ಮಕರಂದ/ದೋಣಿ

ಪದವಿಯ ಅರ್ಧ ಹಾದಿಯನ್ನು ಕ್ರಮಿಸುತ್ತಾ...

ಎರಡು ವರ್ಷಗಳು ಎಷ್ಟು ಬೇಗನೆ ಕಳೆದುಹೋದವು!! ಇನ್ನೂ ಸಿಇಟಿ ಕೌನ್ಸಿಲಿಂಗ್ ಮೊನ್ನೆ ಮೊನ್ನೆ...

ಎರಡು ವರ್ಷಗಳು ಎಷ್ಟು ಬೇಗನೆ ಕಳೆದುಹೋದವು!! ಇನ್ನೂ ಸಿಇಟಿ ಕೌನ್ಸಿಲಿಂಗ್ ಮೊನ್ನೆ ಮೊನ್ನೆ ನಡೆದಂತೆ ಕಣ್ಣಿಗೆ ಕಟ್ಟಿದಂತಿದೆ. ಇಂಜಿನಿಯರಿಂಗ್ ಪದವಿಯ ಕನಸು ಹೊತ್ತು ಇದ್ದಬಿದ್ದ ಡಾಕ್ಯುಮೆಂಟ್ಸ್‌ಗಳನ್ನೆಲ್ಲಾ ಹಿಡಿದು ಉತ್ಸಾಹ, ಉದ್ವೇಗಗಳಿಂದ ಕೂಡಿದ್ದ ಕೌನ್ಸಿಲಿಂಗ್‌ನ ದಿನ, ನಾಳೆಯ ಕುರಿತ ಸಿಹಿ ನಿರೀಕ್ಷೆಗಳನ್ನು ಕಣ್ಣಲ್ಲಿ ಹೊತ್ತು ಪ್ರಥಮವಾಗಿ ಕಾಲೇಜಿಗೆ ಹಾಜರಾದ ದಿನ- ಎಲ್ಲ ನಡೆದು ಬರೋಬ್ಬರಿ ಎರಡು ವರ್ಷಗಳಾದವಾ? ಅಂದರೆ ನಾವೀಗ ಪದವಿಯ ಹಾದಿಯನ್ನು ಅರ್ಧ ಕ್ರಮಿಸಿದ್ದೇವೆ ಎಂದಾಯಿತು. ನಿಜವಾಗಲೂ ನಂಬಲಿಕ್ಕಾಗುತ್ತಿಲ್ಲ.

ಬಿ.ಕಾಂ., ಬಿ.ಎಸ್ಸಿ., ಬಿ.ಎ. ನಂತಹ ಬ್ಯಾಚುಲರ್ ಡಿಗ್ರಿ ಕೋರ್ಸ್ ಆದರೂ ಕೂಡ ಬಿ.ಇ.ನ ಖದರೇ ಬೇರೆ. ವೃತ್ತಿ ಶಿಕ್ಷಣ ಕೋರ್ಸ್ ಎಂಬ ಹೆಗ್ಗಳಿಕೆ ಒಂದು ಕಡೆ. ಉಳಿದ ಎಲ್ಲವಬ ಮೂರು ವರ್ಷಗಳದ್ದಾದರೆ, ಇಂಜಿನಿಯರಿಂಗ್ ನಾಲ್ಕು ವರ್ಷಗಳದ್ದು. ಅದೆಲ್ಲಕ್ಕಿಂತ ಹೆಚ್ಚಾಗಿ ಎಂಜಿನಿಯ ರಿಂಗ್ ಓದಿದರೆ, ಕೈ ತುಂಬಾ ಹಣ ನೀಡುವಂತಹ ಉದ್ಯೋಗಾವಕಾಶಗಳುಂಟು. ಅದಕ್ಕೇ ರಜಾ ದಿನಗಳಲ್ಲಿ ನೆಂಟರು ಭೇಟಿಯಾದಾಗ 'ಕೂಸೆ, ಏನ್ ಮಾಡ್ತಿದೀಯಾ?' ಎಂದಾಗ "ಎಂಜಿನಿಯರಿಂಗ್ 2ನೇ ವರ್ಷ ಮುಗೀತು" ಎಂದು ಉತರಿಸಿದರೆ ಥಟ್ಟನೆ ಮಾತು ಬರುತ್ತದೆ- "ಓಹೋ, ಇನ್ನೆರಡು ವರ್ಷಗಳಲ್ಲಿ ಇಂಜಿನಿಯರ್ ನೀನು" ಅಂತ. ಇಲ್ಲಿ ಈ "ಇಂಜಿನಿಯರ್ ನೀನು" ಎಂಬ ಉದ್ಗಾರದ ಒಳಾರ್ಥ ದುಡ್ಡಿನ ಕಂತೆ ಎಣಿಸುವವಳು ಎಂಬುದನ್ನು ಹೇಳಬೇಕಾಗಿಲ್ಲವಷ್ಟೆ.

ಅದೆಲ್ಲ ಒತ್ತಟ್ಟಿಗಿರಲಿ. ಏನು ಮಾಡಿದೆವು ಈ ಎರಡು ವರ್ಷಗಳಲ್ಲಿ? ಒಮ್ಮೆ ಹಿಂತಿರುಗಿ ನೋಡಿದರೆ ನೆನಪುಗಳ ಬುತ್ತಿಯೇ ಬಿಚ್ಚಿಕೊಳ್ಳುತ್ತದೆ. ಫಸ್ಟ್ ಮತ್ತು ಸೆಕೆಂಡ್ ಸೆಮಿಸ್ಟರ್‌ಗಳಲ್ಲಿ ಎಲ್ಲರಿಗೂ ಕಾಮನ್ ಸಬ್ಚೆಕ್ಟ್‌ಗಳಿರುತ್ತವೆ. ಮೊದಮೊದಲು ಸೈಲೆಂಟ್ ಆಗಿ ಕೂತರೂ ನಿಧಾನವಾಗಿ ಎಲ್ಲರ ಬಾಲವೂ ಬಿಚ್ಚಿಕೊಳ್ಳತೊಡಗಿತ್ತು. ಲೆಕ್ಚರರ್‌ಗಳ ಅನುಕರಣೆ ಮಾಡುವುದು. ಅವರು ಪಾಠ ಮಾಡುತ್ತಿರುವಾಗಲೇ ಕಿಟಕಿಯ ಮೂಲಕ ಕ್ಲಾಸಿನಿಂದ ಹೊರಗೆ ಹಾರುವುದು, ಮಾಸ್ ಬಂಕ್ ಹಾಕುವುದು, ಅಟೆಂಡನ್ಸ್ ಕಡಿಮೆ ಬಂದು ಲೆಕ್ಚರರಿಂದ ಬೈಸಿಕೊಳ್ಳುವುದು, ಇಂಟರ್ನಲ್ ಎಕ್ಸಾಮ್ ಹಿಂದಿನ ರಾತ್ರಿ ನಿದ್ದೆಗೆಟ್ಟು ಓದುವುದು, ಯಾರೋ ಒಬ್ಬರು ಬರೆದ ಅಸೈನ್‌ಮೆಂಟ್ ಅನ್ನು ಎಲ್ಲರೂ ಒಟ್ಟಾಗಿ ಸೇರಿ ಕ್ಯಾಂಟೀನ್‌ನಲ್ಲಿ ಕುಳಿತು ಕಾಪಿ ಮಾಡುವುದು- ಇವೆಲ್ಲ ಸರ್ವೇ ಸಾಮಾನ್ಯವಾಗಿತ್ತು. ಜೊತೆ ಜೊತೆಯಲ್ಲಿಯೇ ಕಾಲೇಜ್ ಡೇ, ಸ್ಪೋಟ್ಸ್, ಕಲ್ಚರಲ್ ಮತ್ತು ಟೆಕ್ನಿಕಲ್ ಇವೆಂಟ್ಸ್, ಇಂಟರ್ ಕಾಲೇಜ್ ಕಾಂಪಿಟೇಷನ್ಸ್- ಒಂದೇ ಎರಡೇ... ಮೋಜು, ಮಸ್ತಿಗೆ ಕಡಿವಾಣವೇ ಇರಲಿಲ್ಲ. ಇದರ ಜೊತೆಗೆ ಸೀನಿಯರ್ಸ್‌ಗಳಿಂದ ರ್ಯಾಂಗಿಂಗ್ ಮಾಡಿಸಿಕೊಂಡಿದ್ದೂ ಆಯಿತು. ಪ್ರಥಮ ವರ್ಷದಲ್ಲಿ ನಾವಿನ್ನೂ ಬ್ರ್ಯಾಂಚ್‌ಗೆ ಎಂಟ್ರಿ ಆಗದಿರದ ಕಾರಣ ಸ್ಟ್ರಿಕ್ಟ್ ರೂಲ್ಸುಗಳು ಇರುತ್ತಿರಲಿಲ್ಲ. ಯಾರ ಭಯವೂ ಇಲ್ಲದೆ ಎಂಜಾಯ್ ಮಾಡುತ್ತಿದ್ದೆವು.

ಥರ್ಡ್ ಸೆಮಿಸ್ಟರ್‌ನಲ್ಲಿ ಎಲ್ಲರೂ ತಮ್ಮ ತಮ್ಮ ಬ್ರ್ಯಾಂಚ್‌ಗಳಿಗೆ ಕಾಲಿಟ್ಟಾಗಿತ್ತು. ಇಂಜಿನಿಯರಿಂಗ್‌ನಲ್ಲಿ ಎಷ್ಟೊಂದು ಬ್ರ್ಯಾಂಜ್‌ಗಳು- ಇಸಿ, ಸಿಎಸ್, ಐಎಸ್, ಐಟಿ, ಇಇ, ಮೆಕ್ಯಾನಿಕಲ್, ಸಿವಿಲ್, ಆಟೋಮೊಬೈಲ್, ಐಪಿ, ಬಯೋಟೆಕ್ನಾಲಜಿ... ನಾವೀಗ ಸೀನಿಯರ್ಸ್‌ಗಳಾದೆವು. ಫ್ರೆಷರ್ ಪಾರ್ಟಿ ಸಂಭ್ರಮದ ಜೊತೆಯಲ್ಲೇ ನಿಧಾನವಾಗಿ ಡಿಪಾರ್ಟ್‌ಮೆಂಟ್‌ನ ಬಿಸಿ ನಿಧಾನವಾಗಿ ತಾಗತೊಡಗಿತು. ಮೊದಲೆರಡು ಸೆಮ್‌ಗಳಲ್ಲಿ ಮಾಡಿದ ಕೀಟಲೆಗಳಿಗೆ ಈಗ ಒಮ್ಮೆಗೇ ಬ್ರೇಕ್ ಬಿದ್ದಂತಾಯಿತು. ಲೆಕ್ಚರರ್ಸ್ ಯಾವಾಗಲೂ ನಮ್ಮ ಮೇಲೆ ಒಂದು ಕಣ್ಣಿಡುತ್ತಿದ್ದರು. ಎಷ್ಟು ಎಂಜಾಯ್ ಮಾಡುತ್ತಿದ್ದೆವೋ ಅದರ ದುಪ್ಪಟ್ಟು ಅಸೈನ್‌ಮೆಂಟ್, ಪ್ರೊಜೆಕ್ಟ್‌ಗಳ ಕೆಲಸವಿರುತ್ತಿತ್ತು. ಲ್ಯಾಬ್‌ಗಳಲ್ಲಿ ಔಟ್‌ಪುಟ್ ಬರದೇ ಒದ್ದಾಡುವುದು, ಪ್ರೆಸೆಂಟೇಷನ್ ಸರಿಯಾಗಲಿಲ್ಲವೆಂದು ಬೈಗುಳ ತಿನ್ನುವುದು, ಅಸೈನ್‌ಮೆಂಟ್ ಪೂರ್ತಿಗೊಳಿಸಲು ನಿದ್ದೆಗೆಟ್ಟು ಕೂರುವುದು- ಎಲ್ಲ ನಿಧಾನವಾಗಿ ಅಭ್ಯಾಸವಾಗತೊಡಗಿದವು. ಒಬ್ಬೊಬ್ಬ ಲೆಕ್ಚರರ್ ಒಂದೊಂದು ಸರ್ವಾಧಿಕಾರಿಯಂತೆ ಗೋಚರಿಸುತ್ತಿದ್ದರು. ಅವರಿಗೆಲ್ಲಾ ನಾವು ಯಾವ್ಯಾವ ಥರಗಳಲ್ಲಿ ಬೈಯ್ಯುತ್ತಿದ್ದೆವೆನ್ನುವುದಕ್ಕೆ ಲೆಕ್ಕವಿಲ್ಲ. ನೋಡುನೋಡುತ್ತಿದ್ದಂತೆಯೇ ನಾವು ನಾಲ್ಕನೇ ಸೆಮ್ ಅನ್ನೂ ಮುಗಿಸಿದ್ದೆವು.
ಇಂಜಿನಿಯರಿಂಗ್ ವಿದ್ಯಾರ್ಥಿಗಳಷ್ಟು ಯಾವ ಪದವಿ ತರಗತಿಯ ವಿದ್ಯಾರ್ಥಿಗಳು ಕೂಡ ಎಂಜಾಯ್ ಮಾಡಿರಲಿಕ್ಕಿಲ್ಲ. ಪ್ರತಿಯೊಬ್ಬನ ಪ್ರತಿಭಾ ಪ್ರದರ್ಶನಕ್ಕೆ ಇಲ್ಲಿ ವಿಫುಲವಾದ ಅವಕಾಶಗಳುಂಟು. ಹಾಗೇ ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಇನ್ನೆರಡು ವರ್ಷಗಳು ಸರಿದೇ ಹೋಗುತ್ತವೆ. ಉಳಿದ ವಿದ್ಯಾರ್ಥಿ ಜೀವನದ ಕೊನೆಯ ಹಂತದ ಪ್ರತಿಯೊಂದು ಕ್ಷಣಗಳನ್ನು ಸ್ಮರಣೀಯವನ್ನಾಗಿಸಿಕೊಂಡು ಕಳೆದರೂ ನಾವೂ ಸಹ ಇಂಜಿನಿಯರ್ ಎಂದು ಹೆಮ್ಮೆಯಿಂದ ಕಾಲರ್ ಜಗ್ಗಿಕೊಳ್ಳಬಹುದು.

- ಲಹರಿ ಎಂ.ಎಚ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!