ಜೀವನ ನಿರ್ವಹಣೆ ಕೌಶಲ್ಯಗಳ ಬಗ್ಗೆ ಗಂಟೆಗಟ್ಟಲೆ ನಿರರ್ಗಳವಾಗಿ ಭಾಷಣ ನೀಡುತ್ತಿದ್ದ ಅವನು, ಸಂದರ್ಶಕರು ಕೇಳಿದ ಕೆಲವು ವೈಯುಕ್ತಿಕ ಪ್ರಶ್ನೆಗಳಿಗೆ ಉತ್ತರಿಸಲಾಗದೇ ಗಳಗಳನೇ ಅಳಲಾರಂಭಿಸಿದ.
ರಂಗೋಲಿ ಸ್ಪರ್ಧೆಗಳಲ್ಲಿ ಚುಕ್ಕಿಗಳನ್ನು ಸರಿಯಾಗಿ ಜೋಡಿಸಲಾಗದೇ ಬಹುಮಾನ ವಂಚಿತಳಾಗುತ್ತಿದ್ದ ಅವಳು, ವಿವಾಹವಾಗಿ ಅವಿಭಕ್ತ ಕುಟುಂಬ ಸೇರಿದೊಡನೆ ಭಿನ್ನಾಭಿಪ್ರಾಯಗಳಿಂದ ದೂರವಾಗುತ್ತಿದ್ದ ಸಂಬಂಧಗಳನ್ನು ಸೇರಿಸುವಲ್ಲಿ ಸಫಲಳಾಗಿ 'ಯಶಸ್ವೀ ಗೃಹಿಣಿ' ಎಂದು ಸನ್ಮಾನಿತಳಾದಳು.
ವಿವಾಹ ವೇದಿಕೆಯಲ್ಲಿ 'ಹೆಣ್ಣು ಹುಡುಕಿ ಕೊಡಿ' ಎಂದು ವಧುವಿನ ಆಕಾಂಕ್ಷಿಯಾಗಿ ಹೆಸರು ದಾಖಲಿಸಿದ ಗುಂಡ. ಅಂತೆಯೇ ಸುಂದರ ಯುವತಿಯೊಂದಿಗೆ ಅವನ ವಿವಾಹವಾಯಿತು. ವಿವಾಹದ ಮಾರನೇ ದಿನ ಗುಂಡ 'ಹೆಂಡತಿಯನ್ನು ಹುಡುಕಿ ಕೊಡಿ' ಎಂದು ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ದಾಖಲಿಸಿದ. ಏಕೆಂದರೆ ಅವನ ಪತ್ನಿ ಹಿಂದಿನ ರಾತ್ರಿ ಪ್ರಿಯಕರನೊಂದಿಗೆ ನಾಪತ್ತೆಯಾಗಿದ್ದಳು.
ದೂರದ ಊರುಗಳಲ್ಲಿ ವಾಸವಿದ್ದ ಮಕ್ಕಳು, ಹೆತ್ತವರು ತೀರಿಕೊಂಡಾಗ ಅಂತಿಮ ದರ್ಶನ ಪಡೆಯಲು ಬಾರದೇ ಉಳಿದರು, ಆದರೆ ಅವರು ಬರೆದಿಟ್ಟ 'ವಿಲ್'ನ ಪ್ರತಿ ಕೈ ಸೇರದಿದ್ದಾಗ ತಿಂಗಳುಗಟ್ಟಲೇ ರಜೆ ಹಾಕಿ ಊರಿಗೆ ಬಂದು ಹುಡುಕತೊಡಗಿದರು.
ಕಳ್ಳತನದ ಆರೋಪದಿಂದ ಬಂಧಿತನಾದ ಮಗ ಬಿಡುಗಡೆಯಾಗಿ ಮನೆಗೆ ಮರಳಿದಾಗ ಅಪ್ಪ ಒಳ ಸೇರಿಸದೇ ಬಾಗಿಲು ಹಾಕಿದ. ರಾತ್ರಿಯೆಲ್ಲಾ ಹೊರ ಜಗುಲಿಯಲ್ಲಿಯೇ ಕುಳಿತ ಮಗನಿಗೆ, ಹೆತ್ತ ಕರುಳು ಯಾರಿಗೂ ಕಾಣದಂತೆ ಕಳ್ಳ ಹೆಜ್ಜೆಯಲ್ಲಿ ನಡೆದು ಕೈ ತುತ್ತು ಉಣಿಸಿತ್ತು, ಕಿಟಕಿಯ ಮೂಲಕ.
ಮಳೆ ಬಾರದೆ, ಬೆಳೆಯಿಲ್ಲದೇ ಕಂಗಾಲಾಗಿದ್ದ ಜನರು ಭರವಸೆಯಿಂದಲೇ ಬದುಕಿದ್ದರು. ಅಕಾಲ ಮಳೆ ಬಂದು, ಇದ್ದ ಆಹಾರದ ದಾಸ್ತಾನೂ ನಾಶವಾಗಿ, ಬಿತ್ತನೆ ಬೀಜವೂ ಇಲ್ಲದಂತಾದಾಗ ಅಂಗಳದಲ್ಲೇ ಮಲಗಿದರು- ಆತ್ಮಹತ್ಯೆಗೆ ಶರಣಾಗಿ !
- ಬಿ.ಕೆ.ಸುಮಾ, ಮಂಡ್ಯ