ವಿಜ್ಞಾನ-ತಂತ್ರಜ್ಞಾನ

ಕಿಟ್ ರೆಡಿ

ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಸವರಿದಾಗ ಕಿಟ್‌ಕ್ಯಾಟ್ ಸವಿಯಬೇಕು... ಕಿಟ್‌ಕ್ಯಾಟ್ ರುಚಿ ನೋಡಿದಾಗ...

ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್ ಸವರಿದಾಗ ಕಿಟ್‌ಕ್ಯಾಟ್ ಸವಿಯಬೇಕು... ಕಿಟ್‌ಕ್ಯಾಟ್ ರುಚಿ ನೋಡಿದಾಗ ಆ್ಯಂಡ್ರಾಯ್ಡ್ ನೆನಪಾಗಬೇಕು!
ಇಂಥ ವಿಚಿತ್ರವಾದ ಮಾನಸಿಕ ಒಪ್ಪಂದದೊಂದಿಗೆ ಆ್ಯಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಆಪರೇಟಿಂಗ್ ಸಿಸ್ಟಮ್ ಶೀಘ್ರದಲ್ಲಿಯೇ ಮಾರುಕಟ್ಟೆಗೆ ಬರುತ್ತಿದೆ. ಚಾಕೊಲೇಟ್ ಪ್ರಪಂಚದಲ್ಲಿ ಅತಿ ದೊಡ್ಡ ಬ್ರಾಂಡ್ ಎಂಬ ಹೆಗ್ಗಳಿಕೆ ಹೊಂದಿರುವ ನೆಸ್ಲೆಯ ಕಿಟ್‌ಕ್ಯಾಟ್ ಹಾಗೂ ಸ್ಮಾರ್ಟ್‌ಫೋನ್ ಓಎಸ್‌ನ ದಿಗ್ಗಜ ಆ್ಯಂಡ್ರಾಯ್ಡ್ ಸಂಸ್ಥೆಯು ಯಾವುದೇ ಕಾಸಿನ ವರ್ಗಾವಣೆಯಿಲ್ಲದೇ ಒಪ್ಪಂದಕ್ಕೆ ಬಂದಿವೆ!
ಒಂದೆಡೆ ಕಿಟ್‌ಕ್ಯಾಟ್‌ನ ರುಚಿ ನಾಳೆ ಬರಲಿರುವ ಓಎಸ್ ಬಗೆಗೂ ಆಸೆ ತೋರಿಸಿದೆ. ಮೂಲಗಳ ಪ್ರಕಾರ, ನೂತನ ಆಪರೇಟಿಂಗ್ ಸಿಸ್ಟಮ್ ಕೂಡ ಚಾಕೊಲೇಟ್‌ನಂತೆಯೇ ಸ್ವಾದಿಷ್ಟವಾಗಿರಲಿದೆ. ಮತ್ತೊಂದು ಖುಷಿಯ ವಿಚಾರವೆಂದರೆ ಬಹುತೇಕ ಎಲ್ಲ ಆ್ಯಂಡ್ರಾಯ್ಡ್ ಬಳಕೆದಾರರು ಕಿಟ್‌ಕ್ಯಾಟ್ ಸವಿಯುವ ಅವಕಾಶ ಸಿಗಲಿದೆ.
ಗೂಗಲ್ ಆ್ಯಂಡ್ರಾಯ್ಡ್ ಮೂಲಗಳ ಪ್ರಕಾರ, ಅಕ್ಟೋಬರ್ ಅಂತ್ಯದೊಳಗೆ ಕಿಟ್‌ಕ್ಯಾಟ್ ಓಎಸ್ ಮಾರುಕಟ್ಟೆಗೆ ಬರುತ್ತಿದೆ. ಆದರೆ, ಇದು ಈ ಹಿಂದೆ ಹೇಳಿದಂತೆ ಆ್ಯಂಡ್ರಾಯ್ಡ್ 5.0 ಆವೃತ್ತಿಯ ಬದಲು ಆ್ಯಂಡ್ರಾಯ್ಡ್ 4.4 ಎಂದೇ ಉಳಿಸಲಾಗಿದೆ. ಇದರರ್ಥ ಆಪರೇಟಿಂಗ್ ಸಿಸ್ಟಮ್‌ನಲ್ಲಿ ಭಾಗಶಃ ಬದಲಾವಣೆಯನ್ನಷ್ಟೇ ತರಲು  ಆ್ಯಂಡ್ರಾಯ್ಡ್ ನಿರ್ಧರಿಸಿದೆ. ವಿನ್ಯಾಸ, ಅಫ್ಲಿಕೇಷನ್ ಹಾಗೂ ಮೆಮೊರಿ ಸಾಮರ್ಥ್ಯಕ್ಕೆ ಸಂಬಂಧಿಸಿ ಕಿಟ್‌ಕ್ಯಾಟ್‌ನಲ್ಲಿ ಹೊಸತನ ನಿರೀಕ್ಷಿಸಬಹುದಾಗಿದೆ.

ಫೋನ್ ಮತ್ತಷ್ಟು ಸ್ಮಾರ್ಟ್!
ಆ್ಯಂಡ್ರಾಯ್ಡ್‌ನ ಈ ಹಿಂದಿನ ಐಸ್‌ಕ್ರೀಮ್ ಸ್ಯಾಂಡ್‌ವಿಚ್ ಹಾಗೂ ಜೆಲ್ಲಿಬೀನ್ ಆಪರೇಟಿಂಗ್ ಸಿಸ್ಟಮ್ ಅನ್ನು ಮಾರುಕಟ್ಟೆಗೆ ತಂದಿದ್ದಾಗ ಹೊಸ ಡಿವೈಸ್‌ಗಳಿಗೆ ಮಾತ್ರ ಸೀಮಿತಗೊಳಿಸಲಾಗಿತ್ತು. ಇನ್ನು ಕೆಲ ಬೆರಳೆಣಿಕೆಯ ದುಬಾರಿ ಡಿವೈಸ್‌ಗಳಿಗೆ ಅಪ್‌ಗ್ರೇಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ಏಕೆಂದರೆ, ನೂತನ ಓಎಸ್‌ಗಳು ಬರುತ್ತಿದ್ದಂತೆ ಮೆಮೊರಿ ಬಳಕೆಯೂ ಹೆಚ್ಚುತ್ತಾ ಸಾಗಿತು. ಕಡಿಮೆ ಸಾಮರ್ಥ್ಯದ ರ್ಯಾಮ್ ಇರುವ ಸ್ಮಾರ್ಟ್‌ಫೋನ್‌ಗಳಲ್ಲಿ ಐಸ್‌ಕ್ರೀಮ್ ಸ್ಯಾಂಡ್‌ವಿಚ್ ಹಾಗೂ ಜೆಲ್ಲಿ ಬೀನ್‌ಗಳು ಕೆಲಸ ಮಾಡದಂತಾಯಿತು. ಮತ್ತೊಂದೆಡೆ ಆ್ಯಂಡ್ರಾಯ್ಡ್‌ನ ಓಎಸ್‌ಗಾಗಿಯೇ ಹೆಚ್ಚು ರ್ಯಾಮ್ ಬಳಕೆಯಾಗುತ್ತಿದ್ದರಿಂದ ಅಪ್ಲಿಕೇಷನ್‌ಗಳು ಹ್ಯಾಂಗ್ ಆಗುವ ಪ್ರಮೇಯಗಳು ಹೆಚ್ಚಾದವು.
ಕಡಿಮೆ ರ್ಯಾಮ್ ಹೊಂದಿರುವ ಡಿವೈಸ್‌ಗಳಿಗೆ ಓಎಸ್ ಅಪ್‌ಡೇಟ್ ಮಾಡಿದ್ದರ ಪರಿಣಾಮವಾಗಿ ಡಿವೈಸ್ ಮತ್ತಷ್ಟು ನಿಧಾನಗತಿಯಾಯಿತು. ಇನ್ನೊಂದೆಡೆ ಗೂಗಲ್ ಪ್ಲೇನಲ್ಲಿ ಬರುವ ಅಪ್ಲಿಕೇಷನ್‌ಗಳೂ ನೂತನ ಓಎಸ್‌ಗೆ ತಕ್ಕಂತೆಯೇ ರೂಪುಗೊಳ್ಳುವುದರಿಂದ ಡಿವೈಸ್ ಮತ್ತಷ್ಟು ಮಂದವಾಗುತ್ತಿದೆ.
ಇವೆಲ್ಲ ಸಮಸ್ಯೆಗಳಿಗೆ ತಿಲಾಂಜಲಿ ಹಾಡಲು ಆ್ಯಂಡ್ರಾಯ್ಡ್ ಮುಂದಾಗಿದೆ. ಈಗ ಬರುತ್ತಿರುವ ಕಿಟ್‌ಕ್ಯಾಟ್ ಓಎಸ್ ಅನ್ನು 512 ಎಂಬಿ ರ್ಯಾಮ್ ಅಥವಾ ಅದಕ್ಕಿಂತ ಹೆಚ್ಚಿನ ರ್ಯಾಮ್ ಹೊಂದಿರುವ ಎಲ್ಲ ಡಿವೈಸ್‌ಗಳಿಗೂ ಅಪ್‌ಗ್ರೇಡ್ ಅವಕಾಶ ನೀಡಲಾಗುತ್ತಿದೆಯಂತೆ. ಲಿನಕ್ಸ್ ಸಹಾಯದೊಂದಿಗೆ ಕಡಿಮೆ ರ್ಯಾಮ್‌ನ ಡಿವೈಸ್‌ಗಳಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಓಎಸ್ ರೂಪಿಸಲಾಗಿದೆ. ಇದರಿಂದ ರು. 5 ಸಾವಿರ ಕೊಟ್ಟು ಆ್ಯಂಡ್ರಾಯ್ಡ್ ಡಿವೈಸ್ ಹಾಗೂ ರು. 45 ಸಾವಿರ ಕೊಟ್ಟ ಸ್ಮಾರ್ಟ್‌ಫೋನ್‌ನ ಆಪರೇಟಿಂಗ್ ಸಿಸ್ಟಮ್ ಹಾಗೂ ವಿನ್ಯಾಸದಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಆದರೆ, ಐಸ್‌ಕ್ರೀಮ್ ಸ್ಯಾಂಡ್‌ವಿಚ್ ನಂತರದ ಓಎಸ್‌ಗಳನ್ನು ಮೂಲವಾಗಿ ಹೊಂದಿರುವ ಡಿವೈಸ್‌ಗಳಲ್ಲಿ ಮಾತ್ರ ಎಲ್ಲ ಅಪ್ಲಿಕೇಷನ್‌ಗಳು ಕಾರ್ಯನಿರ್ವಹಿಸುತ್ತವೆ.

ಮೆಸೇಜಿಂಗ್‌ಗೆ ಹ್ಯಾಂಗ್!
ಗೂಗಲ್ ಟಾಕ್ ಬದಲಿಗೆ ಹ್ಯಾಂಗ್‌ಔಟ್ ಅನ್ನು ಕೆಲ ತಿಂಗಳ ಹಿಂದೆ ಗೂಗಲ್ ಪರಿಚಯಿಸಿತ್ತು. ಪ್ರಾರಂಭದಲ್ಲಿ ಗೂಗಲ್ ಟಾಕ್ ಬಳಕೆದಾರರಿಗೆ ಹ್ಯಾಂಗ್‌ಔಟ್ ತಲೆನೋವಾಗಿ ಪರಿಣಮಿಸಿತ್ತು. ಆ ಬಳಿಕ ಬಂದ 3 ಅಪ್‌ಡೇಟ್‌ಗಳು ಹ್ಯಾಂಗ್‌ಔಟ್‌ನ ಚಾಟ್‌ನಲ್ಲಿ ಖುಷಿಯಿಂದ ಹ್ಯಾಂಗ್ ಆಗಲು ಅನುವುಮಾಡಿಕೊಟ್ಟಿವೆ. ಈಗ ಕಿಟ್‌ಕ್ಯಾಟ್‌ನಲ್ಲಿ ಮೆಸೇಜಿಂಗ್ ಅನ್ನೇ ಹ್ಯಾಂಗ್‌ಔಟ್‌ನಲ್ಲಿ ಸೇರಿಸಲಾಗುತ್ತಿದೆ.
ಕಿಟ್‌ಕ್ಯಾಟ್ ಓಎಸ್‌ನಲ್ಲಿ ಮೆಸೇಜಿಂಗ್ ಅವಕಾಶವನ್ನು ಸಂಪೂರ್ಣವಾಗಿ ಬದಲಿಸಲಾಗಿದೆ. ಹ್ಯಾಂಗ್‌ಔಟ್‌ನಿಂದಲೇ ಮೆಸೇಜ್‌ಗಳನ್ನು ಟೈಪ್ ಮಾಡಿ ಕಳುಹಿಸಬಹುದು. ಇದರಿಂದ ಹ್ಯಾಂಗ್‌ಔಟ್ ಅನ್ನು ಮಲ್ಟಿ ಟಾಸ್ಕ್ ಅಪ್ಲಿಕೇಷನ್ ಆಗಿ ಬಳಸಲು ಗೂಗಲ್ ನಿರ್ಧರಿಸಿದೆ.
ವಿಮರ್ಶಕರು ಹೇಳುವಂತೆ ಭವಿಷ್ಯದಲ್ಲಿ ಹ್ಯಾಂಗ್‌ಔಟ್ ಅನ್ನು ವಾಟ್ಸ್‌ಆ್ಯಪ್ ಹಾಗೂ ವಿಚಾಟ್ ಅಪ್ಲಿಕೇಷನ್‌ಗಳಿಗೆ ಪರ್ಯಾಯವಾಗಿ ರೂಪಿಸಲು ಗೂಗಲ್ ನಿರ್ಧರಿಸಿದೆ. ಇದಕ್ಕೆ ಪ್ರಾಥಮಿಕ ಹಂತವಾಗಿ ಒಂದೊಂದೇ ಅಂಶಗಳನ್ನು ಹ್ಯಾಂಗ್‌ಔಟ್‌ಗೆ ಸೇರಿಸಲಾಗುತ್ತಿದೆ. ಕಿಟ್‌ಕ್ಯಾಟ್ ಓಎಸ್‌ನಲ್ಲಿ ಹೇಗೆ ಕಾರ್ಯನಿರ್ವಹಿಸುತ್ತದೆ ಹಾಗೂ ಬಳಕೆದಾರರ ಅಭಿಪ್ರಾಯ ಕೇಳಿ ಮುಂದುವರಿಯಲು ಗೂಗಲ್ ಚಿಂತಿಸಿದೆ. ನಿಮಗೆ ಈಗಾಗಲೇ ತಿಳಿದಂತೆ ಫೇಸ್‌ಬುಕ್ ಪ್ರವೇಶದ ಬಳಿಕ ಗೂಗಲ್‌ನ ಎಲ್ಲ ಸಾಮಾಜಿಕ ತಾಣಗಳು ಫ್ಲಾಪ್ ಶೋ ನಡೆಸಿವೆ.

ಬಣ್ಣ ಬದಲಿಸುವ ಕಿಟ್‌ಕ್ಯಾಟ್
ಜೆಲ್ಲಿಬೀನ್‌ನಲ್ಲಿ ಡಿಫಾಲ್ಟ್ ಆಗಿ ಎಲ್ಲ ಅಪ್ಲಿಕೇಷನ್‌ಗಳ ಸ್ಟೇಟಸ್ ಬಾರ್ ಕಡು ನೀಲಿ ಬಣ್ಣದಲ್ಲಿತ್ತು. ಆದರೆ, ಕಿಟ್‌ಕ್ಯಾಟ್ ಓಎಸ್‌ನಲ್ಲಿ ಸ್ಟೇಟಸ್ ಬಾರ್‌ಗಳ ಬಣ್ಣ ಬದಲಾಗಲಿದೆ. ನಾವು ಬಳಸುವ ವಾಲ್‌ಪೇಪರ್ ಅಥವಾ ಥೀಮ್ ಆಧರಿಸಿ ಬಣ್ಣವೂ ಬದಲಾಗಲಿದೆ. ಬೇಸಿಕ್ ನೋಕಿಯಾ ಮೊಬೈಲ್‌ಗಳಲ್ಲಿ ಇಂಥ ಅವಕಾಶವಿದ್ದರೂ  ಆ್ಯಂಡ್ರಾಯ್ಡ್‌ನಲ್ಲಿಲ್ಲ ಎಂಬ ಕೊರತೆ ನೀಗಲಿದೆ.

ಗುಟ್ಟುಬಿಡದ ಗೂಗಲ್
ಹಿಂದಿನ ಎಲ್ಲ ಓಎಸ್‌ಗಳ ಬಿಡುಗಡೆಗೆ ಮುಂಚೆ ಅದರಲ್ಲಿನ ವೈಶಿಷ್ಟ್ಯಗಳ ಗುಟ್ಟು ರಟ್ಟು ಮಾಡಲು ಎಂದಿಗೂ ಗೂಗಲ್ ಮುಂದಾಗಿಲ್ಲ. ಈ ಲಾಂಚ್‌ನಲ್ಲೂ ರಹಸ್ಯ ಕಾಪಾಡಿಕೊಳ್ಳಲು ಗೂಗಲ್ ಸಫಲವಾಗಿದೆ. ನಿರೀಕ್ಷೆಗೂ ಮೀರಿದ ಕೆಲ ಬದಲಾವಣೆ ಇರಬಹುದು ಎಂಬ ಮಾತುಗಳಿವೆ. ಏಕೆಂದರೆ ಹಿಂದೆಂದೂ ಇಲ್ಲದಂಥ ಹೈಪ್‌ಗಳು ಕಿಟ್‌ಕ್ಯಾಟ್‌ಗೆ ದೊರೆತಿವೆ. ಒಟ್ಟಿನಲ್ಲಿ ಇನ್ನೊಂದು ತಿಂಗಳಲ್ಲಿ ಕಿಟ್‌ಕ್ಯಾಟ್ ತಿನ್ನಲು ತಯಾರಾಗಿ. ಆದರೆ, ಕಂಪನಿ ಆ್ಯಂಡ್ರಾಯ್ಡ್ 5.0 ಎಂದು ಕಿಟ್‌ಕ್ಯಾಟ್‌ಗೆ ನಾಮಕರಣ ಮಾಡದೇ ಕಿಟ್‌ಕ್ಯಾಟ್ 4.4 ಎಂದು ಹೆಸರಿಟ್ಟಿರುವುದರಿಂದ ಭಾರಿ ಬದಲಾವಣೆ ಇರಲಾರದೇನೋ ಎಂಬ ಅನುಮಾನವೂ ವ್ಯಕ್ತವಾಗಿದೆ. ಇರುವ ಆಪರೇಟಿಂಗ್ ಸಿಸ್ಟಂ ಕೊಂಚ ಹಗುರಾಗಿಸಿ, ಇನ್ನಷ್ಟು ಉತ್ತಮಗೊಳಿಸಿ, 2-3 ಹೊಸ ಆಪ್ಷನ್‌ಗಳನ್ನಷ್ಟೇ ನೀಡಲಾಗುವುದೇ ಎಂಬ ಅನುಮಾನ ವ್ಯಕ್ತವಾಗಿದೆ.

ಮಾತು ಕೇಳುವ ಮೊಬೈಲ್
ಆಪಲ್‌ನಲ್ಲಿ 'ಸಿರಿ' ಎನ್ನುವ ಅಪ್ಲಿಕೇಷನ್ ಸಾಕಷ್ಟು ಸುದ್ದಿ ಮಾಡಿತ್ತು. ಆದರೆ, ಭಾರತೀಯರ ಇಂಗ್ಲಿಷ್‌ಗೆ ಸಿರಿ ಅಷ್ಟು ಉತ್ತಮವಾಗಿ ಸ್ಪಂದಿಸುವುದಿಲ್ಲ ಎಂಬ ಮಾತು ಕೇಳಿ ಬಂದಿತ್ತು. ದಿನ ಕಳೆದಂತೆ ಈ ಕುರಿತ ಆಸಕ್ತಿಯೂ ಕಡಿಮೆಯಾಯಿತು. ಆದರೆ, ಇದರಲ್ಲಿ 'ಆಲ್ವೇಸ್ ಲಿಸನಿಂಗ್‌' ಎನ್ನುವ ಆಪ್ಷನ್ ಇರಲಿಲ್ಲ. ಆದರೆ, ಕಿಟ್‌ಕ್ಯಾಟ್ ಆಪರೇಟಿಂಗ್ ಸಿಸ್ಟಂನಲ್ಲಿ 'ಓಕೆ ಗೂಗಲ್ ನೌ' ಎನ್ನುವ ಅಪ್ಲಿಕೇಷನ್ ಮೂಲಕ 'ಆಲ್ವೇಸ್ ಲಿಸನಿಂಗ್‌' ಅವಕಾಶ ನೀಡಲಾಗುತ್ತಿದೆ. ಇದರಿಂದ ಮೊಬೈಲ್ ಆನ್ ಆಗಿರುವಾಗ ನೇರವಾಗಿ 'ಓಕೆ ಗೂಗಲ್ ನೌ' ಬಳಸಬಹುದು. ಮೊಬೈಲ್ ಅನ್ನು ಮುಟ್ಟದೆಯೇ ಈ ಅಪ್ಲಿಕೇಷನ್ ಉಪಯೋಗಿಸಬಹುದು. ಕಾಲ್, ಮೆಸೇಜ್ ಹಾಗೂ ಸರ್ಚ್‌ಗಳನ್ನು ನೇರವಾಗಿ 'ಓಕೆ ಗೂಗಲ್ ನೌ'ನಲ್ಲಿ ಮಾಡಬಹುದು. ಸರಳ ಇಂಗ್ಲಿಷ್‌ನಿಂದಲೂ ಇದನ್ನು ಪರಿಣಾಮಕಾರಿಯಾಗಿ ಬಳಸಬಹುದು ಎಂದು ಗೂಗಲ್ ಹೇಳಿದೆ. ಅಂದಹಾಗೆ, ಈ ಸೌಲಭ್ಯವೂ ಈ ಹಿಂದೆ ಮೋಟೊ ಎಕ್ಸ್ ಮೊಬೈಲ್‌ನಲ್ಲೂ ಬಳಸಲಾಗಿತ್ತು.

- ರಾಧೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video