ಮಕರಂದ/ದೋಣಿ

ಯುಗದ ದನಿ

ಚಿಗುರುವುದೇ ಆ ಋತುವಿನ ಜನ್ಮಜನ್ಮಾಂತರದ ಗುಣ. ವಸಂತಕ್ಕೆ ಮುಪ್ಪಿಲ್ಲ. ಒಂದು ಲೆಕ್ಕದಲ್ಲಿ ಕವಿ, ಕಥೆಗಾರರ ಮನಸ್ಸು ಕೂಡ ವಸಂತವೇ...

ಚಿಗುರುವುದೇ ಆ ಋತುವಿನ ಜನ್ಮಜನ್ಮಾಂತರದ ಗುಣ. ವಸಂತಕ್ಕೆ ಮುಪ್ಪಿಲ್ಲ. ಒಂದು ಲೆಕ್ಕದಲ್ಲಿ ಕವಿ, ಕಥೆಗಾರರ ಮನಸ್ಸು ಕೂಡ ವಸಂತವೇ. ಬರೆಯಲು ವಿಷಯವೇ ಖರ್ಚಾಗಿ, ಬೋಳಾದಂತೆ ಕಾಣುವುದಿಲ್ಲ ಅವರ ಮನಸ್ಸು. ಅದು ಚಿಗುರುಗಳ ಕೂಡ. ಅಲ್ಲಿ ಹಸಿರು ಬೇರೂರಿ ನಿಂತಿರುತ್ತದೆ. ಹೊಸ ವಿಚಾರಗಳು, ಹೊಸ ಕನಸುಗಳನ್ನು ಹುಟ್ಟುಹಾಕುತ್ತಾ ಕಲ್ಪನೆಗೂ ನಿಲುಕದ ಹೊಸದೊಂದು ಊರಿಗೆ ಓದುಗನನ್ನು ಕರೆದೊಯ್ಯುತ್ತದೆ. ಹೀಗಾಗಿ, ಕವಿಮನಸ್ಸು ಹಸಿರಿನ ನಂದನವನ.
ಕೆ.ಎಸ್. ನರಸಿಂಹಸ್ವಾಮಿ ಅವರ 'ತೆರೆದಬಾಗಿಲು' ಕವನಸಂಕಲನದ ಒಂದು ಕವಿತೆಯಲ್ಲಿ ಹೀಗೆ ಹೇಳುತ್ತಾರೆ,
ಮೃದು ವಸಂತವೇ, ನೆಲದ ಹೃದಯ ಚಿಮ್ಮಿದ ಒಲವೆ/ ಹೊಸ ವರುಷ ತೆರೆದ ತಳಿರಿನ ಬಾಗಿಲೆ/ ಕೊರೆವ ಚಳಿಯೂ ಇರದ, ಉರಿವ ಬಿಸಿಲೂ ಇರದ/ ಹರುಷವೇ, ನನ್ನೊಲವೆ ಬಾಳ ಚೆಲುವೆ.
ಬಹುಶಃ ವಸಂತವನ್ನು ಇದಕ್ಕಿಂತ ಸೊಗಸಾಗಿ ವರ್ಣಿಸುವುದು ಕಷ್ಟ. ವಸಂತದ ಗುಣವನ್ನೂ, ಕವಿಯ ಗುಣವನ್ನೂ ಪೋಣಿಸಿ ಬರೆದ ಸಾಲುಗಳಿವು. ವಸಂತಕ್ಕೆ ಗಡಸು ಗೊತ್ತಿಲ್ಲ. ಕವಿಮನಸ್ಸಿಗೆ ಒರಟುತನ ಗೊತ್ತಿಲ್ಲ. ಒರಟು ಒರಟಾಗಿ, ಅಮಾನವೀಯವಾಗಿ ವರ್ತಿಸಿದ ಒಂದೇ ಒಂದು ಕವಿಯ ಉದಾಹರಣೆ ಈ ಲೋಕದಲ್ಲಿ ಸಿಗುವುದಿಲ್ಲ. ವಸಂತದಲ್ಲಿ ಪ್ರೀತಿ ಕೂಡ ಅಷ್ಟೇ. ನೆಲದ ಹೃದಯದಿಂದ ಚಿಮ್ಮುವಂಥದ್ದು. ಹಾಗೆಯೇ ಕವಿಯ ಸ್ಫೂರ್ತಿ ಕೂಡ. ಈ ನೆಲದ ಮಣ್ಣಿನ ವಾಸನೆ, ಪ್ರೀತಿ, ಕನಸುಗಳೆಲ್ಲ ಕವಿಯ ಬರವಣಿಗೆಗೆ ಸ್ಫೂರ್ತಿ. ಆ ಬರವಣಿಗೆಯಲ್ಲಿ ಒಲವಿದೆ. ಅಗಾಧ ಚೆಲುವಿದೆ. ಹೊಸ ವರುಷಕೆ, ಹೊಸತನಕ್ಕೆ ವಸಂತದ ಬಾಗಿಲು ಮುಕ್ತವಾಗಿ ತೆರೆದಿರುತ್ತದೆ. ಕವಿಯ ಹೃದಯ ಕೂಡ ಜಗದ ಹೊಸತನದ ಹರಿವನ್ನು ಏನೂ ನೆಪ ಹೇಳದೆ ತನ್ನೊಳಗೆ ಬರಮಾಡಿಕೊಳ್ಳುತ್ತದೆ.
ಇನ್ನು ಕೆಎಸ್‌ನ ಹೇಳುತ್ತಾರೆ, 'ಕೊರೆವ ಚಳಿಯೂ ಇರದ, ಉರಿವ ಬಿಸಿಲೂ ಇರದ' ಅಂತ. ವಸಂತ ಕೊಡುವ ವಾತಾವರಣ ಸುಖವನ್ನು ನಿಮಗೆ ಯಾವ ಏರ್‌ಕೂಲರ್‌ಗಳು ಕೂಡ ಕೊಡುವುದಿಲ್ಲ. ಸಕಲ ಜೀವಿಗೂ ಆಗ ಬದುಕಲು ಹಿತ. ಕವಿ ಹೃದಯವೂ ಅಷ್ಟೇ. ಸಮಾಜಕ್ಕೆ ಹಿತವಾದ ಸಂದೇಶ ರವಾನಿಸುತ್ತದೆ. ಕೆಟ್ಟದನ್ನು ಬಯಸದೆ, ಸರ್ವರಿಗೂ ಒಳಿತನ್ನು ಆಶಿಸುತ್ತದೆ. ಮಾನವ ತನ್ನ ಮೇಲೆ ಎಷ್ಟೇ ದುಷ್ಕೃತ್ಯ ಎಸಗಿದರೂ ಪ್ರಕೃತಿ ಅದನ್ನು ಕ್ಷಮಿಸಿ, ಮರೆತು ಹರ್ಷದ ಹೊನಲನ್ನು ಹರಿಸುತ್ತದೆ. ಆ ಹರ್ಷದ ಪ್ರೀತಿ ಬಾಳಸಂಗಾತಿಯಂತೆ ಎಂದು ಕವಿ ಪುಳಕರಾಗುತ್ತಾರೆ. ಬಾಳಸಂಗಾತಿಗೆ ಬಿಟ್ಟರೆ ಅಂಥ ಒಲವು ಕೊಡಲು ಪ್ರಕೃತಿಯಿಂದ ಮಾತ್ರ ಸಾಧ್ಯ. ಅದೂ ವಸಂತದಲ್ಲಷ್ಟೇ ಸಾಧ್ಯ ಎಂದು ಕವಿ ಈ ಸಾಲುಗಳಲ್ಲಿ ಬಲವಾಗಿ ಪ್ರತಿಪಾದಿಸುತ್ತಾರೆ.
ನ
ಇನ್ನೊಂದು ಜನಪ್ರಿಯ ಗೀತೆ. ಯುಗಾದಿ ವೇಳೆ ಮತ್ತೆ ಮತ್ತೆ ಕೇಳಿದರೂ ಕಿವಿ ತನಗೇನೂ ಕಿರಿಕಿರಿಯೇ ಆಗುತ್ತಿಲ್ಲವೆಂಬಂತೆ ನಿಮಿರಿಕೊಳ್ಳುತ್ತದೆ. ಅದು ಬೇಂದ್ರೆಯವರ ಯುಗಾದಿ ಪದ್ಯ. ಅದರಲ್ಲಿನ ಕೆಲವು ಸಾಲುಗಳು...
ಹೊಂಗೆ ಹೂವ ತೊಂಗಳಲಿ/ ಭೃಂಗದ ಸಂಗೀತ ಕೇಳಿ/ ಮತ್ತೆ ಕೇಳಬರುತ್ತಿದೆ/ ಬೇವಿನ ಕಹಿ ಬಾಳಿನಲಿ/ ಹೂವಿನ ನಸುಗಂಪು ಸೂಸಿ/ಜೀವಕಳೆಯ ತರುತ್ತಿದೆ.
ತೊನೆದಾಟದಲ್ಲಿಯೇ ಸೌಂದರ್ಯದ ಹಿರಿಮೆಯನ್ನು ಉಕ್ಕೇರಿಸಿಕೊಳ್ಳುವುದು ಹೂವಿನ ಹುಟ್ಟುಗುಣ. ಅದರಲ್ಲೂ ಹೊಂಗೆ ಹೂವು ತೂಗಿ ನಿಲ್ಲುವುದನ್ನು ನೋಡುವುದೇ ಚೆಂದ. ಆ ಚೆಂದವನ್ನು ಯುಗಾದಿ ವೇಳೆಯಲ್ಲಷ್ಟೇ ಸವಿಯಲು ಸಾಧ್ಯ. ಬೇಂದ್ರೆಯವರಿಲ್ಲಿ ಹೊಂಗೆ ಹೂವಿನ ತೋಯ್ದಾಟಕ್ಕೆ ಮನಸೋತಿದ್ದಾರೆ. ಹೀಗಾಗಿ, ಆ ಸುಂದರ ಸಂಭ್ರಮದಲ್ಲಿ ಕವಿಮನಸ್ಸೇ ಇಲ್ಲಿ ತೋಯ್ದಾಡಲು ಶುರುವಾಗಿದೆ.
ಆ ತೋಯ್ದಾಟ, ಆಕರ್ಷಣೆ ಯಾವ ಥರ ಎಂದರೆ, ದುಂಬಿಯಂತೆ. ಆ ಹೂವಿನ ಮಕರಂದ ಹೀರುತ್ತಾ, ಕಾಣದ ಕಂಠದಿಂದ ಸಂಗೀತ ಹೊಮ್ಮಿಸುವುದು ವಸಂತದಲ್ಲಿ ಮತ್ತೆ ಕೇಳಿಬರುವ ಸಂಗತಿಗಳು. ಕವಿಯಾದವ ಜಗದ ಗುಟ್ಟುಗಳನ್ನು, ರಹಸ್ಯಗಳನ್ನು, ಸೌಂದರ್ಯವನ್ನು ಸದ್ದಿಲ್ಲದೆ ಆಲಿಸುತ್ತಾ, ಆಸ್ವಾದಿಸುತ್ತಾ, ಆಕರ್ಷಿತನಾಗುತ್ತಾ, ಅನುಭವಿಸುತ್ತಾ ತನ್ನೊಳಗೇ ಸಾಹಿತ್ಯದ ಸ್ವರ್ಗ ನಿರ್ಮಿಸಿಕೊಳ್ಳುವುದನ್ನು ಬೇಂದ್ರೆ ಈ ಹೋಲಿಕೆ ಕೊಟ್ಟು ಬಣ್ಣಿಸಿದಂತಿದೆ. ಹೂವು ಎಷ್ಟೆ ಚೆಲುವಿದ್ದರೂ, ಎಷ್ಟೇ ದೊಡ್ಡದು- ಚಿಕ್ಕದಿದ್ದರೂ ತನ್ನ ಪರಿಮಳವನ್ನು ತನ್ನೊಳಗೆ ಬಚ್ಚಿಟ್ಟುಕೊಳ್ಳಲು ಸಾಧ್ಯವಿಲ್ಲ. ಅದು ನಸುಗಂಪು ಸೂಸಲೇಬೇಕು. ಹಾಗೆಯೇ ಕವಿಯೂ ಅಷ್ಟೇ. ಎಷ್ಟೇ ಸಿರಿವಂತನಾಗಿರಲಿ, ಬಡವನೇ ಆಗಿರಲಿ, ಕುಂಟನೇ ಆಗಿರಲಿ, ಕುರುಡನೇ ಆಗಿರಲಿ... ಕಾವ್ಯಪ್ರಜ್ಞೆಯನ್ನು ತನ್ನೊಳಗೇ ಸಂಗ್ರಹಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಭೆಯು ಪ್ರಪಂಚಕ್ಕೆ ವರ್ಗಾವಣೆ ಆಗುತ್ತಿರಲೇಬೇಕು. ಜ್ಞಾನವು ಜಗದ ಕಣ್ತೆರೆಸಬೇಕು. ಹೂವಿನ ನಸುಗಂಪಿನಿಂದ ದುಂಬಿಗೆ ಜೀವಕಳೆ ಬರುವಂತೆ, ವಸಂತದ ಸೌಂದರ್ಯದಿಂದ ಮನುಕುಲದಲ್ಲಿ ಹರ್ಷದ ಕಳೆ ಚಿಮ್ಮುವಂತೆ, ಕವಿಯ ಕವನಗಳು ಓದುಗನಲ್ಲಿ ಹೊಸಕಳೆ ಹುಟ್ಟಿಸಬೇಕು. ಜೀವಕಳೆ ತುಂಬಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!

ಚಲಿಸುತ್ತಿದ್ದ ಬಸ್`ನಲ್ಲೇ ವೃದ್ಧನ 'ಮೈ ಬಿಸಿ ಏರಿಸಿ', 1 ಕೋಟಿ ರೂ ಮೌಲ್ಯದ ಚಿನ್ನ ಎಗರಿಸಿದ 'ಖತರ್ನಾಕ್ ಕಳ್ಳಿಯರು', Video

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ CWRC ಮತ್ತೆ ಶಾಕ್: ತಮಿಳುನಾಡಿಗೆ ನಿತ್ಯ 3,000 ಕ್ಯೂಸೆಕ್ ನೀರು ಹರಿಸಲು ಸೂಚನೆ