ಬೆಂಗಳೂರು: ನೈಸ್ ಯೋಜನೆಯ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು, ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.
ಇಂದು ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ ಅವರು, ನೈಸ್ ಯೋಜನೆ ದೇವೇಗೌಡರ ಕೂಸು ಎಂದು ಹೇಳ್ತಾರೆ ಈಗಿನ ಸಿಎಂ ಡಿಕೆ ಶಿವಕುಮಾರ್. ಆದ್ರೆ ಇದು 2ಜಿ ಸ್ಕ್ಯಾಮ್, ಕೋಲ್ ಸ್ಕ್ಯಾಮ್‌ಗಿಂತ ದೊಡ್ಡ ಹಗರಣ ಎಂದು ಗುಡುಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತಾವು ಮಾಡಿರುವ ಹಲವು ಗಂಭೀರ ಆರೋಪಗಳ ಸಂಬಂಧ ಹಲವು ದಾಖಲೆಗಳನ್ನೂ ರಿಲೀಸ್ ಮಾಡಿದ ಕುಮಾರಸ್ವಾಮಿ, 2003ರಲ್ಲಿ ಸಿಎಂ ಡಿಕೆಶಿ ಆಸ್ತಿ 4 ಕೋಟಿ ರೂ. ಇತ್ತು. ಆದರೆ 2023ರಲ್ಲಿ ಅದು 1,413 ಕೋಟಿ ರೂ. ಆಗಿದೆ. ಇದಕ್ಕೆ ಕಾರಣ ಒಡಿಪಿ(ಭೂಮಿಯ ಬಳಕೆ ಉದ್ದೇಶ) ಬದಲಾವಣೆ ಮಾಡಿದ್ದು ಎಂದು ದೂರಿದ್ದಾರೆ. ಅಲ್ಲದೆ 2003ರಿಂದ 2023ರವರೆಗಿನ ದಾಖಲೆಯನ್ನೂ ಮುಂದಿಟ್ಟಿದ್ದಾರೆ.
ಸಿಎಂ ಡಿಕೆ ಶಿವಕುಮಾರ್ ಅವರ ಕುಟುಂಬದ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ ಕುಮಾರಸ್ವಾಮಿ, 2004ರ ನ.3ರಂದು ಸರ್ಕಾರದ ಆಸ್ತಿಯನ್ನು ಡಿ.ಕೆ.ಸುರೇಶ್ ಖರೀದಿಸಿದ್ರು. ಯಾರದ್ದೋ ಹೆಸರಿನಲ್ಲಿದೆ ಎಂದು ಸುಮಾರು 10 ಎಕರೆ ಭೂಮಿ ಖರೀದಿ ನಡೆದಿದ್ದು, ಅದು ಸರ್ಕಾರದ ಯೋಜನೆಗೆ 1997ರಲ್ಲಿ ನೋಟಿಫೈ ಆಗಿದ್ದ ಭೂಮಿಯಾಗಿದೆ. ಅದನ್ನು 2026ರಲ್ಲಿ ಸಿಎಂ ಡಿಕೆ ಪುತ್ರಿ ಆಭರಣ ಖರೀದಿ ಮಾಡುತ್ತಾರೆ. ಹೀಗೆ ಕುಟುಂಬಸ್ಥರ ಹೆಸರಲ್ಲಿ ಭೂಮಿ ಗುಳಂ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಅಧಿಕಾರಿಗಳಿಗೆ ಹೆದರಿಸಿ ಗೋಮಾಳವನ್ನೂ ಬರೆಸಿಕೊಂಡಿದ್ದು, 150-200 ಎಕರೆಗೂ ಹೆಚ್ಚು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಅವೆಲ್ಲವೂ ನೈಸ್ ಕಂಪನಿಯ ವ್ಯಾಪ್ತಿಯ ಭೂಮಿ. ಕೆಐಎಡಿಬಿ ಭೂಮಿ ಸ್ವಾಧೀನಪಡಿಸಿಕೊಂಡಿದ್ದ ಭೂಮಿ ಈಗ ಇವರ ಹೆಸರಿನಲ್ಲಿದೆ. ನಾನು ಬ್ಲ್ಯಾಕ್ಮೇಲ್ ಮಾಡ್ತಿದ್ದೇನೆಂದು ಡಿಕೆಶಿ ಹೇಳುತ್ತಾರೆ. ಡಿಕೆಶಿ ಅವರೇ ನಾನು ಬ್ಲ್ಯಾಕ್ಮೇಲ್ ಮಾಡ್ತಿರುವುದು ನಿಜ. ಆದರೆ ಅಕ್ರಮವಾಗಿ ಭೂಮಿ ಖರೀದಿಸಿದ್ದೀರಲ್ಲ, ಅದಕ್ಕೆ ಉತ್ತರ ಕೊಡಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಡಿಕೆಶಿ - ಅಶೋಕ್ ಖೇಣಿ ಮಾತನಾಡಿದ ಆಡಿಯೋ ಬಿಡುಗಡೆ
ಇದೇ ವೇಳೆ ಸಿಎಂ ಡಿಕೆ ಶಿವಕುಮಾರ್ ಹಾಗೂ ಅಶೋಕ್ ಖೇಣಿ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋವೊಂದನ್ನು ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ.
ಅಶೋಕ್ ಖೇಣಿ ಮಾತಾಡಿದ್ದಾರೆ ಎನ್ನಲಾದ ಆಡಿಯೋವನ್ನ ಕುಮಾರಸ್ವಾಮಿ ರಿಲೀಸ್ ಮಾಡಿದ್ದಾರೆ. ಆಡಿಯೋದಲ್ಲಿ ಅಶೋಕ್ ಖೇಣಿ ವಿಧಾನಸೌಧ ಅಥವಾ ವಿಕಾಸಸೌಧವನ್ನ ನನಗೆ ಬರೆದು ಕೋಡ್ಬೇಕಾಗುತ್ತೆ ಎಂದಿದ್ದಾರೆ. ನನಗೆ 2 ಲಕ್ಷ ಕೋಟಿ ಕೊಡಬೇಕಾಗುತ್ತೆ. ಈ ಸರ್ಕಾರ ಗ್ಯಾರಂಟಿಗೆ ಹಣ ಕೊಟ್ಟು ಬರಬಾದಾಗಿದೆ. ನನಗೆಲ್ಲಿ ಹಣ ಕೊಡಲು ಆಗುತ್ತೆ. ವ್ಯಾಜ್ಯ ಎಂದು ಕೋರ್ಟ್‌ಗೆ ಹೋದ್ರೆ. ವಿಧಾನಸೌಧವನ್ನೇ ಬರೆದು ಕೊಡ್ಬೇಕಾಗುತ್ತೆ ಎಂದು ಖೇಣಿ ಹೇಳಿದ್ದಾರೆ ಎನ್ನಲಾದ ಆಡಿಯೋವನ್ನ ಕುಮಾರಸ್ವಾಮಿ ರಿಲೀಸ್ ಮಾಡಿದ್ದಾರೆ.
ಅಲ್ಲದೆ ಇದು ಪಾರ್ಟ್ 1 ಅಷ್ಟೇ, ಇನ್ನೂ ಪಾರ್ಟ್ 2 ಮತ್ತು 3 ಸಹ ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಆಡಿಯೋ, ವಿಡಿಯೋ ಇದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಕೊಡೋಣ ಬ್ರದರ್, ಇವತ್ತಿಂದು ಚಿಕ್ಕದು,ಅಲ್ಲೋಲ ಕಲ್ಲೋಲ ಆಗೋದು ಬೇರೆ ಇದೆ. ನಾನು ಎಲ್ಲೂ ಹೋಗಲ್ಲ. ಈಗ ಬಿಡುಗಡೆ ಮಾಡಿರೋದು ಒಂದು ಸಣ್ಣ ವಿಚಾರ ಅಷ್ಟೇ. ಮುಂದೆ ಮತ್ತೊಂದು ಬರುತ್ತೆ. ಇದು ಪಾರ್ಟ್ 1 , ಪಾರ್ಟ್ 2. ಪಾರ್ಟ್ 3 ಕೂಡ ಇದೆ. ಕೆಜಿಎಫ್ ಪಾರ್ಟ್ 3, ಕೆಜಿಎಫ್ 3 ಎಲ್ಲಾ ಬರುತ್ತೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.