ಬಿಚ್ಚಿಟ್ಟ ಮಾತುಗಳಿಗಿಂತ ಯಾವತ್ತೂ ಕಾಡುತ್ತಿರುವುದು ಮುಚ್ಚಿಟ್ಟ ವೇದನೆಗಳು. ಎಲ್ಲವನ್ನೂ ಹೇಳಿ ಬೆತ್ತಲಾಗುವುದಕ್ಕಿಂತ ಮನಸ್ಸಿನ ಮೂಲೆಯಲ್ಲಿ ಹುದುಗಿಸಿಟ್ಟ ಪ್ರೀತಿ ತುರಿಕೆಯಂತೆ ಹಿತಾನುಭವವನ್ನೂ ನೀಡುತ್ತದೆ. ಈ ಹುಚ್ಚು ಹರೆಯದ ಪ್ರೀತಿಯೇ ಹಾಗೆ. ಅವನ್ಯಾರು ಎಂದು ಗೊತ್ತಿಲ್ಲದಿದ್ದರೂ ಇಂದಲ್ಲ ನಾಳೆ ಅವನಿಗಿದು ಗೊತ್ತಾಗುತ್ತದೆ ಎಂಬ ನಿರೀಕ್ಷೆ. ಆ ನಿರೀಕ್ಷೆಯಲ್ಲೇ ಮನಸ್ಸು ಅವನ ಸ್ವಾಗತಕ್ಕೆ ಅಣಿಯಾಗುತ್ತದೆ. ಇದು ಕಾರಣವಿಲ್ಲದ ಪ್ರೀತಿ. ಅವನಿಗರಿವಿಲ್ಲದೆ ನಾನೇ ಕಟ್ಟಿದ ಸ್ವಪ್ನ ಸೌಧದಲ್ಲಿ ಮಹಾರಾಜ ಅವನು. ಅವನ ಪ್ರೀತಿಯ ಕಿರು ನೋಟದ ಹಂಬಲಿಕೆಯಿಂದಲೇ ದಿನಾ ಸಿಂಗಾರಗೊಳ್ಳುತ್ತೇನೆ. ಒಂದೇ ಒಂದು ಸಾರಿ ಅವನು ನನ್ನತ್ತ ದೃಷ್ಟಿ ಬೀರಿದರೆ ಸಾಕು..ಧನ್ಯೆ ನಾನು.
ಅವನ ಒಂದು ಮಾತು...ಹಾಂ..ಅದೆಂಥಾ ಶಕ್ತಿಯಿತ್ತೋ ಅದರಲ್ಲಿ!. ಅವನ ಮೋಹಕ್ಕೆ ಬೀಳುವ ಬದಲು ನಾನು ನನ್ನನ್ನೇ ಪ್ರೀತಿಸತೊಡಗಿದೆ. ಈ ಪ್ರೀತಿಯ ಮಾಯೆಯೊಳಗೆ ಸಿಕ್ಕಿ ಒದ್ದಾಡಬಾರದೆಂದು ಗಟ್ಟಿ ಮನಸ್ಸು ಮಾಡಿದ್ದೆ. ಆದರೆ ಇವನು...ಪ್ರೀತಿಯ ಮಾಯೆಯನ್ನು ನನ್ನಲ್ಲಿಯೇ ಹುಟ್ಟು ಹಾಕಿ ಬಿಟ್ಟನಲ್ಲಾ? ನನ್ನ ಸುತ್ತ ಸುತ್ತುವಂತೆ ನಾನೇ ಸೃಷ್ಟಿಸಿದ ಪ್ರೀತಿಯ ವರ್ತುಲದಲ್ಲಿ ನಾನೇ ಸಿಕ್ಕಿ ಬಿದ್ದೆನಾ? ಇದೊಂದು ಆಕರ್ಷಣೆಯಾ?
ಖಂಡಿತಾ ಅಲ್ಲ...ಆದರೆ ಅವನಿಗಾಗಿ ಕಾಯುತ್ತೇನೆ. ಅವನು ನನಗೇ ಸಿಗಬೇಕೆಂಬ ಹಪಾಹಪಿ ನನ್ನಲ್ಲಿಲ್ಲ. ಕನಿಷ್ಠ ಪಕ್ಷ ಅವನ ಪ್ರೀತಿಯ ಸೆಳೆತದಲ್ಲಿ ಮೈಮನ ಖುಷಿಯಾಗಿರಲಿ. ಗೌತಮನಿಗಾಗಿ ಕಾದ ಅಹಲ್ಯೆಯಂತೆ...ರಾಮನಿಗಾಗಿ ಕಾದ ಶಬರಿಯಂತೆ.. ಯಾವತ್ತೂ ದುಡುಕದೆ ಲಕ್ಷ್ಮಣನಿಗಾಗಿ ಕಾದ ಊರ್ಮಿಳೆಯಂತೆ...ಕಾಯುವಿಕೆ ಸುಖ ಅನುಭವಿಸಬೇಕು. ಅವನ ಆಗಮನದ ನಿರೀಕ್ಷೆಯಲ್ಲಿ ಹೊಸ ಕನಸುಗಳನ್ನು ಹೆಣೆಯಬೇಕು. ಇಷ್ಟೆಲ್ಲಾ ಹಗಲುಗನಸುಗಳನ್ನು ಕಂಡು ನಾಳೆ ಅವನು ನನಗೆ ಸಿಗದೇ ಹೋದರೆ? ಪರ್ವಾಗಿಲ್ಲ....ಅವನು ಹುಟ್ಟು ಹಾಕಿದ ಕನಸುಗಳು ಸದಾ ನನ್ನ ಜತೆಗಿರುತ್ತವೆ. ನನ್ನ ಪ್ರೇಮ ನಿವೇದನೆಯನ್ನು ಅವನಿಗೆ ತಿಳಿಸಬೇಕೆಂಬ ತವಕವೂ ನನ್ನಲ್ಲಿಲ್ಲ...ಪ್ರೀತಿ ಗೀತಿ ಅಂತಾ ಕಣ್ಣೀರು ಹಾಕಿ ವಿರಹ ವೇದನೆ ಅನುಭವಿಸಿ ಕವನದಲ್ಲಿ ಅವನನ್ನರಳಿಸುವ ಅಗತ್ಯವೂ ಇಲ್ಲ. ಅವನನ್ನೇ ನೆನೆದು ಪುಳಕಗೊಳ್ಳುವ ಮನಸ್ಸು...ಆ ಪುಟ್ಟ ಮನಸ್ಸು ತುಂಬಾ ಖುಷಿಯ ಅಲೆ..ನಾಳಿನ ಚಿಂತೆಯಲ್ಲಿ ಕೊರಗುವುದಕ್ಕಿಂತ ವರ್ತಮಾನದ ಈ ಮಧುರ ಕ್ಷಣಗಳೊಂದಿಗೆ ಹಾಯಾಗಿರುವುದು ನನಗಿಷ್ಟ. ಹೊಸ ಕನಸು ನಿರೀಕ್ಷೆಗಳ ಜತೆಗೆ ಮನಸ್ಸು ನಿರಾಳವಾಗಿದೆ...ನನಗಷ್ಟು ಸಾಕು...
-ರಶ್ಮಿ ಕಾಸರಗೋಡು