ನಂಗೆ ಸುತ್ತಿ ಬಳಸಿ ಮಾತಾಡೋ ಅಭ್ಯಾಸ ಇಲ್ದೆ ಇರೋದರ ಕಾರಣ ನೇರವಾಗಿ ವಿಚಾರಕ್ಕೆ ಬರ್ತಾ ಇದೀನಿ. ಈ ಲೆಟರ್‌ನಲ್ಲಿ ಬರೆದಿರೋದನ್ನ ನಿಂಗೆ ನೇರವಾಗಿ ಹೇಳೋ ಧೈರ್ಯ ಇದೆಯಾದರೂ ಪತ್ರದ ಮೂಲಕವೇ ಹೇಳ್ತಾ ಇದೀನಿ, ಕ್ಷಮೆ ಇರಲಿ. ಅದೇಕೋ ಗೊತ್ತಿಲ್ಲ ಎಲ್ಲವನ್ನೂ ನೇರವಾಗಿ ಹೇಳಬೇಕು ಅಂದ್ಕೊಂಡು ನಿನ್ನೆದುರು ಬರ್ತೀನಿ. ಆದ್ರೆ ನಿನ್ನ ನೋಡಿದ ತಕ್ಷಣ ಮನಸಲ್ಲೇ ನಗೋದು ಬಿಟ್ರೆ ಮಾತೇ ಬರಲ್ಲ. (ಇದನ್ನ ಭಯ ಎನ್ನಬೇಕೋ ಮತ್ತೊಂದು ಎನ್ನಬೇಕೋ ತಿಳಿಯದು) ಯಾಕೋ ಗೊತ್ತಿಲ್ಲ. ನೀನು ನಂಗೆ ತುಂಬಾ ಇಷ್ಟವಾಗಿ ಬಿಟ್ಟಿದ್ದೀಯ. ಆಫ್ ಕೋರ್ಸ್ ಕಾರಣಗಳನ್ನು ಹುಡುಕುತ್ತಾ ಹೋದರೆ ಸಿಗಬಹುದೇನೋ. ಆದರೆ ಸದ್ಯಕ್ಕೆ ಆ ಪ್ರಯತ್ನ ಬೇಡ.
ಇತ್ತೀಚಿನ ದಿನಗಳಲ್ಲಿ ನನ್ನ ಪ್ರತಿಯೊಂದು ಹೆಜ್ಜೆಯೂ ನಿನಗೆ ಕಾಣದಂತೆ ಗಮನಿಸೋದು, ನಿನ್ನ ನೋಡ್ದಾಗ ನಂಗೆ ತಿಳಿಯದಂತೆ ನಾನು ಕುಣಿಯೋದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಅಷ್ಟಕ್ಕೂ ನಿನ್ನ ಬಗ್ಗೆಯೇ ಇಷ್ಟೊಂದು ಒಲವು ಯಾಕೆಂದು ಬಹಳಷ್ಟು ಸಾರಿ ಯೋಚನೆ ಮಾಡಿದ್ರೂ ಅದಕ್ಕೆ ಉತ್ತರ ಸಿಗುತ್ತಿಲ್ಲ. ಇದಿಷ್ಟೂ ಅಲ್ದೇನೆ ಬೆಳಿಗ್ಗೆ ಏಳುವ ಹೊತ್ತಿಗೆ ಹಾಗೆಯೇ ಸುಮ್ಮನೆ ಒಂದ್ಸಾರಿ ನಿನ್ನನ್ನು ಮತ್ತು ನಿನ್ನ ಮುದ್ದು ಮೊಗವನ್ನು ನೆನಪಿಸ್ಕೊಂಡು ಬೇಡ ಅಂದ್ರೂನೂ ಹಾಗೇ ಸುಮ್ನೆ ಒಂದ್ಸಾರಿ ನಗುವಾಗ 'ಏನು ಮಹಾಶಯರು ಬೆಳಿಗ್ಗೇನೇ ಫುಲ್ ಖುಷ್ ಆಗಿರೋ ಹಾಗಿದೆ, ಏನ್ ಕಾರಣ?' ಅಂತ ಅಮ್ಮ ಕೇಳೋ ರೆಗ್ಯೂಲರ್ ಪ್ರಶ್ನೆಗೆ 'ಏನಿಲ್ಲಾ ಮಾ, ಹಾಗೇ ಸುಮ್ನೆ' ಅಂತ ಉತ್ತರಿಸುವುದರೊಂದಿಗೆ ಆರಂಭವಾದ್ರೆ, ರಾತ್ರಿ ಊಟ ಮಾಡಿ ಮಲಗುವಾಗ ನಿನಗೆ ಗುಡ್ ನೈಟ್ ಹೇಳೋ ತನಕಾನೂ ನೀನು ನನ್ನ ಮನಸ್ಸಲ್ಲಿ ಆಗಾಗ ಬರ್ತಾ, ಹೋಗ್ತಾ ಇರ್ತೀಯ. ಇಷ್ಟೇ ಆದ್ರೆ ಪರವಾಗಿಲ್ಲ ರಾತ್ರಿ ಮಲ್ಕೊಂಡಾಗ ನನ್ನ ಕಣ್ಣು ಕಾಣುವಂತಹ ಕನಸಲ್ಲೂ ಸಹ ನೀನೇ. ಇದಕ್ಕೆ ಏನನ್ನೋಣ? ಯೆಸ್, ಐ ಆ್ಯಮ್ ಇನ್ ಲವ್ ವಿತ್ ಯು ಕನ್ನಡದಲ್ಲಿ ಹೇಳೋದಾದ್ರೆ 'ನಾನು ನಿನ್ನನ್ನು ಪ್ರೀತಿಸ್ತಾ ಇದೀನಿ'. ಇದು ನನ್ನ ಮನಸ್ಸಿಗೆ, ಕನಸ್ಸಿಗೆ ಒಟ್ಟಾರೆಯಾಗಿ ನಂಗೆ ಆಗ್ತಿರೋ ಹೊಸ ಅನುಭವ. ಇಷ್ಟು ದಿನ ಅವ್ರಿವ್ರು ಹೇಳೋದನ್ನ ಕೇಳಿದ್ದೆ. ಆದರೆ ಈಗ ಖುದ್ದಾಗಿ ನಾನೇ ಅನುಭವಿಸ್ತಾ ಇದೀನಿ. ಇವೆಲ್ಲ ನಂಗೆ ಫಸ್ಟ್ ಟೈಮ್. ಕಾರಣ ಯಾವತ್ತೂ ಯವುದೇ ಹುಡುಗೀನ (ನಿನ್ನ ಬಿಟ್ರು) ನೋಡ್ದೋನೆ ಅಲ್ಲ ಅಂತ ಹೇಳಿದ್ರೆ ಸ್ವಲ್ಪ ಅತಿಯಾದ್ರೂ ಸಹ ನಾನು ನಿನ್ನನ್ನು ಇಷ್ಟ ಪಡುವಷ್ಟೇ ನಿಜ. ಇವೆಲ್ಲ ರೋಮಾಂಚನಗಳನ್ನ ಅನುಭವಿಸ್ತಾ ಈ ಸ್ವೀಟ್ ಪ್ರೊಪೊಸಲ್‌ನ ನಿನ್ನ ಮುಂದೆ ಇಡ್ತಾ ಇದೀನಿ.
ನಂಗೆ ಜೀವನದಲ್ಲಿ ಏನಾದ್ರೂ ಸಾಧಿಸಬೇಕು ಅನ್ನೋ ಛಲ ಇದೆ. ಸಮಾಜ ಗುರುತಿಸೋ ಥರ ಬದುಕಬೇಕು ಅನ್ನೋ ಆಸೆಯ ಜೊತೆಗೆ ನಿನ್ನ ಚೆನ್ನಾಗಿ ನೋಡ್ಕೋಬೇಕು. ಅನ್ನೋ ಕನಸು ಕೂಡಾ ಇದೆ. ಇವೆಲ್ಲದಕ್ಕೆ ಬೆನ್ನೆಲುಬಾಗಿ, ಸ್ಫೂರ್ತಿಯಾಗಿ ನನ್ನ ಜೊತೆಯಲ್ಲಿ ನೀನಿದ್ರೆ ಇನ್ನೂ ಸೊಗಸು.
ಆದ್ದರಿಂದ ನಾನಂತೂ ನಿರ್ಧರಿಸಿ ಆಗಿದೆ, ಮದುವೆ ಅನ್ನೋ ಬಸ್ ಹತ್ತಿ ಜೀವನ ಅನ್ನೋ ಜರ್ನಿ ಮಾಡೋದಾದ್ರೆ ನಿನ್ನ ಜೊತೇನೇ ಅಂತ. ಹಾಗೇ ಇನ್ನೊಂದು ವಿಷ್ಯ ನೀನು ಒಪ್ಕೊಳ್ದೆ ಹೋದ್ರೆ ನಾನು ಬದ್ಕೋದೇ ಇಲ್ಲ ಅಂತ ಏನಿಲ್ಲ. ಬದುಕ್ತೀನಿ. ಆದ್ರೆ ಜೀವನ ಸ್ವಲ್ಪ ಕಷ್ಟ ಆಗುತ್ತೆ ಅಷ್ಟೆ. ನಾನು ಭಗ್ನ ಪ್ರೇಮಿಯಾಗಿ ನೀನಿಲ್ದೆ ಇರೋ ಜೀವನದ ಆ ಕಷ್ಟಗಳನ್ನು ಎದುರಿಸೋಕೆ ನಂಗೆ ಇಷ್ಟ ಇಲ್ಲ. ಮೋರ್‌ಓವರ್ ನಾನು ಅದಕ್ಕೆ ತಯಾರಿಲ್ಲ. ಅದಕ್ಕಾಗಿ ಆದಷ್ಟು ಬೇಗ ನಿನ್ನ ನಿರ್ಧಾರ ತಿಳಿಸಿದರೆ ಒಳ್ಳೆಯದು. ಹೋಪ್ ಇಟ್ ವಿಲ್ ಬಿ ಪಾಸಿಟಿವ್!
ನೀನು ಒಪ್ಕೊಂಡ್ರೆ ನಿನ್ನವ.
= ಪ್ರೀತಿಯಿಂದ, ರಾಘವ