ಮಕರಂದ/ದೋಣಿ

ರಾಮ ಬಂದೇ ಬರುತ್ತಾನೆ!

ಗೋಧೂಳಿ ಸಮಯ... ಹೊಂಬಣ್ಣದ ಚಿತ್ತಾರ ಎಲೆಗಳ ಮೇಲೆ... ನೆಟ್ಟ ದೃಷ್ಟಿ ಅಲ್ಲೇ ನೆಟ್ಟು ನೋಡುತ್ತಿದ್ದೆ. ಹೊಂಬಣ್ಣದ ಸೂರ್ಯ ಬಿಂಬ ಕಾಣಕಾಣುತ್ತಲೇ ಮರೆಯಾಯಿತು. ಅರೆ... ಕಣ್ಣು ಮಂಜಾಗುತ್ತಿದೆ, ಅಲ್ಲ ಕತ್ತಲಾಯಿತೋ? ಹೀಗೇ ಕಳೆದ ದಿನಗಳೆಷ್ಟೋ... ಎಷ್ಟು ದಿನ ಕಾಯಲಿ? ಮಾತಂಗ ಮುನಿಗಳು ಹೇಳಿದ ಮಾತು ಸುಳ್ಳಾದೀತೇ? ಇಲ್ಲ, ಆಶ್ರಮದ ಒಂದೊಂದು ಗಿಡಮರಗಳಿಗೆ ಗೊತ್ತು, ಅರಳಿದ ಹೂಗಳಿಗೆ ಗೊತ್ತು, ಮಣ್ಣಾದ ಒಂದೊಂದು ಹಣ್ಣೆಲೆಗೆ ಗೊತ್ತು, ಚಿಗುರೆಲೆಗೆ ಗೊತ್ತು, ನಾನು ನೆಟ್ಟ ಮಲ್ಲಿಗೆ, ಜಾಜಿಗೆ ಗೊತ್ತು... ನಾನ್ಯಾರಿಗೆ ಕಾಯುತ್ತಿರುವೆನೆಂದು? ಮುನಿವರ್ಯರು ಹೇಳಿದ ಮಾತು ಇನ್ನೂ ಕಿವಿಯಲ್ಲಿ ಗುಂಯ್‌ಗುಟ್ಟುತ್ತಿದೆ.
ಮರಣಶಯ್ಯೆಯಲ್ಲಿ ಇದ್ದ ಮಾತಂಗ ಮುನಿಗಳು ಹೀಗೆ ಹೇಳಿದ್ದರು, 'ನೋಡು ತಾಯಿ, ರಾಮ ಭಕ್ತೆ, ನಿನ್ನ ತಪಸ್ಸು, ಶ್ರದ್ಧೆ, ಭಕ್ತಿಗೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ. ರಾಮ ಬಂದೇ ಬರುತ್ತಾನೆ. ನನ್ನ ಮಂತ್ರಶಕ್ತಿಯಿಂದ ಹೇಳುತ್ತಿರುವೆ. ಇದು ಎಂದಿಗೂ ಸುಳ್ಳಾಗುವುದಿಲ್ಲ. ನನ್ನ ಮರಣದ ನಂತರ ಧೃತಿಗೆಡಬೇಡ. ರಾಮ ಬರುವವರೆಗೆ ಇಲ್ಲೇ ಆಶ್ರಮವನ್ನು ನೋಡಿಕೊಂಡು ಧ್ಯಾನಿಸುತ್ತಿರು. ನಿನ್ನ ತಾಳ್ಮೆಗೆ, ಭಕ್ತಿಗೆ ಪ್ರತಿಫಲ ಸಿಗುವ ಕ್ಷಣಗಳು ಹೆಚ್ಚು ದೂರವಿಲ್ಲ'.
ನಾನಾದರೋ ಕೆಳವರ್ಗಕ್ಕೆ ಸೇರಿದವಳು, ಬೇಡನ ಮಗಳು. ಮೃಗಹಿಂಸೆ ನೋಡಲಾರದೆ ಪಿತೃತ್ಯಾಗ ಮಾಡಿ ಆಶ್ರಮ ಸೇರಿಕೊಂಡೆ. ಅಧ್ಯಾತ್ಮಕ್ಕೆ ತೊಡಗಿಸಿಕೊಂಡೆ. ರಾಮನೇ ನನ್ನ ದೇವರಾದ. ನನ್ನ ಭಕ್ತಿಯನ್ನು ರಾಮ ಸ್ವೀಕರಿಸುತ್ತಾನೆಯೇ? ಅಸ್ಪೃಶ್ಯೆಯೆಂದು ಕಡೆಗಣಿಸಿಬಿಟ್ಟರೆ? ಈ ನನ್ನ ತಳಮಳ ಯಾರಿಗೆ ಹೇಳಲಿ? ಚಿಲಿ ಪಿಲಿ ಹಕ್ಕಿಗಳಿಗೆ ಹೇಳಲಾ? ಬಣ್ಣ ಬಣ್ಣದ ಕಾಡು ಹೂಗಳಿಗೆ ಹೇಳಲಾ? ನಿನ್ನ ಪಾದಪೂಜೆಗೆ ಕಿತ್ತು ತಂದ ಹೂಗಳ ರಾಶಿ ಹಾಗೇ ಇದೆ. ಮೊನ್ನೆ ಜಾಜಿಮಲ್ಲಿಗೆ ಮಾಲೆ, ನಿನ್ನೆ ಕಾಡುಮಲ್ಲಿಗೆ, ಇಂದು ದುಂಡುಮಲ್ಲಿಗೆ, ನಾಳೆ ಕಣಗಿಲ, ಜಾಜಿರಾಣಿ ನನ್ನ ಅಣಕಿಸುತ್ತಾಳೆ. 'ಎಲ್ಲಿ ನಿನ್ನ ರಾಮ?' ಎಂದು ರೇಗಿಸುತ್ತಾಳೆ. ಕಾಡುಮಲ್ಲಿಗೆ- 'ನನ್ನ ಕೇಳಬೇಡ, ರಾಮ ಬರಲಿ, ಅವನ ಪಾದದ ಮೇಲೆ ನಾನೇ ಹರಡುವೆ' ಎನ್ನುತ್ತಾಳೆ. ಎಷ್ಟೊಂದು ವಸಂತಗಳು ಹೀಗೇ ಕಳೆದೆ. ಋತುಗಳು ಬದಲಾದದ್ದೇ ತಿಳಿಯಲಿಲ್ಲ. ಅಶೋಕ ಮರ ಹೂಬಿಟ್ಟಿದೆ. ಅಶ್ವತ್ಥ ಮರದಲ್ಲೆಲ್ಲಾ ಕೆಂಪು ಚಿಗುರು... ಮಾವಿನ ಕೆಂಪು ಚಿಗುರೆಲೆ... ಆಹಾ... ಇದು ವಸಂತ ಋತುವೇ ಇರಬೇಕು. ಕೈಯಲ್ಲಿರುವ ಸುಕ್ಕುಗಳು ನಾ ಕಳೆದ ವಸಂತಗಳಿಗೆ ಸಾಕ್ಷಿ. ಈ ದಿನ ಯಾಕೆ ಈ ಹುಚ್ಚು ಯೋಚನೆಗಳು ಕಾಡುತ್ತಿವೆ? ಆದರೆ ಶ್ರೀರಾಮಚಂದ್ರ ಪ್ರಜಾಕಣ್ಮಣಿ, ಭಕ್ತವತ್ಸಲ. ಬಂದೇ ಬರುತ್ತಾನೆ. ಹ್ಞೂಂ... ನಾನು ರಾಮನಿಗೆ ಅರ್ಪಿಸಲು ಹಣ್ಣುಗಳನ್ನು ಆರಿಸಿ ತರಬೇಕು. ನನಗಿಷ್ಟವಾದ ಬೋರೆ ಹಣ್ಣುಗಳು ಅವನಿಗೂ ಇಷ್ಟವಾಗಬಹುದು. ದಿನಾ ತಂದು ತಂದು ತುಂಬಿ ಇಡುತ್ತಿದ್ದೆ. ಈ ಕೆಲಸ ನನಗೆಷ್ಟು ಪ್ರಿಯ...!
ರಾಮನ ಮುಂದೆ ನನ್ನ ಭಕ್ತಿಯನ್ನು ಹೇಗೆ ವ್ಯಕ್ತಪಡಿಸಲಿ? ಮೊದಲು ಹೂಗಳನ್ನು ಅರ್ಪಿಸಲೇ ಅಥವಾ ಹಣ್ಣುಗಳನ್ನು ಅರ್ಪಿಸಲೇ? ಅರೆ... ಆಶ್ರಮದ ಕೋಗಿಲೆ ಇಂದು ಹೊಸರಾಗ ಹಾಡುತ್ತಿದೆ. ಗಾಳಿಯಲ್ಲೇನೋ ಹೊಸತನ. ಬಿಳಿಮಂದಾರದ ತಿಳಿಸುಗಂಧ, ಸಂಪಿಗೆಯ ಘಮ ಸ್ವಲ್ಪ ಹೆಚ್ಚೇ ಪಸರಿಸಿದೆ. ಇದು ನನ್ನ ಕಲ್ಪನೆಯೇ? ಭ್ರಮೆಯೇ? ಓ ದೇವರೇ... ಇದು ನಿಜವಾಗಲಿ. ನನ್ನ ಸುಕ್ಕು ಗಟ್ಟಿದ ಕೈಗಳು ಕಂಪಿಸುತ್ತಿವೆ, ಭಕ್ತಿಪರವಶಳಾಗಿದ್ದೇನೆ. ಕಣ್ಣುಗಳು ಮಂಜಾಗಿವೆ, ಅಷ್ಟು ದೂರ ನೋಡಲಾರೆ. ನಿನ್ನ ಹೆಜ್ಜೆಯ ಸದ್ದು ಕೇಳಿಸುತ್ತಿದೆ. ಸಿಹಿಯಾದ ಹಣ್ಣುಗಳನ್ನು ಆರಿಸಿ ಇಟ್ಟಿರುವೆ...
= ವೀಣಾ ಅನಂತ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Cockroach Janta Partyಗೆ ಬಿಗ್ ಶಾಕ್: ಜಂತರ್ ಮಂತರ್ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು, 57 ಮೆಟ್ರೋ ನಿಲ್ದಾಣಗಳು ಬಂದ್..!

ಕನ್ನಡಿಗರ ಆತ್ಮೀಯತೆ, ವಾತ್ಸಲ್ಯ, ದಯೆ ನಿಜಕ್ಕೂ ನನ್ನ....: ಬೆಂಗಳೂರು ಭೇಟಿ ಬಗ್ಗೆ ಅಭಿಜೀತ್ ದೀಪ್ಕೆ ಭಾವುಕ ಪೋಸ್ಟ್!

ಕೇಂದ್ರ ಸಚಿವ, ಬಿಜೆಪಿ ನಾಯಕನಿಂದ ಸ್ಟಿಂಗ್ ಆಪರೇಷನ್‌ಗೆ ಸಂಚು: Congress ಶಾಸಕ ಗಣಿಗ ರವಿ ಸ್ಫೋಟಕ ಆರೋಪ; Video

ಧಾರವಾಡ: ಕಾರು - ಕ್ಯಾಂಟರ್ ಮುಖಾಮುಖಿ ಡಿಕ್ಕಿ; ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವು!

ಉಪ ಚುನಾವಣೆ ಫಲಿತಾಂಶ| ಅಸ್ಸಾಂ, ಪ.ಬಂಗಾಳ, ತಮಿಳುನಾಡು, ಪುದುಚೇರಿಯ ಆರು ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಗತಿಯಲ್ಲಿ