ಬೆಂಗಳೂರು: ಪಂದ್ಯದ ಅಂತಿಮ ಹಂತದಲ್ಲಿ ಸ್ಟ್ರೈಕರ್ ರಾಬಿನ್ ಸಿಂಗ್ ಅವರು ಗಳಿಸಿದ ಗೋಲಿನ ನೆರವಿನಿಂದ ಹಾಲಿ ಚಾಂಪಿಯನ್ ಬೆಂಗಳೂರು ಎಫ್‌ಸಿ, ಐ-ಲೀಗ್ ಫುಟ್ಬಾಲ್ ಟೂರ್ನಿಯಲ್ಲಿ ಮುಂಬೈ ಎಫ್‌ಸಿ ವಿರುದ್ಧ ಡ್ರಾ ಫಲಿತಾಂಶಕ್ಕೆ ತೃಪ್ತಿಪಟ್ಟುಕೊಂಡಿದೆ.
ನಗರದ ಕಂಠೀರವ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ತಂಡ, ಎದುರಾಳಿ ಮುಂಬೈ ಎಫ್‌ಸಿ ವಿರುದ್ಧ 1-1 ಗೋಲಿನಿಂದ ಡ್ರಾ ಸಾಧಿಸಿತು. ಈ ಮೂಲಕ ಉಭಯ ತಂಡಗಳು ತಲಾ 1 ಅಂಕ ಹಂಚಿಕೊಂಡವು. ಪಂದ್ಯದ ಆರಂಭದಿಂದಲೇ ಬೆಂಗಳೂರು ಎಫ್‌ಸಿ, ಪ್ರವಾಸಿ ತಂಡದ ವಿರುದ್ಧ ನಿಯಂತ್ರಣ ಸಾಧಿಸಿತಾದರೂ ಆರಂಭಿಕ ಹಂತದಲ್ಲಿ ಸಿಕ್ಕ ಅವಕಾಶಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಸಫಲವಾಗಲಿಲ್ಲ.
8ನೇ ನಿಮಿಷದಲ್ಲಿ ಬೆಂಗಳೂರು ಎಫ್‌ಸಿ ನಾಯಕ ಸುನೀಲ್ ಛೆಟ್ರಿಗೆ ಗೋಲು ದಾಖಲಿಸುವ ಅವಕಾಶ ಲಭಿಸಿತ್ತು. ಆದರೆ ಛೆಟ್ರಿ ಗೋಲು ದಾಖಲಿಸುವ ಪ್ರಯತ್ನವನ್ನು ಎದುರಾಳಿ ಗೋಲ್‍ಕೀಪರ್ ಘೋಶ್ ತಡೆಯುವಲ್ಲಿ ಸಫಲರಾದರು. 19ನೇ ನಿಮಿಷದಲ್ಲಿ ರಿನೊ ಆ್ಯಂಟೊ ಅವರು ನೀಡಿದ ಪಾಸ್ ಅನ್ನು ರೂನಿ ಹೆಡ್ ಮಾಡುವ ಮೂಲಕ ಗೋಲು ಗಳಿಸುವ ಪ್ರಯತ್ನ ನಡೆಸಿದರು. ಆದರೆ, ಘೋಶ್ ಮತ್ತೊಮ್ಮೆ ಚುರುಕಿನ ಪ್ರದರ್ಶನ ನೀಡಿದರು.
32ನೇ ನಿಮಿಷದಲ್ಲಿ ಸಿಕ್ಕ ಫ್ರೀ ಕಿಕ್‍ನಲ್ಲಿ ಚೆಂಡನ್ನು ಬಾಕ್ಸ್ ಒಳಗೆ ಕಳುಹಿಸಿದರಾದರೂ, ನಂತರ ರೆಫರಿ ಅದನ್ನು ರದ್ದು ಮಾಡಿದರು. ನಂತರ 53 ಹಾಗೂ 60ನೇ ನಿಮಿಷದಲ್ಲೂ ಬಿಎಫ್‌ಸಿ ಅವಕಾಶ ಕೈಚೆಲ್ಲಿತು. ಪಂದ್ಯದ 68ನೇ ನಿಮಿಷದಲ್ಲಿ ಚುರುಕಿನ ಆಟ ಪ್ರದರ್ಶಿಸಿದ ಮುಂಬೈ ಎಫ್‌ಸಿ ಪರ ಭೆಕೆ ಚೆಂಡನ್ನು ಹೆಡ್ ಮಾಡುವ ಮೂಲಕ ತಂಡಕ್ಕೆ ಗೋಲು ತಂದುಕೊಟ್ಟರು.
ಇನ್ನು 88ನೇ ನಿಮಿಷದಲ್ಲಿ ರಾಬಿನ್ ಸಿಂಗ್ ಗೋಲು ದಾಖಲಿಸುವ ಮೂಲಕ ತಂಡವನ್ನು ಸೋಲಿನಿಂದ ಪಾರು ಮಾಡಿದರು. ಪಂದ್ಯದ ಕೊನೆ ನಿಮಿಷದಲ್ಲಿ ಫೌಲ್ ಮಾಡಿದ ರಾಬಿನ್ ಸಿಂಗ್ ಅವರಿಗೆ ರೆಫರಿ ರೆಡ್ ಕಾರ್ಡ್ ನೀಡಿದರು.