ನ್ಯೂಯಾರ್ಕ್: ಕ್ರಿಕೆಟ್ ಎಂದರೆ ಮೂಗು ಮುರಿಯುವ ಅಮೆರಿಕದಲ್ಲಿ, ಅದರ ಜನಪ್ರಿಯತೆಯನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ಸ್ಪಿನ್ ದಂತಕತೆ ಶೇನ್ ವಾರ್ನ್ ಕನಸಿನ ಕೂಸಾದ ಆಲ್ ಸ್ಟಾರ್ಸ್ ಟಿ೨೦ ಲೀಗ್ ಪಂದ್ಯಾವಳಿಯು ಇಂದಿನಿಂದ ನಡೆಯಲಿದೆ.
ಅಮೆರಿಕನ್ನರಿಗೆ ಕ್ರಿಕೆಟ್ ಬಗ್ಗೆ ಹೆಚ್ಚಿನ ಒಲವಿಲ್ಲ. ಆದರೆ, ಕ್ರಿಕೆಟ್ ಅನ್ನೇ ಹೋಲುವ ಬೇಸ್‍ಬಾಲ್, ಇವರ ನೆಚ್ಚಿನ ಕ್ರೀಡೆಗಳಲ್ಲಿ ಒಂದಾಗಿದ್ದು, ಇದೇ ನೆಲೆಯಲ್ಲಿ ಕ್ರಿಕೆಟ್‍ಗೂ ಬೇಡಿಕೆ ಹೆಚ್ಚಿಸುವುದು ಸಚಿನ್-ಶೇನ್‍ವಾರ್ನ್ ಪಣವಾಗಿದೆ. ಆಲ್‍ಸ್ಟಾರ್ಸ್ ಲೀಗ್ ನಲ್ಲಿ ಈ ಬಾರಿ ಸಚಿನ್ ಬ್ಲಾಸ್ಟರ್ಸ್ ಮತ್ತು ವಾರ್ನ್ ವಾರಿಯರ್ಸ್ ತಂಡಗಳ ನಡುವೆ ಒಟ್ಟು ಮೂರು ಪಂದ್ಯಗಳು ನಡೆಯಲಿದೆ. ನ.7 ರಂದು ನ್ಯೂಯಾರ್ಕ್ ನ ಸಿಟಿ ಫೀಲ್ಡ್ ನಲ್ಲಿ ಮೊದಲ ಪಂದ್ಯ ನಡೆಯಲಿದೆ.
ನ.11 ರಂದು ಹೌಸ್ಟನ್ ನ ಮಿನಿಟ್ ಮೇಡ್ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ಹಾಗೂ ನ.14 ರಂದು ಲಾಸ್ ಏಂಜಲಿಸ್ ನ ಡಾಡ್ಗರ್ ಕ್ರೀಡಾಂಗಣದಲ್ಲಿ ಮೂರನೇ ಪಂದ್ಯ ನಡೆಯಲಿದೆ. ಈ ಮೂರು ಪಂದ್ಯಗಳು ನಡೆಯುತ್ತಿರುವುದು ಬೇಸ್ ಬಾಕ್ ಕ್ರೀಡಾಂಗಣದಲ್ಲೇ. ಇಲ್ಲಿ ಕ್ರಿಕೆಟ್ ಪಿಚ್ ತಯಾರಿಸಿ ಅಲ್ಲಿ ಟಿ 20 ಮಾದರಿಯ ಕ್ರಿಕೆಟ್ ಆಡಿಸಲಾಗುತ್ತಿದೆ. ಸಿಟಿ ಫೀಲ್ಡ್ ಕ್ರೀಡಾಂಗಣ 45 ಸಾವಿರ, ಮಿನಿಟ್ ಮೇಡ್ ಕ್ರೀಡಾಂಗಣ 41 ಡಾಡ್ಗರ್ ಕ್ರೀಡಾಂಗಣ 56 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ.
ವಿಶ್ವ ಕ್ರಿಕೆಟ್ ನ ದಂತಕತೆಗಳ ಆಟವನ್ನು ಕಣ್ತುಂಬಿಕೊಳ್ಳಲು ಅಮೇರಿಕದ ಕ್ರೀಡಾ ರಸಿಕರು ಉತ್ಸುಕರಾಗಿದ್ದಾರೆ. ಮೊದಲ ಪಂದ್ಯಕ್ಕೆ ನಿಗದಿಪಡಿಸಲಾಗಿದ್ದ 25 -50 ಅಮೇರಿಕನ್ ಡಾಲರ್ ಮೊತ್ತದ ಟಿಕೆಟ್ ಗಳು ಸಂಪೂರ್ಣವಾಗಿ ಮಾರಾಟವಾಗಿದ್ದು ಈಗ 175 ಅಮೇರಿಕನ್ ಡಾಲರ್ ಮೊತ್ತದ ಕೆಲವು ಟಿಕೆಟ್ ಗಳು ಮಾತ್ರ ಲಭ್ಯವಿರುವುದಾಗಿ ವರದಿಗಳು ಬಂದಿವೆ.