ಜ್ಞಾನೇಶ್ ಕುಮಾರ್ online desk
ವಿಶೇಷ

ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಹೆಚ್ಚಿದ ಒತ್ತಡ: ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೊದು ಅಷ್ಟು ಸುಲಭನಾ? ಯಾರಿಗಿದೆ ಆ ಪವರ್? ಸಂವಿಧಾನ ಹೇಳುವುದೇನು?

ಭಾರತದಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ವಜಾ ಮಾಡುವುದು ಅಷ್ಟು ಸುಲಭನಾ? ರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ಕೇಂದ್ರ ಸರ್ಕಾರ ತಮಗೆ ಬೇಕಾದಾಗ ನೇರವಾಗಿ ಆಯುಕ್ತರನ್ನ ಹುದ್ದೆಯಿಂದ ಕೆಳಗಿಳಿಸಬಹುದಾ? ಅದಕ್ಕೆ ಉತ್ತರ ಇಲ್ಲಿದೆ:

ದೇಶದ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಗಳಲ್ಲಿ ಒಂದಾದ ಭಾರತೀಯ ಚುನಾವಣಾ ಆಯೋಗದಲ್ಲಿ ಭುಗಿಲೆದ್ದಿರುವ ಆಂತರಿಕ ಭಿನ್ನಮತ ಈಗ ದೇಶಾದ್ಯಂತ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಸ್ವತಃ ಚುನಾವಣಾ ಆಯೋಗದ ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ಕಾರ್ಯವೈಖರಿ ಬಗ್ಗೆ ಲಿಖಿತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ವರದಿಯ ನಂತರ, ಸಿಇಸಿ ವಿರುದ್ಧ ಪ್ರತಿಪಕ್ಷಗಳು, ಬೀದಿಗಿಳಿದಿದ್ದು, ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು. ಇಲ್ಲ, ಅವರೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿವೆ. ಆದರೆ, ಭಾರತದಲ್ಲಿ ಮುಖ್ಯ ಚುನಾವಣಾ ಆಯುಕ್ತರನ್ನು ಹುದ್ದೆಯಿಂದ ವಜಾ ಮಾಡುವುದು ಅಷ್ಟು ಸುಲಭನಾ? ರಾಷ್ಟ್ರಪತಿ, ಪ್ರಧಾನಮಂತ್ರಿ ಅಥವಾ ಕೇಂದ್ರ ಸರ್ಕಾರ ತಮಗೆ ಬೇಕಾದಾಗ ನೇರವಾಗಿ ಆಯುಕ್ತರನ್ನ ಹುದ್ದೆಯಿಂದ ಕೆಳಗಿಳಿಸಬಹುದಾ? ಅದಕ್ಕೆ ಉತ್ತರ ಇಲ್ಲಿದೆ:

ಜ್ಞಾನೇಶ್ ಕುಮಾರ್ ವಜಾಗೆ ಆಗ್ರಹ ಯಾಕೆ?

ಚುನಾವಣಾ ಆಯೋಗವು ಕೈಗೊಂಡಿದ್ದ ಸಮಗ್ರ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. ದೇಶಾದ್ಯಂತ ಸುಮಾರು 13 ಕೋಟಿಗೂ ಅಧಿಕ ಅರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂದು ಕಾಂಗ್ರೆಸ್ ದೂರಿದೆ. ಈ ನೀತಿಯು ಆರ್ಥಿಕವಾಗಿ ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡಿದೆ ಎಂಬುದು ವಿಪಕ್ಷಗಳ ಪ್ರಮುಖ ಆರೋಪವಾಗಿದೆ. ಇದರೊಂದಿಗೆ, ಜ್ಞಾನೇಶ್ ಕುಮಾರ್ ಅವರು ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿ, ಸರ್ವಾಧಿಕಾರಿ ರೀತಿಯಲ್ಲಿ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಚುನಾವಣಾ ಆಯೋಗದ ಇಬ್ಬರು ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಕಳೆದ 10 ತಿಂಗಳುಗಳಲ್ಲಿ SIR ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳ ಕುರಿತು ಕನಿಷ್ಠ 14 ಬಾರಿ ಲಿಖಿತ ಆಕ್ಷೇಪಗಳನ್ನು ದಾಖಲಿಸಿದ್ದರು. ಪೂರ್ಣ ಆಯೋಗದ ಒಪ್ಪಿಗೆಯಿಲ್ಲದೆ ಮುಖ್ಯ ಆಯುಕ್ತರು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂಬ ಆಂತರಿಕ ಭಿನ್ನಮತವು ಈ ಪ್ರತಿಭಟನೆಗೆ ಪ್ರಮುಖ ಕಾರಣವಾಗಿದೆ.

ಹಾಗಾದ್ರೆ, ಮುಖ್ಯ ಚುನಾವಣಾ ಆಯುಕ್ತರನ್ನ ವಜಾ ಮಾಡೋ ಪವರ್ ಯಾರಿಗಿದೆ?

ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ಅವರ ಹುದ್ದೆಯಿಂದ ವಜಾ ಮಾಡುವ (ತೆಗೆದುಹಾಕುವ) ಅಧಿಕಾರ ಇರುವುದು ಭಾರತದ ರಾಷ್ಟ್ರಪತಿಗಳಿಗೆ ಮಾತ್ರ.!

ಆದರೆ, ರಾಷ್ಟ್ರಪತಿಗಳು ನೇರವಾಗಿ ಅಥವಾ ಸ್ವಂತ ನಿರ್ಧಾರದಿಂದ ಮುಖ್ಯ ಚುನಾವಣಾ ಆಯುಕ್ತರನ್ನು ವಜಾ ಮಾಡಲು ಸಾಧ್ಯವಿಲ್ಲ. ಅದಕ್ಕೆ ಭಾರತದ ಸಂವಿಧಾನದಲ್ಲಿ ಅತ್ಯಂತ ಕಠಿಣವಾದ ಪ್ರಕ್ರಿಯೆಯನ್ನು ಉಲ್ಲೇಖಿಸಲಾಗಿದೆ. ಅದುವೇ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳನ್ನು ಹುದ್ದೆಯಿಂದ ತೆಗೆದುಹಾಕಲು ಬಳಸುವ ಅದೇ ಮಹಾಭಿಯೋಗ ಪ್ರಕ್ರಿಯೆ ಮೂಲಕವೇ ಇವರನ್ನು ವಜಾ ಮಾಡಬೇಕಾಗುತ್ತದೆ.

ಯಾವ ಕಾರಣಕ್ಕೆ ವಜಾ ಮಾಡಬಹುದು?

ಸಂವಿಧಾನದ ವಿಧಿ 324(5)ರ ಪ್ರಕಾರ, ಮುಖ್ಯ ಚುನಾವಣಾ ಆಯುಕ್ತರ ಮೇಲೆ ಕೆಳಗಿನ ಎರಡು ಆರೋಪಗಳು ಸಾಬೀತಾದರೆ ಮಾತ್ರ ಅವರನ್ನು ಹುದ್ದೆಯಿಂದ ತೆಗೆದುಹಾಕಬಹುದು:

  • ದುರ್ನಡತೆ: ಭ್ರಷ್ಟಾಚಾರ ಅಥವಾ ಸಾಂವಿಧಾನಿಕ ಜವಾಬ್ದಾರಿ ಉಲ್ಲಂಘನೆ.

  • ಅಸಮರ್ಥತೆ: ದೈಹಿಕ ಅಥವಾ ಮಾನಸಿಕವಾಗಿ ಕೆಲಸ ನಿರ್ವಹಿಸಲು ಅಶಕ್ತರಾಗುವುದು.

ವಜಾ ಮಾಡುವ ಸಂಕೀರ್ಣ ಪ್ರಕ್ರಿಯೆ:

  1. ಸಂಸತ್ತಿನಲ್ಲಿ ಪ್ರಸ್ತಾವನೆ ಸಲ್ಲಿಕೆ:

    • ಮೊದಲು ಲೋಕಸಭೆಯ ಕನಿಷ್ಠ 100 ಸದಸ್ಯರು ಅಥವಾ ರಾಜ್ಯಸಭೆಯ ಕನಿಷ್ಠ 50 ಸದಸ್ಯರು ಸಹಿ ಮಾಡಿದ ಪ್ರಸ್ತಾವನೆಯನ್ನು ಸ್ಪೀಕರ್ ಅಥವಾ ಸಭಾಪತಿಗಳಿಗೆ ನೀಡಬೇಕು.

  2. ವಿಚಾರಣಾ ಸಮಿತಿ ರಚನೆ:

    • ಸ್ಪೀಕರ್ ಈ ಪ್ರಸ್ತಾವನೆಯನ್ನು ಅಂಗೀಕರಿಸಿದರೆ, ಆರೋಪಗಳ ತನಿಖೆಗಾಗಿ ಮೂವರು ಸದಸ್ಯರ (ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಒಳಗೊಂಡ) ಸಮಿತಿಯನ್ನು ರಚಿಸಲಾಗುತ್ತದೆ. ಈ ಸಮಿತಿಯು ಆರೋಪ ನಿಜ ಎಂದು ವರದಿ ನೀಡಬೇಕು.

  3. ಸಂಸತ್ತಿನಲ್ಲಿ ವಿಶೇಷ ಬಹುಮತದ ಅಂಗೀಕಾರ:

    • ತನಿಖಾ ವರದಿ ಬಂದ ಬಳಿಕ, ಸಂಸತ್ತಿನ ಉಭಯ ಸದನಗಳಲ್ಲಿ (ಲೋಕಸಭೆ ಮತ್ತು ರಾಜ್ಯಸಭೆ) ಪ್ರತ್ಯೇಕವಾಗಿ ಮತದಾನ ನಡೆಯಬೇಕು.

    • ಸದನಕ್ಕೆ ಹಾಜರಾಗಿ ಮತ ಚಲಾಯಿಸುವವರಲ್ಲಿ ಮೂರನೇ ಎರಡರಷ್ಟು (2/3rd) ಸದಸ್ಯರು ವಜಾ ನಿರ್ಣಯದ ಪರವಾಗಿ ಮತ ಹಾಕಬೇಕು.

    • ಈ ಮತಗಳ ಸಂಖ್ಯೆಯು ಸದನದ ಒಟ್ಟು ಸದಸ್ಯರ ಸಂಖ್ಯೆಯ ಶೇ. 50 ಕ್ಕಿಂತ ಹೆಚ್ಚಿರಬೇಕು.

  4. ರಾಷ್ಟ್ರಪತಿಗಳ ಅಂತಿಮ ಆದೇಶ:

    • ಸಂಸತ್ತಿನ ಎರಡು ಸದನಗಳೂ ಈ ನಿರ್ಣಯವನ್ನು ಅಂಗೀಕರಿಸಿದ ನಂತರ, ಅದನ್ನು ರಾಷ್ಟ್ರಪತಿಗಳಿಗೆ ಕಳುಹಿಸಲಾಗುತ್ತದೆ. ರಾಷ್ಟ್ರಪತಿಗಳು ಸಹಿ ಮಾಡಿದ ತಕ್ಷಣ ಮುಖ್ಯ ಚುನಾವಣಾ ಆಯುಕ್ತರು ಹುದ್ದೆಯಿಂದ ವಜಾಗೊಳ್ಳುತ್ತಾರೆ. 

ಏತನ್ಮಧ್ಯೆ, ಕೇವಲ ಮುಖ್ಯ ಚುನಾವಣಾ ಆಯುಕ್ತರಿಗೆ ಮಾತ್ರ ಸಂವಿಧಾನ ಇಂತಹ ಕಠಿಣ ರಕ್ಷಣೆ ನೀಡಿದೆ. ಉಳಿದ ಇಬ್ಬರು ಚುನಾವಣಾ ಆಯುಕ್ತರನ್ನು ತೆಗೆದುಹಾಕಲು ಇಷ್ಟೊಂದು ಕಠಿಣ ಪ್ರಕ್ರಿಯೆ ಬೇಕಾಗಿಲ್ಲ. ಮುಖ್ಯ ಚುನಾವಣಾ ಆಯುಕ್ತರು ಲಿಖಿತವಾಗಿ ಶಿಫಾರಸು ಮಾಡಿದರೆ, ರಾಷ್ಟ್ರಪತಿಗಳು ಅವರನ್ನು ಸುಲಭವಾಗಿ ಹುದ್ದೆಯಿಂದ ಮುಕ್ತಗೊಳಿಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ರೋಚಕ ಜಯ, ಮತ್ತೊಂದು ಚಿನ್ನದ ಪದಕ

ಮೈಸೂರು: ಕುಸಿದು ಬಿದ್ದ ದೀಪಾಲಂಕಾರದ ಬೃಹತ್ ಕಟೌಟ್; ವಿದ್ಯಾರ್ಥಿಗಳು ಪಾರು, ದಸರಾ ಆರಂಭದಲ್ಲೇ ತಪ್ಪಿದ ದೊಡ್ಡ ದುರಂತ!

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌‌ವೇಯಲ್ಲಿ ಭೀಕರ ಅಪಘಾತ: ಕಾರು ಡಿಕ್ಕಿ ಹೊಡೆದು ಯುವತಿ ಸ್ಥಳದಲ್ಲೇ ಸಾವು!

'ಕಮಾಲ್ ಕರ್ ದಿಯಾ ಪೈಲಟ್ ಜಿ, ನಿಮ್ಮ ಧೈರ್ಯಕ್ಕೆ ನಮ್ಮ ಸೆಲ್ಯೂಟ್': ಕ್ಯಾಪ್ಟನ್ ಸ್ಮಿತ್ ಮಚ್ಚರ್'ರನ್ನು ಹಾಡಿ ಹೊಗಳಿದ ಸಲ್ಮಾನ್ ಖಾನ್!

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್