ಕೋಲ್ಕತಾ: ಮೈದಾನದಲ್ಲಿ ಪೆಟ್ಟು ತಿಂದು ಸಾವನ್ನಪ್ಪಿದ ಪಶ್ಚಿಮ ಬಂಗಾಳದ ಯುವ ಕ್ರಿಕೆಟಿಗ ಅಂಕಿತ್ ಕೇಸರಿಯವರ ಕುಟುಂಬಕ್ಕೆ ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಆರ್ಥಿಕ ಸಹಾಯ ನೀಡಲು ಮುಂದೆ ಬಂದಿದ್ದಾರೆ. ಬಿಸಿಸಿಐನಿಂದ ತಾವು ಈ ವರ್ಷ ಪಡೆಯುವ ಒಟ್ಟಾರೆ ಪಿಂಚಣಿ ಹಣವನ್ನು ಸಂಪೂರ್ಣವಾಗಿ ಅಂಕಿತ್ ಕುಟುಂಬಕ್ಕೆ ನೀಡಲು ನಿರ್ಧರಿಸಿದ್ದಾರೆ.
ಮಾಜಿ ಟೆಸ್ಟ್ ಕ್ರಿಕೆಟಿಗರಾಗಿರುವ ಹಿನ್ನೆಲೆಯಲ್ಲಿ ಬಿಸಿಸಿಐನಿಂದ ಗಂಗೂಲಿಯವರಿಗೆ ವರ್ಷಕ್ಕೆ 4,20,000 ಪಿಂಚಣಿ ಬರುತ್ತದೆ. ಗಂಗೂಲಿ ಅವರ ಈ ನಿರ್ಧಾರದಿಂದ ಇಷ್ಟು ಮೊತ್ತದ ಹಣ ಅಂಕಿತ್ ಕುಟುಂಬ ಸೇರಲಿದೆ. ತಮ್ಮ ಊರಿನಲ್ಲಿ ಟೀ ಅಂಗಡಿ ಇಟ್ಟುಕೊಂಡು ಅದರಿಂದ ಬಂದ ಹಣದಲ್ಲಿ ಜೀವನ ಸಾಗಿಸುತ್ತಾ ಅಂಕಿತ್ ಅವರನ್ನು ಕ್ರಿಕೆಟ್ ತಾರೆಯನ್ನಾಗಿಸಲು ಶ್ರಮಿಸುತ್ತಿದ್ದ ಕುಟುಂಬ ಆತನ ಸಾವಿನಿಂದ ಕಂಗಾಲಾಗಿದೆ. ಆದ್ದರಿಂದ ಅವರಿಗೆ ಸಹಾಯ ಮಾಡಲು ಗಂಗೂಲಿ ನಿರ್ಧರಿಸಿದ್ದಾರೆ. ಇಷ್ಟೇ ಅಲ್ಲ ಭವಿಷ್ಯದಲ್ಲಿ ಅಪಘಾತಕ್ಕೊಳಗಾಗುವ ಕ್ರಿಕೆಟಿಗರಿಗೆ ತಮ್ಮ ಕೈಲಾದ ಸಹಾಯ ಮಾಡಲು ನಿರ್ಧರಿಸಿದ್ದಾರೆ. ಮುಂದಿನ ವರ್ಷದಿಂದ ತಾವು ಪಡೆಯುವ ಪಿಂಚಣಿ ಹಣವನ್ನು ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆ(ಸಿಎಬಿ)ಯಲ್ಲಿ ನೋಂದಾಯಿಸಲ್ಪಟ್ಟ ಕ್ರಿಕೆಟಿಗರು ಗಾಯಗೊಂಡಲ್ಲಿ ಅವರ ಚಿಕಿತ್ಸಾ ವೆಚ್ಚಕ್ಕೆ ಮೀಸಲಿಡುವುದಾಗಿ ತಿಳಿಸಿದ್ದಾರೆ.