ವಿಶೇಷ

ಬೆಳಗಾದರೂ ಅವನಿಗೆ ಹೆಂಡತಿ ಒಲಿಯಲಿಲ್ಲ!

Lingaraj Badiger

ಮಯೂರ ಎಂಬೊಬ್ಬ ಕವಿ. 'ಕಾದಂಬರಿ' ರಚಿಸಿ ಪ್ರಸಿದ್ಧನಾದ ಸಂಸ್ಕೃತ ಪಂಡಿತ ಬಾಣಭಟ್ಟನ ಭಾವ ಈತ. ದೊಡ್ಡ ವಿದ್ವಾಂಸನೇ. ಅಲಂಕಾರಶಾಸ್ತ್ರದಲ್ಲಿ ಎತ್ತಿದ ಕೈ. ಇವನಿಗೂ, ಭಾವ ಬಾಣನಿಗೂ ಆಗಾಗ ಸ್ಪರ್ಧೆಯೇಳುತ್ತಿತ್ತು. ಇವನೊಂದು ಒಳ್ಳೆಯ ಕವಿತೆ ಬರೆದು ಅವನಿಗೆ ತೋರಿಸುವುದು, ಅವನೊಂದು ಬರೆದು ಇವನಿಗೆ ಸವಾಲು ಹಾಕುವುದು ಹೀಗೆ ಆ ಮೇಲಾಟ ಚಾಲ್ತಿಯಲ್ಲಿತ್ತು.

ಒಂದು ದಿನ ಮಯೂರನಿಗೆ ಏನು ಹುರುಪು ಬಂತೋ ಏನೋ, ಬೆಳಗಾಗುವುದರೊಳಗೇ ಎದ್ದು ಅದ್ಭುತವಾದ ಒಂದು ಕವಿತೆ ಬರೆದು ಬಾಣಭಟ್ಟನಿಗೆ ತೋರಿಸಲು ಅವನ ಮನೆಗೆ ಓಡಿದ. ಅಲ್ಲೋ, ಬಾಣನ ಪರಿಸ್ಥಿತಿ ಮುದುರಿದ ಬಾಣದಂತಾಗಿದೆ!
ರಾತ್ರಿ ಪೂರ್ತಿ ರಮಿಸಿದರೂ ಅವನಿಗೆ ಹೆಂಡತಿ ಒಲಿದಿಲ್ಲ. ಅವಳನ್ನು ಬುಟ್ಟಿಗೆ ಹಾಕಿಕೊಳ್ಳಲು ಬೆಳಗಾದರೂ ಬಾಣ ಭಾಳಾ ಪ್ರಯತ್ನಿಸುತ್ತಿದ್ದಾನೆ. 'ಮುಂಚ ಮಾನಂ ದಿನಂ ಪ್ರಾಪ್ತಂ' - ಬಿಗುಮಾನ ಬಿಡು, ಬೆಳಗಾಗುತ್ತ ಬಂತು ಎಂದು ಅವನು ಹೇಳುತ್ತಿರುವುದು ಹೊರಗೆ ಬಾಗಿಲಿನಲ್ಲಿ ನಿಂತ ಮಯೂರನಿಗೆ ಕೇಳಿಸುತ್ತಿದೆ. ತನ್ನ ತಂಗಿ ಈ ಪರಿ ಭಾವನನ್ನು ಗೋಳುಹೊಯ್ದುಕೊಳ್ಳುತ್ತಿರುವುದು ನೋಡಿ ಅವನಿಗೆ ಒಳಗೊಳಗೇ ನಗು. ಅಷ್ಟರಲ್ಲಿ ಬಾಣ ಒಂದು ಆಶುಕವಿತೆ ಹಾಡಿ ಹೆಂಡತಿಯನ್ನು ಮೆಚ್ಚಿಸಲು ಪ್ರಯತ್ನಿಸಿದ...
ಗತಪ್ರಾಯಾ ರಾತ್ರಿರ್ವರತನು ಶಶೀ ಶೀರ್ಯತ ಇವ
ಪ್ರದೀಪೋಯಂ ನಿದ್ರಾವಶಮುಪಗತೋ ಘೂರ್ಣತ ಇವ
ಪ್ರಣಾಮಾಂತೋ ಮಾನ- ತ್ಯಜಸಿ ನ ತಥಾಪಿ ಕ್ರುಧಮಹೋ
-'ಚಂದ್ರ ಮುಳುಗಿ ಬೆಳಗಾಗುವ ಹೊತ್ತು ಬಂತು. ದೀಪ ಕೂಡ ನಿದ್ದೆಗೆ ಜಾರಿದವರಂತೆ ತೂಕಡಿಸುತ್ತಿದೆ. ನಮಸ್ಕಾರ ಮಾಡುವವರೆಗೆ ಸಿಟ್ಟು ಇರಬೇಕಪ್ಪ. ನಿನಗೆ ಅದನ್ನು ಮಾಡಿದರೂ ಸಿಟ್ಟು ಇಳಿಯುತ್ತಿಲ್ಲ...'
ಬಾಣಭಟ್ಟ ಇಷ್ಟು ಹೇಳಿ ಮುಂದಿನ ಶಬ್ದಗಳಿಗಾಗಿ ತಡಕಾಡತೊಡಗಿದ. ಶ್ಲೋಕ ಮುಕ್ಕಾಲು ಪಾಲು ಮಾತ್ರ ಮುಗಿದಿದೆ. ಇನ್ನೊಂದು ಪಾದ ಬಾಕಿಯಿದೆ. ಏನು ಮಾಡಿದರೂ ಶಬ್ದಗಳು ಹೊಳೆಯುತ್ತಿಲ್ಲ.

ಅಷ್ಟರಲ್ಲಿ ಅದನ್ನೆಲ್ಲ ಕೇಳುತ್ತ ನಿಂತಿದ್ದ ಮಯೂರ ಕವಿ ಬಾಗಿಲಿನಿಂದಲೇ ಕೂಗಿದ.
'ಕುಚಪ್ರತ್ಯಾಸತ್ವಾ ಹೃದಯಮಪಿ ತೇ ಚಂಡಿ ಕಠಿನಂ'
'ಹೇ ಹಠಮಾರಿ, ಬಿಗುವಾದ ಸ್ತನಗಳ ಸಹವಾಸದಿಂದ ನಿನ್ನ ಎದೆಯೂ ಅಷ್ಟೇ ಕಠಿಣವಾಗಿಹೋಯಿತೇ?'

ಅದೇನು ಹೋಯಿತೋ ಬಿಟ್ಟಿತೋ, ಬಾಣನ ಮಾನವಂತೂ ಹೋಯಿತು- ಹೆಂಡತಿಯ ಮುಂದೂ, ಅವಳ ತಮ್ಮನ ಮುಂದೂ.

-ತ್ರಿಮೂರ್ತಿ

(ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಸಮೂಹದ 'ಸಖಿ' ಪಾಕ್ಷಿಕದಿಂದ ಆಯ್ದ ಬರಹ)ಸಖಿ ಚಂದಾದಾರರಾಗಲು ಸಂಪರ್ಕಿಸಿ: 9742400220, 9886143555ಆನ್ ಲೈನಲ್ಲಿ ಸಖಿ ಓದಲು http://www.magzter.com/IN/Express-Network-Private-Limited/Sakhi/Women%27s-Interest/ಗೆ ಭೇಟಿನೀಡಿ.

SCROLL FOR NEXT