ಖಗೋಲದ ವಿಸ್ಮಯವಾಗಿ ಸಿಡಿದ ಉಂಡೆ
ಕೆಂಡವಾಗಿದ್ದದ್ದು- ದಿನಗಳೆದಂತೆ ತಣ್ಣಗಾಗಿ
ಈ ಭೂಮಿಯಾಗಿ- ತದನಂತರದಲ್ಲಿ ಅಲ್ಲಲ್ಲಿ
ಬೆಟ್ಟ-ಗುಡ್ಡಗಳು, ಹೊಳೆ, ಹಳ್ಳ, ಹೊಂಡಗಳು
ಬಗೆ ಬಗೆಯ ಸಸ್ಯ ಸಂಕುಲದ ವೈಭವ
ಸವಿಯುವುದಕ್ಕೆ ಸಹಸ್ರಾರು ಪ್ರಾಣಿ- ಪಕ್ಷಿಗಳು
ಮೇಲೆ ಮಾನವಾವತಾರ ತನ್ನಷ್ಟಕ್ಕೆ ತಾನೆ
ಬಿದ್ದುಕೊಂಡಿದೆ ಭೂಮಿ.
ಸಮೃದ್ಧಿಯ ಕಂಡು ಹಿರಿಹಿರಿ ಹಿಗ್ಗಿ
ಎಗ್ಗಿಲ್ಲದೆ ನಾಡು ಕಟ್ಟುವ ಗಡಿಬಿಡಿಯಲ್ಲಿ
ಹಳ್ಳಕ್ಕೆ ಒಡ್ಡು- ಹೊಂಡವೇ ಕೆರೆಯಾಗಿ
ಹಾದಿ-ಬೀದಿಗಳು, ಹೊಲ ಗದ್ದೆಗಳು
ಪ್ರಕೃತಿಗೊಂದು ವ್ಯಾಕರಣ ನಿರ್ಮಿಸಲು
ಒದ್ದಾಡುತ್ತ- ತಿದ್ದಿಕೊಳ್ಳುತ್ತಿದ್ದಾಗ ತನ್ನಿಂದ ತಾನೆ
ಸಂಸ್ಕೃತಿಯ ಪ್ರಾದುರ್ಭಾವದ ಪುಳಕದಲ್ಲಿ
ಬಿದ್ದುಕೊಂಡಿದೆ ಭೂಮಿ.
ಬುದ್ಧಿ ಬೆಳೆದಂತೆ- ದುರಾಸೆಯೂ ಬೆಳೆದು
ಬೆಳೆದದ್ದನ್ನೆಲ್ಲ ಕಡಿದು- ಅಗೆದಗೆದು
ಮೊಗೆದುಕೊಳ್ಳುವ ತವಕಕ್ಕೆ ತುತ್ತಾಗಿ
ವಿಜ್ಞಾನ- ತಂತ್ರಜ್ಞಾನದ ಲೆಕ್ಕಾಚಾರವೇ ತಪ್ಪಿ
ಕಂಡಕಂಡಲ್ಲೆಲ್ಲ ಕಾರ್ಖಾನೆಗಳು- ವಿಷಾನಿಲ
ನೀರಿಗೂ ತತ್ವಾರವಾಗುತ್ತ, ಬರಡಾಗುತ್ತ
ನಿಸರ್ಗದ ಸಿಟ್ಟು ಮುಗಿಲು ಮುಟ್ಟುತ್ತಿದ್ದರೂ
ಹಣೆಬರಹಕ್ಕೆ ಹೊಣೆ ಯಾರೆಂದು ತೆಪ್ಪಗೆ
ಬಿದ್ದುಕೊಂಡಿದೆ ಭೂಮಿ.
ಇಂತಿಪ್ಪ ಭೂಮಿಯನ್ನೇ ಬಿದ್ದು ಬಿದ್ದು
ಕೊಂಡು- ಕೊಂಡದ್ದೆಂಬ ಗರ್ವದಲ್ಲಿ
ಬೇಕಾಬಿಟ್ಟಿಯಾಗಿ ಒಡೆಯುತ್ತ- ಕಟ್ಟುತ್ತ
ಕಾಂಕ್ರೀಟ್ ಕಾಡಾಗಿಸುತ್ತ ನಡೆದಂತೆ
ಬಿದ್ದುಕೊಂಡ ಭೂಮಿ ತಾಳಲಾರದ ಉರಿಯಲ್ಲಿ
ಮತ್ತೆ ಕೆಂಡದುಂಡೆಯಾಗಿ ಸ್ಫೋಟಿಸಿದರೆ?
ಯೋಚಿಸಲು ಪುರುಸೊತ್ತಿಲ್ಲ. ಸದ್ಯಕ್ಕೆ ಹೇಗೂ
ಬಿದ್ದುಕೊಂಡಿದೆ ಭೂಮಿ.
- ರವೀಂದ್ರ ಭಟ್ಟ ಕುಳಿಬೀಡು