ವಿಜ್ಞಾನ-ತಂತ್ರಜ್ಞಾನ

ಠುssssಸ್‌ssss

ವಿಮಾನ ಪ್ರಯಾಣ ಎಲ್ಲರಿಗೂ ಸಡಗರ. ಆದರೆ ಗೊತ್ತಾ?ವಿಮಾನದಲ್ಲಿ ಉಸಿರಾಡಲು ಶುದ್ಧಗಾಳಿಯೇ ಸಿಗದು...

ವಿಮಾನ ಪ್ರಯಾಣ ಎಲ್ಲರಿಗೂ ಸಡಗರ. ಆದರೆ ಗೊತ್ತಾ?ವಿಮಾನದಲ್ಲಿ ಉಸಿರಾಡಲು ಶುದ್ಧಗಾಳಿಯೇ ಸಿಗದು. ಅಲ್ಲಿನ ಗಾಳಿ ಎಂದರೆ ಹಳಸಿದ ಅನ್ನದೊಂದಿಗೆ ಒಂದಷ್ಟು ತಾಜಾ ಅನ್ನ ಸೇರಿಸಿ ಆಸ್ವಾದನೆಗೆ ಇಟ್ಟಂತೆ!


ವಿಮಾನ ಪ್ರಯಾಣವೆಂದರೆ ಯಾರಿಗೆ ತಾನೆ ಸಡಗರ, ಸಂಭ್ರಮವಿಲ್ಲ? ಕೆಲವೇ ತಾಸುಗಳಲ್ಲಿ ಸಾವಿರಾರು ಕಿ.ಮೀ ದೂರ ತಲುಪುವುದೆಂದರೆ ರೋಚಕ ಅನುಭವ. ವಿಮಾನದ ಆವಿಷ್ಕಾರಕ್ಕೆ ಮನುಷ್ಯನಿಗೆ ಸ್ಫೂರ್ತಿಯಾಗಿದ್ದು ಹಕ್ಕಿ. 'ಲೋಹದ ಹಕ್ಕಿ' ಹಕ್ಕಿಯಷ್ಟು ಹಾರುವ ಪರಿಪೂರ್ಣತೆ ಪಡೆಯಲಾಗದು ಬಿಡಿ! ವಿಮಾನ ಏರುವವರನ್ನು ಕಂಡಾಗ, 'ಅಬ್ಬ! ಎಂಥ ಯೋಗ? ಯಾರಿಗೆ ಉಂಟು ಯಾರಿಗಿಲ್ಲ' ಇದು ಅನ್ನಿಸುವುದು ಸಹಜವೆ.
ಸ್ವಲ್ಪ ಇರಿ. ವಿಮಾನದೊಳಗಿನ ಗಾಳಿ ಉಸಿರಾಡಲು ನೀವಂದುಕೊಂಡಷ್ಟು ಶುದ್ಧವಾಗಿರದು ಎನ್ನುವುದು ನಿಮಗೆ ಗೊತ್ತೇ? ಬಸ್ಸು, ಕಾರು, ರೈಲು, ಹಡಗಿನ ಹಾಗೆ ವಿಮಾನದಲ್ಲೂ ಹೊರಗಿನಿಂದ ಉಸಿರಾಡಲು ತಾಜಾ ಗಾಳಿ ಬಂದೀತೆಂದು ಭಾವಿಸಬೇಡಿ. ಅಷ್ಟಕ್ಕೂ 10,000 ಅಡಿಗಳಿಗೂ ಎತ್ತರಕ್ಕೆ ಹೋದರೆ ನಮಗೆ ಉಸಿರಾಟಕ್ಕೆ ತಕ್ಕುದಾದ ಗಾಳಿಯೇ ಸಿಗದು. ಅದು ಅತಿ ತಣ್ಣಗಿರುತ್ತದೆ. ಬಹಳ ತೆಳುವಾಗಿರುತ್ತದೆ. 30,000 ಅಡಿ ಎತ್ತರದಲ್ಲಿ ವಿಮಾನ ಹಾರುವಾಗ ಹೊರಗಿನ ತಾಪಮಾನ ಸೊನ್ನೆಗಿಂತಲೂ 50 ಡಿಗ್ರಿ ಸೆಲ್ಸಿಯಸ್ ಕಡಿಮೆ. ಸಾಮಾನ್ಯವಾಗಿ ದೇಶದೊಳಗಿನ ವಿಮಾನಗಳು 17000 ಅಡಿಗಳಿಂದ 20000 ಅಡಿಗಳ ಎತ್ತರದಲ್ಲಿ ಹಾರುತ್ತವೆ. ಇನ್ನು ಅಂತರ್ದೇಶೀಯ ವಿಮಾನಗಳು ಸುಮಾರು 30000 ಅಡಿಗಳಷ್ಟು ಎತ್ತರದಲ್ಲಿ ಹಾರುವವು. ವಿಮಾನ ವಾಯುಭದ್ರ (Airtight) ಅಲ್ಲ. ಹೊರಗಿರುವ ಗಾಳಿಯನ್ನು ನಿಯಮಿತವಾಗಿ ಒಳಗೆ ಬಿಟ್ಟುಕೊಂಡು ಅದನ್ನು ಒತ್ತಿಕ್ಕಿಸಿ, ಕಾಯಿಸಿ ಉಸಿರಾಟಕ್ಕೆ ಸೂಕ್ತವಾಗುವಂತೆ ಸಂಸ್ಕರಿಸಲಾಗುತ್ತದೆ. 1950ರ ದಶಕಗಳಿಗೂ ಹಿಂದೆ ಯಾಂತ್ರಿಕ ಸಂಪೀಡಕಗಳುಳ್ಳ ( Mechanical Compressors)ವಿಮಾನಗಳಿರುತ್ತಿದ್ದವು. ಅವು ಈ ಸಂಸ್ಕರಣ ನಿಭಾಯಿಸಿ ಶುದ್ಧ ಗಾಳಿಯನ್ನು ವಿಮಾನದೊಳಗೆ ಪರಿಚಲಿಸುವಂತೆ ನೋಡಿಕೊಳ್ಳುತ್ತಿದ್ದವು. ಆದರೆ ಇಂಥಹ ವಿಮಾನಗಳನ್ನು ವಿನ್ಯಾಸಗೊಳಿಸುವುದು ಅತಿ ದುಬಾರಿ. ಹಾಗಾಗಿ ಎಂಜಿನ್ನುಗಳ ಮೂಲಕವೇ ಹೊರಗಿನ ಗಾಳಿ ಎಳೆದುಕೊಂಡು ಒತ್ತಿಕ್ಕಿಸಿ ಅದನ್ನು ಈಗಾಗಲೇ ವಿಮಾನದೊಳಗೆ ಇರುವ ಗಾಳಿಗೆ ಬೆರಸಿ ವಿಮಾನದಾದ್ಯಂತ ಪುನರ್ಪರಿಚಲಿಸುವಂತೆ ಮಾಡಲಾಗುತ್ತದೆ. ಅಂದರೆ ಹಳಸಿದ ಅನ್ನದೊಂದಿಗೆ ಒಂದಷ್ಟು ತಾಜಾ ಅನ್ನ ಸೇರಿಸಿ ಆಸ್ವಾದನೆಗೆ ಇಟ್ಟಂತೆ! ಮತ್ತೂ ವಿವರಿಸಿ ಹೇಳಬೇಕೆಂದರೆ ಕಂಬಳಿ ಎಳೆದುಕೊಂಡು ಮುಸುಕು ಹಾಕಿಕೊಂಡು ಮಲಗಿದವ ಹೇಗೆ ಸಂಪೂರ್ಣ ಶುದ್ಧ ಗಾಳಿಯನ್ನು ಸೇವಿಸಲಾಗದೋ ಅಂಥ ಪಾಡು ವಿಮಾನದ ಚಾಲಕರಿಗೆ, ಪ್ರಯಾಣಿಕರಿಗೆ.
ಸಮಸ್ಯೆಯೆಂದರೆ ವಿಮಾನದ ಎಂಜಿನ್ನುಗಳಲ್ಲಿನ ಬಿಡಿ ಭಾಗಗಳ ಸರಾಗ ಚಲನೆಗೆ ಬಳಸಲಾಗುವ 'ಎರೆ ಎಣ್ಣೆ' (lubricating oil) ಕಾವೇರಿರುತ್ತದೆ. ಪರಿಣಮಿಸುವ ಅದರ ಹೊಗೆ ಗಾಳಿಯೊಂದಿಗೆ ಸೇರುವುದರಿಂದ ಅಷ್ಟರಮಟ್ಟಿಗೆ ಗಾಳಿ ಕಲುಷಿತಗೊಳ್ಳುವುದು. ಈ ಎರೆ ಎಣ್ಣೆ ವಿಶಿಷ್ಟವಾಗಿ ತಯಾರಿಸಿದ ಕೃತಕ ಎಣ್ಣೆ. ಅದರಲ್ಲಿ 'ಟ್ರೈಕ್ರೆಸೈಲ್ ಫಾಸ್ಪೇಟ್‌' (tricresyl phosphate) ನಂಥಹ ವಿಷ ಪದಾರ್ಥಗಳಿವೆ. ಹಾಗಾಗಿ ಪ್ರಯಾಣಿಕರಿಗೆ ತಲೆನೋವು, ಸ್ನಾಯು ನಡುಕ ಮತ್ತು ಪಾರ್ಶ್ವವಾಯು ಲಕ್ಷಣಗಳು, ಮಂದ ದೃಷ್ಟಿ, ತಲೆಸುತ್ತು ಸಂಭಾವ್ಯ. ಗಮನಾರ್ಹ ಅಂಶವೆಂದರೆ ನವೀನ ಬೊಯಿಂಗ್ 787 ವಿಮಾನ ಬಿಟ್ಟರೆ ಉಳಿದ ಎಲ್ಲ ವಿಮಾನಗಳು ಎಂಜಿನ್‌ಗಳ ಮೂಲಕವೇ ಗಾಳಿಯನ್ನು ಒಳಗೆ ಸೆಳೆದುಕೊಳ್ಳುತ್ತವೆ.
ಅಂತರ್ದೇಶಿಯ ವಿಮಾನ ಪ್ರಯಾಣಿಕರಂತೂ ಮೊದಲೇ 'ಜೆಟ್ ಲ್ಯಾಗ್‌' (Jet l) ಅಂದರೆ ಕಾಲ ವಲಯ ವ್ಯತ್ಯಾಸದಿಂದ ಆಯಾಸಕ್ಕೊಳಗಾಗುತ್ತಾರೆ. ಇದರ ಜತೆಗೆ ತಮ್ಮ ಪ್ರಯಾಣದ ಅವಧಿಯಲ್ಲಿ ತಾಜಾ ಗಾಳಿ ಲಭ್ಯವಾಗದಿದ್ದರೆ ಅವರು ಇನ್ನಷ್ಟು ಸುಸ್ತು, ನಿದ್ರಾಹೀನತೆಯಿಂದ ಕಂಗೆಡುವುದು ದಿಟ. ಒಟ್ಟಾರೆ ಅವರು ಶರೀರದಲ್ಲಿನ ಜೈವಿಕ ಗಡಿಯಾರವು ಏರುಪೇರಾಗುವುದರೊಂದಿಗೆ ತಂಗಳು ವಾಯು ಉಸಿರಾಡುವ ಸವಾಲನ್ನು ಎದುರಿಸಲೇಬೇಕು. ಒಂದು ಪರಿಹಾರವೆಂದರೆ ದುಬಾರಿಯಾದರೂ ಸರಿಯೆ, ವಿಮಾನದ ಅನಿವಾರ್ಯ ಘಟಕವಾಗಿ ಹೊರಗಿನ ಗಾಳಿಯನ್ನು ಸಂಸ್ಕರಿಸುವ ಬೃಹತ್ ಯಂತ್ರ ಇರಬೇಕು. ಏಕೆಂದರೆ ಆಹಾರ, ನೀರಿಗಿಂತಲೂ ಉಸಿರಾಡಲು ಶುದ್ಧ ಗಾಳಿ ಮನುಷ್ಯನಿಗೆ ಅತ್ಯಗತ್ಯ. ಹಾರುವ ಪುಳಕದಲ್ಲಿ ನಾವಿದನ್ನು ಮರೆತೇಬಿಟ್ಟಿರುತ್ತೇವಲ್ಲವೆ?  

- ಬಿಂಡಿಗನವಿಲೆ ಭಗವಾನ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!