ವಿಜ್ಞಾನ-ತಂತ್ರಜ್ಞಾನ

ಸೈಲೆನ್ಸ್! ಗೂಗಲ್ ದಿಟ್ಟಿಸುತಿದೆ...

ಕಣ್ಣಿನ ನೋಟವೇ ಕ್ಯಾಮೆರಾವಾದರೆ... ಜಗತ್ತು ಹೇಗಿರುತ್ತದೆ ಎಂದು ಒಮ್ಮೆ ಕಲ್ಪಿಸಿಕೊಳ್ಳಿ!
ಶಾಪಿಂಗ್ ಮಾಲ್‌ನಲ್ಲಿ ಮನ ಸೆಳೆದ ಸುಂದರಿಯ ಚಿತ್ರವನ್ನು ಹಾಗೇ ತುಂಬಿಕೊಳ್ಳಬಹುದು. ಟ್ರಾಫಿಕ್‌ನಲ್ಲಿ ಪೊಲೀಸರು ಜೇಬಿಗೆ ಇಳಿಸಿಕೊಳ್ಳುತ್ತಿರುವ ಲಂಚವನ್ನು ಕಣ್ಣಲ್ಲಿ ನಿಜವಾಗಿಯೂ ಕ್ಲಿಕ್ಕಿಸಬಹುದು. 'ಆಫ್ ದಿ ರೆಕಾರ್ಡ್‌' ಚಟುವಟಿಕೆಗಳನ್ನು ಕಣ್ಣು ಮಿಟುಕಿಸಿಯೇ ಸೆರೆ ಹಿಡಿಯಬಹುದು. ಇದೆಲ್ಲದಕ್ಕಿಂತ ಮಿಗಿಲಾಗಿ ಜಗತ್ತನ್ನು ನೋಡದ ದೃಷ್ಟಿ ವಿಕಲಚೇತನರಿಗೆ ಈ ಜಗತ್ತಿನ ಸೌಂದರ್ಯವನ್ನು ತಿಳಿಸುವ ಬಾಹ್ಯ ಕಣ್ಣೊಂದು ಸಿಗುತ್ತದೆ.
ಇಂಥದ್ದೊಂದು ಅದ್ಭುತ ಪರಿಕಲ್ಪನೆಗೆ ಗೂಗಲ್ ಸಂಸ್ಥೆಯು ಜೀವ ತುಂಬುತ್ತಿದೆ. ಯಾವುದು ಅಸಾಧ್ಯ ಎಂದು ನಾವು ಅಂದುಕೊಳ್ಳುತ್ತಿದ್ದೇವೆಯೋ ಅಂಥ ವಿಚಾರಕ್ಕೆ ಗೂಗಲ್‌ನ ಕಣ್ಣು ಬಿದ್ದಿದೆ. ಅಮೆರಿಕ ಪೇಟೆಂಟ್ ಕಂಪನಿಯಲ್ಲಿ ಈ ಸಂಬಂಧ ನೋಂದಣಿ ಪ್ರಕ್ರಿಯೆಯೂ ಅಂತ್ಯಗೊಂಡಿದೆ. ಈ ತಂತ್ರಜ್ಞಾನ ಹೇಗೆ ಬರುತ್ತದೆ, ಅಂತಿಮ ರೂಪ ಹೇಗಿರುತ್ತದೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ, ಆದರೆ ಪೇಟೆಂಟ್ ಅರ್ಜಿಯಲ್ಲಿನ ವಿಚಾರಗಳು ಪ್ರತಿಯೊಬ್ಬ ಟೆಕ್ನೋ ಜೀವಿಯನ್ನು ರೋಮಾಂಚನಗೊಳಿಸಿದೆ.
ಗೂಗಲ್ ಗ್ಲಾಸ್ ಮೂಲಕ ತಂತ್ರಜ್ಞರನ್ನು ನಿಬ್ಬೆರಗಾಗುವ ಹಾಗೆ ಮಾಡಲಾಗಿತ್ತು. 2013-14ನೇ ಸಾಲಿನ ಆಕರ್ಷಕ ಗೆಜೆಟ್‌ನಲ್ಲಿ ಇದೂ ಒಂದು. ಇಲ್ಲಿಗೆ ನಿಲ್ಲದ ಗೂಗಲ್‌ನ ಸಂಶೋಧನೆ ಈಗ ಮಾನವನ ಕಣ್ಣಿನ ಮೇಲೆ ತಿರುಗಿದೆ. ಇಂದು ಕಣ್ಣಿನ ಸಮಸ್ಯೆ ಇರುವ ಸಾಕಷ್ಟು ಜನ ಕನ್ನಡಕದ ಬದಲು ಲೆನ್ಸ್ ಬಳಸುತ್ತಾರೆ. ಗೂಗಲ್‌ನ ಹೊಸ ಪೇಟೆಂಟ್ ಹಾಗೂ ಸಂಶೋಧನೆ ಪ್ರಕಾರ ಈ ಲೆನ್ಸೇ ಕ್ಯಾಮೆರಾ ರೂಪದಲ್ಲಿ ಕಾರ್ಯನಿರ್ವಹಿಸಲಿದೆ. ಕಣ್ಣು ಮಿಟುಕಿಸಿದರೆ ಫೋಟೋ ಕ್ಲಿಕ್ ಆಗುತ್ತದೆ. ಈ ತಂತ್ರಜ್ಞಾನದ ಬಗ್ಗೆ ಜಾಗತಿಕ ಟೆಕ್ ವೇದಿಕೆಗಳಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ.
ಇಂಥದ್ದೊಂದು ತಂತ್ರಜ್ಞಾನ ಆಧಾರಿತ ಗೆಜೆಟ್ ಮಾರುಕಟ್ಟೆಗೆ ಬಂದರೆ ವ್ಯಕ್ತಿಯ ಖಾಸಗಿ ಬದುಕು ಹಾಳಾಗುತ್ತದೆ ಎಂಬೆಲ್ಲ ಮಾತುಗಳು ಕೇಳಿಬಂದಿವೆ. ಆದರೆ ಈ ತಂತ್ರಜ್ಞಾನವು ಸಾಕಷ್ಟು ಧನಾತ್ಮಕ ಬದಲಾವಣೆಗೂ ಕಾರಣವಾಗಲಿದೆ. ಜಗತ್ತಿನಲ್ಲಿ ಕಣ್ಣಿಲ್ಲದ ಸುಮಾರು ನಾಲ್ಕೂವರೆ ಕೋಟಿ ಜನರಿದ್ದಾರೆ, ಅವರಿಗೆ ಬೆಳಕು ತೋರಿಸುವ ಕೆಲಸವನ್ನು ಇದು ಮಾಡಬಹುದು. ಆದರೆ, ಅವರ ಬಳಿ ಅದನ್ನು ಕೊಂಡುಕೊಳ್ಳಲು ದುಡ್ಡಿರಬೇಕಷ್ಟೆ.
ಅಂದಹಾಗೆ, ಈ ಕ್ಯಾಮೆರಾವು ಕಾಂಟ್ಯಾಕ್ಟ್ ಲೆನ್ಸ್‌ನ ಮುಂಬದಿಯಲ್ಲಿರುತ್ತದೆ, ಲೆನ್ಸ್‌ನ ಎಡಭಾಗದ ಒಂದು ತುದಿಯಲ್ಲಿ ಸೆನ್ಸಾರ್ ಹಾಗೂ ಮತ್ತೊಂದು ತುದಿಯಲ್ಲಿ ಕಂಟ್ರೋಲ್ ಸರ್ಕ್ಯೂಟ್ ಇರುತ್ತದೆ. ಈ ಲೆನ್ಸ್‌ನಲ್ಲಿ ಅಳವಡಿಸಿರುವ ಸೂಕ್ಷ್ಮ ಕ್ಯಾಮೆರಾವು ಸೆನ್ಸಾರ್ ಹಾಗೂ ಕಂಟ್ರೋಲ್ ಸರ್ಕ್ಯೂಟ್ ಜತೆ ಸಂಪರ್ಕ ಹೊಂದಿರುತ್ತದೆ. ಕಣ್ಣಿನ ರೆಪ್ಪೆ ಮಿಟುಕಿಸಿದಾಗೆಲ್ಲ ಫೋಟೋ ಸೇವ್ ಆಗುತ್ತದೆ. ಸ್ಮಾರ್ಟ್‌ಫೋನ್ ಜತೆಗೂ ಈ ಲೆನ್ಸ್ ಅನ್ನು ಬ್ಲ್ಯೂಟೂತ್ ಮೂಲಕ ಸಂಪರ್ಕಿಸಿ ಲೆನ್ಸ್ ಕ್ಲಿಕ್ಕಿಸಿದ ಫೋಟೋ ಬಗ್ಗೆ ವಿವರ ಪಡೆಯಬಹುದು. ಗೂಗಲ್ ಪೇಟೆಂಟ್‌ನಲ್ಲಿ ವಿವರಿಸಿದ ಮತ್ತೊಂದು ಅಂಶವೂ ಆಸಕ್ತಿಕರವಾಗಿದೆ. ಇದರ ಪ್ರಕಾರ ಈ ಲೆನ್ಸ್‌ನಿಂದಲೇ ಮನುಷ್ಯನ ರಕ್ತದೊತ್ತಡ, ಮಧುಮೇಹದ ಪ್ರಮಾಣವನ್ನು ತಿಳಿಯಬಹುದಂತೆ. ಲೆನ್ಸ್ ಮೂಲಕ ಸ್ಮಾರ್ಟ್‌ಫೋನಿಗೆ ಆಗಾಗ ಈ ಕುರಿತ ಸಂದೇಶ ಬರುತ್ತಿರುತ್ತದೆ. ಈ ಗೆಜೆಟ್ ಸಾಕಷ್ಟು ತುಟ್ಟಿಯಾಗಿಯೇ ಮಾರುಕಟ್ಟೆಗೆ ಬರಬಹುದು, ಇನ್ನಷ್ಟು ಹಲ್ಲಾಗುಲ್ಲಾಗಳಿಗೂ ಕಾರಣವಾಗಬಹುದು. ಆದರೆ ಕಣ್ಣಿಲ್ಲದ ವ್ಯಕ್ತಿಗೆ ಇದು ಕಣ್ಣಾಗಿ ಕೆಲಸ ಮಾಡಬಹುದು. ಅಂಧರು ರಸ್ತೆಯಲ್ಲಿ ಸಂಚರಿಸುವಾಗ ಎದುರಿನ ಚಿತ್ರಣವನ್ನು ತಿಳಿಯಲು ಒಮ್ಮೆ ಕಣ್ಣು ಮಿಟುಕಿಸಿದರೆ ಸಾಕಾಗುತ್ತದೆ. ಸ್ಮಾರ್ಟ್‌ಫೋನ್ ಮೂಲಕ ಆಡಿಯೋ ರೂಪದಲ್ಲಿ ವರದಿ ಸಿಗುತ್ತದೆ.
ಈ ಗೆಜೆಟ್ ಯಾವಾಗ ಮಾರುಕಟ್ಟೆಗೆ ಬರುತ್ತದೆ ಎಂಬ ಬಗ್ಗೆ ಸ್ಪಷ್ಟತೆಯಿಲ್ಲ. ಆದರೆ, ಗೂಗಲ್‌ನ ಮೂಲಗಳ ಪ್ರಕಾರ 2012ರಿಂದಲೇ ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ.

- ರಾಜೀವ ಹೆಗಡೆ
meet.hegde@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!