ಡಿ.ಕೆ ಶಿವಕುಮಾರ್ 
ರಾಜಕೀಯ

'ಸ್ವಂತ ಅಪ್ಪ, ಅಣ್ಣ-ತಮ್ಮಂದಿರನ್ನೇ ಜೀರ್ಣಿಸಿಕೊಳ್ಳದವರು ನಮ್ಮನ್ನು ಬಿಡುತ್ತಾರೆಯೇ? ಕಸ ಹೊಡೆದು ಸಂಪಾದಿಸಿದ ಹಣ ನನ್ನ ಬಳಿ ಇಲ್ಲ'

ನಾವು ಎಷ್ಟಾದರೂ ಮಾಡುತ್ತೇವೆ. ನನಗೆ ಮಾಜಿ ಸಿಎಂ ದಿವಂಗತ ಬಂಗಾರಪ್ಪ ಅವರು 1 ಲಕ್ಷ ರೂಪಾಯಿಗೆ ಆಗ ಒಂದು ನಿವೇಶನ ನೀಡಿದ್ದರು. ಇಂದು ಅದರ ಬೆಲೆ 20 ಕೋಟಿ ಇದೆ. ಇದರಲ್ಲಿ ಏನಾದರೂ ತಪ್ಪಿದೆಯೇ? ನಾನು ಲಂಚ ಹೊಡೆದಿದ್ದೇನೆಯೇ

ನವದೆಹಲಿ: ಇಂದಿನ ಮೌಲ್ಯದಲ್ಲಿ ನನ್ನ ಬಳಿ 1,400 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ನಾನು ಕಾನೂನು ಚೌಕಟ್ಟಿನಲ್ಲಿ ಆಸ್ತಿ ಸಂಪಾದಿಸಿದ್ದೇನೆ. ಕುಮಾರಸ್ವಾಮಿ ಅವರು ಹತಾಶಾರಾಗಿ ಈ ರೀತಿ ಮಾತನಾಡುತ್ತಿದ್ದಾರೆ" ಎಂದು ಸಿಎಂ ಡಿ ಕೆ ಶಿವಕುಮಾರ್ ತಿರುಗೇಟು ನೀಡಿದರು.

ನವದೆಹಲಿಯಲ್ಲಿ ಮಾಧ್ಯಮಗಳಿಗೆ ಶಿವಕುಮಾರ್ ಅವರು ಮಂಗಳವಾರ ಪ್ರತಿಕ್ರಿಯೆ ನೀಡಿದರು. ಕುಮಾರಸ್ವಾಮಿ ಅವರ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, "ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಬಿರುಕು, ತಾ ಮುಂದು ನಾ ಮುಂದು ಎಂಬ ಪೈಪೋಟಿಯಲ್ಲಿ ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಅವರು ಇಷ್ಟು ದಿನ ಏಕೆ ಸುಮ್ಮನಿದ್ದರು. ಅವರ ತಂದೆ ದೇವೇಗೌಡರೇ ಆ ಯೋಜನೆಗೆ ಸಹಿ ಹಾಕಿದ್ದರು.

ಜೊತೆಗೆ ಇವರು ಸಹ ಮುಖ್ಯಮಂತ್ರಿಯಾಗಿದ್ದರು. ಅಲ್ಲದೇ ಗಾಂಧಿ ಎನ್ನುವವರೊಬ್ಬರಿಗೆ ಇವರೇ ಪ್ರಯತ್ನಿಸಿ ಟೆಂಡರ್ ಕೊಡಿಸಿದರು. ಈ ವಿಚಾರವಾಗಿ ನ್ಯಾಯಾಲಯವು ಛಿಮಾರಿ ಹಾಕಿತ್ತು. ಬೇನಾಮಿ ಹೆಸರಿನಲ್ಲಿ ಅಲ್ಲಲ್ಲಿ ಸಾಕಷ್ಟು ವ್ಯವಹಾರಗಳು ನಡೆದವು. ಅವರಂತೆ ನಾನು ಹೆಸರುಗಳನ್ನು ತೆಗೆದುಕೊಳ್ಳಲು ಹೋಗುವುದಿಲ್ಲ" ಎಂದು ತಿಳಿಸಿದರು.

ಶೋಭಾ ಡೆವಲಪರ್ಸ್ ಜೊತೆ 5 ಕೋಟಿ ಹೂಡಿಕೆ ಮಾಡಿ ಈಗ 2,000 ಕೋಟಿ ಮಾಡಿದ್ದಾರೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, "ಹೌದು, ನಾವು ಎಷ್ಟಾದರೂ ಮಾಡುತ್ತೇವೆ. ನನಗೆ ಮಾಜಿ ಸಿಎಂ ದಿವಂಗತ ಬಂಗಾರಪ್ಪ ಅವರು 1 ಲಕ್ಷ ರೂಪಾಯಿಗೆ ಆಗ ಒಂದು ನಿವೇಶನ ನೀಡಿದ್ದರು. ಇಂದು ಅದರ ಬೆಲೆ 20 ಕೋಟಿ ಇದೆ. ಇದರಲ್ಲಿ ಏನಾದರೂ ತಪ್ಪಿದೆಯೇ? ನಾನು ಲಂಚ ಹೊಡೆದಿದ್ದೇನೆಯೇ? ಇಲ್ಲ ಯಾವುದಾದರೂ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದೆನೆಯೇ? ಯಾವುದೂ ಇಲ್ವವಲ್ಲಾ" ಎಂದು ವ್ಯಂಗ್ಯವಾಡಿದರು.

ಕದ್ದು ಏನನ್ನೂ ಮಾಡಿಕೊಂಡಿಲ್ಲ

"ನನಗೆ ಉದ್ದಿಮೆ ಮಾಡಲು ಎಲ್ಲಾ ರೀತಿಯ ಹಕ್ಕು, ಅವಕಾಶವಿದೆ. ನನ್ನ ಮಕ್ಕಳಿಗೂ ಸಾಮರ್ಥ್ಯವಿದೆ. ಇನ್ನೂ ಖರೀದಿ ಮಾಡುವ ಸಾಮರ್ಥ್ಯವಿದೆ. ನಾನು ಕದ್ದುಮುಚ್ಚಿ ಮಾಡೋ ಅವಶ್ಯಕತೆಯಿಲ್ಲ. ನನ್ನ ಆಸ್ತಿಯನ್ನ ಈಗಾಗಲೇ ಘೋಷಣೆ ಮಾಡಿಕೊಂಡಿದ್ದೇನೆ" ಎಂದರು.

"ಕುಮಾರಸ್ವಾಮಿ ಅವರದ್ದು ಏನೇನಿದೆ ಅಂತ ನಾನು ಈಗ ಮಾತನಾಡಲು ಹೋಗುವುದಿಲ್ಲ. ನನಗೆ ಈ ವಿಚಾರಗಳನ್ನು ಯಾರೋ ಹೇಳಿದರು. ಕುಮಾರಸ್ವಾಮಿ ಅವರು ಎಲ್ಲಾ ಎತ್ತಿಕೊಂಡು ಹೋಗಿ ಸಂಸ್ಥೆಗಳಿಗೆಲ್ಲಾ ಈಗಾಗಲೇ ಕೊಟ್ಟಿದ್ದಾರಲ್ಲಾ? ಇನ್ನೆಷ್ಟು ಬಾರಿ ಕೊಡುತ್ತಾರೆ. ಅವರಿಗೆ ಲಾರಿ ಬೇಕಾದರೆ ಕಳುಹಿಸಿಕೊಡೋಣ" ಎಂದು ಲೇವಡಿ ಮಾಡಿದರು.

ವಿಧಾನಸಭೆಗೆ ಬಂದು ಚರ್ಚೆ ಮಾಡಲಿ

ಕುಮಾರಸ್ವಾಮಿ ಅವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಚರ್ಚೆಗೆ ಸವಾಲು ಹಾಕಿರುವ ಬಗ್ಗೆ ಕೇಳಿದಾಗ, "ವಿಧಾನಸೌಧದ ಮೆಟ್ಟಿಲುಗಳ ಮೇಲೆ ಯಾಕೆ? ಧೈರ್ಯವಿದ್ದರೆ ಯಾರನ್ನಾದರೂ ಕೌನ್ಸಿಲ್ ಅಥವಾ ಅಸೆಂಬ್ಲಿ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಿ, ಅಸೆಂಬ್ಲಿ ಒಳಗಡೆ ಬಂದು ಚರ್ಚೆ ಮಾಡಲಿ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಚರ್ಚೆ ಮಾಡುವ ಬದಲು ಫ್ರೀಡಂ ಪಾರ್ಕ್ ಇದೆ, ಅಲ್ಲಿಗೆ ಹೋಗಿ ಚರ್ಚೆ ಮಾಡಿಕೊಳ್ಳಲಿ" ಎಂದರು.

ಸ್ವಂತ ಅಪ್ಪ, ಅಣ್ಣ-ತಮ್ಮಂದಿರನ್ನೇ ಜೀರ್ಣಿಸಿಕೊಳ್ಳದವರು ನಮ್ಮನ್ನು ಬಿಡುತ್ತಾರೆಯೇ?

"ಸ್ವಂತ ಅಪ್ಪನನ್ನೇ, ಅಣ್ಣ-ತಮ್ಮಂದಿರನ್ನೇ ಜೀರ್ಣಿಸಿಕೊಳ್ಳಲಾಗದವರು ನಮ್ಮನ್ನು ಬಿಡುತ್ತಾರೆಯೇ? ನಾವೇನೂ ಅವರಿಂದ ಒಳ್ಳೆಯದನ್ನು ನಿರೀಕ್ಷಿಸಿಲ್ಲ. ನಮ್ಮ ಸರ್ಕಾರದ ಜನಪ್ರಿಯತೆಯನ್ನು ತಡೆದುಕೊಳ್ಳಲು ಆಗದೆ 'ಅಸೂಯೆ'ಯಿಂದ ಹೀಗೆ ಮಾಡುತ್ತಿದ್ದಾರೆ. ಅವರಿಗೆ ಸಂಸ್ಕಾರವೂ ಇಲ್ಲ, ಸಂಸ್ಕೃತಿಯೂ ಇಲ್ಲ" ಎಂದು ವಾಗ್ದಾಳಿ ನಡೆಸಿದರು.

ಇದಕ್ಕೆ ತಾರ್ತಿಕ ಅಂತ್ಯವಿಲ್ಲವೇ ಎಂದು ಕೇಳಿದಾಗ, "ನನಗೆ ಅವರ ಮೇಲೆ ಆರೋಪ ಮಾಡಲು ಇಷ್ಟವಿಲ್ಲ. ಅದಕ್ಕೆಲ್ಲ ನನ್ನ ಬಳಿ ಸಮಯವೂ ಇಲ್ಲ. ನೀವು ಹೇಳಿದ್ದಕ್ಕೆ ನಾನು ಉತ್ತರ ಕೊಡುತ್ತಿದ್ದೇನೆ ಅಷ್ಟೇ. ಉತ್ತರ ಕೊಡಲೂ ನನಗೆ ಇಷ್ಟವಿಲ್ಲ" ಎಂದರು.

ಕಸ ಹೊಡೆದು ಸಂಪಾದಿಸಿದ ಹಣ ನನ್ನ ಬಳಿ ಇಲ್ಲ

ಬಂಗಾರಪ್ಪ ಅವರು ನೀಡಿದ್ದ ನಿವೇಶನದ ಬಗ್ಗೆ ಕೇಳಿದಾಗ, "ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪನವರ ಕಾಲದಲ್ಲಿ 99 ಸಾವಿರ ನೀಡಿ ನಿವೇಶನ ಖರೀದಿಸಿದ್ದೆ. ಅವರೇ ಅದನ್ನು ಹಂಚಿಕೆ ಮಾಡಿದ್ದರು. ಇವತ್ತಿಗೆ 20 ಕೋಟಿ ಬೆಲೆ ಬಾಳುತ್ತದೆ. ನನ್ನ ಆಸ್ತಿಯ ಬೆಲೆ ಹೆಚ್ಚಾಗಿದೆ. ಅದನ್ನು ಘೋಷಿಸಿದ್ದೇನೆ. ತಪ್ಪೇನಿದೆ? ಇಂಥ ನೂರಾರು ಆಸ್ತಿ ನನ್ನ ಬಳಿ ಇದೆ. ಲಾರಿ ಇಟ್ಟುಕೊಂಡು ಕಸ ಹೊಡೆದು ಸಂಪಾದಿಸಿದ ಹಣ ನನ್ನ ಬಳಿ ಇಲ್ಲ. ನನ್ನದೇ ವೃತ್ತಿ, ವ್ಯವಹಾರ ಬದುಕಿದೆ. ಪ್ರತಿ ವರ್ಷವೂ ಆಸ್ತಿ ಘೋಷಿಸಿದ್ದೇನೆ. ಚುನಾವಣಾ ಆಯೋಗ, ಇಡಿ ಎಲ್ಲಾ ನೋಡಿ ಆಗಿದೆ. ಇನ್ನು ಯಾವುದಾದರೂ ದೊಡ್ಡ ಏಜೆನ್ಸಿಯನ್ನು ಹಾಕಿ ನೋಡಲಿ. ಯಾರು ಬೇಡ ಹೇಳುತ್ತಾರೆ" ಎಂದರು.

ಯತೀಂದ್ರ ಸಿದ್ದರಾಮಯ್ಯ ಮೇಲಿನ ದೂರು ಸುಳ್ಳು

ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿರುವ ಬಗ್ಗೆ ಕೇಳಿದಾಗ, "ಅವರು ಮಂತ್ರಿಯಾಗಿ ಅಥವಾ ಹುದ್ದೆಗೆ ಬಂದು ಇನ್ನಷ್ಟೇ ಕೆಲವು ತಿಂಗಳುಗಳಾಗಿವೆ, ಅಷ್ಟರಲ್ಲೇ 444 ಕೋಟಿ ಅಕ್ರಮ ಮಾಡಲು ಸಾಧ್ಯವೇ? ಅದೆಲ್ಲವೂ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ" ಎಂದು ತಳ್ಳಿಹಾಕಿದರು.

ದೆಹಲಿಯಲ್ಲಿ ಶಿಕ್ಷಣ ನೀತಿ ಕುರಿತು ಪ್ರಮುಖ ಸಭೆ

ತಮ್ಮ ದೆಹಲಿ ಪ್ರವಾಸದ ಕುರಿತು ವಿವರಣೆ ನೀಡಿದ ಸಿಎಂ, "ಇವತ್ತು ನಾವು ದೆಹಲಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಶಿಕ್ಷಣ ನೀತಿ (Education Policy) ಹಾಗೂ ಪರೀಕ್ಷಾ ಅಕ್ರಮಗಳನ್ನು ತಡೆಯುವ ಬಗ್ಗೆ ಮಹತ್ವದ ಸಭೆ ನಡೆಸಿದ್ದೇವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ತಮಿಳುನಾಡು, ತೆಲಂಗಾಣ, ಕೇರಳ, ಹಿಮಾಚಲ ಪ್ರದೇಶದ ಸಚಿವರು ಮತ್ತು ಸಿಎಂಗಳು ಭಾಗವಹಿಸಿದ್ದರು. ಕೆಪಿಎಸ್‍ಸಿ ಸೇರಿದಂತೆ ಎಲ್ಲಾ ಪರೀಕ್ಷೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಹಾಗೂ ಪೇಪರ್ ಲೀಕ್ ತಡೆಯುವ ಕುರಿತು ಹೈಕಮಾಂಡ್ ನಾಯಕರು ನಮಗೆ ಸ್ಪಷ್ಟ ಮಾರ್ಗದರ್ಶನ ನೀಡಿದ್ದಾರೆ. ನಾವು ಸಚಿವ ಯು ಟಿ ಖಾದರ್ ಅವರ ನೇತೃತ್ವದ ಸಚಿವ ಸಂಪುಟ ಉಪಸಮಿತಿಯ ಮೂಲಕ ಶಿಕ್ಷಣ ರಂಗದಲ್ಲಿ ಸುಧಾರಣೆ ತರಲು ಬದ್ಧರಾಗಿದ್ದೇವೆ" ಎಂದರು.

"ಕೆಲವು ರಾಜ್ಯಗಳಲ್ಲಿ ಬಿಜೆಪಿ ಸಿದ್ಧಾಂತವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮಲ್ಲಿ ಮೊದಲಿನಿಂದಲೂ ಇರುವ ತತ್ವಗಳ ಆಧಾರದ ಮೇಲೆ ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಕ್ರಮ ವಹಿಸಲು ಮಾರ್ಗದರ್ಶನವಿದೆ" ಎಂದರು

ಗುತ್ತಿಗೆದಾರರ ಬಾಕಿ ಹಣದ ಬಿಡುಗಡೆ ಕೋರಿಕೆ

ಗುತ್ತಿಗೆದಾರರ ಸಂಘವು ₹38,000 ಕೋಟಿ ಬಾಕಿ ಹಣ ಬಿಡುಗಡೆಗೆ ಬರೆದಿರುವ ಪತ್ರದ ಕುರಿತು ಮಾತನಾಡಿ, "ಹಿಂದಿನ ಯಡಿಯೂರಪ್ಪನವರ ಸರ್ಕಾರ ಅಷ್ಟೊಂದು ಜಾಸ್ತಿ ಕೆಲಸಗಳನ್ನು ಕೊಟ್ಟು ಆರ್ಥಿಕ ಹೊರೆ ಹಾಕಿ ಹೊರಟುಹೋದರು. ಪತಿಕಾ ಗೋಷ್ಠಿ ನಡೆಸುತ್ತಿರುವವರಿಗೆ ಇದಕ್ಕೆ ಪರಿಹಾರ ಸೂಚಿಸಲು ಹೇಳಿ ಎಂದು ವ್ಯಂಗ್ಯವಾಡಿದರು. ಪರಿಸ್ಥಿತಿ ಕಷ್ಟವಿದೆ, ಆದರೂ ಅದರ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು" ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಳೆ, ಪ್ರವಾಹದಿಂದ 6 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬೆಳೆ ಹಾನಿ: ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಬರ ಘೋಷಣೆ. ಅಕ್ಟೋಬರ್ 3ಕ್ಕೆ ರಾಜ್ಯಕ್ಕೆ ಕೇಂದ್ರ ತಂಡ..!

NICE ಯೋಜನೆ: 2 ಬಾರಿ ಸಿಎಂ ಆಗಿದ್ದಾಗ ಏನು ಮಾಡಿದ್ರಿ..? HDK ‘ದ್ವಿಮುಖ ನೀತಿ’ ವಿರುದ್ಧ ಸಚಿವ ಚಲುವರಾಯಸ್ವಾಮಿ ಕಿಡಿ

ಇವ್ರು ಊರುಬಿಟ್ಟು ಊರಿಗೆ ಬಂದು ಆಸ್ತಿ ಮಾಡಬಹುದು, ನಾವು ಮಾಡ್ಬಾರ್ದ? ಪಾರ್ಟ್-2ನಲ್ಲಿ ಏನಿದೆ ಅಂತ ಗೊತ್ತು: HDK ಆರೋಪಕ್ಕೆ CM ಡಿಕೆಶಿ ತಿರುಗೇಟು

'ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡ'; ಟರ್ಕಿಗೆ ಭಾರತ ಖಡಕ್ ಎಚ್ಚರಿಕೆ, ಆಗಿದ್ದೇನು?

11 ದಿನಗಳ ಹಿಂದಷ್ಟೇ ನಾಪತ್ತೆಯಾಗಿದ್ದ ನವವಿವಾಹಿತೆ ಕೆರೆಯಲ್ಲಿ ಶವವಾಗಿ ಪತ್ತೆ, ಪೊಲೀಸ್ ತನಿಖೆ!