಿದೆ ಕುಮಾರಸ್ವಾಮಿ ಆರೋಪಿಸಿದ್ದಾರೆ.
"ತನಿಖೆ ನಡೆದರೆ ಎಲ್ಲವೂ ಹೊರಬರುತ್ತದೆ. ವಿಷಯವನ್ನು ಮುಚ್ಚಿಟ್ಟು, ಕಾಲವೇ ಉತ್ತರ ನೀಡುತ್ತದೆ ಎಂದು ಹೇಗೆ ಹೇಳಲು ಸಾಧ್ಯ?" ಎಂದು ಪ್ರಶ್ನಿಸಿದ ಕೇಂದ್ರ ಸಚಿವರು, ಈ ಸ್ಟಿಂಗ್ ಆಪರೇಷನ್‌ಗಳ ಹಿಂದೆ ಮುಖ್ಯಮಂತ್ರಿಗಳೇ ಇದ್ದಾರೆ ಎಂದು ಆರೋಪಿಸಿದರು.