ಕನ್ನಡದಲ್ಲಿ 'ಬೆಕ್ಕುಗಳು' ಕಾಣಿಸಿಕೊಂಡಿದ್ದು ತೀರಾ ಅಪರೂಪ. ಎಲ್ಲೋ ಕಥೆಗಳಲ್ಲಿ, ಕಾದಂಬರಿಗಳಲ್ಲಿ ಒಂದು ಸಣ್ಣ ಪಾತ್ರವಾಗಿ ಬೆಕ್ಕು ಬಂದುಹೋಗಿದೆ. ಕನ್ನಡದ ಸಾಹಿತಿಗಳು ನಾಯಿಗಳನ್ನು ಪ್ರೀತಿಸಿದಷ್ಟು ಬೆಕ್ಕುಗಳನ್ನು ಹಚ್ಚಿಕೊಂಡಿದ್ದು ಕಡಿಮೆ. 'ಬೆಕ್ಕೆ ಬೆಕ್ಕೆ, ಮುದ್ದಿನ ಸೊಕ್ಕೆ ಎಲ್ಲಿಗೆ ಹೋಗಿದ್ದೆ' ಎಂದು ಮುದ್ದು ಮುದ್ದಾಗಿ ಬರೆದ 'ಚುಟುಕುಗಳ ಬ್ರಹ್ಮ' ದಿನಕರ ದೇಸಾಯಿ ಅವರ ಬದುಕಿನಲ್ಲೂ ಬೆಕ್ಕಿಗೆ ಸ್ಥಾನಮಾನ ಸಿಕ್ಕಿದ್ದು ಕಡಿಮೆ.
ಆದರೆ, ಪಾಶ್ಚಾತ್ಯ ಲೇಖಕರಿಗೆ ಬೆಕ್ಕೇ ಬದುಕು. ಅಮೆರಿಕದ ಲೇಖಕ ಎಡ್ವರ್ಡ್ ಗೊರೆ, ತಟ್ಟೆ ಪೂರ್ತಿ ಕರಿದ ಮಾಂಸದ ತುಂಡುಗಳನ್ನು ಹಾಕಿಕೊಂಡು ಬೆಕ್ಕಿನೊಂದಿಗೇ ತಿನ್ನುತ್ತಿದ್ದ. ಪ್ರತಿ ಬಾರಿ ವೈನ್ ಕುಡಿಯುವಾಗಲೂ ಎದುರಿಗೆ ಬೆಕ್ಕನ್ನು ಕೂರಿಸಿಕೊಳ್ಳುತ್ತಿದ್ದ ಮತ್ತು ಅದಕ್ಕೂ ಎಣ್ಣೆಯ ರುಚಿ ತೋರಿಸಿದ್ದ ಎಡ್ವರ್ಡ್ ಹೆಮ್ಮಿಂಗ್ವೇಗೆ ಆ ಪ್ರಾಣಿ ಅದೆಷ್ಟೋ ಪಾತ್ರವಾಗಿ ಕಾಡಿದ್ದುಂಟು. 'ಟಾಟ್ಟಿ' ಎಂಬ ಮುದ್ದಿನ ಬೆಕ್ಕಿಗೆ ಸಮಾಧಿ ಕಟ್ಟಿಸಿದ ಸ್ವೀಡಿಷ್ ಕವಯಿತ್ರಿ ಎಡಿತ್ ಸಾಡೆರ್ಗ್ರಾನ್ಳಿಗೆ, ಬೆಕ್ಕು ಗಂಡನಿಗಿಂತ ಹೆಚ್ಚಂತೆ.
ಆ ಸಾಹಿತಿಗಳೆಲ್ಲ ಬೆಕ್ಕನ್ನು ವಿಶಿಷ್ಟವಾಗಿ ವ್ಯಾಖ್ಯಾನಿಸುತ್ತಾರೆ...
ಬೆಕ್ಕುಗಳು ದರೋಡೆಕೋರರು. ಮನೆಯ ಹೊರಗಡೆಯೇ ಸಾಯುವಂಥವು. ನಾನು ನಿದ್ರೆಯಲ್ಲಿ ಗೊರಕೆ ಹೊಡೆಯುತ್ತಿರುವಾಗ, ಬೆಕ್ಕು ಬಂದು ಮೂಗಿನೊಳಗೆ ನಾಲಗೆ ತೂರಿಸುತ್ತದೆ.
- ಸ್ಟೀಫನ್ ಕಿಂಗ್
ಪುಸ್ತಕ, ಬೆಕ್ಕು- ಇದ್ದುಬಿಟ್ಟರೆ ನಾನು ಬೇರೇನನ್ನೂ ಕೇಳುವುದಿಲ್ಲ. ನನ್ನ ಎಷ್ಟೋ ಬರಹಗಳನ್ನು ಬೆಕ್ಕು ಹರಿದುಹಾಕಿದೆ. ಹರಿದುಹಾಕಿದ್ದು ಬೆಕ್ಕಲ್ಲ ಅಂತ ಸುಮ್ಮನಾಗುತ್ತೇನೆ.
- ಎಡ್ವರ್ಡ್ ಗೊರೆ
ಬೆಕ್ಕು ಭಾವಜೀವಿ ಮತ್ತು ಪ್ರಾಮಾಣಿಕ. ಮನುಷ್ಯ ಕೆಲವು ಸಂಗತಿಗಳನ್ನು ಮುಚ್ಚಿಡಬಹುದು. ಆದರೆ, ಬೆಕ್ಕು ಹಾಗೆ ಮಾಡುವುದಿಲ್ಲ.
- ಅರ್ನೆಸ್ಟ್ ಹೆಮ್ಮಿಂಗ್ವೇ
ಬೆಕ್ಕಿಗೆ ಆಟವನ್ನು ಸೃಷ್ಟಿಸುವುದು ಗೊತ್ತು. ಆಟಿಕೆಗಳೇನು ಸಿಗದೇ ಇದ್ದಾಗ ಕಡೇಪಕ್ಷ ಅದಕ್ಕೆ ನನ್ನ ಒಗೆಯದ, ದುರ್ವಾಸನೆಯುಕ್ತ ಅಂಡರ್ವೇರ್ ಆದರೂ ಆದೀತು.
- ಜಾರ್ಜ್ ಪ್ಲಿಂಪ್ಟನ್
ನನ್ನ ಬೆಕ್ಕಿಗೆ ತಿನ್ನಲು ಎಲ್ಲವನ್ನೂ ಹಾಕುತ್ತೇನೆ. ಆದರೂ, ಅದು ನನ್ನ ಚರ್ಮದ ಶೂಗಳನ್ನು ತಿನ್ನುವುದನ್ನು ಬಿಡುವುದಿಲ್ಲ.
- ಡಬ್ಲ್ಯು.ಎಚ್. ಆಡೆನ್
ಬೆಕ್ಕುಗಳು ತುಂಬಾ ಕ್ಲೀನ್. ಅಷ್ಟೇ ಕನ್ನಿಂಗ್ ಮತ್ತು ಅಷ್ಟೇ ಚಾಣಾಕ್ಷ. ಪ್ರೀತಿಸುವ ಹುಡುಗಿಯೂ ಹೀಗೆಯೇ ಇರುತ್ತಾಳಲ್ಲವೇ? ಹಾಗಾಗಿ, ಬೆಕ್ಕನ್ನು ಮುದ್ದಿಸುತ್ತೇನೆ.
- ಮಾರ್ಕ್ ಟ್ವೈನ್
ಬೆಕ್ಕಿಗಿಂತ ಯಾವುದಾದರೂ ಯುವಕನೊಂದಿಗೆ ಇಷ್ಟು ಸಲುಗೆಯಿಂದ ಕಳೆದಿದ್ದರೆ ನನಗೆಷ್ಟೋ ಮಕ್ಕಳಾಗಿರುತ್ತಿದ್ದವು.
- ಪ್ಯಾಟ್ರಿಸಿಯಾ ಹಿಗ್ಸ್ಮಿತ್
ಕೆಲವೊಮ್ಮೆ ಬೆಕ್ಕಿನ ಕಣ್ಣುಗಳನ್ನೇ ಕನ್ನಡಿ ಎಂದುಕೊಂಡು ಮುಖ ನೋಡಿಕೊಳ್ಳುತ್ತೇನೆ.
- ಜಾಕ್ಸ್ ಡೆರ್ರಿಡಾ
ನನ್ನ ಬೆಕ್ಕಿನ ಬಗ್ಗೆ ಸಿಟ್ಟಿದೆ. ನನ್ನ ಸಂಗಾತಿಯ ನಗ್ನ ದೇಹವನ್ನು ಅದೂ ನೋಡಿದೆ.
- ಚಾರ್ಲ್ಸ್ ಬ್ಯುಕೌಸ್ಕಿ
- ಮಿಲೀ