ಮನಸಿನ ವಿಳಾಸ ಗೊತ್ತಿದೆ, ಮನೆಯ ವಿಳಾಸ ಗೊತ್ತಿಲ್ಲ...
ಒಲವೇ, ಮಾಗಿಯ ಚಳಿ ಶುರುವಾಗಿದೆ. ನಿನ್ನ ನೆನಪುಗಳಿಗೆ ಹೊಸ ರೂಪ ಮರುಕಳಿಸಿದೆ. ನೆನಪುಗಳೆಲ್ಲ ಸವಿಗನಸಿಗೂ ಸ್ಪರ್ಧೆ ನೀಡುವ...
ಒಲವೇ,
ಮಾಗಿಯ ಚಳಿ ಶುರುವಾಗಿದೆ. ನಿನ್ನ ನೆನಪುಗಳಿಗೆ ಹೊಸ ರೂಪ ಮರುಕಳಿಸಿದೆ. ನೆನಪುಗಳೆಲ್ಲ ಸವಿಗನಸಿಗೂ ಸ್ಪರ್ಧೆ ನೀಡುವ, ಜೋಗದ ಜಲಪಾತ ಧುಮ್ಮಿಕ್ಕುವುದನ್ನೂ ನಾಚಿಸುವ ನನ್ನೆಲ್ಲಾ ಜೀವಮಾನಕೆ ತುಂಬಿಕೊಂಡ ಸುಂದರ ಸವಿಸವಿ...? ಗೊತ್ತಿಲ್ಲ. ವರ್ಣಿಸಲಾಗದ ಸುಮಧುರ ಕ್ಷಣಗಳ ಬುತ್ತಿ ಆ ನಮ್ಮ ಐದು ಮುಕ್ಕಾಲು ವರ್ಷಗಳಲ್ಲಿ ಕಳೆದ ಉಲ್ಲಾಸದ ದಿನಗಳು. ಈಗ ಒಂದು ಮಾತೂ ತಿಳಿಸದೆ ಎಲ್ಲಿ ಹೋದೆ ನೀನು? ಎಷ್ಟೆಲ್ಲಾ ನನಸಾಗಬೇಕಿದ್ದ ಕನಸಿನ ಮೂಟೆಗಳಿಗೆ ಬೆಂಕಿ ಇಡಲು ಕಾರಣವಾದರೂ ಏನಿರಬಹುದು ಎಂದು ಯೋಚಿಸಿ ಯೋಚಿಸಿ ಎಂಟು ವರ್ಷದ ಮೇಲೆ 12 ದಿನಗಳಾಗುತ್ತಿವೆ. ಯಾವ ನನ್ನ ಪ್ರಶ್ನೆಗಳಿಗೂ ಉತ್ತರವೇ ಸಿಗಲಿಲ್ಲ.
ಪ್ರಶ್ನೆ ಇದ್ದ ಮೇಲೆ ಉತ್ತರವೂ ಜೊತೆಜೊತೆಗೇ ಸಾಗುತ್ತದೆ ಎಂದು ನನ್ನ ಹೈಸ್ಕೂಲ್ ಮೇಷ್ಟ್ರು ಹೇಳಿದ ನೆನಪು... ಆದರೆ ನೀ ಬಿಟ್ಟು ಹೋದ ಪ್ರಶ್ನೆಗೆ ಬೂತಕನ್ನಡಿ ಹಾಕಿ ಹುಡುಕುತ್ತಿದ್ದರೂ ಉತ್ತರ ಇರಲಿ, ಸಮಾಧಾನವಾದರೂ ಸಿಕ್ಕಿಲ್ಲ. ಸಿಗೋದೂ ಇಲ್ಲ ಅಂತ ಅನಿಸಿದರೂ ಎದೆಯ ಯಾವುದೋ ಮೂಲೆಯಲ್ಲೊಂದು ಆಶಾಕಿರಣ ಹಾಗೇ ಉಳಿದುಕೊಂಡಿದೆ. ಬಹುಶಃ ನಾನಿರೋವರೆಗೂ ಹಾಗೇ ಇರುತ್ತದೆ. ಇರಲೇಬೇಕು... ಇಲ್ಲವಾದರೆ ನಾನು ಬದುಕುವುದಾದರೂ ಹೇಗೆ?
ನನ್ನೆಲ್ಲಾ ಕಾಯುವಿಕೆ, ಗೊಂದಲಗಳಿಗೆ ಅಕ್ಷರ ರೂಪ ನೀಡಿ ಮೇಲ್ ಮಾಡ್ಲಿಕ್ಕೆ ಟೈಪ್ ಮಾಡಿದೆ. ಇದನ್ನು ಯಾವ ಐಡಿಗೆ ಗಳಿಸಬೇಕು. ಗೊತ್ತಿಲ್ಲ. ನನ್ನ ಮನಸ್ಸಿಗೆ ನಿನ್ನ ಮನಸಿನ ವಿಳಾಸ ಮಾತ್ರ ಗೊತ್ತಿದೆ. ಮತ್ತೇನನ್ನೂ ತಿಳಿದುಕೊಳ್ಳಲು ಪ್ರಯತ್ನಿಸಲೇ ಇಲ್ಲ. ನೀನೇ ನನ್ನ ಹಗಲು ರಾತ್ರಿಗಳಾಗಿದ್ದಾಗ ಅದೆಲ್ಲ ಬೇಕು ಎಂದು ಅನ್ನಿಸಲೇ ಇಲ್ಲ. ಡ್ರಾಫ್ಟ್ನಲ್ಲಿ ಸೇವ್ ಮಾಡಿದ ಎಣಿಸಲಾಗದಷ್ಟು ನಿನಗಾಗಿ ಬರೆದು ಮೇಲ್ಗಳೊಡನೆ ಇದೂ ಸೇರಿಕೊಳ್ಳಲಿದೆ.
ನೀ ಬಿಟ್ಟು ಹೋದ ಅದೇ ನಿನ್ನ ಮನೆಯ ಹಿಂದಿನ ಕ್ರಾಸ್ನಲ್ಲಿ ಬೆಳಗ್ಗೆ ದಿನಾ ಆರು ಗಂಟೆಗೆ ಕಾಯುತ್ತಿರುವೆ. ಬಂದೇ ಬರುವೆ ಎಂಬ ನಂಬಿಕೆಯಿಂದ ಅದನ್ನು ನಿಜವಾಗಿಸಲಾದರೂ ಬರುವೆ ಎನಿಸಿ ಅದೆಷ್ಟೋ ದಿನಗಳು ಕಳೆದಿವೆ. ನಂಬಿಕೆ ಮಾತ್ರ ಕೊನೆಯಾಗಿಲ್ಲ. ಕೊನೆಯಾಗುವುದೂ ಇಲ್ಲ. ಮೊದಲ ತೊದಲ ಪ್ರೀತಿಯ ಪುಟಗಳ ಮಧ್ಯೆ ನವಿಲುಗರಿಯ ಇಟ್ಟು ಹೋದ ಸಖಿಯೇ, ಅದು ಮರಿ ಹಾಕಿದೆಯಾ ಎಂದು ತಿಳಿದುಕೊಳ್ಳಲಾದರೂ ಮತ್ತೊಮ್ಮೆ ಹೆಜ್ಜೆ ಇಡು ನನ್ನ ಮನದ ತಿರುವುಗಳಿಗೆ. ಆಗ ತಿಳಿಯುವುದು ನನ್ನೊಡಲ ಕಡಲ ಭೋರ್ಗರೆತ ಅದು ಹೇಗೆ ಇಷ್ಟು ದಿನ ನೀನಿಲ್ಲದೆ ಕಳೆಯಿತೆಂದು.
ಕಾಯುವೆ, ಕಾಯುತಾ ಇರುವೆ. ಬದುಕಿನ ಕೊನೆಯ ಪುಟಗಳಲ್ಲಿ ನಿನ್ನ ಬೆಳ್ಳಿ ಕೂದಲು ನನ್ನ ನೆರಿಗೆ ತುಂಬಿದ ಕೆನ್ನೆಗಳ ಚುಂಬಿಸುವವರೆಗೂ.
ನಿನ್ನವ
-ರಾಘವ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.