ಕಬ್ಬಿಗ ತೋಟ
ತರಂಗ ತರಂಗವಾಗಿ ಹರಿದು ಬಂತು
ನಿನ್ನಂತರಂಗದ ನಾದ
ಬೊಗಸೆಯಲ್ಲಿ ಬಗೆದೆ
ಸೋರಿಹೋಗುವ ಮುನ್ನ ಕುಡಿದೆ,
ನನ್ನ ಸ್ಮೃತಿಕೋಶಗಳಲ್ಲಿ ಬರೆದೇ ಬರೆದೆ
ಬರಿದಾಗದ ಒಡಲು ನಿನ್ನದು, ತೀರದ ದಾಹ ನನ್ನದು
ಬೊಗಸೆ ನೀರ ತೆಗೆದರೆ ಹೊಳೆ ಬತ್ತುವುದುಂಟೇ?
ಮತ್ತೆ ಮತ್ತೆ ತುಂಬುವ ಅಸಂಖ್ಯಾತ ಎಂಬಿಯಕೋಶಗಳು
ನಿನ್ನ ಹರವು ಅದರಪ್ಪ
ಬರಿಯ ತುಂಬುವ ಆಟ ಬಾಳಿಗೊಂದು ಬೆರಗು, ತಂತು
ಎಲ್ಲೆಲ್ಲಿಂದ ಎಲ್ಲಿವರೆಗೆ ಹಬ್ಬಿಹುದೋ ಬಲ್ಲವರಾರು?
ಸುಳಿ ಇಲ್ಲದಾ ಗುಪ್ತಗಾಮಿನಿಯ ಬರಿಯ ಸೆಳೆತ
ಮುಗಿವುದಂದೇ ನಾ ಪೂರ್ತಿ ಹೀರಿದಾ ಕ್ಷಣ
ಅಂದು ಮುಗಿವುದು ಕನಸು, ಭವಿಷ್ಯದ ಗುರಿ
ಅಂದೇ ಜೀವನ್ಮುಕ್ತಿ- ನಾ ನೀನಾದ ನಿನಾದದಲ್ಲಿ.
= ರೇಶ್ಮಾ ರಾವ್ ಸೊನ್ಲೆ