ಯುಗಾದಿ ಎಂದರೆ ಹೀಗೇ
ಅಗ್ದಿ ನಿಗದಿಯಂತೆ ಪ್ರತಿವರ್ಷ
ಮಾಗಿದೆ ಎಂದರ್ಥ? ಮತ್ತೆ
ಪಂಕ್ತಿಯಲ್ಲಿ ಹೊಸ ಸವಟು
ಸರತಿಯಲ್ಲಿ ಹೊಸ ದೀಪ್ತಿ?
ಯುಗಾದಿ ಎಂದರೆ
ಹಳೆಯ ಹೊಸಹಾದಿ ಹೊಸ ಕನಸು?
ಹಳೇ ಬೇತಾಳ ಹೊಸ ಹೊಸ ಕಥೆಯ ಹೆಗಲ ಮೇಲೆ
ಪೇಜ್ ತ್ರೀ ವಿಕ್ರಮ?
ಸುಳಿದಷ್ಟೂ ಸರಳವಾಗದ ಹಾಡಿನಂತೆ
ಅಂಬಿಕಾತನಯ? ದತ್ತನ ಉದಾತ್ತನ?
ಲೆಕ್ಕ ಇಲ್ಲದ ಚಿಕ್ಕ ಚಿಕ್ಕ ಬೆಕ್ಕು ಬಿಟ್ಟ ಕಣ್ಣು
ಪಡಕೊಂಡಷ್ಟೂ ಕಳಕೊಂಡ ಬಿದ್ದ ಹಣ್ಣು
ಎಂಬ ಲೆಕ್ಕಾಚಾರದಲ್ಲಿ
ಹೊದ್ದುಕೊಂಡ ಚಾದರದಲ್ಲಿ
ಎದ್ದವರಿಲ್ಲ, ಕನಸ ಕದಿಯಲು ಬಲ್ಲ
ಜನರಿಗೆ ಮೈಲಿಗೆ ಸಲ್ಲ
ಯುಗಾದಿ ಎಂದರೆ ಹೊಸ ಹಾದಿ ತುಳಿದು
ಮೊಗ್ಗಿಗೆ ಹೊಸ ಬಣ್ಣ, ನೋಡುವ ಕಣ್ಣ
ಹೊಕ್ಕುಳಲಿ ಹೂವ ಬಿಟ್ಟವರೇ
ಮರಳಿ ಮರಳಿ ಬರುವ ಯುಗಾದಿಗೆ
ಹೊಸ ಗಿಡ ನೆಟ್ಟವರೇ
ಕನಸುಗಳ ಪೊಟ್ಟಣ ಕಟ್ಟಿ... ಪಟ್ಟಣದಲ್ಲಿ ಬಿಚ್ಚಿದವರೇ,
ಕುಣಿದಾವು ನಿಮ್ಮ ಪರೀಕ್ಷೆಗಳ ಕಾಳಿ
ಅಥವಾ ಬೇಂದ್ರೆ ಅಜ್ಜನ ಕವನದ ಹಾಳಿ
ಜೀವನದ ಪಾಳಿ ಅಂದ್ರ ಕಟ್ಟಿದಂತ ತಾಳಿ.
ಯುಗಾದಿ ಎಂದರೆ
ಹೊಸತಿರುವು ದಾಟಿದವರಿಗೆ ಬೇರು ಹಳೇಹಾದಿ ಜ್ಞಾನ
ಕನಸು ಬೇಡಿ ಬರುವವರಿಗೆ ಬಾಡಿ ಹೋದವರ ಸಹನ
ಹೊಸ ನದಿಯಲ್ಲಿ ತೇಲುವವರಿಗೆ ಮುಳುಗಿ ಹೋದ ದೋಣಿ
ರಾಜರಸ್ತೆ ಎಷ್ಟೇ ಹತ್ತಿರವಿದ್ದರೂ ದಾಟಬೇಕು ಓಣಿ
ನ
ಯುಗಾದಿ ಮರೆಸಲಿ ಉದರಿ ದಿನಗಳ
ಮದಾರಿಗೆ ಹೆದರಿ, ಬೇಡ ಹಾಕುವ ಲಾಗ
ಚಂಗುಮಂಗುಗಳ ಬೇಡ ಸಂಗ, ಬೇಡ ಹಂಗು
ಭವಿಷ್ಯಕ್ಕೆ ಆಶ್ರಯ
ಒಂದಿಷ್ಟು ವಿನಯ, ಪ್ರೀತಿ ವಿಚಾರ ಬೇರು ನೆನೆಸಿ
ಅರ್ಥ ಬೇಡದ ಸಹಜ ಕಾವ್ಯ
ಯುಗಾದಿ ಎಂದರೆ
ಅರಳಲಿ, ಮರಳು ಮನಸ್ಸು
ಮನಸು ಹೊಸತು, ನೆರಳು ಹೊಸತು
ಹೊಸೆದ ಹೊಸ ಬತ್ತಿ, ದೀಪ ಹೊಸತು
ಹಳೆಯ ತಾಳ್ಮೆಗೆ ಹೊಸ ಕಾಣ್ಕೆ
ಹೊಸ ಬಟ್ಟೆಗೆ ಅದೇ ತಾರು,
ಅದೇ ಮರ ಹೊಸ ನಾರು
ಹಳೆಯ ದೇವರು ಮತ್ತೆ ಹೊಸ ಬೇರು.
- ವಿ.ಎಸ್. ಶ್ಯಾನ್‌ಭಾಗ್