ವಿಜ್ಞಾನ-ತಂತ್ರಜ್ಞಾನ

ಕ್ಷುದ್ರ ಗ್ರಹಚಾರ

ಪ್ರಳಯ. ಹೇಳ ಹೆಸರಿಲ್ಲದಂತೆ ಸಕಲ ಜೀವರಾಶಿಯ ನಿರ್ನಾಮ. ಧರೆಯ ವಿನಾಶ. ಇಂಥದ್ದೇ ಮಾತು ಎಲ್ಲೆಲ್ಲೂ ಈಗ. ಆಗುತ್ತದೆ ಎಂದಾಗ ಗಾಬರಿ. ಆಗದು ಎಂದಾಗ ನಿಟ್ಟುಸಿರು. ಇದು ಎಗ್ಗಿಲ್ಲದೇ ನಡೆದಿದೆ. ಈ ನಿಟ್ಟಿನಲ್ಲಿ ಕ್ಷುದ್ರಗ್ರಹಗಳು ಅರ್ಥಾತ್ ಕೆಲವೇ ಕಿಲೋಮೀಟರ್‌ಗಳ ಗಾತ್ರದ ಆಕಾಶಕಾಯಗಳಂತೂ ವಿಶೇಷವಾಗಿ ನಮ್ಮ ಆತಂಕವನ್ನು ಬಹುಮಡಿಗೊಳಿಸಿವೆ.
ಕ್ಷುದ್ರಗ್ರಹಗಳು (Asteroid) ಸೌರವ್ಯೂಹಕ್ಕೆ ಸೇರಿದವೇ. ಅವಕ್ಕೂ ನಿರ್ದಿಷ್ಟ ಕಕ್ಷೆಗಳಿವೆ. ಹಾಗಾಗಿ ಅವು ಅಲೆಮಾರಿಗಳೇನಲ್ಲ. ಮಂಗಳ ಮತ್ತು ಗುರು ಗ್ರಹಗಳ ನಡುವಿನ ಕಕ್ಷೆಗಳಲ್ಲಿ 'ಮರಿಗ್ರಹ'ಗಳು ಹಿಂಡುಹಿಂಡಾಗಿ ಸೂರ್ಯನನ್ನು ಬಳಸುತ್ತವೆ. ಒಂದು ವೇಳೆ ಯಾವುದಾದರೂ ಕ್ಷುದ್ರಗ್ರಹ ಹಳಿ ತಪ್ಪಿ ಭೂಮಿಗೆ ಅಪ್ಪಳಿಸಿದರೆ ಪರಿಣಾಮ ಅತಿ ಘೋರವೇ ಆಗಿರುತ್ತದೆ. ಸುಮಾರು ಒಂದೂವರೆ ಕಿ.ಮಿ. ವ್ಯಾಸದ ಕ್ಷುದ್ರಗ್ರಹವೇನಾದರೂ ಭೂಮಿಗೆ ಬಡಿದರೆ ಬಹುಪಾಲು ಪ್ರಾಣಿ ಮತ್ತು ಸಸ್ಯವೈವಿಧ್ಯಗಳು ನಾಶವಾಗುತ್ತವೆ. ಸುಮಾರು 65 ಮಿಲಿಯನ್ ವರ್ಷಗಳ ಹಿಂದೆ ಡೈನೋಸಾರ್ ಎಂಬ ಸರೀಸೃಪ ಸಂತತಿ ಅಳಿದು ಹೋಗಲು ಪೃಥ್ವಿಗಪ್ಪಳಿಸಿದ ಸುಮಾರು 2 ಕಿ.ಮೀ. ವ್ಯಾಸದ ಕ್ಷುದ್ರಗ್ರಹವೇ ಕಾರಣವೆನ್ನಲಾಗಿದೆ. ಇನ್ನು 10 ಕಿ.ಮೀ. ವ್ಯಾಸದ ಕ್ಷುದ್ರಗ್ರಹ ಏನೆಲ್ಲ ಅನಾಹುತ ಮಾಡೀತು ಗೊತ್ತೆ? ಅದು ಭೂಪ್ರದೇಶದ ಮೇಲೆ ಪತನಗೊಳ್ಳಲಿ ಅಥವಾ ಸಾಗರ ಪ್ರದೇಶದಲ್ಲೇ ಬೀಳಲಿ ಆಗುವ ರಾದ್ಧಾಂತವೇ ತೀವ್ರವೇ. ಸೆಕೆಂಡಿಗೆ 30 ಕಿ.ಮೀ. ವೇಗದಲ್ಲಿ ಎರಗುವ ಆ ಕಾಯವನ್ನು ಭೂ ವಾತಾವರಣ ಪ್ರತಿರೋಧವೊಡ್ಡಿ ತಡೆಯಲಾಗದು. ಹೆಚ್ಚೆಂದರೆ ಆಗಂತುಕನ ರಭಸ ಕೊಂಚ ಕಡಿಮೆಯಾಗಬಹುದಷ್ಟೆ. ನೆಲವೋ ನೀರೋ ಮಣಿಯಲೇ ಬೇಕು ಅಗಾಧ ಬಿರುಸಿನ ಹೊಡೆತಕ್ಕೆ. ಅಂತು ಭೂಮಿಯ ಮೇಲ್ಪದರ (ಈ್ಠ್ಡಡಡಿ)ಅಂದರೆ ಶಿಲಾಗೋಳದ ಹೊರ ಹೊದಿಕೆವರೆಗೆ ಕ್ಷುದ್ರಗ್ರಹದ ನಿರಾತಂಕ ನುಸುಳು. ಯಾರೋ ಸೇಬಿನ ಹಣ್ಣಿನತ್ತ ಗುರಿಯಿಟ್ಟು ಒಗೆದ ಚಾಕುವಿನ ಹಾಗೆ! ಮುಂದೇನು ಎನ್ನುವಷ್ಟರಲ್ಲಿ ಸಂಘಟನೆಯ ಪ್ರಭಾವದಿಂದ ಸ್ವತಃ ಆ ಕ್ಷುದ್ರಗ್ರಹ ಮತ್ತು ಶಿಲಾಹೊದಿಕೆಯ ಬಹುಭಾಗ ಆವಿಯಾಗಿರುತ್ತದೆ. ಪಾತದ ತಾಣದಲ್ಲಿ ನೂರು ಕಿ.ಮೀ. ವ್ಯಾಸದ ವಿಶಾಲ ಹೊಂಡ ಸೃಷ್ಟಿಯಾಗಿ ಅಲ್ಲಿದ್ದ ಬಂಡೆಯೆಲ್ಲ ಗಾಳಿಗೆ ತೂರಿರುತ್ತದೆ. ಶಿಲೆಗಳ ಚೂರುಪಾರು ಅದೆಷ್ಟು ವೇಗವಾಗಿ ಸಿಡಿಯುತ್ತವೆಂದರೆ ಒಂದಷ್ಟು ವಾಯುಮಂಡಲ ದಾಟಿ ಭೂಮಿಯ ಸುತ್ತ ವಿವಿಧ ಕಕ್ಷೆಗಳಲ್ಲಿ ಪರಿಭ್ರಮಿಸಲಾರಂಭಿಸಿರುತ್ತವೆ!
ಧರೆಗೆ ಕಂಟಕಪ್ರಾಯವಾಗಿರುವ ಕ್ಷುದ್ರಗ್ರಹದಂಥ ಆಕಾಶಕಾಯಗಳನ್ನು ಹೇಗಾದರೂ ಮಾಡಿ ನಾಶಪಡಿಸಬೇಕು, ಇಲ್ಲವೇ ನಮ್ಮತ್ತ ಸುಳಿಯದಿರು... ಎಲ್ಲಾದರೂ ಇರು ಎಂತಾದರೂ ಇರು ಅಂತ ಅವುಗಳ ದಿಕ್ಕನ್ನು ಬದಲಿಸಬೇಕು. ಈ ನಿಟ್ಟಿನಲ್ಲಿ 'ನಾಸಾ' ವಿಜ್ಞಾನಿಗಳು ನಾನಾ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಆ ಪೈಕಿ 'ಹುಲಿ'ಯ ಬೆನ್ನೇರುವುದೂ ಒಂದು! ನಿಮ್ಮ ಊಹೆ ಸರಿ. ಕ್ಷುದ್ರಗ್ರಹವೊಂದರ ಮೇಲೆ ಖಗೋಳಯಾತ್ರಿಗಳ ತಂಡವೊಂದನ್ನು ಇಳಿಸುವುದು. ಅದರ ಮೇಲ್ಮೈಯನ್ನು ಅಧ್ಯಯನ ಮಾಡುವುದು. ಅಲ್ಲಿರಬಹುದಾದ ಖನಿಜ ಸಂಪತ್ತಿಗೆ ಶೋಧ ನಡೆಸುವುದು. ಎಲ್ಲಕ್ಕೂ ಮುಖ್ಯವಾಗಿ ಕ್ಷುದ್ರಗ್ರಹಗಳ ನಾಶಕ್ಕೆ ಯಾವ ತಂತ್ರಜ್ಞಾನ ಅಗತ್ಯವೆನ್ನುವುದನ್ನು ಅರಿಯುವುದು. ಇದೇ ದಶಕದ ಕೊನೆಯ ವೇಳೆಗೆ 30,00,000 ಕಿ.ಮೀ. ವ್ಯಾಪ್ತಿಯೊಳಗಿನ ಯಾವುದಾದರೂ ಆಕಾಶಕಾಯದ ಮೇಲೆ ಕಾಳಿಂಗಮರ್ಧನ ವಿಜ್ಞಾನಿಗಳ ಕನಸು! ಅಂದರೆ ಈಗಾಗಲೇ ವಿಜಯಪತಾಕೆ ಹಾರಿಸಲಾಗಿರುವ ಚಂದ್ರನಿಗಿಂತಲೂ ಹತ್ತು ಪಟ್ಟು ದೂರದ ಕಾಯ ಮಾನವನ ಗುರಿ.
ಅಂದ ಹಾಗೆ ಕ್ಷುದ್ರಗ್ರಹಗಳು ಸೂರ್ಯನ ಸುತ್ತ ಸುಮಾರು ತಾಸಿಗೆ 80,000 ಕಿ.ಮೀ. ವೇಗದಲ್ಲಿ ಪರಿಭ್ರಮಿಸುತ್ತವೆ. ಹೇಳಿ ಕೇಳಿ ಕಿರುಕಾಯ. ಹೆಚ್ಚು ಕಡಿಮೆ ಶೂನ್ಯ ಗುರುತ್ವ. ಅಂಥ ನೆಲೆಗೆ ಪ್ರವೇಶಿಸುವುದೆಂದರೆ ಕಠಿಣ ಸವಾಲು. ಖಗೋಳ ಯಾತ್ರಿಗಳನ್ನು ಈಗಾಗಲೇ ತರಬೇತಿಗೊಳಿಸಲಾಗುತ್ತಿದೆ. ಅಸಾಧ್ಯವಾದುದೂ ಯಾವುದೂ ಇಲ್ಲ ಮನುಷ್ಯನಿಗೆ. 'ನಾಸಾ' ಇದೀಗ 400ಕ್ಕೂ ಹೆಚ್ಚಿನ ಭೂಮಿಗಳಿಗೆ ಗಂಡಾಂತರಕಾರಿಯಾದ ಕ್ಷುದ್ರಗ್ರಹಗಳ ಮೇಲೆ ಹದ್ದಿನ ಕಣ್ಣಿರಿಸಿದೆ. ಗಾಬರಿಯ ಜೊತೆಜೊತೆಗೆ ಕ್ಷುದ್ರಗ್ರಹಗಳು ನಿಗೂಢತೆಯನ್ನು ತಮ್ಮೊಳಗೆ ಇರಿಸಿಕೊಂಡಿವೆ. ಬ್ರಹ್ಮಾಂಡ ಹೇಗೆ ರೂಪುಗೊಂಡಿತು? ರೂಪಣೆಯ ಮಜಲುಗಳು
ಯಾವುವು? ಅದರ ಭವಿತವ್ಯದ ಹಾದಿ ಯಾವುದು? ಮುಂತಾದ ಒಗಟುಗಳನ್ನು ಬೇಧಿಸಲು ಕ್ಷುದ್ರಗ್ರಹಗಳು ಸಾಕಷ್ಟು ಮಾಹಿತಿಗಳನ್ನು ಒದಗಿಸಿಯಾವು.
ಬಿಲಿಯಾಂತರ ವರ್ಷಗಳ ಇತಿಹಾಸವೇ ಅವುಗಳಲ್ಲಿವೆ. 2016ರಲ್ಲಿ ರೊಬಾಟ್‌ಸಜ್ಜಿತ ನೌಕೆ ಕಳಿಸಿ ಮಾದರಿ ಸಂಗ್ರಹಣೆ. 2020ಕ್ಕೆ ಮಾನವಸಹಿತ ನೌಕೆಯನ್ನು ಕ್ಷುದ್ರಗ್ರಹದಲ್ಲಿ ಇಳಿಸುವ ಕಾರ್ಯಕ್ರಮ ಸೂಕ್ತವೆಂದು ಕಂಡುಬಂದಿದೆ. ಕಳೆದ ವರ್ಷ ವಿವಿಧ ಉದ್ದೇಶಗಳಿಗಾಗಿ ಉಡಾಯಿಸಲಾಗಿರುವ ಕೃತಕ ಉಪಗ್ರಹಗಳಿಗಿಂತಲೂ ಹತ್ತಿರದಲ್ಲೇ ಒಂದು ಕ್ಷುದ್ರಗ್ರಹ ಹಾದು ಹೋಯಿತು. ಕೇವಲ ಒಂದೇ ಕಿ.ಮೀ. ವ್ಯಾಸದ ಕ್ಷುದ್ರಗ್ರಹ. 1945ರಲ್ಲಿ ಜಪಾನಿನ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಹಾಕಿದ ಪರಮಾಣು ಬಾಂಬುಗಳುಂಟು ಮಾಡಿದ ಮೂರುಪಟ್ಟು ಅವಘಡ ಸೃಷ್ಟಿಸಿತು ಎಂದ ಮೇಲೆ ಧರೆಯತ್ತ ನುಸುಳುವ ಆಗಂತುಕರನ್ನು ಬಗ್ಗು ಬಡಿಯಲೇ ಬೇಕು ಅಲ್ಲವೆ?

-ಬಿಂಡಿಗನವಿಲೆ ಭಗವಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!