ಮಕರಂದ/ದೋಣಿ

ಅವರು ಚಿಕ್ಕಮಗಳಾದರೆ ನಾನು ಚಿಕ್ಕಮಗಳೂರಿನ ಅಳಿಯ...

1978ರಲ್ಲಿ ಚಿಕ್ಕಮಗಳೂರು ಎಲ್ಲರ ಬಾಯಿಯಲ್ಲಿ ನಲಿದಾಡಲು ಪ್ರಾರಂಭ ಮಾಡಿತು.

1978ರಲ್ಲಿ ನನ್ನ ಕೊನೆಯ ಮಗ ಹುಟ್ಟಿದ್ದು, ಅದೇ ವರ್ಷ ಚಿಕ್ಕಮಗಳೂರು ಎಲ್ಲರ ಬಾಯಿಯಲ್ಲಿ ನಲಿದಾಡಲು ಪ್ರಾರಂಭ ಮಾಡಿತು. ಇಂದಿರಾಗಾಂಧಿಯವರು ಚಿಕ್ಕಮಗಳೂರಿನಲ್ಲಿ ಚುನಾವಣೆಗೆ ನಿಂತಿದ್ದರು. ಅವರಿಗೆದುರಾಗಿ ವಿರೋಧ ಪಕ್ಷದವರೆಲ್ಲಾ ಜನತಾ ಪಕ್ಷದಿಂದ ವೀರೇಂದ್ರ ಪಾಟೀಲರನ್ನು ಚುನಾವಣಾ ಕಣಕ್ಕೆ ಇಳಿಸಿದರು. ಎರಡೂ ಪಕ್ಷದ ದೊಡ್ಡ ದೊಡ್ಡ ನಾಯಕರು ಚುನಾವಣಾ ಪ್ರಚಾರಕ್ಕೆ ಬಂದಿಳಿದರು. ಆ ಸಮಯದಲ್ಲಿ ನಾನು, ಚಿಕ್ಕ ಮಗನ ಬಾಣಂತನಕ್ಕಾಗಿ ಹುಟ್ಟೂರಾದ ಚಿಕ್ಕಮಗಳೂರಿನಲ್ಲಿಯೇ ಇದ್ದೆ. ದಿನವೂ ಪ್ರಚಾರ ಸಭೆಗಳು, ಭಾಷಣಗಳು... ಅದಕ್ಕೆ ಬಹಳಷ್ಟು ಪೊಲೀಸರ ಬಂದೋ ಬಸ್ತು ಎಲ್ಲವೂ ಇದ್ದರೂ ಆಗಾಗ ಲಾಠೀಚಾರ್ಜ್ ಆಗುತ್ತಿತ್ತು.
ಎಲ್ಲರ ಮನೆಗಳಲ್ಲೂ ರಾಜಕೀಯ ಧುರೀಣರು ತುಂಬಿದ್ದರು. ಬಂದವರಿಗೆ ಮನೆಗಳಲ್ಲೇ ವಾಸ್ತವ್ಯ. ಊಟ ಉಪಚಾರ. ನಮ್ಮ ಮನೆಗೂ ಒಂದಿಷ್ಟು ಜನರು ತಮಿಳುನಾಡಿನಿಂದ ಬಂದಿದ್ದರು. ಬಂದ ಅತಿಥಿಗಳಿಗೆ ಉಪಚಾರ ನೀಡುವುದಕ್ಕೆ ಆಗ ಬೇಸರ ಪಟ್ಟುಕೊಳ್ಳುತ್ತಲೇ ಇರಲಿಲ್ಲ. ಮಲೆನಾಡಿನಲ್ಲಿನ ವಿಶಾಲವಾದ ಮನೆ ನಮ್ಮದಾದ್ದರಿಂದ ಐವತ್ತು ಜನಕ್ಕಿಂತ ಹೆಚ್ಚು ಜನರು ಅಲ್ಲಿದ್ದರು. ಪೂರ್ಣ ಮಹಡಿಯನ್ನೇ ಅವರಿಗೆ ಬಿಟ್ಟು ಕೊಟ್ಟಿದ್ದರು. ಅವರಿಗೆ ಹಾಲು ಹಣ್ಣಿನ ಉಪಚಾರ. ನಮ್ಮಮ್ಮನಿಗೆ ಏನೋ ಸಂಭ್ರಮ. ಅವರೆಲ್ಲಾ ನಮ್ಮನೆಗೆ ಏಕೆ ಬರ್ತಾರೆ, ಅಷ್ಟು ದೊಡ್ಡ ಮನುಷ್ಯರು ಎಂಬ ಸಂತೋಷ. ಜನತಾ ಪಕ್ಷದ ಧುರೀಣರ ಸಭೆ, ಕರುಣಾನಿಧಿ, ಜಾರ್ಜ್ ಫರ್ನಾಂಡೀಸ್, ರಾಮಕೃಷ್ಣ ಹೆಗಡೆ, ಲಾಲ್‌ಕೃಷ್ಣ ಅಡ್ವಾನಿ ಎಲ್ಲರ ಭಾಷಣ.
ನನಗೋ ಹೋಗಲು ಆಸೆ, ಆದರೆ ಬಾಣಂತಿ ಅಲ್ಲಿಗೆ ಯಾಕೆ ಹೋಗಬೇಕು ಅಲ್ಲಿ ಏನಾದರೂ ಗಲಾಟೆಯಾದರೆ ಎಂದು ಅಮ್ಮನ ಕಾಳಜಿ. ಜೊತೆಗೆ ಮಗುವನ್ನು ಬೇರೆ ಮನೆಯಲ್ಲಿ ಬಿಟ್ಟು ಹೋಗಬೇಕು. ಹೀಗಾಗಿ ಅಮ್ಮನ ಆಣತಿಯಿಲ್ಲದೆ ಹೋಗುವುದಾದರೂ ಹೇಗೆ? ಕೊನೆಗೆ ಅಮ್ಮನನ್ನು ಕಾಡಿ ಬೇಡಿ ಹೋಗಿದ್ದಾಯಿತು. ಅವರುಗಳ ಭಾಷಣ ಕೇಳಲು ಏನೋ ಹುಮ್ಮಸ್ಸು, ಎಮರ್ಜೆನ್ಸಿ ಘೋಷಿಸಿದ ಇಂದಿರಾಗಾಂಧಿಯವರ ಮೇಲೆ ಎಲ್ಲರಿಗೂ ಅಸಮಾಧಾನ. ಇಡೀ ಚಿಕ್ಕಮಗಳೂರು ರಣರಂಗವಾಗಿತ್ತು. ಈ ನಾಯಕರು ಜೈಲಿನಲ್ಲಿ, ಭೂಗತರಾಗಿದ್ದಾಗ ಅನುಭವಿಸಿದ ಕಷ್ಟಗಳನ್ನು ರಸವತ್ತಾಗಿ ತಮ್ಮ ಭಾಷಣಗಳಲ್ಲಿ ಹೇಳಿದರು. ಅವರ ಭಾಷಣ ಕೇಳುತ್ತಿದ್ದರೆ ಸಮಯ ಸಂದಿದ್ದೇ ಗೊತ್ತಾಗಲಿಲ್ಲ.
ಅಂತೆಯೇ ಇಂದಿರಾ ಗಾಂಧಿಯವರ ಸಭೆಗೂ ನಮ್ಮ ಸವಾರಿ. ನಾನು ಚಿಕ್ಕಮಗಳೂರಿನ ಚಿಕ್ಕ ಮಗಳು. ನಿಮ್ಮೆಲ್ಲರ ಸಹಕಾರ ನನಗೆ ಬೇಕೆಂದು ಅವರ ಕಳಕಳಿಯ ಮನವಿ. ಇದಕ್ಕೆ ಪ್ರತ್ಯುತ್ತರವಾಗಿ ಮತ್ತೊಂದು ಸಭೆಯಲ್ಲಿ ರಾಮಕೃಷ್ಣ ಹೆಗಡೆಯವರಿಂದ, ಅವರು ಚಿಕ್ಕ ಮಗಳಾದರೆ ನಾನು ಚಿಕ್ಕಮಗಳೂರಿನ ಅಳಿಯ ಎನ್ನುವ ಚಟಾಕಿ (ಅವರ ಹೆಂಡತಿ ಚಿಕ್ಕಮಗಳೂರಿನವರೇ) ಎಲ್ಲರಿಂದಲೂ ನಮ್ಮೂರಿನವರ ಬಹಳ ಹಳೆಯ ಅಹವಾಲಾದ ಚಿಕ್ಕಮಗಳೂರಿಗೆ ರೈಲು ತರುವ ಆಶ್ವಾಸನೆ. ನಮ್ಮ ಊರಿನಲ್ಲಿ ಏನೋ ಸಂಭ್ರಮದ ವಾತಾವರಣ. ಯಾರಿಗೂ ಗೊತ್ತೇ ಇರದ ಚಿಕ್ಕಮಗಳೂರು ಇಡೀ ದೇಶದ, ವಿಶ್ವದ ಮನೆಮಾತಾಯಿತು, ಎಲ್ಲಾ ವಾರ್ತಾಪತ್ರಿಕೆಗಳಲ್ಲೂ ಇಲ್ಲಿಯದೇ ಮಾತು, ರೇಡಿಯೋದಲ್ಲಿ ಈ ಚಿಕ್ಕ ಊರಿನದೇ ಸುದ್ದಿ. ಆದರೆ ಎಲ್ಲರ ಪ್ರಯತ್ನಗಳೂ, ಊಹೆಗಳನ್ನು ಸುಳ್ಳು ಮಾಡಿ ಇಂದಿರಾಗಾಂಧಿಯವರಿಗೆ ಜಯಭೇರಿಯಾಯಿತು. ಅವರಿಗೆದುರಾಗಿ ನಿಂತು ಸೋತ ವೀರೇಂದ್ರ ಪಾಟೀಲ್ ಮತ್ತೆ ಕಾಂಗ್ರೆಸ್ಸಿಗೇ ಸೇರಿಕೊಂಡರು. ಮತ್ತೆ ಯಥಾಸ್ಥಿತಿಗೆ ನಮ್ಮೂರು ಬಂದಿತು. ನಾಯಕರ ಬಾಲ ಹಿಡಿದು ಕೊಂಡು ತಿರುಗಿದ್ದಷ್ಟೇ ಲಾಭ. ಕೆಲಸವೆಲ್ಲಾ ಹಾಳಷ್ಟೇ. ಏನೂ ಬದಲಾಗಲಿಲ್ಲ, ಗೆದ್ದವರೂ ತಿರುಗಿ ನೋಡಲಿಲ್ಲ ಸೋತವರ ಪತ್ತೆಯಿಲ್ಲ. ನನ್ನ ಮಗನಿಗೆ ಈಗ 32 ವರ್ಷ. ಅವ ಅಮೆರಿಕದಲ್ಲಿ ಕೆಲಸದಲ್ಲಿದ್ದಾನೆ. ಆದರೆ ನಮ್ಮೂರಿಗೆ ರೈಲು ಇನ್ನೂ ಬಂದಿಲ್ಲ. ಅವರೆಲ್ಲಾ ಬಿಟ್ಟಿದ್ದು ರೈಲೇ ಅಂತೀರಾ?

- ಮಂಜುಳಾ ರಾಜ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

ಅ.10ರಂದು CJP ಪ್ರತಿಭಟನೆ ಹಿನ್ನೆಲೆ ದೆಹಲಿಗೆ ತೆರಳುವ ಹಲವು ರೈಲುಗಳು ರದ್ದು, ಪ್ರಯಾಣಿಕರಿಗೆ ಸಂಕಷ್ಟ!

ರಾಜಸ್ಥಾನದ ವಿಚಿತ್ರ ಪ್ರಕರಣ: ಮಕ್ಕಳ ಆರೈಕೆ, ಮನೆ ಸ್ವಚ್ಛತೆಗೆ ಕೈದಿಗಳ ಬಳಕೆ; ಕೊನೆಗೆ ಅದೇ ಜೈಲು ಸೇರಿದ ಅಜ್ಮೀರ್ ಮಹಿಳಾ ಜೈಲರ್‌!

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video