ವಿಜ್ಞಾನಕ್ಕೂ ವಿವಾದಕ್ಕೂ ಬಿಡಿಸಲಾರದ ನಂಟು. ಹೊಸ ಸಂಶೋಧನೆಗಳಾದಾಗ ಬಾಯಿ ತೆರೆದುಕೊಂಡು ನೋಡುವವರ ಜೊತೆಗೆ, ಬಾಯಿತುಂಬ ಬೈಯ್ಗುಳ ಸುರಿಸುವ ಜನರೂ ಇರುತ್ತಾರೆ. ಒಂದು ಸಂಶೋಧನೆ ಅನೇಕ ವಿವಾದಗಳನ್ನು ಹುಟ್ಟುಹಾಕುತ್ತದೆ. ನೈತಿಕತೆಯ ಪ್ರಶ್ನೆ ಎದುರಾದಾಗ ಹೊಸ ಸಂಶೋಧನೆಯನ್ನು ಅಪ್ಪಿಕೊಳ್ಳಬೇಕೆ ಅಥವಾ ನಿರಾಕರಿಸಬೇಕೆ ಎನ್ನುವ ಗೊಂದಲ ಉಂಟಾಗುವುದು ಸಹಜ.
ಇತ್ತೀಚಿನ ವರ್ಷಗಳಲ್ಲಿ ನೈತಿಕತೆಯ ತಳಹದಿಗೆ ತೊಡಕುಂಟು ಮಾಡುತ್ತಿರುವ(?) ಸಂಶೋಧನೆ 'ಕ್ಲೋನಿಂಗ್'(ತದ್ರೂಪಿ ಸೃಷ್ಟಿ). 1996ರಲ್ಲಿ ಸ್ಕಾಟ್ಲೆಂಡಿನ ರೋಸ್ಲಿನ್ ಸಂಸ್ಥೆಯ ಇಯಾನ್ ವಿಲ್ಮಟ್ ಮತ್ತು ಸಂಗಡಿಗರು 'ಡಾಲಿ' ಎಂಬ ತದ್ರೂಪಿ ಕುರಿಯನ್ನು ಕ್ಲೋನಿಂಗ್ ತಂತ್ರಜ್ಞಾನದ ಮೂಲಕ ಸೃಷ್ಟಿಸಿದರು. ಬಹುಶಃ ಅದನ್ನು ನೋಡಿ ಸೃಷ್ಟಿಕರ್ತನೂ ಬೆಚ್ಚಿಬಿದ್ದಿರಬಹುದು!
ಅಂಡ ಮತ್ತು ವೀರ್ಯದ ಸಂಯೋಗದಿಂದ ಜೀವಕೋಶ ಫಲಿತಗೊಂಡು ನಂತರ ಅದು ವಿಭಜನೆಯಾಗುತ್ತಾ ಹೋಗುತ್ತದೆ; ಒಂದು ಎರಡಾಗಿ, ಎರಡು ನಾಲ್ಕಾಗಿ, ನಾಲ್ಕು ಎಂಟಾಗಿ...ಹೀಗೇ ವಿಭಜನೆಯಾಗುತ್ತಾ ಕೊನೆಗೆ ಈ ಜೀವಕೋಶಗಳು ಅಂಗಗಳಾಗಿ, ಅಂಗಗಳ ವ್ಯೂಹಗಳಾಗಿ ಬದಲಾಗುತ್ತವೆ. ಇದು ಸೃಷ್ಟಿಕರ್ತ ರೂಪಿಸಿದ ಕ್ರಿಯೆ.
ಆದರೆ ಈ ನೈಸರ್ಗಿಕ ಕ್ರಿಯೆಯನ್ನು ಬದಿಗೆಸೆದು ಯಾವಾಗ ವಿಜ್ಞಾನಿಗಳು 'ಡಾಲಿಯನ್ನು' ಸೃಷ್ಟಿಸಿದರೋ, ಆಗಲೇ ಹುಟ್ಟಿಕೊಂಡಿತು ವಿವಾದ. ಕ್ಲೋನಿಂಗ್ ತಂತ್ರಜ್ಞಾನದಲ್ಲಿ ಜೀವಕಣದ ವರ್ಗಾವಣೆ ಮಾಡುವ ಮೂಲಕ ವ್ಯಕ್ತಿಯೊಬ್ಬನ ತದ್ರೂಪಿಯನ್ನು ಸೃಷ್ಟಿಸಬಹುದು. ಕ್ರಿಯೆಯಲ್ಲಿ ಫಲಿತಗೊಳ್ಳದ ಅಂಡಾಣುವಿನಿಂದ ಡಿಎನ್‌ಎ ಅನ್ನು ತೆಗೆದು, ದಾನಿಯ ಜೀವಕೋಶದ ಡಿಎನ್‌ಎದಿಂದ ತುಂಬಲಾಗುತ್ತದೆ (ದಾನಿಯ ಜೀವಕೋಶವನ್ನು ದೇಹದ ಯಾವುದೇ ಭಾಗದಿಂದಲೂ ತೆಗೆದುಕೊಳ್ಳಬಹುದು). ನಂತರ ಉಂಟಾಗುವ ಜೀವಕೋಶದಲ್ಲಿ ದಾನಿಯ ವಂಶವಾಹಿಯ ಗುಣಗಳು ಸೇರಿಕೊಂಡಿರುತ್ತವೆ. ಈ ಜೀವಕೋಶದ ವಿಭಜನೆಯಾಗಿ, ಅದು ದಾನಿಯ ಜೀವಕೋಶದ ನಕಲಾಗಿ ಮಾರ್ಪಡುತ್ತದೆ. ಈ ಪ್ರಕ್ರಿಯೆ ಮುಂದುವರಿದು, ಕೊನೆಗೆ ಜನ್ಮತಾಳುವ 'ಕ್ಲೋನ್' ಥೇಟ್ ದಾನಿಯಂತೆಯೇ ಇರುತ್ತಾನೆ!
ಇದರರ್ಥವಿಷ್ಟೆ, ನಮ್ಮಂತಿರುವ ವ್ಯಕ್ತಿಯನ್ನು ಕೇವಲ ನಮ್ಮ ಚರ್ಮದ ಅಥವಾ ಇನ್ನಾವುದೋ ಅಂಗದ ಜೀವಕೋಶದಿಂದ ಸೃಷ್ಟಿಸಬಹುದು(ರಕ್ತಬೀಜಾಸುರನ, ಪ್ರತಿ ಹನಿ ರಕ್ತದಿಂದ ಮತ್ತೊಬ್ಬ ಜೆರಾಕ್ಸ್ ಬೀಜಾಸುರ ಹುಟ್ಟಿದಂತೆ!). ಇದೆಲ್ಲಾ ಓದುವುದಕ್ಕೆ, ಬರೆಯುವುದಕ್ಕೇನೋ ಚೆನ್ನ, ಆದರೆ ಒಮ್ಮೆ ಊಹಿಸಿಕೊಳ್ಳಿ- ಇಂಥ ತಂತ್ರಜ್ಞಾನದ ದುಷ್ಟರ ಕೈಗೆ ಸಿಕ್ಕರೆ? ಉಗ್ರವಾದಿಗಳು ಕ್ಲೋನಿಂಗನ್ನು ದುರುಪಯೋಗಪಡಿಸಿಕೊಂಡರೆ? ನೂರಾರು 'ಕಾಪಿ ಕಸಾಬ್‌ಗಳು' ಸೃಷ್ಟಿಯಾದರೆ? ಸದ್ದಾಂನನ್ನು ಗಲ್ಲಿಗೇರಿಸುವಾಗ ಹತ್ತಾರು ಸದ್ದಾಂಗಳು ಯಾವುದೋ ಪ್ರಯೋಗಾಲಯದಲ್ಲಿ ಜನ್ಮತಳೆದಿದ್ದರೆ?
ಈ ವಿಷಯವೇ ವಿವಾದಕ್ಕೆ, ಭಯಕ್ಕೆ ಕಾರಣವಾಗಿರುವುದು. ಈ ಅಂಶವನ್ನೇ ಮುಂದಿಟ್ಟುಕೊಂಡು ಹಾಲಿವುಡ್‌ನಲ್ಲಿ ಅನೇಕ ಚಿತ್ರಗಳು ನಿರ್ಮಾಣವಾಗಿ ನೋಡುಗರನ್ನು ಥರಗುಟ್ಟಿಸಿವೆ. THE CLONUS HORROR, THE HUMAN DUPLICATORS, AN ABOUT EVE, CLONES, A STOLEN LIFE, MULTIPLICITY, THE FIFTH ELEMENTನಂತಹ ಚಿತ್ರಗಳನ್ನು ನೋಡಿದರೆ ಕ್ಲೋನಿಂಗ್ ತಂತ್ರಜ್ಞಾನ ಸೃಷ್ಟಿಸಬಹುದಾದ ಭೀಕರತೆಯ ಅರಿವಾಗಿ ಸಣ್ಣಗೆ ಹಣೆ ಬೆವರುತ್ತದೆ.
ಆದರೆ ಕ್ಲೋನಿಂಗ್ ತಂತ್ರಜ್ಞಾನ ಅಷ್ಟೊಂದು ವಿನಾಶ ಉಂಟುಮಾಡಬಲ್ಲದೇ ಎನ್ನುವ ಪ್ರಶ್ನೆಗೆ ಬಹುಶಃವಿಜ್ಞಾನಿಗಳ ಬಳಿಯೂ ಉತ್ತರವಿಲ್ಲ. ಏಕೆಂದರೆ ಆ ತಂತ್ರಜ್ಞಾನವಿನ್ನೂ ಅಂಬೆಗಾಲಿಡುತ್ತಿದೆ. ಸಾಧ್ಯಾಸಾಧ್ಯತೆಗಳು ವಿಜ್ಞಾನಿಗಳಿಗೂ ಸ್ಪಷ್ಟವಾಗಿ ಗೊತ್ತಿಲ್ಲ. ಈಗಂತೂ ಮಾನವ ತದ್ರೂಪಿ ಸೃಷ್ಟಿಯನ್ನು ಎಲ್ಲಾ ರಾಷ್ಟ್ರಗಳೂ ನಿಷೇಧಿಸಿಬಿಟ್ಟಿವೆ. ಚೀನಾ ಮತ್ತು ಕೋರಿಯಾದ ಪ್ರಯೋಗಾಲಯದಲ್ಲಿ ಮಾನವ ಕ್ಲೋನಿಂಗ್ ಮಾಡಲಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆಯಾದರೂ ಅದಕ್ಕೂ ಪುರಾವೆಯಿಲ್ಲ.
ಇನ್ನು 'ಕ್ಲೋನಿಂಗ್' ಅನ್ನುವ ಪದಕ್ಕೆ ಇಷ್ಟೊಂದು ಭೀಕರ ಅರ್ಥ ದಯಪಾಲಿಸಿದ ಅಪಕೀರ್ತಿ ಸಿನೆಮಾಗಳಿಗೇ ಸೇರಬೇಕು. ಆದರೆ ಒಂದಂತೂ ಸತ್ಯ, ಕಸಾಬ್‌ನನ್ನು ಕ್ಲೋನ್ ಮಾಡಿದರೆ ಹುಟ್ಟುವ ವ್ಯಕ್ತಿ ನೋಡುವುದಕ್ಕೆ ಆತನಂತೆಯೇ ಇರುತ್ತಾನೆಯೇ ಹೊರತು, ಆತನೂ ಕ್ರೂರ ವ್ಯಕ್ತಿತ್ವ ಹೊಂದಿರುತ್ತಾನೆ ಎನ್ನುವುದು ಸುಳ್ಳು. ಅವಳಿ-ಜವಳಿ ಮಕ್ಕಳ ವಿಷಯವನ್ನೇ ತೆಗೆದುಕೊಳ್ಳಿ; ನೋಡಲು ಇಬ್ಬರೂ ಏಕ್‌ದಂ ಜೆರಾಕ್ಸ್‌ನಂತೆ ಕಂಡರೂ ಇಬ್ಬರ ಗುಣಗಳಲ್ಲೂ ಬಹಳ ಫರಕ್ಕಿರುತ್ತದೆ. ದೇಹ ಹೇಗೆ ಪರಿಸರಕ್ಕನುಗುಣವಾಗಿ, ಆಹಾರ ಸೇವನೆಗನುಗುಣವಾಗಿ ಬೆಳೆಯುತ್ತದೆಯೋ, ಅದೇ ರೀತಿ ಮನಸ್ಸಿನ ಎವಲ್ಯೂಷನ್ ಕೂಡ ಆಯಾ ಪರಿಸರಕ್ಕೆ ತಕ್ಕಂತೆಯೇ ಆಗುತ್ತದೆ. ಕ್ಲೋನ್‌ನ ಗುಣ ದಾನಿಯಂತೆಯೇ ಇರುವುದು ಸಿನೆಮಾಗಳಲ್ಲಿ ಮಾತ್ರ!
ಚಿತ್ರರಂಗದ ಮಜಲಿನಿಂದ ಕ್ಲೋನಿಂಗ್ ತಂತ್ರಜ್ಞಾನವನ್ನು ನೋಡಿದರೆ ವಿಜ್ಞಾನಿಗಳ ಸ್ವಾರ್ಥ, ಅವರ ವಿಕೃತ ಮನೋಭಾವ ಎದ್ದು ಕಾಣುತ್ತದೆ. ಆದರೆ ವಿಜ್ಞಾನಿಗಳು ಈ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವ ಹಪಾಹಪಿಯಲ್ಲಿರುವುದು ಮಾನವ ಜನಾಂಗದ ಏಳ್ಗೆಗಾಗಿಯೇ ಹೊರತು, ವಿನಾಶಕ್ಕಲ್ಲ. 'ಟೆಸ್ಟ್ ಟ್ಯೂಬ್ ಬೇಬಿ' ತಂತ್ರಜ್ಞಾನ ಜನ್ಮತಾಳಿದಾಗ ಅದನ್ನು ಅನುಮಾನದಿಂದ ನೋಡುವ ಸಾವಿರಾರು ಕಣ್ಣುಗಳೂ ಹುಟ್ಟಿಕೊಂಡವು. ಆದರೀಗ ಅದೇ ತಂತ್ರಜ್ಞಾನ ಉಪಯೋಗವನ್ನು ಮಕ್ಕಳಿಲ್ಲದ ಲಕ್ಷಾಂತರ ದಂಪತಿಗಳು ಪಡೆಯುತ್ತಿಲ್ಲವೇ?
ಹಿಂದೆ ಟೆಸ್ಟ್ ಟ್ಯೂಬ್ ಬೇಬಿಗೆ ಎದುರಾಗಿದ್ದ ಟ್ರಬಲ್ ಈಗ ಕ್ಲೋನಿಂಗನ್ನು ಸುತ್ತಿಕೊಂಡಿದೆ. ಮುಂದೆ ಕ್ಲೋನಿಂಗ್ ತಂತ್ರಜ್ಞಾನ ಕೂಡ ವಂಶಾಭಿವೃದ್ಧಿಗೊಂದು ಮಾರ್ಗವಾಗಬಹುದು. ಆ ತಂತ್ರಜ್ಞಾನದಿಂದ ಹುಟ್ಟುವುದು ವ್ಯಕ್ತಿಯೇ ಹೊರತು 'ವಸ್ತು'ವಲ್ಲ ಎನ್ನುವ ಭಾವನೆ ಎಲ್ಲರಲ್ಲೂ ಮನೆಮಾಡಬಹುದು. ಆದರೆ ಅದು ಸಾಧ್ಯವಾಗುವುದಕ್ಕೆ ಜಮಾನಾಗಳೇ ಹಿಡಿಯಲಿದೆ. ಸದ್ಯಕ್ಕೆ 'ಹ್ಯೂಮನ್ ಕ್ಲೋನಿಂಗ್' ಕಾನೂನು ಬಾಹಿರ ಚಟುವಟಿಕೆ.
- ರಾಘವೇಂದ್ರ ಆಚಾರ್ಯ