ವಾಷಿಂಗ್ಟನ್: ಕವಡೆ ಹಾಕಿ ಹತ್ತು ಕಾರ್ಡ್ ಹರಡಿದರೆ ಗಿಣಿಮರಿ ಅದರಲ್ಲೊಂದು ಹೆಕ್ಕಿತೆಗೆದು ನಿಮ್ಮ ಭವಿಷ್ಯ ಹೇಳೋದನ್ನು ನೋಡಿದೀರಲ್ಲ. ಅದೇ ರೀತಿ ಈ ಟ್ವಿಟರ್ ಹಕ್ಕಿಯೂ ನೀವು ಬಿತ್ತುವ 140 ಅಕ್ಷರಗಳ ಟ್ವೀಟ್ ನೋಡಿ ಶಕುನ ನುಡಿಯುತ್ತದಂತೆ.
ನಂಬ್ತೀರಾ? ನಂಬಲೇಬೇಕು. ಯಾಕಂದ್ರೆ ಇದು ಯಾವುದೋ ಗಿಣಿಶಾಸ್ತ್ರದವರ ಮಾತಲ್ಲ. ಮನಶಾಸ್ತ್ರಜ್ಞರ ಮಾತು. ಹೌದು. ನಿಮ್ಮ 140 ಅಕ್ಷರಗಳ ಟ್ವೀಟ್ ಓದಿ ನಿಮ್ಮ ಗುಣಾವಗುಣ, ನಿಮ್ಮ ಮಾನಸಿಕ ಪರಿಸ್ಥಿತಿ, ಹೊರಜಗತ್ತಿನಲ್ಲಿ ಆತನ ಸ್ಥಿತಿಗತಿ, ಕಷ್ಟ ಸುಖ ಎಲ್ಲವನ್ನೂ ಹೇಳಬಹುದು ಎಂದು ಸುಮಾರು 2 ಕೋಟಿ ಟ್ವೀಟ್‍ಗಳನ್ನು ಅಧ್ಯಯನ ಮಾಡಿರುವ ಸಂಶೋಧಕರು ನುಡಿದಿದ್ದಾರೆ.
ಜನ ದೈನಂದಿನ ಬದುಕಿನಲ್ಲಿ ಎಂಥೆಂಥ ಪರಿಸ್ಥಿತಿ ಎದುರಿಸುತ್ತಾರೆ, ಪುರುಷ ಮತ್ತು ಸ್ತ್ರೀ ಬೇಧ ಹೇಗಿದೆ? ಜನಸಾಂದ್ರತೆ ಬದುಕಿನ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಇತ್ಯಾದಿ ವಿಷಯಗಳನ್ನು ಅಧ್ಯಯನ ಮಾಡಲು ಹೊರಟಿದ್ದ ಅಧ್ಯಯನಕಾರರಿಗೆ ಟ್ವಿಟರ್ ಹೊಸತೊಂದು ಸಂಶೋಧನೆಗೆ ದಾರಿ ಮಾಡಿಕೊಟ್ಟಿದೆ.
ಈ ದಿಸೆಯಲ್ಲಿ ಜನರ ನಡುವೆ ತೀವ್ರ ಲಿಂಗತಾರತಮ್ಯ ಇರುವುದು ಅಧ್ಯಯನದಲ್ಲಿ ಗುರುತಿಸಿರುವ ಪ್ರಮುಖ ಅಂಶ. ಇದರೊಂದಿಗೆ, ಜನರ ವರ್ತನೆಯಲ್ಲಿ ವಾರಾಂತ್ಯ ಹಾಗೂ ವಾರದ ಇತರ ದಿನಗಳ ನಡುವೆ ಬಹಳ ವೈರುಧ್ಯವಿರುವುದನ್ನೂ ಗುರುತಿಸಿದ್ದಾರೆ. ವೀಕೆಂಡ್‍ಗಳಲ್ಲಿ ಹೆಚ್ಚು ಪಾಸಿಟಿವ್ ಮನಸ್ಥಿತಿಯಲ್ಲಿರುವ ಮಂದಿ ವಾರದ ದಿನಗಳಲ್ಲಿ ಉದ್ವೇಗದಿಂದಿರುತ್ತಾರಂತೆ.
ಅಚ್ಚರಿಯೆಂದರೆ ಗ್ರಾಮೀಣವಾಸಿಗಳಿಗೂ ನಗರವಾಸಿಗಳಿಗೂ ಮಾನಸಿಕ ಸ್ಥಿತಿಯಲ್ಲಿ ಯಾವ ವ್ಯತ್ಯಾಸಗಳೂ ಇಲ್ಲವಂತೆ. ಬೆಳಗ್ಗೆ 9ರಿಂದ 5ರ ತನಕ ಕೆಲಸದ ಒತ್ತಡ ಕಂಡರೆ ಸಂಜೆ ಹೊತ್ತಿಗೆ ಪೂರ್ತಿ ಜಾಲಿ ಮೂಡಲ್ಲಿರ್ತಾರೆ ಎನ್ನುವ ಸಂಶೋಧಕರು, ಲೈಂಗಿಕ ಆಸಕ್ತಿ, ಭಾವನಾತ್ಮಕ ತೊಳಲಾಟ ಪುರುಷರಿಗಿಂತ ಸ್ತ್ರೀಯರಲ್ಲೆ ಹೆಚ್ಚು ಎಂಬು ದು ಇನ್ನೊಂದು ಆಸಕ್ತಿಕರ ಸಂಶೋಧನೆ.
ಟ್ವಿಟರ್ ಮನುಷ್ಯನ ಮನಸ್ಥಿತಿಯ ಡಿಜಿಟಲ್ ರೂಪವಷ್ಟೆ. ಆದ್ದರಿಂದ ಆತನ ಟ್ವೀಟ್ ನೋಡಿಯೇ ಎಲ್ಲ ಗುಣಸ್ವಭಾವ ಮತ್ತು ಮನಸ್ಥಿತಿಗಳನ್ನು ಸೆರೆಹಿಡಿದುಬಿಡಬಹು ದು ಎಂದು ಫ್ಲೋರಿಡಾ ಅಟ್ಲಾಂಟಿಕ್ ವಿವಿಯ ಡೇವಿಡ್ ಸೆರ್ಫಾಸ್ ಹೇಳುತ್ತಾರೆ.
ಲಿಂಗ್ಯುಸ್ಟಿಕ್ ಇನ್ಕೈರಿ ವರ್ಡ್‍ಕೌಂಟ್ ಎಂಬ ಕಂಪ್ಯೂಟರ್ ಪ್ರೋಗ್ರಾಮ್ ಈ ಅಧ್ಯಯನಕ್ಕೆ ಅವರು ಬಳಸಿಕೊಂಡಿದ್ದಾರೆ. ಪೊ್ರೀಸ್ ಒನ್ ಎಂಬ ಜರ್ನಲ್‍ನಲ್ಲಿ ಅಧ್ಯಯನದ ಪೂರ್ಣಪಾಠವನ್ನು ಪ್ರಕಟಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics