ಮಕ್ಕಳ ಸಾಹಿತಿ ಜಿ.ಪಿ. ರಾಜರತ್ನಂ ಅವರ ಚಳಿಗಾಲದ ಬಿಸಿ ಕವಿತೆ 'ಮಡಿಕೇರಿಯಲ್ಲಿ ಮಂಜು' ಕೇಳದವರು ವಿರಳ. ಇದೂ ಈಗ ಅಲ್ಲಿ ಮಂಜಿನ ಸಮಯ. ಜ.7, 8 ಮತ್ತು 9 ರಂದು ಅಲ್ಲಿಯೇ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ಅಲ್ಲಿಗೆ ಹೋದರೆ ಮಕ್ಕಳಿಗೆ ಶೀತವಾದರೆ ಎಂಬ ಭಯ ಬೇಡ. ಹಾಗೇನಾದರೂ ಆದರೆ, ಅಲ್ಲಿ 'ಮಕ್ಕಳ ಡಾಕ್ಟರ್' ಇರುತ್ತಾರೆ. ನಾ. ಡಿಸೋಜ! ಸಮ್ಮೇಳನಾಧ್ಯಕ್ಷರ ಸ್ಥಾನದಲ್ಲಿ ಕುಳಿತು ಮಗುವಿನಂತೆ ನಗುತ್ತಿರುತ್ತಾರೆ.
ಕಪ್ಪು ಕೂದಲು, ಬಿಳಿ ಮೀಸೆ, ರೌಂಡು ಕನ್ನಡಕ, ಉದ್ದ ಮೂಗು, ಬಿಳಿ ಶರ್ಟು, ಮಾಮೂಲಿ ಪ್ಯಾಂಟು, ನೈಸುಮುಖ, ಮುದ್ದು ನಗು, ಲಕ್ಷಣದ ಮಗು ಮನಸಿನ ಡಾ. 'ನಾಡಿ'ಯನ್ನು ನಾವೆಂದೂ ಮರೆಯುವುದಿಲ್ಲ.
ಪ್ರತಿ ಪಾಕ್ಷಿಕದ ಶನಿವಾರ ಬಂತೆಂದರೆ ಸಾಕು, 'ಬಾಲ ಮಂಗಳ' ಪತ್ರಿಕೆಗೆ ಕಾದು ಕೂರುತ್ತಿದ್ದ ನಮಗೆ ಡಿಂಗ, ಲಂಬೋದರ ಚಿತ್ರಕತೆಗಳ ಜೊತೆಗೆ ನಾ. ಡಿಸೋಜರ ಸಣ್ಣ ಕತೆಗಳೂ ಮುದ ನೀಡುತ್ತಿದ್ದವು. ಇವರೊಟ್ಟಿಗೆ ಪ. ರಾಮಕೃಷ್ಣಶಾಸ್ತ್ರಿ 'ನಾಡಿ' ಕತೆಗಳಿಗೆ ಪೈಪೋಟಿ ನೀಡುತ್ತಿದ್ದರು. ನಾಡಿ- ಶಾಸ್ತ್ರಿ ಕತೆಗಳು ಇಲ್ಲವೆಂದರೆ ಬಾಲ ಮಂಗಳಕ್ಕೇನೋ ಬಡತನವೆಂದು ಭಾಸವಾಗುತ್ತಿತ್ತು. ಅಂಥ ಒಡಲಾಳದ ಭಾವುಕತೆಯನ್ನು ನಿರ್ಮಿಸಿದವರು ನಾ. ಡಿಸೋಜ.
'ಬಾಲಮಂಗಳ'ದಲ್ಲಿ 16-4-97ರಿಂದ 1-9-97ರ ವರೆಗೆ 10 ಕಂತುಗಳಲ್ಲಿ ಪ್ರಕಟವಾಗಿ ಹೊಸ ಸಂಚಲನ ಸೃಷ್ಟಿಸಿದ 'ಬೆಟ್ಟದ ಪುರದ ದಿಟ್ಟರು' ಎಂಬ ಮಕ್ಕಳ ಕಿರು ಕಾದಂಬರಿ ಕೋಡ್ಲು ರಾಮಕೃಷ್ಣರ ನಿರ್ದೇಶನದಲ್ಲಿ 'ಬೆಟ್ಟದಪುರದ ದಿಟ್ಟ ಮಕ್ಕಳು' ಚಿತ್ರವಾಯಿತು. ನವ್ಯೋತ್ತರ ಮಕ್ಕಳ ಸಾಹಿತ್ಯದ ನವೀನ ದೃಷ್ಟಿಕೋನದ ಚಿಂತಕರಾದ ನಾಡಿ, ಈ ಕಾದಂಬರಿಯ ಮುನ್ನುಡಿಯಲ್ಲಿ ಹೀಗನ್ನುತ್ತಾರೆ; 'ಹಿರಿಯರಾದವರು ಹಣದಾಸೆಗೆ, ಮತ್ತೊಂದರ ಆಸೆಗೆ ತಾವು ಬದುಕಿದ ನೆಲವನ್ನೇ ನಾಶಮಾಡ ಹೊರಟಾಗ ಮಕ್ಕಳು ಮುಂದಾಗಿ ನಿಂತು ಅದನ್ನು ಉಳಿಸಿಕೊಳ್ಳುತ್ತಾರೆ. ಇದು ನಮ್ಮ ಸುತ್ತ ನಡೆಯುತ್ತಿರುವ ಎಲ್ಲ ಅನಾಹುತಗಳಿಗೆ ಹಿರಿಯರು ಅನ್ನಿಸಿಕೊಂಡವರೇ ಕಾರಣರಾಗುತ್ತಿರುವಾಗ ಈ ಅನಾಹುತವನ್ನು ನಮ್ಮ ಮಕ್ಕಳು ಅರ್ಥಮಾಡಿಕೊಂಡು ತಡೆಯಬೇಕು ಎಂಬ ಆಶಯ ಈ ಕತೆಯ ಹಿಂದಿದೆ'.
'ಆನೆ ಬಂತೊಂದಾನೆ', 'ವಿನು ಸುನ್ನಿ ಗೆಳೆಯರು', 'ಆನೆ ಹುಡುಗ ಅಬ್ದುಲ್ಲಾ', 'ಕಾಡಾನೆಯ ಕೊಲೆ', 'ನೇತ್ರಾಣಿ ಗುಡ್ಡಕ್ಕೆ ಯಾತ್ರೆ' ಮುಂತಾದ ಮಕ್ಕಳ ಸಾಹಿತ್ಯ ಕೃತಿಗಳು ಪರಿಸರದ ಸುತ್ತ ಗಸ್ತು ಹೊಡೆಯುತ್ತವೆ. 'ಗೆಳೆಯರ ಬಳಗಕ್ಕೆ ಜೈ' ಎಂಬ ರಚನೆ ರೇಡಿಯೋ ನಾಟಕವಾಗಿಯೂ ಚಿಣ್ಣರ ಮನಗೆದ್ದಿತು.
'ಭೂತ', 'ಮುಂದೇನು' ಎಂಬ ಎರಡು ಮಕ್ಕಳ ನಾಟಕಗಳು 1969ರಲ್ಲಿ ಶಿವಮೊಗ್ಗದ ಕಾರ್ಗಲ್ಲಿನ ಎನ್‌ಟಿಎಂ ಶಾಲಾ ವಿದ್ಯಾರ್ಥಿಗಳಿಂದ ಪ್ರಥಮ ಪ್ರಯೋಗಕ್ಕೊಳಪಟ್ಟ ರಂಗಚಿತ್ರಗಳು. 'ಭೂತ'ದಲ್ಲಿ ಶಶಿ ಎಂಬ ಚೂಟಿ ಹುಡುಗಿ ಹಾಸ್ಟೆಲಿನ ವಾರ್ಡನ್ ನರ್ಮದಾ, ಉಮಾ, ಸುಶೀಲ, ಕೆಲಸದಾಕೆ ಕಾಳಮ್ಮರಿಗೆ ಭೂತದಂತೆ ಕಾಡಿ ಕೊನೆಗೆ ಸಿಕ್ಕಿ ಬೀಳುತ್ತಾಳೆ. ಅಪ್ಪ-ಅಮ್ಮನ ಪ್ರೀತಿಯಿಂದ ವಂಚಿತಳಾದವಳು ಹಾಸ್ಟೆಲಿನ ಊಟದ ಸಲುವಾಗಿ ಭೂತದಂತೆ ಕಳ್ಳತನದಲ್ಲಿ ತೊಡಗುತ್ತಾಳೆ. ಇದು ಇಂಗ್ಲಿಷ್ ಕೃತಿಯ ಕನ್ನಡ ರೂಪಾಂತರ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ 2011ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ ಪಡೆದಿರುವ ನಾಡಿ ಹಲವು ಗೌರವಗಳಿಗೆ ಪಾತ್ರರಾದವರು. ಕುವೆಂಪು ವಿವಿ, ಹಂಪಿ ಕನ್ನಡ ವಿವಿಯ ಸೆನೆಟ್ ಸದಸ್ಯರಾಗಿ ಪುಸ್ತಕ ಪ್ರಾಧಿಕಾರ, ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿಯೂ ಗುರುತಿಸಿಕೊಂಡವರು. ನಾಡಿ ಯಾವತ್ತೂ ಮಕ್ಕಳ ಪ್ರೀತಿಗೆ ಜಾತಿ ಪಾಠ ಹೇಳಿದವರಲ್ಲ. ಬದಲಿಗೆ ಮಕ್ಕಳಿಂದಲೇ ಜಾತಿವಾದಿ ಹಿರಿಯರಿಗೆ ನೀತಿ ಪಾಠ ಹೇಳಿಸಿದ ಅಮೂಲ್ಯ ಬರಹಗಾರ.
ಗಮನಿಸಿ... ಕನ್ನಡ ಸಾಹಿತ್ಯ ಲೋಕವನ್ನು ಅವಲೋಕಿಸಿದಾಗ ನಾಡಿಗೆ ಮಾನ್ಯತೆಯೇ ದೊರಕಿಲ್ಲ. ಈಗಲಾದರೂ ಅವರ ಸಾಹಿತ್ಯ ಕೃತಿಗಳು ವಿಮರ್ಶೆಗೊಳಗಾಗಬಹುದೆ? ಕಾದು ನೋಡಬೇಕು. ಹಾಗಂತ ಇದು ಪಿಎಚ್‌ಡಿ., ಎಂ.ಫಿಲ್. ಪದವಿಗಳಿಗಷ್ಟೆ ಸೀಮಿತವಾಗಿ ಬಿಡಬಾರದು. ನಾನು ಕುವೆಂಪು ವಿವಿಯಲ್ಲಿ ಸ್ನಾತಕೋತ್ತರ ಪದವಿಯಲ್ಲಿದ್ದಾಗ ಪ್ರಾಧ್ಯಾಪಕ ಡಾ. ರಂಗರಾಜ ವನದುರ್ಗ ಅವರು ಡಿಸೋಜರನ್ನು ಪರಿಚಯಿಸಿಕೊಟ್ಟರು. ನಾಡಿ ಆಗ ಚೆಲ್ಲಿದ ಆ ಒಂದು ಕಿರುನಗೆ, ನನ್ನ ಬಾಲ್ಯದ 'ಬಾಲ ಮಂಗಳ'ದ ಗುಬ್ಬಚ್ಚಿ ಗೆಳೆಯನನ್ನು ನೆನಪಿಸಿತ್ತು. ನಿಜ, ಈಗಲೂ ಅವರು ಮುದುಕಜ್ಜನಲ್ಲ; ಬೆಟ್ಟದ ಪುರದ ದಿಟ್ಟ ಹುಡುಗ.
- ಸಂಪತ್ ಬೆಟ್ಟಗೆರೆ