ಕೆರೆ ಹೊಂಡಗಳನ್ನು ಮುಚ್ಚಿ ನಿವೇಶನಗಳನ್ನಾಗಿ ಮಾಡಿಕೊಂಡ ಜನರು 'ಅಂತರ್ಜಲ' ಕಡಿಮೆಯಾದಾಗ ಗಂಗಾದೇವಿಯ ಪೂಜೆಗೆಂದು ಲಕ್ಷೋಪಲಕ್ಷ ಖರ್ಚು ಮಾಡಿದರು!!!
ಮದುವೆಯಾಗಲು ಅನೇಕ ಗ್ರಾಮೀಣ ಕೃಷಿಕ ಸಿರಿವಂತರು ಬಂದರೂ, "ಹಳ್ಳೀಲಿ ವ್ಯವಸಾಯ ಮಾಡುತ್ತಾ ಇರೋರನ್ನು ವಿವಾಹವಾಗೋಲ್ಲ" ಎಂದು ಹಠ ಹಿಡಿದು ಮದುವೆಯಾಗಲು ನಿರಾಕರಿಸಿದಳು. ಇಂಜಿನಿಯರ್ ಎಂದು ಹೇಳಿದ ಪೇಟೆಯ ಬಿಳಿ ಹುಡುಗನನ್ನು ಮೆಚ್ಚಿ ಮದುವೆಯಾಗಿ ಸಂಭ್ರಮಿಸಿದಳು. ಮದುವೆಯ ನಂತರ ಅವನೊಡನೆ ಪೇಟೆಗೆ ಹೋಗಿ ಇಂಜಿನಿಯರ್ ಅಲ್ಲವೆಂಬ ನಿಜ ಸ್ಥಿತಿ ತಿಳಿದು, ಬರೋ ಅಲ್ಪ ವೇತನದಲ್ಲಿ ಜೀವನ ನಿರ್ವಹಣೆ ಸಾಧ್ಯವಿಲ್ಲವೆಂದು ತಾನೂ ಕೆಲಸಕ್ಕೆ ಸೇರಿ ದುಃಖದಿಂದ ಜೀವನವನ್ನು ಕಳೆದಳು.
ಸಾಕಷ್ಟು ಹಣ ತೆಗೆದುಕೊಂಡು ಓಡಿ ಹೋಗಿ, ಪ್ರೀತಿಸಿದವಳನ್ನು ವಿವಾಹವಾಗ ಬಯಸಿದ ವ್ಯಕ್ತಿಯೊಬ್ಬ ಕನ್ನ ಹಾಕಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಜೈಲು ಪಾರಾದನು. ಅವನು ಪ್ರೀತಿಸಿದ ಹುಡುಗಿ ಮತ್ತೊಬ್ಬನ ಮಡದಿಯಾಗಿ ಸುಖವಾಗಿದ್ದಳು!
ಹಸಿದ ಮುದುಕಿ ದೇವಾಲಯದ ಮುಂದೆ ಕುಳಿತು ಭಿಕ್ಷೆ ಬೇಡುತ್ತಿದ್ದಳು. ಎಷ್ಟೋ ಜನ ನೋಡಿಯೂ ನೋಡದಂತೆ ಮುಂದೆ ಹೋಗುತ್ತಿದ್ದರೆ, ಆಗ ಅಲ್ಲಿಗೆ ಬಂದ ಹುಟ್ಟು ಕುರುಡ, ಅಜ್ಜಿಗೆ ತನ್ನ ಬಳಿಯಿದ್ದ ತಿಂಡಿ ಪೊಟ್ಟಣ ಕೊಟ್ಟನು!
ಕುಡಿತದಿಂದಾಗುವ ದುಷ್ಪರಿಣಾಮಗಳು "ವಿಷಯದ ಕುರಿತು ಚೆನ್ನಾಗಿ ಭಾಷಣ ಮಾಡಿದ ವ್ಯಕ್ತಿಯೊಬ್ಬ ಕಾರ್ಯಕ್ರಮ ಮುಗಿದ ನಂತರ ಕುಡಿಯಲು ಬಾರ್ ಕಡೆಗೆ ತೆರಳಿದ!!!"
ಪದವಿಯಲ್ಲಿ ರ್ಯಾಂಕ್ ಪಡೆದು ಪಾಸಾಗಿದ್ದ ಕುರೂಪಿ ಯುವತಿಗೆ ಕೆಲಸ ನೀಡಲು ನಿರಾಕರಿಸಿದ ಕಂಪನಿಯ ಮ್ಯಾನೇಜರ್, ತೃತೀಯ ದರ್ಜೆಯಲ್ಲಿ ಪಾಸಾಗಿದ್ದ ಸುರ ಸುಂದರಿಗೆ ಕೆಲಸ ಕೊಟ್ಟನು!
- ಬಸವನಗೌಡ ಹೆಬ್ಬಳಗೆರೆ