ಮಕರಂದ/ದೋಣಿ

ಇಬ್ಬರೂ ಆಕೆಗೆ ಮಂಗಗಳಂತೆ ಕಂಡರು!

ಹಿಂದೆ ಪರಮ ದೈವ ಭಕ್ತನಾದ ಅಂಬರೀಷನೆಂಬ ಒಬ್ಬ...

ಹಿಂದೆ ಪರಮ ದೈವ ಭಕ್ತನಾದ ಅಂಬರೀಷನೆಂಬ ಒಬ್ಬ ಮಹಾರಾಜನಿದ್ದನು. ಅವನಿಗೆ ಮದುವೆಯ ವಯಸ್ಸಿಗೆ ಬಂದ ಮಗಳೊಬ್ಬಳು ಇದ್ದಳು. ಅವಳ ಹೆಸರು ಶ್ರೀಮತಿ ಎಂದು. ರಾಜಕುಮಾರಿ ಶ್ರೀಮತಿ ಅಪೂರ್ವ ಸುಂದರಿಯಾಗಿದ್ದಳು. ಒಂದು ಸಲ ತ್ರಿಲೋಕ ಸಂಚಾರಿಯಾದ ನಾರದ ಮತ್ತು ಪರ್ವತ ಇಬ್ಬರೂ ರಾಜನ ಅರಮನೆಗೆ ಆಗಮಿಸಿದರು. ರೂಪ ಲಾವಣ್ಯಗಳಿಂದ ಅಪ್ಸರೆಯಂತೆ ಕಂಗೊಳಿಸುತ್ತಿದ್ದ ಶ್ರೀಮತಿಯನ್ನು ಕಂಡ ಕೂಡಲೇ, ಇಬ್ಬರಿಗೂ ಏಕಕಾಲದಲ್ಲಿ ಅವಳ ಮೇಲೆ ಮೋಹ ಉಂಟಾಯಿತು.
ಇದು ರಾಜನ ಗಮನಕ್ಕೆ ಬಂದಿತು. ನಾರದ ಹಾಗೂ ಪರ್ವತರಿಬ್ಬರೂ ಅಂಬರೀಷನಿಗೆ ಸೋದರಮಾವ, ಸೋದರಳಿಯರಾಗಬೇಕು. ಇಬ್ಬರಲ್ಲಿ ಯಾರೊಬ್ಬರ ಮನಸ್ಸನ್ನೂ ನೋಯಿಸಲು ಇಷ್ಟಪಡದ ಮಹಾರಾಜನು ಶ್ರೀಮತಿಯ ಸ್ವಯಂವರಕ್ಕೆ ಏರ್ಪಾಡು ಮಾಡಿದನು. ಇದನ್ನರಿತ ನಾರದ ಕೂಡಲೇ, ಶ್ರೀಮತಿ ತನ್ನನ್ನೇ ವರಿಸಬೇಕೆಂಬ ಅಭಿಲಾಷೆಯಿಂದ ಶ್ರೀಮನ್ನಾರಾಯಣನ ಬಳಿಗೆ ಹೋಗಿ, 'ಭಗವನ್, ಶ್ರೀಮತಿಯ ಸ್ವಯಂವರದ ಸಮಯದಲ್ಲಿ, ಅಲ್ಲಿಗೆ ಬರುವ ಪರ್ವತನ ಮುಖ ಶ್ರೀಮತಿಗೆ ಕೋತಿಯ ಮುಖದ ಹಾಗೆ ಗೋಚರಿಸುವಂತೆ ನೀವು ಮಾಡಬೇಕು' ಎಂದು ಕೇಳಿಕೊಂಡನು.
ನಾರದ ಭಗವಂತನ ಪರಮ ಭಕ್ತನಲ್ಲವೇ ? "ತಥಾಸ್ತು" ಎಂದನು ನಾರಾಯಣ. ನಾರದ ಖುಷಿಯಿಂದ ಎದ್ದುಹೋದನು. ಸ್ವಲ್ಪ ಹೊತ್ತಿನ ಮೇಲೆ ಅಲ್ಲಿಗೆ ಪರ್ವತನ ಆಗಮನವಾಯಿತು. ಅವನೂ ಅದೇ ರೀತಿ, ಅಂದರೆ ಶ್ರೀಮತಿಗೆ ನಾರದನ ಮುಖ ಒಂದು ದೊಡ್ಡ ಕಪಿಯ ಮುಖದಂತೆ ಗೋಚರಿಸುವ ಹಾಗೆ ಮಾಡಬೇಕು ಎಂದು ಕೇಳಿಕೊಂಡನು. ಅವನಿಗೂ ತಥಾಸ್ತು ಎಂದನು ನಾರಾಯಣ
ಸ್ವಯಂವರದ ದಿನ ಮದುವೆಯ ಮಂಟಪದಲ್ಲಿ ಮಾಲೆ ಹಿಡಿದು ನಿಂತ ಶ್ರೀಮತಿಗೆ, ಅಂಬರೀಶ ಮಹಾರಾಜನು ನಾರದ ಮತ್ತು ಪರ್ವತರನ್ನು ಪರಿಚಯಿಸುತ್ತಾ, "ಮಗಳೇ ಶ್ರೀಮತಿ, ಇವರಿಬ್ಬರೂ ನಮ್ಮ ಆಪ್ತ ಬಂಧುಗಳು, ಮಹಾನ್ ಋಷಿಗಳು, ಪರಮ ದೈವ ಭಕ್ತರು. ಇಬ್ಬರಲ್ಲಿ ನಿನಗಿಷ್ಟವಾದವರನ್ನು ವರಿಸು" ಎಂದು ಹೇಳಿದಾಗ, ಶ್ರೀಮತಿ ನಗುತ್ತಾ, "ಅಪ್ಪಾ, ನನಗೆ ಇಲ್ಲಿ ಯಾವ ಋಷಿಗಳೂ ಕಾಣುತ್ತಿಲ್ಲ. ಬದಲು ಎರಡು ದೊಡ್ಡ ಕಪಿಗಳು ಮಾತ್ರ ಕಾಣುತ್ತಿವೆ. ಅವುಗಳ ನಡುವೆ ಅತಿ ಸುಂದರ ಮನೋಹರನೊಬ್ಬನು ಗೋಚರಿಸುತ್ತಿದ್ದಾನೆ. ನಾನು ಅವನನ್ನು ವರಿಸುತ್ತೇನೆ" ಎಂದು ನಾರದ ಪರ್ವತರ ನಡುವೆ ನಗುತ್ತ ನಿಂತಿದ್ದ ಶ್ರೀಮನ್ನಾರಾಯಣನಿಗೇ ಲಜ್ಜೆಯಿಂದ ಬಾಗಿ ಮಾಲೆಯನ್ನು ಹಾಕಿದಳು. ನಾರದ ಪರ್ವತರಿಬ್ಬರೂ ಪೆಚ್ಚಾಗಿ, ಲಜ್ಜಿತರಾಗಿ ಸದ್ದಿಲ್ಲದೇ ಅಲ್ಲಿಂದ ಜಾರಿದರು.
ಅಂತಹ ದಿವ್ಯ ಜ್ಞಾನಿಗಳೂ ಋಷಿಗಳೂ ಆದ ನಾರದ ಹಾಗೂ ಪರ್ವತನಂಥವರು ಕೇವಲ ಒಬ್ಬ ಹೆಣ್ಣಿಗಾಗಿ, ದುರಭಿಲಾಷೆಯಿಂದ ಅವಮಾನ ಹೊಂದಿದರು. ದೇವತೆಗಳೇ ಆದರೂ ದುರ್ನಡತೆ ತೋರಿದಾಗ ಶಿಕ್ಷೆ, ಅವಮಾನ ತಪ್ಪಿದ್ದಲ್ಲ. ಅದೇ ಮಾನವರು ತಮ್ಮ ಉತ್ತಮ ಸದ್ಬುದ್ಧಿ, ಸದಾಚಾರದಿಂದ ಕೂಡಿದವರಾದರೆ ಅವರು ಮಾನವರೇ ಆಗಿದ್ದರೂ ದೈವತ್ವವನ್ನು ಹೊಂದಬಹುದು.
ನಮ್ಮ ಪುರಾಣ ಕಥೆಗಳು ಕೇವಲ ಕಥೆಗಳಾಗಿರದೇ ಅವುಗಳಲ್ಲಿ ಒಂದು ನೀತಿ, ಒಂದು ಮಾರ್ಗದರ್ಶನವಿರುವುದನ್ನು ಕಾಣಬಹುದು.

- ಬ್ರಹ್ಮಣಿ ಪಿ. ರಾವ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ