ಮಕರಂದ/ದೋಣಿ

ದೇಹವೇ ಬಾಡಿಗೆಮನೆ!

ಬದುಕು ಕಲಿಸುವ ಪಾಠ ಮತ್ತು ಅದರಿಂದುಂಟಾಗುವ ಅನುಭವಗಳು ಸೃಜನಶೀಲತೆಯಲ್ಲಿ ಪ್ರಕಟವಾದರೆ ಅದರ ಲಾಭ ಅಷ್ಟಿಷ್ಟಲ್ಲ. ಬೇಂದ್ರೆ, ಕುವೆಂಪು, ಕಾರಂತರು- ಹೀಗೆ ಬದುಕಿನ ಇತ್ಯಾತ್ಮಕ ಅಂಶಗಳನ್ನು ತಮ್ಮ ಕೃತಿಗಳಲ್ಲಿ ಇನ್ನಿಲ್ಲದಂತೆ ಎತ್ತಿ ಹಿಡಿದವರು ನಡೆದ, ಬದುಕಿನ ಸರ್ವ ಮೂಲವನ್ನೂ ಗೌರವಿಸಿದ ಕವಿ ಕೆ.ಎಸ್. ನರಸಿಂಹಸ್ವಾಮಿ. ಸಮಗ್ರ ಜೀವನ ದೃಷ್ಟಿಯ ಅಖಂಡ ದಿಕ್ಸೂಚಿಯಾಗಿ ಕೆ.ಎಸ್.ನ. ಎಲ್ಲ ಕಾಲಕ್ಕೂ ಉಳಿಯುವ ಚಿರಂತನ ಸಾಹಿತಿ. ಈ ಕವಿಯ ಜನ್ಮದಿನ ಜನವರಿ 26. ಈ ಸಂದರ್ಭದಲ್ಲೊಂದು ನೆನಪಿನ ನುಡಿನಮನ.

ಹೊಳೆದದ್ದೇ ತಾರೆ: ಉಳಿದಿದ್ದು ಆಕಾಶ
ಇಲ್ಲುಂಟು ಅಗೆವ ಬುದ್ಧಿಗೆ ಅನಂತ ಅವಕಾಶ...
ಈ ಸಾಲುಗಳು ಕವಿ- ಕಾವ್ಯ ಸೃಷ್ಟಿಯ ಬಗ್ಗೆ ಹೇಳಿದರೂ ಬದುಕಿನ ಗುಣಾಢ್ಯತೆ ಮತ್ತದರ ಸಾಂದ್ರತೆಯನ್ನೂ ಇದು ಸೇರಿಸಿಕೊಂಡಿದೆ. ಹೀಗಾಗಿಯೇ ನರಸಿಂಹಸ್ವಾಮಿ ಕೇವಲ ಮೈಸೂರು ಮಲ್ಲಿಗೆಯ ಪ್ರೀತಿ-ಪ್ರೇಮಗಳ ಕವಿಯಲ್ಲ, ಅವರ ಬದುಕಿನಲ್ಲಿ ಜೀವನದ ಸೆಣಸಾಟವಿದೆ. ಅದನ್ನು ಅಷ್ಟೇ ನಿರುಮ್ಮಳವಾಗಿ ಸ್ವೀಕರಿಸಿ ಗೆದ್ದ ಛಲವಂತ ಹೋರಾಟದ ಸಾಕ್ಷಿಯಿದೆ. ಬದುಕಿನ ಸಂಕಷ್ಟಗಳನ್ನು ಆರ್ಭಟದ ಸದ್ದಿನ ಭೋರ್ಗರತೆಗಳಿಂದ ತುಂಬಿಸದ ಕೆ.ಎಸ್.ನ. ನಿರುದ್ವಿಗ್ನ ಸ್ಥಿತಿಯಲ್ಲೂ ಬಾಳನ್ನು ಸವಾಲಾಗಿ ಸ್ವೀಕರಿಸಿ ಗೆದ್ದ ಮಹನೀಯ.
ಇರುವಷ್ಟು ದಿವಸ ನಗುನಗುತ ನಲಿಯುತ್ತೇವೆ
ಕೂಡದ್ದರಿಂದ ಕಾಣದಾ ಬೆಳಕಿನತ್ತತ್ತ
ಅದೂ ಕೂಡ ಇದೆಯೆಂದರಿದೆ ಇಲ್ಲವೆಂದಾಗ ಇರುವುದೇ ಇಲ್ಲ
ಅರಿವು ಲೋಕಾನುಭವದ ದೀಪವಾಗಿದೆ ನಮಗೆ ಇರುವೆನೋ ಇಲ್ಲವೋ ಬಿಡಿ ನಿಮ್ಮ ದೇವರಿಗೆ...
ಸಾವಿನ ಬಗ್ಗೆ ಯೋಚಿಸುವ ಹಠವೇಕೆ? ಅದು ದೇವರಿಗೆ ಬಿಟ್ಟ ವಿಷಯ, ಜ್ಞಾನ ದೀಪದ ಕಡೆಗೆ ಬದುಕಿನ ದೃಷ್ಟಿ ಹರಿಯಲಿ ಎಂಬ ಸಂದೇಶ ಇಲ್ಲಿದೆ. ಆದರೆ ಕವಿಗೆ ದೇವರ ಶಕ್ತಿಯ ಶ್ರೇಷ್ಠತೆ ಮತ್ತು ಸರ್ವವ್ಯಾಪ್ತ ಗುಣ ಎರಡರ ಪರಿಚಯವೂ ಚೆನ್ನಾಗಿ ಆಗಿದೆ. ಅದನ್ನೇ ಅವರು ಸೊಗಸಾಗಿ ಧ್ವನಿಸುತ್ತಾ
ದೀಪವು ನಿನ್ನದೆ ಗಾಳಿಯೂ ನಿನ್ನದೇ
ಆರದಿರಲಿ ಬೆಳಕು
ಕಡಲೂ ನಿನ್ನದೆ ಹಠಗೂ ನಿನ್ನದೆ
ಮುಳುಗದಿರಲಿ ಬದುಕು
ದೀಪ-ಗಾಳಿ ಕಡಲು-ಹಡಗು ಈ ವಿರೋಧಾತ್ಮಕ ಶಕ್ತಿಯ ಪ್ರತೀಕಗಳನ್ನು ಇಟ್ಟುಕೊಂಡೇ ದೈವದ ಮೊರೆ ಹೋಗುವ ಕವಿಗೆ ನಿರ್ಲಿಪ್ತ ಸ್ಥಿತಿಯಿಂದ ಬದುಕನ್ನು ಸ್ವೀಕರಿಸುವ ಮನೋಧರ್ಮ ಬಂದಿರುವುದು ಬದುಕಿನ ಬಗ್ಗೆ ನಿರಾಸೆ ಇದೆ ಎಂದಲ್ಲ, ಬದಲಾಗಿ ಸತ್ಯಶಕ್ತಿಯನ್ನು ಒಪ್ಪಿ ನಡೆಯಲೇಬೇಕಾದ ಸಹಜ ಕ್ರಮ ಕವಿ -ಕಾವ್ಯ ಎರಡಕ್ಕೂ ಪ್ರಾಮಾಣಿಕತೆಯನ್ನು ತಂದುಕೊಟ್ಟಿದೆ. ಕೆ.ಎಸ್.ನ. ಮಧ್ಯಮ ವರ್ಗದ ಬದುಕನ್ನು ಆಸ್ವಾದಿಸಿದವರು. ಹಾಗಾಗಿಯೇ ಆ ವರ್ಗದ ಬದುಕಿನ ಸಾಕ್ಷಿಯಾಗಿ ಅದರ ನಿಸ್ಸಹಾಯಕತೆ ಪ್ರಕ್ಷುಬ್ಧತೆ ಮತ್ತು ತಲ್ಲಣಗಳನ್ನು ಸಂವೇದಿಸಿಕೊಂಡು ಬಾಳಿದವರು ಕೆ.ಎಸ್.ನ. ಈ ಒಳಬೇಗುದಿ, ಅನಿವಾರ್ಯ ಸಂಕಟಗಳು ಅವರ 'ಮನೆಯಿಂದ ಮನೆಗೆ' ಕವನದಲ್ಲಿ ವಿಶಿಷ್ಟವಾಗಿ ಹೋಗಬೇಕಾದ ಮಧ್ಯಮವರ್ಗದ ಬದುಕನ್ನು ಈ 'ಬಾಡಿಗೆ ಮನೆ'ಯ ಕವನ ಸೂಚಿಸಿದರೂ ದೇಹವೆಂಬ ಬಾಡಿಗೆ ಮನೆ. ಅದರ ಅಶಾಂತತೆ, ಅಶ್ವಾತತೆ ಮಧ್ಯಮವರ್ಗದ ನೌಕರನ ಜೀವನ ಕ್ರಮವನ್ನು ಹೇಳುತ್ತಲೇ ದೇಹದ 'ಬಾಡಿಗೆಮನೆ'ಯನ್ನೂ ಸಂಕೇತವಾಗಿರಿಸಿಕೊಂಡು ಮುಂದೆ ಸಾಗುತ್ತದೆ.
ಸ್ಮೃತಿಪಥದ ಬೆಳ್ಳಿದಾರದ ಸುರುಳಿ ಬಿಚ್ಚುತ್ತಿದೆ
ಬೆಲೆಯಿರದ ಸರಕ ಸಾಗಿಸಿದೆ ಬಾಗಿದ ಬೆನ್ನು
ಕೆರೆಯ ನೀರನು ಕೆರೆಗೆ ಚೆಲ್ಲಿ ಬಿಳಿಚಿದೆ ಕಣ್ಣು
ಮಗು ಬರೆದ ಸೊನ್ನೆ: ಮನೆವಂತರಾಡಿದ ಮಾತು
ನಕ್ಕ ನಗೆ: ಕಣ್ಣೀರು ಒಂದಲ್ಲ ಎರಡಲ್ಲ ನಮ್ಮ ಪಾಲಿನ ಪುಣ್ಯ!
ಬಂಡಿಯಲ್ಲಿ ಸ್ಥಳವಿಲ್ಲ, ಹೊತ್ತು ಸಾಗಿಸಬೇಕು
ಆದರೆ ಕತ್ತಲೆ ಬೇಕು ಕತ್ತಲೆಗೆ ಕಾಯೋಣ!
ಹೊಸ ಮನೆಗೆ ಹೋಗುವಾಗ ಹಳೆಯ ಮನೆ ನೆನಪು ಕಾಡುವ ಹಾಗೆ ಮೇಲಿನ ವಿವರಣೆ ಇದೆ. ಹಳೆಯ ಸಾಮಾನುಗಳು ಹಳತಾಗಿರುವುದರಿಂದ ಬೆಳೆ ಕಳೆದುಕೊಂಡು ವಯಸ್ಸಾಗಿ ಬಿಟ್ಟಿದೆ ಎಂದು ಮೇಲ್ನೋಟಕ್ಕೆ ಅನ್ನಿಸುತ್ತದೆಯಾದರೂ ಇಲ್ಲಿ ಸ್ಮೃತಿ ಪಥದ ಬೆಳ್ಳಿಹಾರ ಬದುಕಿನ ಮೊದಲ ಹಂತದ ನೆನಪುಗಳ ಮೆಲುಕು ಮತ್ತು ವಯಸ್ಸಾದ ಮುದುಕರು ಬೆಲೆ ಕಳೆದುಕೊಂಡ (ಕೆಲವರ ದೃಷ್ಟಿಯಲ್ಲಿ) ಸರಕುಗಳಾಗಿದ್ದಾರೆ. ಈ ಬದುಕಿನಿಂದಲೇ ಬಂದ ಜನ್ಮ- ಸಂಸಾರ ಬಂಧನ ಯಾತ್ರೆಯಲ್ಲಿ ಕಂಡುಂಡು ಬಾಳಿದ ರೀತಿ ಮುಂದಿನ ಸೃಷ್ಟಿಯಾಗಿ ಬೆಳೆಯಲಿರುವ ಮಗು ಸೊನ್ನೆಯಲ್ಲಿ ಖಾಲಿ ಸ್ಥಿತಿ, ಪ್ರಪಂಚ ಎರಡನ್ನೂ ಕಾಣಿಸುವ ಅದ್ಭುತಕೆಲಸ ಮಾಡುತ್ತದೆ. ಹೆಣವಾಗಿ ಬಂಡಿಯಲ್ಲಿ ಮಲಗುವ ಸ್ಥಿತಿ ವಿವರಣೆಯನ್ನೇ ಬಯಸದೆ ಎಲ್ಲವನ್ನೂ ಅರ್ಥಮಾಡಿಸಿ ಬಿಡುತ್ತದೆ. ಆದರೆ ಆಯುಸ್ಸು ಮುಗಿದು ಬಾಳಿಗೆ ಪೂರ್ಣ ಕತ್ತಲು (ಸಾವು) ಬರುವ ಸಹಜ ಸತ್ಯಕ್ಕೆ ಕಾಯಬೇಕು ಎಂಬಲ್ಲಿ ಹಲವು ದುರ್ಭರತೆಗಳನ್ನು ಒಪ್ಪಿ ಬಾಳುತ್ತಿರುವುದರ ಚಿತ್ರವಿದೆ. ಕೆ.ಎಸ್.ನ. ಎಂಥ ಕವಿ ಎಂಬುವುದಕ್ಕೆ ಇದಕ್ಕಿಂತ ಬದುಕು- ಕಾವ್ಯ ಅನಗತ್ಯ ಎನ್ನಿಸುತ್ತದೆ.
ಬದುಕು-ಕಾವ್ಯ ಎರಡಕ್ಕೂ ಹೆಚ್ಚು ರೂಪ ವ್ಯತ್ಯಾಸಗಳಿಲ್ಲದೆ ನೋಡುವ ಈ ಕವಿ ಕವಿ- ಕಾವ್ಯದ ಮನೋಭೂಮಿಕೆಯನ್ನು ಸ್ವತಂತ್ರ ಸ್ಥೈರ್ಯದಿಂದ ನುಡಿಯುತ್ತಾರೆ.
ಅದನಿದನೆ ಹಾಡೆಂಬ ಕಡ್ಡಾಯವೇಕೆ?
ವೇದಿಕೆಯ ಮೇಲಿನಿಂದುಪದೇಶವೇಕೆ?
ಕಬ್ಬಿಗನು ಬೆದರುವನೆ ಸ್ವಾತಂತ್ರ್ಯ ಪ್ರೇಮಿ?
ತಾರೆಗಳನಾಳುವನು ಸಾಲದೀ ಭೂಮಿ!
ಕವಿಯ ಸ್ವಂತಿಕೆ ಮತ್ತು ಅವನ ಪ್ರಪಂಚವನ್ನು ಹೀಗೆಯೇ ಇರಬೇಕೆಂಬ ಆಜ್ಞೆ ಮೂಲಕ ಚುಚ್ಚುವುದು ಕೆ.ಎಸ್.ನ. ಅವರೊಳಗಿನ ಕವಿಮನಸ್ಸನ್ನು ಘಾಸಿ ಮಾಡಿದಂತೆ ತೋರುತ್ತದೆ. ಆದರೆ ಅಂಥ ಬೆದರಿಕೆಗೆ ಜಗ್ಗದೆ, ಕುಗ್ಗದೆ ದಿಟ್ಟ ಧಾಟಿಯಲ್ಲೇ ಉತ್ತರಿಸಿದ ಹಿರಿಮೆ ಈ ಕವಿಯದ್ದು.
ಆಲೋಚನೆ ಹಾಗೂ ಅಭಿವ್ಯಕ್ತಿ ಕ್ರಮ ಹಾಗೂ ಅದರ ಒಟ್ಟು ಬಂಧನದಲ್ಲಿ ಕೆ.ಎಸ್.ನ. ಎಂದಿಗೂ ಹೆಚ್ಚಿನ ಇರಿಸು ಮುರಿಸು ಮಾಡಿಕೊಂಡಿಲ್ಲ. ಅದೇ ಅವರ ಕವಿತೆಗಳ ಗೆಲುವಿನ ಗಾಂಭೀರ್ಯದ ಹಿಂದಿನ ಸತ್ಯವೂ -ಸತ್ವವೂ ಆಗಿದೆ. ನಿರ್ಲಿಪ್ತತೆಯನ್ನೂ ಬದುಕಿನ ಸಂಗತಿಯೊಳಗೇ ಮೇಳೈಸಿಕೊಂಡು ಬದುಕಿದ ಕೆ.ಎಸ್. ನರಸಿಂಹಸ್ವಾಮಿಯವರು...
ದೇವರಿದ್ದಾನೆ ಎನ್ನುವರು ಕೆಲವರು
ಅವನಿಲ್ಲವೆನ್ನುವರು ಇನ್ನು ಕೆಲವರು
ಹಗಲು ರಾತ್ರಿಗಳಲ್ಲಿ ಉರುಳುತ್ತಲಿದೆ ಲೋಕ
ಇಹನೋ ಇರನೋ ಎಂಬ ಚಿಂತೆ ಇರದೆ...
ಇಲ್ಲಿ ಕವಿ ಆಸ್ತಿಕನೋ, ನಾಸ್ತಿಕನೋ ಎಂಬ ವಿಷಯ ನಗಣ್ಯ. ಆದರೆ ಯಾವ ವಿದ್ಯಮಾನಗಳಿಂದಲೂ ಗೊಂದಲಕ್ಕೊಳಗಾಗದೆ, ಲೋಕಸತ್ಯದ ವ್ಯಾಪಾರದ ದೈನಂದಿನ ಚಟುವಟಿಕೆಗಳು ಅತ್ಯಂತ ಸರಾಗವಾಗಿ ಸಾಗುತ್ತಿರುವ ತಣ್ಣನೆಯ ನಿಶ್ಚಿಂತ ಭಾವನೆಗಳೇ ಈ ಪದ್ಯ ಭಾಗದ ನಿಜಮೂಲ ದ್ರವ್ಯ.

-ಡಿ.ಎಸ್. ಶ್ರೀನಿವಾಸಪ್ರಸಾದ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!