ಅರೆ ಮಂಪರಿನ ಮುಪ್ಪರಿಗೆಯಲಿ
ನೀರವತೆಯ ನಿಲುಕಿ
ಚೂರು ಚೂರಾಗುವ...
ತುಂಬುಗೆನ್ನೆಗೆ ಇಷ್ಟೇ ಇಷ್ಟು ಸವರಿ
ಮಿನುಗಿ ಮರೆಯಾಗುವ...
ಸಿಹಿ ಮುಲುಕಿಗೆ, ಹುಸಿ ಮುನಿಸಿಗೆ
ಕಣ್ಣಾಗಿ, ಕಿವಿಯಾಗಿ
ಕಿಟಕಿಯಿಂದ ಕಿಟಕಿಗೆ ಜಿಗಿಯುವ
ಮೌನದೊಳಗೆ ಕಂಪಾಗುವ...!
ಮುತ್ತಿಗೆ, ಮತ್ತಿಗೆ, ಚಾದರದ ನೂಲಿಗೆ
ಮಾತಿಗೆ, ಮೌನಕ್ಕೆ ಬಿಗಿದಪ್ಪಿದ ಹಿತಕ್ಕೆ
ಹಿಡಿಕೆ ಸಡಿಲಿಸಿದ ಅಂತರಕ್ಕೆ
ಅಂತರಂಗದ ಪಲ್ಲಂಗಕ್ಕೆ...!
ಎವೆಯ ಇಕ್ಕೆಲವ ಮೀಟಿ
ಮಾತಿಗೊಂದಾವರ್ತಿ ತಿಳಿಮಂದಹಾಸ ನುಸುಳಿಸಿ,
ಇಡಿ ಸಖ್ಯ ಸುಂದರಿಸಿ,
ಮರೆಯಾಗಿ, ತೆರೆಯಾಗಿ, ಹರಿವ ನದಿಯಾಗಿ
ಮೈಮುರಿದ ಬೆವರಾಗಿ, ಹಗುರಾಗಿ
ಉಸ್ಸೆಂದು ಮೈ ಚಾಚಿ ಕಣ್ಣ ಜೊಂಪಿನಲಿ
ಮರೆಯಾಗಿ, ಮತ್ತದೇ ನಾಳೆಗೆ...!
- ಮಹಾಂತೇಶ ದೊಡ್ಡಮನಿ
mahantesh.d89@gmail.com