ಸ್ವಲ್ಪ ಮುಂದಕ್ಕೆ ಕಿವಿಗೊಟ್ಟರೆ-
'ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೆಗಾಕವ್ಳೆ ವೈಪು"
ತುಸು ಹಿಂದಕ್ಕೆ ಗಮನ ಹರಿಸಿದರೆ-
"ನೀ ಅಮೃತಧಾರೆ
ಕೋಟಿ ಜನುಮದ ಜೊತೆಗಾತಿ"
ಎಡಕ್ಕೆ-
"ಚಿಕ್ನಿ ಚಮೇಲಿ ಚುಪ್ಕೆ ಅಖೇಲಿ"
ಬಲಕ್ಕೆ-
"ಚಿತ್ರಾನ್ನ ಚಿತ್ರಾನ್ನ
ಚಿತ್ರ ಚಿತ್ರ ಚಿತ್ರಾನ್ನ"
ಕ್ಷಮಿಸಿ, ಇವು ಯಾವುದೇ ಅಂತಾಕ್ಷರಿ ಸ್ಪರ್ಧೆಯಲ್ಲಿ ಕೇಳಿಬಂದ ಗೀತೆಗಳಲ್ಲ. ಬದಲಾಗಿ ಬೆಳಗ್ಗೆಯಾದರೆ ಹಳ್ಳಿ ಹುಡುಗರನ್ನು ಕಾಲೇಜಿಗೆ ಕರೆದೊಯ್ಯಲೆಂದೇ ಇರುವ ಕಾಲೇಜು ಬಸ್ಸಿನಲ್ಲಿ ಕೇಳಿ ಬರುವ ಕಾಲೇಜು ಹುಡುಗರ ಮೊಬೈಲ್ಗಳ ಕಲರವವಿದು.
ಗಾಂಧೀಜಿ ತಮಗಾಗಿಯೇ ಸ್ವಾತಂತ್ರ್ಯ ನೀಡಿದ್ದಾರೆ ಎನ್ನುವ ರೀತಿಯಲ್ಲಿ ಯಾರ ಲಂಗು ಲಗಾಮು ಇಲ್ಲದೇ ಮೊಬೈಲಿನ ಆ ಕರ್ಕಶ ಧ್ವನಿ ಹೊರಡಿಸುವ ಇವರು ಕಂಡಕ್ಟರ್ ಬೈಗುಳಕ್ಕೆ, ಹುಡುಗಿಯರ ಕಣ್ ಸನ್ನೆಯ ಕೋಪಕ್ಕೆ ಸೊಪ್ಪು ಹಾಕುವವರಲ್ಲ...
ಹಾಗಂತ ಆ ನಮ್ಮ ಬಸ್ಸಿನಲ್ಲಿ ಬರೀ ತಲೆ ಚಿಟ್ಟು ಹಿಡಿಯುವ ಹಾಡುಗಳು ಮಾತ್ರ ಕೇಳಿ ಬರುವುದಿಲ್ಲ. ಅದೊಂದು ಎಲ್ಲ ತರಹದ ಕಲೆಗಳ ಸಂಗಮ ಸ್ಥಳ. ಒಂದು ಗೆಳೆಯರ ಗುಂಪು ಹಾಡು ಕೇಳುತ್ತ ಕುಳಿತರೆ, ಮತ್ತೊಂದರದು ಬರಿ ಹರಟೆ, ಹಾಸ್ಯ. ಇನ್ನೊಂದು ಹುಡುಗಿಯರತ್ತ ಕಣ್ಣು ಹಾಯಿಸುತ್ತಾ ರೇಗಿಸುತ್ತಾ ಮಜಾ (ಅವರ ಪ್ರಕಾರ) ತೆಗೆದುಕೊಳ್ಳುವುದರಲ್ಲಿ ಬ್ಯುಜಿ. ಮೊಗದೊಂದು ಗುಂಪಿನಲ್ಲಿ ಆ ಸಿಲೆಬಸ್ ಓದಿಲ್ಲ.
ಅಸೈನ್ಮೆಂಟ್ ಬರೆದಿಲ್ಲ ಅನ್ನೊ ಕಳವಳ. ಇನ್ನು ಫುಟ್ ಬೋರ್ಡ್ನಲ್ಲಿ ನಿಂತು ಸೈಡ್ನಲ್ಲಿ ವಾಹನಗಳು ಬಂದರೆ ಒಟ್ಟಾಗಿ ಹೋ ಹೋ ಎಂದು ಅರಚುವ ಹುಡುಗರ ಕಥೆಯಂತೂ ಹೇಳಲು ಹೊರಟರೆ ಧಾರಾವಾಹಿಯೇ ಆಗುತ್ತದೆ.
ಇಂಥ ಜೋರು ಗದ್ದಲದಲ್ಲೂ ಅಲ್ಲೊಬ್ಬ ಇಲ್ಲೊಬ್ಬ ಮಾತ್ರ ಓದುವದರಲ್ಲಿ ತೊಡಗಿಕೊಂಡಿರುತ್ತಾನೆ. ಆದರೆ ಗಂಡ- ಹೆಂಡತಿ ಜಗಳದ ನಡುವೆ ಕೂಸು ಬಡವಾಯಿತು ಅನ್ನೋ ಹಾಗೆ. ಈ ಹುಡುಗರ ಗಲಾಟೆಯಲ್ಲಿ ನರಳೋದು ಮಾತ್ರ ಆ ಬಸ್ಸಿನ ಕಂಡಕ್ಟರ್...
ಒಟ್ಟಿನಲ್ಲಿ ಹೇಳುವುದಾದರೆ ಕಾಲೇಜು ಬಸ್ಸೆಂಬ ಆ ಲೋಕದಲ್ಲಿ ಅಪೂರ್ವ ಸ್ನೇಹವಿದೆ. ನವಿರಾದ ಹಾಸ್ಯವಿದೆ. ಮುಗ್ಧ ಎನಿಸುವ ಪ್ರೀತಿಯಿದೆ. ಭವಿಷ್ಯದ ಬಗೆಗಿನ ದೊಡ್ಡ ಕನಸುಗಳ ಪ್ರಯಾಣವಿದೆ. ವಿದ್ಯಾರ್ಥಿ ಜೀವನದ ಸಾರ್ಥಕ ಕ್ಷಣಗಳ ಅನಾವರಣವಿದೆ. ಇಂಥ ಕಾರಣಗಳಿಂದಲೇ ವಿದ್ಯಾರ್ಥಿ ಜೀವನವನ್ನು ಕೊನೆತನಕ ನೆನಪಿಟ್ಟುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುವ ಕಾಲೇಜು ಬಸ್ಸಿಗೆ ಥ್ಯಾಂಕ್ಸ್ ಹೇಳದಿದ್ದರೆ ಹೇಗೆ?
- ಬಿ. ಸೋಮಶೇಖರ್