ಈ ವರ್ಷ ಎಷ್ಟು ಬೇಗ ಮುಗಿಯಿತಲ್ವಾ? ದಿನ ಕಳೆದದ್ದೇ ಗೊತ್ತಾಗಿಲ್ಲ ಎಂಬ ಉದ್ಗಾರದೊಂದಿಗೆ ಕ್ಯಾಲೆಂಡರ್ ವರ್ಷವೊಂದು ಮುಗಿದು ಹೋಗುತ್ತಿದೆ. ನಾಳೆಯ ಕನಸುಗಳನ್ನು ನನಸು ಮಾಡುವ ಈ ನಡಿಗೆಯ ಪ್ರತಿಯೊಂದು ಹೆಜ್ಜೆಯಲ್ಲೂ ಹೊಸತನ ಅನುಭವಿಸಿದ ಸುಖ. ಕ್ಷಣಾರ್ಧದ ನೋವು ನಲಿವುಗಳ ಏರಿಳಿತದಲ್ಲಿ ಏದುಸಿರು ಬಿಡುತ್ತಾ ಮುನ್ನುಗ್ಗುತ್ತಿರುವಾಗ ಪ್ರತಿ ಉಸಿರಿನಲ್ಲೂ ನಾಳೆಯ ನಿರೀಕ್ಷೆ ಜೀವಂತವಾಗಿದೆ. ಈ ನಾಗಾಲೋಟದಲ್ಲಿ ಹಿಂತಿರುಗಿ ನೋಡಿದಾಗ ದಕ್ಕಿದ್ದೆಷ್ಟು? ಕಳೆದುಕೊಂಡದ್ದೆಷ್ಟು?
ಫೇಸ್ ಬುಕ್ಕಿನಲ್ಲಿ ಸ್ನೇಹಿತರ ಪಟ್ಟಿ ಬೆಳೆಯುತ್ತಲೇ ಇದೆ. ಲೈಕುಗಳು, ಕಾಮೆಂಟ್ಗಳ ಮಹಾಪೂರದಲ್ಲಿ ನಮ್ಮ 'ಸ್ಟೇಟಸ್' ಎತ್ತರಕ್ಕೇರಿದೆ. ಚುಮು ಚುಮು ಚಳಿಯಲ್ಲಿ ಬೆಳಗ್ಗೆ ಏಳುವಾಗ WhatsApp, ಎಸ್ಸೆಮ್ಮೆಸ್ಸ್ ಬೀಪ್ಗಳ ಕಲರವ. ಟ್ರೆಡ್ಮಿಲ್ನಲ್ಲಿ ಓಡುತ್ತಾ ಬೆವರು ಸುರಿಸಿ, 'ಡಯಟ್' ಮಂತ್ರದೊಂದಿಗೆ ಬೆಳಗ್ಗಿನ ಉಪಾಹಾರ ಮುಗಿಸಿದರೆ ಬೆಳಗ್ಗಿನ ಅರ್ಧ ಕೆಲಸ ಮುಗಿದಂತೆಯೇ. ಆಮೇಲೆ 'ಭಾಗ್ ಮಿಲ್ಖಾ ಭಾಗ್' ಎಂಬಂತೆ ಓಡಾಟದ ದಿನಚರಿ ಶುರುವಾಗಿ ಬಿಡುತ್ತದೆ. ಹಾಗೇ ಓಡಿಕೊಂಡು ಬಂದು ಬಸ್ಸ್ಟಾಪಿನಲ್ಲಿ ನಿಂತು ಸಮಯಕ್ಕೆ ಬಾರದ ಬಸ್ಸಿಗೆ ಬೈಯುತ್ತಾ, ನೂಕು ನುಗ್ಗಲಲ್ಲಿ ಹತ್ತಿ ಹೇಗೋ ಕಚೇರಿ ಸೇರುವ ತವಕ. ಬಸ್ಸಿನ ತಳ್ಳಾಟದಲ್ಲಿ ಹೈ ಹೀಲ್ಡ್ ಚಪ್ಪಲಿಯೆಡೆಯಲ್ಲಿ ಸಿಕ್ಕ ಕಾಲ್ಬೆರಳು, ಸೀನಿಯರ್ ಸಿಟಿಜನ್ ಸೀಟಲ್ಲಿ ಕುಳಿತು ನಿದ್ದೆ ಹೋದ ಯುವಕ, ಸೀಟಿಗಾಗಿ ಜಗಳವಾಡುವ ಜನರು...ನನಗ್ಯಾವುದರ ಪರಿವೆಯೇ ಇಲ್ಲ! ಯಾಕೆಂದರೆ ಎಫ್ಎಂನಲ್ಲಿ ಬ್ಯಾಕ್ ಟು ಬ್ಯಾಕ್ ಹಾಡುಗಳನ್ನು ಆಲಿಸುತ್ತಾ ಮೈ ಮರೆತಿದ್ದೇನೆ.
ಕಚೇರಿಗೆ ಬಂದು ಕೀಲಿಮಣೆ ಕುಟ್ಟುತ್ತಿರುವಾಗ ಕೆಲಸದ ಒತ್ತಡದಲ್ಲಿ ಇದ್ಯಾವುದರ ನೆನಪೂ ಇರುವುದಿಲ್ಲ. ಸುದ್ದಿಗಳ ನಡುವೆ ಕಳೆದುಹೋಗುವಾಗ ಸದ್ದಾಗಬಾರದೆಂಬಂತೆ ಮೊಬೈಲ್ ಸೈಲೆಂಟಾಗಿ ಮಲಗಿದೆ. ಲಿಂಕ್ಗಳನ್ನು ಕ್ಲಿಕ್ ಮಾಡುತ್ತಾ ಹೋದಂತೆ ಹೊಸತೊಂದು ಲೋಕವೇ ಅಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತಿದೆ. ನಾನು ಜಾಲಾಡುತ್ತಿದ್ದೇನೆ...ಹೊಸ ಹೊಸ ಸುದ್ದಿಗಾಗಿ..ಮತ್ತೊಂದು ಬ್ರೇಕಿಂಗ್ ನ್ಯೂಸ್ಗಾಗಿ.
ದಿನನಿತ್ಯದ ಕೆಲಸ ಮುಗಿಸಿ ಮನೆ ಸೇರುವ ಹೊತ್ತಿಗೆ ರಾತ್ರಿಯಾಗಿರುತ್ತದೆ. ಸುಸ್ತಾಗಿದ್ದರೂ ರಾತ್ರಿಯ ನೀರವತೆಯಲ್ಲಿ ನೆನಪುಗಳ ಸಂಚಾರ ಜಾಸ್ತಿಯೇ ಆಗಿರುತ್ತದೆ. ಹಾಗೆಯೇ ಮನಸ್ಸಿನ ಯೋಚನೆಗಳ ದಿಕ್ಕನ್ನೇ ಬದಲಾಯಿಸುವ ಈ ನಿಶಾ ಮೌನದಲ್ಲಿ ಆಕಾಶವನ್ನು ಧೇನಿಸುತ್ತಾ ಕುಳಿತಿದ್ದೇನೆ. ಈ ನಿಶ್ಶಬ್ಧವಾದ ವಾತಾವರಣದಲ್ಲಿ ಕಡಲಿನಷ್ಟೇ ಪ್ರೀತಿಹೊತ್ತು ಚಂದ್ರನಿಗಾಗಿ ಕಾಯುವಾಗ ನಕ್ಷತ್ರಗಳು ನನ್ನನ್ನೇ ದಿಟ್ಟಿಸುತ್ತಿವೆಯೇನೋ ಎಂಬಂತೆ ಅನಿಸಿಬಿಡುತ್ತದೆ. ಆದರೂ ಕಾಯುವಿಕೆಯನ್ನು ಕೈ ಬಿಟ್ಟಿಲ್ಲ. ಆ ಏಕಾಂತದ ಕ್ಷಣಗಳಲ್ಲಿ...
ಈ ಚಳಿಗಾಲದ ರಾತ್ರಿಗಳಲ್ಲಿ... ನೆನಪುಗಳ ಬೆಚ್ಚನೆಯ ಚಾದರ ಹೊದ್ದು ಮಲಗುವಾಗ ಮೊಬೈಲ್ನಲ್ಲಿ ಮತ್ತೆ ಮತ್ತೆ ಅದೇ ಹಾಡು ಪ್ಲೇ ಆಗುತ್ತಿದೆ.
'ಡಲ್ ನೇ ಲಗೀ ಹೈ ರಾತ್ ಕೊಯಿ ಬಾತ್ ಕೀಜಿಯೇ
ಬಡ್ನೇ ಲಗೀ ಹೈ ಬಾತ್ ಕೊಯಿ ಬಾತ್ ಕೀಜಿಯೇ ...'
- ರಶ್ಮಿ ಕಾಸರಗೋಡು