ಟ್ಯಾಬ್ಲೆಟ್‌ಗಳು ಕೇವಲ ಕೆಲವು ವರ್ಷಗಳ ಹಿಂದೆ ಕೈಗೆಟುಕದ ನಕ್ಷತ್ರದಂತಿದ್ದವು. ಈಗ ಯಾರ ಕೈಗೆ ಬೇಕಾದರೂ ಎಟುಕುವಂತಾಗಿವೆ. ಮಕ್ಕಳ ಕೆಲವು ಆಟಿಕೆಗಳಿಗಿಂತ ಕಡಿಮೆ ದರಕ್ಕೆ ಟ್ಯಾಬ್ಲೆಟ್ ಸಿಗುತ್ತಿದೆ!
10-15 ಸಾವಿರಕ್ಕೆಲ್ಲ ಯಾವುದನ್ನು ತೆಗೆದುಕೊಳ್ಳಬೇಕು ಎಂದು ಗೊಂದಲಕ್ಕೊಳಗಾಗುವಷ್ಟು ಟ್ಯಾಬ್ಲೆಟ್‌ಗಳಿವೆ! ಐಪ್ಯಾಡ್ ಮಿನಿ (ಕೇವಲ ವೈಫೈ ಮತ್ತು 16ಜಿಬಿ) ಕೇವಲ 21,000ಕ್ಕೆ ಲಭ್ಯವಿದೆ. ಆ್ಯಪಲ್, ಸ್ಯಾಮ್‌ಸಂಗ್, ಲೆನೊವೊ ಮುಂತಾದ ದೊಡ್ಡ ಕಂಪನಿಗಳನ್ನು ಬಿಟ್ಟುಬಿಡೋಣ. ಅವು ಇಂದಿಗೂ ಕೊಂಚ ದುಬಾರಿ.
ಮಾರುಕಟ್ಟೆಯಲ್ಲಿ 3000ಕ್ಕೆಲ್ಲ ಟ್ಯಾಬ್ಲೆಟ್‌ಗಳು ಸಿಗುತ್ತವೆ ಎಂದರೆ ನಂಬಲಿಕ್ಕಿಲ್ಲ!
ಅಗ್ಗದ ದುಡ್ಡಿಗೆ ಮುಗ್ಗಿದ ರೊಟ್ಟಿ ಎಂದು ಮೂಗುಮುರಿಯಬೇಡಿ. ಕಡಿಮೆ ದರಕ್ಕೆ ಲಭ್ಯವಿರುವ ಎಲ್ಲ ಟ್ಯಾಬ್ಲೆಟ್‌ಗಳು ಉತ್ತಮವಾಗಿಲ್ಲವಾದರೂ, ಸಾಕಷ್ಟು ಟ್ಯಾಬ್ಲೆಟ್‌ಗಳಿಗೆ ದೊಡ್ಡ ಬ್ರ್ಯಾಂಡ್‌ನ ಹೆಸರಿಲ್ಲ ಎಂಬುದು ಬಿಟ್ಟರೆ, ಯಾವ ರೀತಿಯಲ್ಲೂ ಕಮ್ಮಿಯಿಲ್ಲ. ಈ ಕಂಪನಿಗಳ ಉತ್ಪನ್ನಗಳನ್ನು ನಾವು ಹೆಚ್ಚಾಗಿ ಬಳಸಿಲ್ಲ. ಇವುಗಳ ಜಾಹೀರಾತು ಕೂಡ ಬರುವುದಿಲ್ಲ. ಮಾರಾಟ ನಂತರದ ಸೇವೆ ಎಲ್ಲಿ ಸಿಗುತ್ತೆ ಗೊತ್ತಿಲ್ಲ. ಈ ಕಾರಣಕ್ಕಾಗಿ ನಾವು ಹೊಸ ಅಥವಾ ಅಷ್ಟೇನೂ ಪ್ರಸಿದ್ಧವಲ್ಲದ ಕಂಪನಿಯ ಉತ್ಪನ್ನ ಕೊಳ್ಳಲು ಇಷ್ಟಪಡುವುದಿಲ್ಲ ಎಂಬುದನ್ನು ಬಿಟ್ಟರೆ, ಇವು ಉಳಿದ ಟ್ಯಾಬ್ಲೆಟ್‌ಗಳಿಗಿಂತ ಕಡಿಮೆಯೇನಿಲ್ಲ. ಅಂತಹ ಕಡಿಮೆ ಬೆಲೆಯ ಉತ್ತಮ ಟ್ಯಾಬ್ಲೆಟ್‌ಗಳು ನಿಮಗಾಗಿ. ನೆನಪಿರಲಿ ಟ್ಯಾಬ್ಲೆಟ್ ಖರೀದಿಸುವ ಬಜೆಟ್ ಕಡಿಮೆ ಇದ್ದಲ್ಲಿ ಮಾತ್ರ ಇವುಗಳನ್ನು ಖರೀದಿಸಿ.
ಕಾರ್ಬನ್ ಸ್ಮಾರ್ಟ್ ಟ್ಯಾಬ್ 8 ವೆಲೊಕ್ಸ್
ಹೆಸರೇ ಹೇಳುವಂತೆ ಇದರ 8 ಇಂಚು ಸ್ಕ್ರೀನ್ ಪುಸ್ತಕ ಓದಲು ಮತ್ತು ಇಂಟರ್‌ನೆಟ್ ನೋಡಲು ಉತ್ತಮವಾಗಿದೆ. ವಿಡಿಯೋ ನೋಡುವವರಿಗೆ ಇದು ಉತ್ತಮ ಟ್ಯಾಬ್ಲೆಟ್ ಅಲ್ಲ. ಯಾಕೆಂದರೆ ಇದರಲ್ಲಿ ವಿಡಿಯೋ 'ಲೆಟರ್‌ಬಾಕ್ಸ್' ಮೋಡ್‌ನಲ್ಲಿ ಪ್ರದರ್ಶನಗೊಳ್ಳುತ್ತದೆ. ವೈಡ್ ಆ್ಯಂಗಲ್ ವ್ಯವಸ್ಥೆ ಇಲ್ಲ.
ಬ್ಯಾಟರಿ ಉತ್ತಮವಾಗಿದೆ. 6 ತಾಸುಗಳ ಕಾಲ ವಿಡಿಯೋ ಪ್ರದರ್ಶಿಸುವಷ್ಟು ಸಮರ್ಥವಾಗಿದೆ. ಗೇಮ್ಸ್‌ಗಳನ್ನೂ ಉತ್ತಮವಾಗಿ ಪ್ರದರ್ಶಿಸುತ್ತದೆ. ಆ್ಯಂಡ್ರಾಯ್ಡ್ ಜೆಲ್ಲಿಬೀನ್ ಆಪರೇಟಿಂಗ್ ಸಿಸ್ಟಂ ಹೊಂದಿದೆ. ನಿಮ್ಮ ಟಿವಿಗೆ ಸಂಪರ್ಕ ಕಲ್ಪಿಸಲು ಎಚ್‌ಡಿಎಂಐ ಪೋರ್ಟ್ ಕೂಡ ಇದೆ.
ಆದರೆ ಎಲ್ಲ ಕಡೆಗಳಿಂದ ನೋಡಲು (ವ್ಯೂವಿಂಗ್ ಆ್ಯಂಗಲ್) ಸ್ಕ್ರೀನ್ ಅಷ್ಟು ಉತ್ತಮವಾಗಿಲ್ಲ. ಅಂದರೆ ನೇರವಾಗಿ ನೋಡಿದರೆ ಮಾತ್ರ ಸ್ಕ್ರೀನ್‌ನಲ್ಲಿರುವ ದೃಶ್ಯಗಳು ಉತ್ತಮವಾಗಿ ಕಾಣಿಸುತ್ತವೆ. ಬೇರೆಕಡೆಗಳಿಂದ ನೋಡಿದರೆ, ಕಲರ್ ಫೇಡ್ ಆದಂತೆ ಕಾಣಿಸುತ್ತದೆ. ನಿರ್ಮಾಣ ಗುಣಮಟ್ಟ ತುಂಬ ಗಟ್ಟಿಯಾಗೇನೂ ಇಲ್ಲ. ವೈಫೈ ಇದೆ.
ಸ್ಪೈಸ್ ಸ್ಟೆಲ್ಲರ್ ಪ್ಯಾಡ್
ಕಂಪನಿ ಮೊಬೈಲ್ ಮತ್ತು ಟ್ಯಾಬ್ಲೆಟ್ ಕ್ಷೇತ್ರದಲ್ಲಿ ಹೆಸರುಗಳಿಸಲು ಸ್ಪೈಸ್ ಕಂಪನಿ ವಿಫಲವಾಗಿದ್ದರೂ, ಕಡಿಮೆ ಬೆಲೆಯ ಮೊಬೈಲ್ ಮೂಲಕ ಜನರನ್ನು ಆಕರ್ಷಿಸಲು 'ಸ್ಟೆಲ್ಲರ್' ಹೆಸರಿನ ಮೊಬೈಲ್ ಬಿಡುಗಡೆ ಮಾಡಿದೆ. ಅದೇ ಹೆಸರಿನ ಟ್ಯಾಬ್ಲೆಟ್ ಕೂಡ ಇದೆ.
ಸ್ಪೈಸ್ ಸ್ಟೆಲ್ಲರ್ ಹಾಗೂ ಕಾರ್ಬನ್ ಸ್ಮಾರ್ಟ್ ಟ್ಯಾಬ್ 10 ಎರಡೂ 10 ಇಂಚಿನ ಸ್ಕ್ರೀನ್ ಹೊಂದಿವೆ. ಆದರೆ ಸ್ಪೈಸ್ ಸ್ಟೆಲ್ಲರ್‌ನ ಸ್ಕ್ರೀನ್ ರೆಸಲ್ಯೂಷನ್ ಮತ್ತು ಹಲವು ಕೋನಗಳಿಂದ ನೋಡುವ ಅವಕಾಶವಿದೆ. ಎರಡೂ ಟ್ಯಾಬ್‌ಗಳು ವಿಡಿಯೋ ಮತ್ತು ಆಟವಾಡುವ ಸಂದರ್ಭದಲ್ಲಿ ಒಂದೇ ರೀತಿಯ ಕಾರ್ಯಕ್ಷಮತೆ ಹೊಂದಿವೆ. 8 ತಾಸು ವಿಡಿಯೋ ಪ್ಲೇ ಮಾಡುವ ಸಾಮರ್ಥ್ಯ ಹೊಂದಿದೆ. ಸ್ಟೆಲ್ಲರ್ 13,000 ಮಾರಾಟವಾಗುತ್ತಿದ್ದರೆ, ಕಾರ್ಬನ್ ಸ್ಮಾರ್ಟ್ ಟ್ಯಾಬ್ 10 9,999ಕ್ಕೆ ಮಾರಾಟವಾಗುತ್ತಿದೆ.
ಐಬೆರ್ರಿ ಆಕ್ಸಸ್
ಐಬೆರ್ರಿ ಆಕ್ಸಸ್ ಕೋರ್ ಎಕ್ಸ್2 3ಜಿ ಟ್ಯಾಬ್ಲೆಟ್‌ನ ಮೊದಲ ಆಕರ್ಷಣೆ ಇದರ ಸ್ಕ್ರೀನ್. ಗೂಗಲ್ ನೆಕ್ಸಸ್ 7ನಷ್ಟು ಉತ್ತಮ ಸ್ಕ್ರೀನ್ ಇದಕ್ಕಿದೆ. 1 ಗಿಗಾಹರ್ಟ್ಸ್ ಸಿಂಗಲ್ ಕೋರ್ ಪ್ರೊಸೆಸರ್ ಇದ್ದು, ಆ್ಯಂಡ್ರಾಯ್ಡ್ ಜೆಲ್ಲಿಬೈನ್ ಆಪರೇಟಿಂಗ್ ಸಿಸ್ಟಂ ಹೊಂದಿದೆ. ಬಹುತೇಕ ಎಲ್ಲ ಅಪ್ಲಿಕೇಶನ್‌ಗಳನ್ನು ಸುಲಭವಾಗಿ ಬಳಸಬಹುದು. ಬ್ಯಾಟರಿ ಮತ್ತು ನಿರ್ಮಾಣ ಗುಣಮಟ್ಟ ಅತ್ಯುತ್ತಮವಾಗಿದೆ. ನೋಡಲು ಕೂಡ ಉತ್ತಮವಾಗಿದೆ. ಆದರೆ ಸಿಂಗಲ್ ಕೋರ್ ಪ್ರೊಸೆಸರ್ ಆಗಿರುವುದರಿಂದ ಕೆಲವೊಮ್ಮೆ ಹ್ಯಾಂಗ್ ಆಗುವ ಸಾಧ್ಯತೆಯಿದೆ.
ಹುವೈ ಮೀಡಿಯಾ ಪ್ಯಾಡ್ 7 ಲೈಟ್
ನಿಮ್ಮ ಟ್ಯಾಬ್ಲೆಟ್‌ನಲ್ಲಿ 3ಜಿ ಸಿಮ್ ಅಳವಡಿಸುವ ವ್ಯವಸ್ಥೆ ಬೇಕೆಂದರೆ ನೀವು ಹುವೈ ಮೀಡಿಯಾ ಪ್ಯಾಡ್ 7 ಲೈಟ್ ಮೊರೆ ಹೋಗಬೇಕು. ಆದರೆ ಇದು ಸಿಂಗಲ್ ಕೋರ್ ಪ್ರೊಸೆಸರ್ ಹೊಂದಿದೆ. ಆದ್ದರಿಂದ ಆಟ ಆಡುವಾಗ ಅಡ್ಡಿಯುಂಟಾಗುವ ಸಾಧ್ಯತೆಗಳಿವೆ. ಕಡಿಮೆ ದರದ ಉಳಿದ ಟ್ಯಾಬ್ಲೆಟ್‌ಗಳಿಗೆ ಹೋಲಿಸಿದರೆ ಇದರ ಸ್ಕ್ರೀನ್ ಉತ್ತಮವಾಗಿದೆ. ಬ್ಯಾಟರಿ ಕೂಡ ಉತ್ತಮವಾಗಿದೆ.
ಆದರೆ ಸ್ವಲ್ಪ ಭಾರ ಹೆಚ್ಚು. ಸ್ವಲ್ಪ ದಿನ ಬಳಸುವಷ್ಟರಲ್ಲಿ ಇದು ಭಾರ ಅನ್ನಿಸದು.
ಇದಲ್ಲದೇ ಮೈಕ್ರೋಮ್ಯಾಕ್ಸ್ ಫನ್‌ಬುಕ್, ಜಿಂಕ್ ಝೆಡ್ 100, ವಿಕೆಡ್‌ಲೈಕ್ ವ್ಯಾಮಿ ಡಿಸಾಯರ್ ಮುಂತಾದ ಸಾಕಷ್ಟು ಟ್ಯಾಬ್ಲೆಟ್‌ಗಳು ಮಾರುಕಟ್ಟೆಯಲ್ಲಿ ಮತ್ತು ಆನ್‌ಲೈನ್ ಶಾಪ್‌ಗಳಲ್ಲಿ ಲಭ್ಯವಿವೆ. ಮಾರುಕಟ್ಟೆಗಿಂತ ಆನ್‌ಲೈನ್ ಶಾಪ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಟ್ಯಾಬ್ಲೆಟ್‌ಗಳು ಲಭ್ಯವಿವೆ.
- ವಕ್ರದಂತ