ವಿಜ್ಞಾನ-ತಂತ್ರಜ್ಞಾನ

ವಿಂಡೋಸ್ 8.1

ವಿಂಡೋಸ್-8 ಭಾರೀ ಬದಲಾವಣೆಗೆ ಮುನ್ನುಡಿ ಬರೆಯಿತಾದರೂ ಕೊಂಚ ಅಡೆತಡೆಗಳಿದ್ದವು. ಇದು ಬಳಕೆದಾರರಿಗೆ...

ವಿಂಡೋಸ್-8 ಭಾರೀ ಬದಲಾವಣೆಗೆ ಮುನ್ನುಡಿ ಬರೆಯಿತಾದರೂ ಕೊಂಚ ಅಡೆತಡೆಗಳಿದ್ದವು. ಇದು ಬಳಕೆದಾರರಿಗೆ ಮೊಸರಲ್ಲಿ ಕಲ್ಲು ಸಿಕ್ಕಂತಾಗಿತ್ತು. ಸಾಫ್ಟ್‌ವೇರ್‌ನೊಂದಿಗೇ ಬರೋ ಫೋಟೋ ಅಪ್ಲಿಕೇಶನ್ ಸರಿಯಾಗಿ ಕೆಲಸ ಮಾಡದಿರುವುದು, ವಿಂಡೋಸ್ ಮಾರ್ಕೆಟ್ ಪ್ಲೇಸ್‌ನಲ್ಲಿರುವಾಗ ಯಾವುದಾದರೂ ಅಪ್ಲಿಕೇಶ್ ಡೌನ್‌ಲೋಡ್ ಮುಕ್ತಾಯಗೊಂಡರೆ ಅಥವಾ ಅಪಡೇಟ್ ಆದರೆ ಮಾರ್ಕೆಟ್ ಪ್ಲೇಸ್‌ನ ಮೊದಲ ಪುಟಕ್ಕೆ ಮರಳಿಬಿಡುವುದು ಇವೆಲ್ಲ ಗ್ರಾಹಕರಿಗೆ ಕಿರಿಕಿರಿ ನೀಡುತ್ತಿತ್ತು.
ಇದನ್ನೆಲ್ಲ ನಿವಾರಿಸಿ, ಕೆಲವು ಬದಲಾವಣೆಗಳೊಂದಿಗೆ ವಿಂಡೋಸ್ 8.1 ಸಿದ್ಧಗೊಂಡಿದೆ. ಪರಿಷ್ಕೃತ ಮಾದರಿಯು ಜೂನ್ ತಿಂಗಳಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಕಳೆದ ವರ್ಷ ಬಿಡುಗಡೆಯಾದ ವಿಂಡೋಸ್-8ನಲ್ಲಿದ್ದ ಕೆಲ ನ್ಯೂನತೆಗಳನ್ನು ಸರಪಡಿಸಿಕೊಂಡು ನವೀನ ರೂಪದಲ್ಲಿ ವಿಂಡೋಸ್-8.1 ಮಾದರಿಯು ಜೂನ್ 20ರೊಳಗೆ ಮಾರುಕಟ್ಟೆಗೆ ಬರುವ ಸಾಧ್ಯತೆಯಿದೆ.
ವಿಂಡೋಸ್-8ನ್ನು ಅಧಿಕೃತವಾಗಿ ಹೊಂದಿರುವ ಎಲ್ಲ ಬಳಕೆದಾರರೂ ಇದರ ಲಾಭ ಪಡೆಯಬಹುದು. ಆದರೆ ಅಪ್‌ಡೇಟ್ ಮಾಡಲು ಬೇಕಿರುವ ನಿರ್ದಿಷ್ಟ ಲಿಂಕ್ ಅಥವಾ ಸಮಯವನ್ನು ವಿಂಡೋಸ್ ಕಂಪನಿ ಇನ್ನಷ್ಟೇ ತಿಳಿಸಬೇಕಿದೆ.
ಸ್ಟಾರ್ಟ್ ಮೆನು, ಅಪ್ಲಿಕೇಷನ್ಸ್, ಲಾಕ್‌ಸ್ಕ್ರೀನ್, ಮಲ್ಟಿಟಾಸ್ಕ್, ಸರ್ಚ್ ಸೇರಿದಂತೆ ನಾನಾ ಬದಲಾವಣೆಗಳೊಂದಿಗೆ ವಿಂಡೋಸ್-8.1 ಆವೃತ್ತಿ ಮಾರುಕಟ್ಟೆಗೆ ಬರುತ್ತಿದೆ. ವೈಯಕ್ತಿಕ ಬಳಕೆದಾರರು ಈಗಾಗಲೇ ವಿಂಡೋಸ್-8ನ್ನು ಸ್ವೀಕರಿಸಿದ್ದಾರೆ. ಸುಮಾರು 17 ಕೋಟಿಗೂ ಅಧಿಕ ಕಂಪ್ಯೂಟರ್‌ಗಳಲ್ಲಿ ಈಗ ವಿಂಡೋಸ್-8 ಬಳಕೆಯಾಗುತ್ತಿದೆ. ಆದಾಗ್ಯೂ ಉದ್ಯಮ ಪ್ರಪಂಚ ವಿಂಡೋಸ್-8ನ್ನು ಒಪ್ಪಿಲ್ಲ. ಕಂಪ್ಯೂಟರ್ ಉದ್ದಿಮೆಗಳು ನೀಡಿರುವ ಸಲಹೆಗಳಿಗೆ ಈ ಆವೃತ್ತಿ ಉತ್ತರ ನೀಡಲಿದೆಯೇ ಎಂದು ಕಾದು ನೋಡಬೇಕು.

ಐಟಿ ಕಂಪನಿಗಳ ಬೇಡಿಕೆಯೇನು?
ವಿಂಡೋಸ್ ಎಕ್ಸ್‌ಪಿಯಿಂದ ವಿಂಡೋಸ್-7ಗೆ ಇತ್ತೀಚೆಗೆ ವರ್ಗಾವಣೆ ಮಾಡಲಾಗಿದೆ. ಆ ಸಂದರ್ಭದಲ್ಲಿ ಆಪರೇಟಿಂಗ್ ಸಿಸ್ಟಂಗೆ ತಕ್ಕ ಹಾಗೆ ಒಗ್ಗಿಕೊಂಡು ತಮ್ಮ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಲು ಕೋಟ್ಯಂತರ ಹಣ ವ್ಯಯಿಸಲಾಗಿದೆ. ಆದರೆ ಈಗ ಮತ್ತೆ ವಿಂಡೋಸ್-8ಗೆ ಅಪ್‌ಗ್ರೇಡ್ ಆದರೆ ಯಾವುದೇ ಪ್ರಯೋಜನವಿಲ್ಲ. ಐಟಿ ಉದ್ದಿಮೆಗಳಿಗೆ ಸಹಾಯವಾಗುವ ಯಾವುದೇ ಅಂಶ ವಿಂಡೋಸ್-8ನಲ್ಲಿ ಇಲ್ಲ. ವಿಂಡೋಸ್-7 ಅವತರಣಿಕೆಯ ಮೊಬೈಲ್ ರೂಪದಂತೆ ಇದು ಕಾರ್ಯನಿರ್ವಹಿಸುತ್ತದೆಯಷ್ಟೆ. ಸ್ಟಾರ್ಟ್ ಮೆನು ಸೇರಿದಂತೆ ಟಚ್‌ಸ್ಕ್ರೀನ್‌ಗೆ ಸಂಬಂಧಿಸಿ ಬದಲಾವಣೆ ತರದಿದ್ದರೆ ಯಾವುದೇ ಪ್ರಯೋಜನವಿಲ್ಲ ಎನ್ನುವುದು ಅವರ ಲೆಕ್ಕಾಚಾರ. ಕೇವಲ ಟಾಲ್ ಸ್ಕ್ರೀನ್‌ಗಾಗಿ ವಿಂಡೋಸ್-8 ಖರೀದಿಸುವುದರಿಂದ ನಮಗೇನು ಲಾಭವಿಲ್ಲ ಎಂದು ಐಟಿ ಕಂಪನಿಗಳು ಹೇಳುತ್ತಿವೆ. ಇದೇ ಕಾರಣದಿಂದ ಖಾಸಗಿ ಬಳಕೆದಾರರನ್ನು ಹೊರತುಪಡಿಸಿ ಕಾರ್ಪೊರೇಟ್ ಮಾರುಕಟ್ಟೆಯಲ್ಲಿ ಯಶಸ್ವಿಯಾಗಲು ವಿಂಡೋಸ್ ಕಂಪನಿ ಹವಣಿಸುತ್ತಿದೆ. ಇದಕ್ಕಾಗಿ ವಿಂಡೋಸ್-8ನ ಹೊಸ ಅವತರಣಿಕೆಗಳನ್ನು ಮಾರುಕಟ್ಟೆಗೆ ತರುತ್ತಿದೆ.

ಹೊಸದೇನಿದೆ?
ಉದ್ದಿಮೆಗಳ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಲಾಗದಿದ್ದರೂ ಕೆಲ ಮೂಲಭೂತ ಸಲಹೆಗಳನ್ನು ವಿಂಡೋಸ್ ಪರಿಗಣಿಸಿದೆ. ಸ್ಟಾರ್ಟ್ ಮೆನು ಸ್ಕ್ರೀನ್‌ನಲ್ಲಿ ಯಾವಾಗಲೂ ದೊರೆಯುವಂತೆ ಮಾಡಿದೆ. ವಿಂಡೋಸ್‌ನ ಕೆಲ ಅಪ್ಲಿಕೇಷನ್‌ಗಳು ಅಭಿವೃದ್ಧಿಹೊಂದಿವೆ. ತಕ್ಷಣ ನೋಡಿದಾಗ ಅಂಥ ಬದಲಾವಣೆ ಕಾಣದಿದ್ದರೂ ಬಳಸುವಾಗ ಬದಲಾವಣೆ ಗಮನಕ್ಕೆ ಬರಲಿದೆ ಎನ್ನುವುದು ಕಂಪನಿ ತಂತ್ರಜ್ಞರ ವಾದ.

ಸ್ಟಾರ್ಟ್ ಬಟನ್
ವಿಂಡೋಸ್-8ನಲ್ಲಿ ಸ್ಟಾರ್ಟ್ ಬಟನ್ ಯಾವಾಗಲೂ ಸ್ಕ್ರೀನ್‌ನಲ್ಲಿ ಕಾಣುತ್ತಿರಲಿಲ್ಲ. ಹೊಸ ಆವೃತ್ತಿಯಲ್ಲಿ ಎದುರಿಗಿನ ಟೈಲ್‌ವ್ಯೂನಲ್ಲಿಯೇ ಸ್ಟಾರ್ಟ್‌ಮೆನು ಬಟನ್ ಸಿಗಲಿದೆ. ಮೊದಲಾದರೆ ವಿಂಡೋಸ್ ಬಟನ್ ಅದುಮಿ ಆ ಬಳಿಕ ಸ್ಟಾರ್ಟ್ ಮೆನು ಪಡೆಯಬೇಕಿತ್ತು. ಇದಲ್ಲದೇ ಮೆನುವಿನಲ್ಲಿ ಇಮೇಜ್ ವ್ಯೂ ಕೂಡ ದೊರೆಯಲಿದೆ. ಆದ್ದರಿಂದ ಇನ್ನು ಮುಂದೆ ಪದೇಪದೇ ವಿಂಡೋಸ್-7 ಮಾದರಿಯ ವಿಂಡೋ ಓಪನ್‌ಮಾಡಿ ಸ್ಟಾರ್ಟ್ ಮೆನುಗೆ ಹೋಗಬೇಕಿಲ್ಲ. ಇದಲ್ಲದೇ ಕೆಲವು ವಿಂಡೋಸ್-8 ಕಂಪ್ಯೂಟರ್‌ಗಳಲ್ಲಿ ಸ್ಟಾರ್ಟ್ ಬಟನ್ ಕಾಣಿಸುತ್ತಲೇ ಇರಲಿಲ್ಲ. ಇದಕ್ಕೆ ಶಾಶ್ವತ ಪರಿಹಾರ ನೀಡಲಾಗಿದೆ.

ಲಾಕ್‌ಸ್ಕ್ರೀನ್
ನಿಮ್ಮ ಬಳಿ ಈಗಿರುವ ವಿಂಡೋಸ್-8 ಅಥವಾ ಹಿಂದಿನ ಆವೃತ್ತಿಯ ಓಎಸ್‌ಗಳ ಕಂಪ್ಯೂಟರ್‌ಗಳಲ್ಲಿ ಲಾಗಿನ್ ಮಾಡುವ ಮುಂಚೆ ಪಾಸ್‌ವರ್ಡ್ ಹಾಕುವ ಬದಲು ಬೇರೇನೂ ಅವಕಾಶವೇ ಇರಲಿಲ್ಲ. ಆದರೆ ಈಗ ಲಾಕ್ ಸ್ಕ್ರೀನ್‌ನಲ್ಲಿಯೇ ಫೋಟೋ ಸ್ಲೈಡ್‌ಶೋ ವೀಕ್ಷಿಸಬಹುದು. ಇದಲ್ಲದೇ ಸ್ಕೈಪ್, ವಿಡಿಯೋ- ಆಡಿಯೋ ಕಾಲ್ ಹಾಗೂ ಕ್ಯಾಮೆರಾಗಳನ್ನು ಉಪಯೋಗಿಸಲು ಅವಕಾಶ ಮಾಡಿಕೊಡಲಾಗಿದೆ. ಹಾಗಂದ ಮಾತ್ರಕ್ಕೆ ನಿಮ್ಮ ಕಂಪ್ಯೂಟರ್‌ನಲ್ಲಿನ ಎಲ್ಲ ಫೋಟೋ ಅಥವಾ ಫೈಲ್‌ಗಳು ಇತರರಿಗೆ ಸಿಗುವುದಿಲ್ಲ.

ಸರ್ಚ್
ವಿಂಡೋಸ್ ಎಕ್ಸ್‌ಪಿಯಲ್ಲಿ ಫೈಲ್ ಸರ್ಚ್ ಮಾಡಿರುವುದು ನಿಮಗೆ ನೆನಪಿರಬಹುದು. ಆಗ ನಿಮಗೆ ಮ್ಯೂಸಿಕ್, ಫೋಟೋ, ಫೈಲ್ ಅಥವಾ ಆಯ್ಕೆ ತಕ್ಕಂತೆ ಹೆಸರನ್ನು ನಮೂದಿಸಿ ಸರ್ಚ್ ಮಾಡಬಹುದಿತ್ತು. ಆದರೆ ವಿಂಡೋಸ್-7ನಲ್ಲಿ ಇದು ಮಾಯವಾಗಿತ್ತು, ವಿಂಡೋಸ್-8ನಲ್ಲಿಯೂ. ಆದರೆ ಈಗ ಹಿಂದಿನ ಆವೃತ್ತಿಯ ಸರ್ಚ್ ಅವಕಾಶಕ್ಕೆ ಹೊಸ ರೂಪ ನೀಡಲಾಗಿದೆ. ನಿಮ್ಮ ಸಿಸ್ಟಮ್‌ನಲ್ಲಿ ಡೌನ್‌ಲೋಡ್ ಎಂದು ಸರ್ಚ್ ಮಾಡಿದಾಗ ಫೈಲ್, ಮ್ಯೂಸಿಕ್ ಅಥವಾ ಅಪ್ಲಿಕೇಷನ್ ಎಂದು ಹುಡುಕಬಹುದು.

ಮಲ್ಟಿ ಟಾಸ್ಕಿಂಗ್
ಈಗಿರುವ ವಿಂಡೋಸ್-8ನಲ್ಲಿ ಒಮ್ಮೆಗೆ 2 ಸ್ಕ್ರೀನ್ ಅಂದರೆ 2 ಕೆಲಸವನ್ನು ಒಟ್ಟಿಗೆ ಮಾಡಬಹುದು. ನೂತನ ಆವೃತ್ತಿಯಲ್ಲಿ ಸ್ಕ್ರೀನ್ ರೆಸಲ್ಯೂಷನ್ ಆಧರಿಸಿ 7 ಸ್ಕ್ರೀನ್ ಉಪಯೋಗಿಸಬಹುದು. ಸ್ಕ್ರೀನ್ ಸೆಟ್ಟಿಂಗ್ ಬದಲಿಸಿ ಬಳಕೆದಾರರು ತಮಗೆ ಬೇಕಾದಷ್ಟು ಕೆಲಸವನ್ನು ಒಂದೇ ಸಮಯದಲ್ಲಿ ಸ್ಕ್ರೀನ್‌ನಲ್ಲಿ ಮಾಡಬಹುದು. ಆದರೆ ಪ್ರಾಯೋಗಿಕವಾಗಿ ಇದು ಹೇಗೆ ಕೆಲಸ ಮಾಡುತ್ತದೆಂಬುದನ್ನು ಕಾದುನೋಡಬೇಕಿದೆ.
ಇದರೊಂದಿಗೆ ವಿಂಡೋಸ್ ಮಾರ್ಕೇಟ್ ಲುಕ್ ಕೂಡ ಬದಲಾಯಿಸಲಾಗಿದೆಯಂತೆ. ವಿಂಡೋಸ್ ಅಪ್ಲಿಕೇಷನ್ ರೆಕಮಂಡೇಷನ್ ಎಂಬ ಹೊಸ ಪುಟವನ್ನು ತೆರೆಯಲಾಗಿದೆ. ಮಲ್ಟಿ ಟಾಸ್ಕಿಂಗ್‌ಗೆ ನೆರವಾಗುವಂತೆ ಟಚ್ ಸ್ಕ್ರೀನ್ ಕೀಬೋರ್ಡ್‌ನಲ್ಲೂ ಕೆಲ ಬದಲಾವಣೆ ಮಾಡಲಾಗಿದೆ. ಇದರ ನಿರ್ದಿಷ್ಟ ಬದಲಾವಣೆ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕು.
ಇವೆಲ್ಲದರ ಜತೆಗೆ ಫೋಟೋ ವ್ಯೂವ್, ಕ್ಯಾಲ್ಕುಲೇಟರ್, ಅಲಾರ್ಮ್ ಸೇರಿದಂತೆ ಕೆಲ ಬದಲಾವಣೆ ಮಾಡಲಾಗಿದೆ. ಫೋಟೋ ವ್ಯೂ ಅಪ್ಲಿಕೇಶನ್‌ನಲ್ಲಿ ಕೆಲವು ಮೂಲಭೂತ ಫೋಟೋ ಎಡಿಟಿಂಗ್ ವ್ಯವಸ್ಥೆಯನ್ನೂ ನೀಡಿರುವುದು ವಿಶೇಷ.

- ವಕ್ರದಂತ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್-ಪ್ರಿಯಾಂಕಾ ವಶಕ್ಕೆ ಪಡೆದ ದೆಹಲಿ ಪೊಲೀಸರು: ಇಂಡಿಯಾ ಕೂಟದ 9 ಗಂಟೆಗಳ ಧರಣಿಗೆ ಬ್ರೇಕ್!

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!

ಚು.ಆಯೋಗದ ವಿರುದ್ಧ INDIA ಪ್ರತಿಭಟನೆ; 'ಕೈ' ನಾಯಕರು ಪೊಲೀಸ್ ವಶಕ್ಕೆ: ವ್ಯಾನ್ ನಿಂದ ಇಳಿದು ರಾಹುಲ್ ಜೊತೆ ಮರದ ಕೆಳಗೆ ಕುಳಿತ ಪ್ರಿಯಾಂಕ!

ಕಲಬುರಗಿಯಲ್ಲಿ ಶಾಕಿಂಗ್ ಘಟನೆ: ತೊಗರಿ ಹೊಲದಲ್ಲಿ ತರಬೇತಿ ವಿಮಾನ ತುರ್ತು ಭೂಸ್ಪರ್ಶ!

ಪ್ರಿಯಕರನೊಂದಿಗೆ ಸೇರಿ ಪತಿ ಹತ್ಯೆ: ಚಾಟ್​ನಿಂದ ಕೊಲೆ ರಹಸ್ಯ ಬಯಲು; ಹೃದಯಾಘಾತದ ಕಥೆ ಕಟ್ಟಿದ್ದ ಪತ್ನಿ ಬಂಧನ!