ಪ್ಯಾರಿಸ್: ಪ್ಯಾರಿಸ್ 2024 ಒಲಿಂಪಿಕ್ಸ್ ನಲ್ಲಿ ತೂಕ ಹೆಚ್ಚಳದ ಕಾರಣ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ವಿನೇಶ್ ಫೋಗಟ್ ಸಿಎಎಸ್ (ಕ್ರೀಡೆಗಾಗಿ ಇರುವ ಆರ್ಬಿಟ್ರೇಶನ್ ಕೋರ್ಟ್) ಮೊರೆ ಹೋಗಿದ್ದಾರೆ.
ಮಹಿಳೆಯರ 50 ಕೆಜಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದ ಕುಸ್ತಿ ಪಟು ವಿನೇಶ್ ಪೋಗಟ್, ತಮ್ಮ ತೂಕ ನಿಗದಿತ ಮಿತಿಗಿಂತ 100 ಗ್ರಾಮ್ ಹೆಚ್ಚಳವಾಗಿದ್ದಕ್ಕೆ ಅನರ್ಹಗೊಂಡಿದ್ದರು.
ಅನರ್ಹತೆಯನ್ನು ಪ್ರಶ್ನಿಸಿರುವುದಲ್ಲದೇ ಜಂಟಿಯಾಗಿ ಬೆಳ್ಳಿ ಪದಕಕ್ಕೆ ಮನವಿ ಮಾಡಿದ್ದಾರೆ. ಒಲಿಂಪಿಕ್ಸ್ ನಲ್ಲಿ ಕೋರ್ಟ್ ನ ವಿಶೇಷ ಕಚೇರಿಯಲ್ಲಿ ವಿನೇಶ್ ಮನವಿಯನ್ನು ಗುರುವಾರ (ಆ.08) ರಂದು ಆಲಿಸಲಾಗುತ್ತದೆ.
ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ವಿನೇಶ್ ಫೋಗಟ್ ಅನರ್ಹತೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ಅಧಿಕಾರಿಗಳು ''ಕೂದಲಿಗೆ ಕತ್ತರಿ ಸೇರಿದಂತೆ ತೂಕ ಇಳಿಕೆಗೆ ಎಲ್ಲ ರೀತಿಯ ಕಠಿಣ ಕ್ರಮ ತೆಗೆದುಕೊಂಡಿದ್ದೆವು'' ಎಂದು ಹೇಳಿದ್ದಾರೆ.
ವಿನೇಶ್ ಫೋಗಟ್ ಮಂಗಳವಾರ ಬರೊಬ್ಬರಿ ಮೂರು ಪಂದ್ಯಗಳನ್ನಾಡಿ ಫೈನಲ್ ಗೇರಿದ್ದರು. ಫೈನಲ್ ನಲ್ಲಿ ಅವರು ಅಮೆರಿಕದ ಸಾರಾ ಹಿಲ್ಡೆಬ್ರಾಂಡ್ ಅವರನ್ನು ಎದುರಿಸಲು ಸಿದ್ಧರಾಗಿದ್ದರು. ಆದರೆ ತೂಕದ ವಿಚಾರವಾಗಿ ಅನರ್ಹಗೊಂಡು ಚಿನ್ನದ ಪದಕದ ಆಸೆ ಕೈ ಬಿಡುವಂತಾಗಿದೆ.