ಮಕರಂದ/ದೋಣಿ

ಜೊತೆ ಜೊತೆಯಲಿ

ಜೊತೆ ಜೊತೆಯಲಿ
ಪ್ರೇಮಿಗಳಿಬ್ಬರೂ ಪರಸ್ಪರ ಪ್ರಾಣದಷ್ಟು ಪ್ರೀತಿಸುತ್ತಿದ್ದರು. ಅಷ್ಟೇ ಅಲ್ಲದೆ ಹಲವಾರು ಕನಸುಗಳನ್ನ ಕೂಡಿಟ್ಟಿದ್ದರು. ಜೊತೆಗೆ ಇರುಳಿನ ಬಾನಂಗಳದಲ್ಲಿ ಚಂದಿರನ ಪಕ್ಕದ ಜೋಡಿ ಆಕಾಶ ದೀಪಗಳಿಗೆ ತಮ್ಮ ಹೆಸರಿಟ್ಟು ಖುಷಿಪಟ್ಟರು. ಆದರೆ ಅದೇಕೋ ಅವಳೊಂದು ದಿನ ಯಾವ ಕಾರಣವನ್ನೂ ಹೇಳದೆ, ಯಾವ ಸುಳಿವನ್ನೂ ನೀಡದೆ ಅವನಿಂದ ದೂರ ಹೋದಳು. ಈಗಲೂ ಅವಳ ನೆನಪು ಅತಿಯಾದಾಗಲೆಲ್ಲ ಇವನು ರಾತ್ರಿಯ ಹೊತ್ತು ಕತ್ತೆತ್ತಿ ಮುಗಿಲು ನೋಡುತ್ತಾನೆ. ಅಲ್ಲಿ ಚಂದಿರನ ಪಕ್ಕದ ಜೋಡಿ ಚುಕ್ಕಿಗಳು ನಾವೆಂದೂ ಬೇರೆಯಾಗೊಲ್ಲವೆಂದು, ಅವನನ್ನು ನೋಡಿ ಮಿಣುಕಿ ಮುಗುಳ್ನಗುತ್ತವೆ!!


ಜನ-ಮನ
ಆ ಊರಿನ ಮೇಲೆ ಮಳೆರಾಯ ಮುನಿಸಿಕೊಂಡಿದ್ದ. ಬರಗಾಲವು ಕೇಕೆ ಹಾಕಿ ನರ್ತಿಸುತ್ತಿತ್ತು. ಮಳೆ-ಬೆಳೆ ಕಾಣದೆ ಊರ ಜನ ಕಂಗಾಲಾಗಿದ್ದರು. ಊರಿಗೆ ಈ ಸ್ಥಿತಿ-ಗತಿ ಬರಲು ಊರ ದೇವತೆಯ ಮುನಿಸೇ ಕಾರಣ. ಅವಳ ಉತ್ಸವ ಮಾಡಿದರೆ, ದೇವತೆಯು ಪ್ರಸನ್ನಳಾಗಿ ಮಳೆ ತರಿಸುವಳೆಂದು ಆ ಊರಿನ ಹಿರಿ ಜೀವವೊಂದು ಲೊಚಗುಟ್ಟಿತು. ಅಂತೆಯೇ ಊರ ಜನರೆಲ್ಲರೂ ಸೇರಿ ಒಂದಿನ ಊರ ದೇವತೆಯ ಉತ್ಸವವನ್ನು ಹೊರಡಿಸಿಯೇಬಿಟ್ಟರು. ಉತ್ಸವ ಹೊರಟ ಸ್ವಲ್ಪ ಹೊತ್ತಿಗೆ ಮಿಂಚು, ಗುಡುಗು ಜಡಿಮಳೆ ಶುರುವಾಯಿತು. 'ಥೂ ಇದೆಂತಾ ಮಳೆಯಪ್ಪಾ? ದೇವತೆಯ ಉತ್ಸವ ಮುಗಿದು ಮೂರ್ತಿಯು ಗುಡಿದುಂಬಿದ ಮೇಲೆ ಸುರಿದಿದ್ದರೆ ಯಾವೂರೂ ಹಾಳಾಗುತ್ತಿರಲಿಲ್ಲ' ಎಂದು ಊರ ಮಂದಿ ಮಳೆಯನ್ನು ಶಪಿಸಿದರು.
 
ರಾಮ ಲಕ್ಷ್ಮಣ
ಅಣ್ಣ ತಮ್ಮ ಇಬ್ಬರೂ ರಾಮ ಲಕ್ಷ್ಮಣರಂತಿದ್ದರು. ಇಬ್ಬರೂ ಬೆಳೆದು ದೊಡ್ಡವರಾಗಿ ಈಗ ರಾಮ- ರಾವಣನಂತಾಗಿದ್ದಾರೆ!

ರಕ್ತ ಸಂ-ಬಂಧ

ಆ ಊರ ಗೌಡ ತನ್ನದೇ ಊರಿನ ಮಂದಾಕಿನಿ ಎಂಬ ಹೆಂಗಸಿನೊಂದಿಗೆ ಅನೈತಿಕ ಸಂಬಂಧವನ್ನಿರಿಸಿಕೊಂಡಿದ್ದ. ಈ ವಿಷಯ ಇಡೀ ಊರಿಗೆ ಗೊತ್ತಿದ್ದರೂ ಯಾರೊಬ್ಬರೂ ಇದರ ಬಗ್ಗೆ ತುಟಿ ಬಿಚ್ಚುತ್ತಿರಲಿಲ್ಲ. ಎಷ್ಟೇ ಆದರೂ ಗೌಡನೆಂಬ ಗೌರವ. ಕಾಲಕ್ರಮೇಣ ಗೌಡ ಮತ್ತು ಮಂದಾಕಿನಿ ವಯಸ್ಸಾಗಿ ಸತ್ತುಹೋದರು. ಇದೀಗ, ಮಂದಾಕಿನಿಯ ಮಗಳು ಮಲ್ಲಿಕಾ ಗೌಡನ ಮಗನ ಮೋಹದ ತೆಕ್ಕೆಯಲ್ಲಿದ್ದಾಳೆ? ಈ ವಿಷಯದ ಕುರಿತೂ ಊರ ಜನ ತುಟಿ ಬಿಚ್ಚುವುದಿಲ್ಲ. ಎಷ್ಟೇ ಆಗಲಿ ಗೌಡರ ಮಗ ಎಂಬ ಗೌರವ!!

ಊರ ಮಂದಿ
ಅವನು ದಿನವೂ ಕುಡಿದು ಬಂದು ತನ್ನ ಹೆಂಡತಿಗೆ ಬಡಿಯುತ್ತಿದ್ದ. ಊರ ಜನರೆಲ್ಲ ಸುಮ್ಮನೇ ನಿಂತು ನೋಡುತ್ತಿದ್ದರು. ದಿನವೂ ಬಡಿಸಿಕೊಂಡು ಬೇಸತ್ತವಳು. ಒಂದು ದಿನ ಕುಡಿದು ಬಂದು ಬಡಿಯಲು ಮುಂದಾದವನಿಗೆ ತಿರುಗಿಸಿ ಹೊಡೆಯಲಾರಂಭಿಸಿದಳು. ಇದನ್ನು ನೋಡಿದ ಊರಜನ- ಗಂಡನಿಗೇ ಹೊಡೆಯೋದಾ? ಇವಳೆಂಥಾ ಗಯ್ಯಾಳಿ? ಎನ್ನುತ್ತಾ ಅವಳ ಬಗ್ಗೆಯೇ ಕೆಟ್ಟದಾಗಿ ಮಾತಾಡಿಕೊಂಡರು!

- ನವೀನ್ ಮಧುಗಿರಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ಅಧ್ಯಕ್ಷೆ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್