ಮಕರಂದ/ದೋಣಿ

ಒಂದರಿಂದ ಶೂನ್ಯದೆಡೆಗೆ...

ಬದುಕಿನ ಬಂಡಿ ಸಾಗುತ್ತಲೇ ಇದೆ. ಕಳೆದು ಹೋದ ದಿನಗಳ ಬಗ್ಗೆ ಹಿಂತಿರುಗಿ ನೋಡಿದಾಗ ಅಚ್ಚರಿಯಾಗುತ್ತಿದೆ.  ಜೀವನದ ಹಾಳೆಗಳ ನಡುವೆ ಕೆಲವೊಂದು ನೆನಪುಗಳು ಬುಕ್‌ಮಾರ್ಕ್‌ನಂತೆ ಅಲ್ಲಲ್ಲಿ ಕಾಣ ಸಿಗುತ್ತವೆ. ಹೊಸತೊಂದು ಪುಟ ತೆರೆಯುತ್ತಾ ಹೋದಂತೆ ಇನ್ನೇನೋ ಅಚ್ಚರಿಗಳು..ಕುತೂಹಲದ ಚಿತ್ರಗಳು...ನೋವು ನಲಿವುಗಳ ಕಾವ್ಯಗಳು. ಈ ಜೀವನದ ಹೋರಾಟದಲ್ಲಿ ನಾನು ಗಳಿಸಿದ್ದೇನು? ಕಳೆದುಕೊಂಡದ್ದೇನು? ಲಾಭ ನಷ್ಟಗಳ ಹಾವು ಏಣಿಯಾಟದಲ್ಲಿ ನಾನು...ನಾನು ಮಾತ್ರ ಒಂದು ಪಾತ್ರವಾಗಿಯೇ ಉಳಿದು ಬಿಟ್ಟೆ.
ಮನುಷ್ಯ ಹುಟ್ಟಿದಾಗ ಮೊದಲಿಗೆ ಕಲಿತದ್ದೇ ಅಳುವುದನ್ನು. ಆ ಕ್ರಿಯೆಯನ್ನು ನನಗೆ ಕಲಿಸಿದ್ದೇ ಹಸಿವು. ಕಾರಿರುಳಲ್ಲಿ ಸಿಕ್ಕಿಕೊಂಡಾಗಲೇ ನನಗೆ ಭಯದ ಅನುಭವವಾದದ್ದು. ನಾನು ಹೇಗಿದ್ದೇನೆ ಎಂಬುದನ್ನು ತೋರಿಸಿ ಕೊಟ್ಟಿದ್ದೇ ಈ ಹಗಲು. ಉಫ್!
ಅಮ್ಮ ಹೇಳ್ತಾರೆ...ನೀನು ಹುಟ್ಟಿದಾಗ ನಾನದೆಷ್ಟು ನೋವು ಅನುಭವಿಸಿದ್ದೆ! ಆ ವೇದನೆಯಲ್ಲೂ ನಾನು ನಕ್ಕಿದ್ದೆ. ನಾನು ಸೃಷ್ಟಿಕರ್ತಳು ಎನ್ನುವ ಸಂತೋಷ. ಹೆಣ್ತನ ಸಾಕಾರವಾದ ಆ ಘಳಿಗೆ...ಹೆಣ್ಣು ಮಗಳೊಬ್ಬಳು ನೋವಿನಲ್ಲೂ ಸಂತೋಷ ಕಾಣುವ ಸ್ಥಿತಿ..ಓಹ್, ಅದೆಂಥಾ ಅನುಭವ!
ಹಾಗಾದರೆ ಹೆಣ್ಣು ಅಂದರೆ ನೋವ ನುಂಗಿ ಬದುಕುವ ಜೀವ ಅಲ್ಲವೇನಮ್ಮಾ? ಎಂಬ ಪ್ರಶ್ನೆಗೆ ಅಮ್ಮನ ಕಣ್ಣೀರು ಉತ್ತರ ನೀಡಿತ್ತು.
ಅವಳು ನನ್ನನ್ನು ಮಡಿಲಲ್ಲಿ ಮಲಗಿಸಿ ಮುದ್ದಾಡುತ್ತಿದ್ದರೆ, ಅವಳ ಕಣ್ಣುಗಳು ಜೀವನದ ವ್ಯಥೆಯ ಕಥೆ ಹೇಳುತ್ತಿದ್ದವು.
ನನ್ನ ಅಮ್ಮ...ಆಕೆ ಮುಗ್ದೆ. ನಾನು ಬೆಳೆಯುತ್ತಾ ಕನಸುಗಳ ಮಹಲು ಕಟ್ಟುತ್ತಿದ್ದಂತೆ ಅವಳು ತನ್ನ ಕನಸುಗಳನ್ನು ಪಕ್ಕಕ್ಕಿಟ್ಟು  ನನ್ನ ಕನಸುಗಳಿಗೆ ಬಣ್ಣ ತುಂಬಿದವಳು.
ನಾನು ಹೊಟ್ಟೆ ತುಂಬ ಉಂಡು ನಕ್ಕಾಗ, ಅವಳು ಕಣ್ಣೀರು ಬೆರೆಸಿದ ಗಂಜಿ ನೀರು ಕುಡಿದು ಅರೆಹೊಟ್ಟೆಯಲ್ಲಿ ಮಲಗಿದವಳು. ಆ ನಿದ್ದೆಯಲ್ಲಿ ಅವಳಿಗೂ ನನ್ನಂತೆಯೇ ಸುಂದರ ಕನಸುಗಳು ಬಿದ್ದಿರಬಹುದಾ? ಅವಳ ಕನಸುಗಳ ಬಗ್ಗೆ ಆಕೆ ಎಂದೂ ನನ್ನಲ್ಲಿ ಹೇಳಿಲ್ಲ.
ಜೀವನದಲ್ಲಿ ನೋವುಂಡು ಮುಖದಲ್ಲಿ ನಗುಹೊತ್ತು ತಿರುಗುವ ನನ್ನಮ್ಮನಿಗೆ ನನ್ನ ಬಗ್ಗೆ ಅದೆಷ್ಟು ಕಾಳಜಿ. ನೀನು ಹೆಣ್ಣು ಮಗಳು...ಹುಷಾರಾಗಿರಬೇಕು ಎಂದು ಅಮ್ಮ ಆಗಾಗ ಹೇಳುತ್ತಿರುವುದರ ಅರ್ಥವಾದರೂ ಏನು?
ನಾನು 'ದೊಡ್ಡವಳಾದಾಗ' ಅಮ್ಮ ಸಂಭ್ರಮದಲ್ಲಿದ್ದರೂ ಅವಳ ಮುಖದಲ್ಲಿ ವಿಷಾದದ ಛಾಯೆ ಯಾಕಿತ್ತು?
ನಾನೆಲ್ಲೋ ಅವಳ ಕಣ್ಣಿನಿಂದ ದೂರ ಸರಿದರೆ ಸಾಕು... ಅವಳ ಮನಸ್ಸಲ್ಲಿ ತಳಮಳ...
ಹದಿಹರೆಯದ ಸುಂದರ ಸ್ವಪ್ನಗಳನ್ನು ಆಕೆಯಲ್ಲಿ ಹೇಳಿದಾಗ ಆಕೆ ಎಲ್ಲವನ್ನೂ ಆಲಿಸಿದ್ದಳು. ಆದರೆ ಅಪ್ಪನ ಬಗ್ಗೆ ಕೇಳಿದಾಗ ಅವಳ್ಯಾಕೆ ಮೌನವಾದಳು? ನನ್ನ ಸೃಷ್ಟಿಗೆ ಕಾರಣನಾದ ಅಪ್ಪ ಎನ್ನುವವನ ಮೇಲೆ ಅವಳಿಗ್ಯಾಕೆ ಅಷ್ಟೊಂದು ಕೋಪ? ನನ್ನ ಈ ಪ್ರಶ್ನೆಗೆ ಅವಳು ಆಗ ಉತ್ತರಿಸಲಿಲ್ಲ. ಈಗಲೂ ಉತ್ತರಿಸುವುದಿಲ್ಲ.
ಇವತ್ತು ನನ್ನ ಮದುವೆ. ನನ್ನ ಸರ್ವಸ್ವವಾಗಿರುವ ಅಮ್ಮನನ್ನು ಬಿಟ್ಟು ನಾನು ಹೋಗಲೇ ಬೇಕಾಗಿದೆ. ಅಮ್ಮ ಈಗ ಒಂಟಿ. ಕಣ್ಣೀರು ತುಂಬಿ ಅವಳು ನನ್ನನ್ನು ಬೀಳ್ಕೊಟ್ಟಾಗ ಯಾರೋ ಹೆಂಗಸರು ಪಿಸುಗುಟ್ಟಿದ್ದು ಕೇಳಿಸಿತು.
"ತನ್ನ ಮಗಳನ್ನು ಆಕೆ ಅದೆಷ್ಟು ಜೋಪಾನವಾಗಿ ನೋಡಿಕೊಂಡಳು. ಯಾವುದೇ ವೇಶ್ಯೆ ತನ್ನ ಮಗಳು ವೇಶ್ಯೆಯಾಗಬೇಕೆಂದು ಬಯಸುವುದಿಲ್ಲವಲ್ಲಾ?" ಇನ್ನೊಬ್ಬಾಕೆ ತನ್ನ ದನಿಗೂಡಿಸಿದಳು.
ಹಿಂತಿರುಗಿ ನೋಡಿದೆ. ಅಮ್ಮನ ಮುಖದಲ್ಲಿ ಮಂದಹಾಸವಿತ್ತು...ಏನನ್ನೋ ಸಾಧಿಸಿದ ಸಂಭ್ರಮವಿತ್ತು. ಅಮ್ಮ ನಗುತ್ತಿದ್ದಳು...ಕಣ್ಣೀರು ಒರೆಸಿಕೊಳ್ಳುತ್ತಾ ನಾನು ಮುಂದೆ ನಡೆದೆ.

- ರಶ್ಮಿ ಕಾಸರಗೋಡು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ