ಮಕರಂದ/ದೋಣಿ

ಮಳೆಯ ಅನುರಾಗದ ನೆನಪು...

ಮಳೆಯೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಧಾರಾಕಾರವಾಗಿ ಸುರಿದು ಮೈ ತಂಪು ಮಾಡುವ...

ಮಳೆಯೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಧಾರಾಕಾರವಾಗಿ ಸುರಿದು ಮೈ ತಂಪು ಮಾಡುವ ಜತೆಗೆ ನೆನಪುಗಳ  ಗಂಟನ್ನು ಬಿಚ್ಚಿ ಬೆಚ್ಚನೆಯ ಅನುಭವವನ್ನು ನೀಡುವ ಮಳೆಗೆ ವ್ಯಾಖ್ಯಾನಗಳು ಹಲವು. ಹಾಗೆ ನೋಡಿದರೆ ಪ್ರತಿಯೊಂದು ಮಳೆಗಾಲಕ್ಕೂ ನೆನಪುಗಳ ನಂಟು ಇದ್ದೇ ಇರುತ್ತದೆ. ಬಾಲ್ಯದ ತುಂಟಾಟಿಕೆ, ಯೌವನದ ಪ್ರೀತಿ, ವೃದ್ದಾಪ್ಯದ ನೋವು...ಹೀಗೆ ಜೀವನದ ಎಲ್ಲ ಸ್ತರದ ನೆನಪುಗಳು ಮಳೆಯೊಂದಿಗೆ ಸಮ್ಮಿಳಿತಗೊಂಡಿರುತ್ತವೆ. ಚಿಕ್ಕವರಿರುವಾಗ ಮಳೆ ನೀರಲ್ಲಿ ಆಟವಾಡಿದ ನೆನಪುಗಳನ್ನು ನೆನಪಿಸಿಕೊಂಡರೆ ಮನಸ್ಸು ಬಾಲ್ಯಕ್ಕೆ ಮರಳುತ್ತದೆ. ಮನೆಯ ಮುಂದಿನ ತೋಡಿನಲ್ಲಿ ಕಾಗದದ ದೋಣಿ ತೇಲಿ ಬಿಟ್ಟದ್ದು, ಅಣ್ಣನ ಜತೆ ಕೆರೆಯಲ್ಲಿ ಗಾಳ ಹಾಕಲು ಹೋಗಿ ಬೈಗುಳ ತಿಂದಿದ್ದು, ಅಂಗಳದಲ್ಲಿ ಜಾರಿ ಬಿದ್ದು ಗಾಯ ಮಾಡಿಕೊಂಡಿದ್ದು...ಆ ಬಾಲ್ಯ ಎಷ್ಟೊಂದು ಚೆನ್ನಾಗಿತ್ತು! ಬಾಲ್ಯದ ಸವಿಸವಿ ನೆನಪುಗಳನ್ನು ಮೆಲುಕು ಹಾಕಿ ನಗುವ ಹೊತ್ತಿಗೆ ಆಗಲೇ ಹರೆಯ ಕಾಲಿಟ್ಟಿರುತ್ತದೆ. ರೈನ್‌ಕೋಟ್ ಬಿಟ್ಟು ಕೈಯಲ್ಲಿ ಕೊಡೆ ಹಿಡಿದು ನಡೆಯುವ ಕಾಲ. ಆವಾಗ ಬೆನ್ನಲ್ಲಿರುವ ಬ್ಯಾಗ್, ತೊಟ್ಟ ಬಟ್ಟೆ ಒದ್ದೆಯಾಗದಂತೆ ಸಂಭಾಳಿಸಿಕೊಂಡು ಶಾಲೆಗೆ ಹೋಗುವ ಗಮ್ಮತ್ತೇ ಬೇರೆಯಿರುತ್ತಿತ್ತು.
ಹೀಗೆ ಶಾಲೆಯಿಂದ ಕಾಲೇಜು ಮೆಟ್ಟಿಲು ಹತ್ತುವ ಹೊತ್ತಿಗೆ ಅದೆಷ್ಟೋ ಮಳೆಗಾಲಗಳು ಕಾಲದೊಂದಿಗೆ ಸರಿದು ಹೋಗಿರುತ್ತವೆ. ಬಾಲ್ಯ, ಹದಿಹರೆಯದಲ್ಲಿ ಪುಳಕವನ್ನುಂಟು ಮಾಡುತ್ತಿದ್ದ ಮಳೆ, ಯೌವನಕ್ಕೆ ಕಾಲಿಟ್ಟಾಗ ಇನ್ನಷ್ಟು ಆಪ್ತವಾಗುತ್ತಾ ಹೋಗುತ್ತದೆ.
ಅದು ಮೊದಲ ಅನುರಾಗದ ನೆನಪಿನ ಮಳೆ...ಪ್ರಿಯಕರನ ಜತೆ ಮಳೆಯಲ್ಲಿ ಕೈ ಕೈ ಹಿಡಿದು ನಡೆದ ಮೊದಲ ಸ್ಪರ್ಶಾನುಭವ! ಉಫ್...ಒಂದೇ ಕೊಡೆಯಲ್ಲಿ ನಾನರ್ಧ, ಅವನರ್ಧ ನೆನೆಯುತ್ತಾ, ಬೆಚ್ಚಗಿನ ಅನುಭವ ಕೊಟ್ಟ ಮೊದಲ ಪ್ರೀತಿಯ ಪಿಸುಮಾತುಗಳು...ಧೋ ಎಂದು ಮಳೆ ಸುರಿಯುತ್ತಿದ್ದರೂ ಕಾಲೇಜು ಕ್ಯಾಂಟೀನ್‌ನಲ್ಲಿ ಕುಳಿತು ತಿಂದ ಐಸ್‌ಕ್ರೀಂಗಳು... ಹಾಸ್ಟೆಲ್ ರೂಂನಲ್ಲಿ ಕುಳಿತು ಗೀಚಿದ ಶಾಯರಿಗಳು...ಇವೆಲ್ಲ್ಲವೂ ಮತ್ತೆ ಮತ್ತೆ ಆ ಮಳೆಯನ್ನು...ಮೊದಲ ಪ್ರೀತಿಯನ್ನು ನೆನಪಿಸುತ್ತಲೇ ಇರುತ್ತವೆ.
ಕಾಲ ಸರಿಯುತ್ತಾ ಬಂದಂತೆ ಎಲ್ಲವೂ ಬದಲಾಗುತ್ತಾ ಹೋಗಿದೆ. ಆದರೆ ಮಳೆಗಾಲ?ಅದು ಈಗಲೂ ಅದರ ವೈಭವವನ್ನು ಉಳಿಸಿಕೊಂಡು ಸುರಿಯುತ್ತಲೇ ಇದೆ. ನಾವ್ಯಾವ ಊರಲ್ಲಿದ್ದರೇನಂತೆ? ಹೇಗಿದ್ದರೇನಂತೆ?
ಆ ಮುತ್ತಿನ ಹನಿಯಂಥ ನೀರಿನ ಸ್ಪರ್ಶ ಪುಳಕವನ್ನುಂಟು ಮಾಡದೇ ಇರುವುದಿಲ್ಲ.
ಈ ಮಳೆಯಲ್ಲಿ ಅದೆಷ್ಟೋ ಪ್ರೇಮಿಗಳು ನೆನೆಯುತ್ತಾ ಸಂಭ್ರಮಿಸುತ್ತಾರೆ. ಕಳೆದ ಕಹಿ ನೆನಪುಗಳನ್ನು ನೆನೆದು ಮಳೆಯಲ್ಲೇ ಕಣ್ಣೀರು ಸುರಿಸಿ ಹಗುರವಾಗುತ್ತಾರೆ. ನೆನಪುಗಳು ಕಾಡಿದಾಗ ಹಳೆಯ ಶಾಯರಿಗಳನ್ನು ಓದಿದರೆ ನಗು ಬರುತ್ತದೆ. ಹಾಗೇ ಸುಮ್ಮನೆ ಕುಳಿತಿರುವಾಗ ನೋಟ್‌ಬುಕ್‌ನ ಹಿಂದಿನ ಪುಟದಲ್ಲಿ ಬರೆದ ಕವನಗಳನ್ನು ಕೈಗೆತ್ತಿಕೊಳ್ಳುತ್ತೇನೆ. ಆ ಕವನದ ಸಾಲುಗಳಲ್ಲಿ ಕಳೆದು ಹೋದ ಆ 'ಪ್ರೀತಿ'ಗಾಗಿ ಹುಡುಕುತ್ತಿರುತ್ತೇನೆ.
ಆದರೇನು ಮಾಡುವುದು? ಅದು ಅಲ್ಲಿ ಇಲ್ಲ ಎಂದು ಅರಿವಾದಾಗ ಮಳೆಯಲ್ಲಿ ನೆನೆಯುವ ಆಸೆ.
ಹಳೆಯ ನೆನಪುಗಳನ್ನು ಹೊತ್ತು ತಂದ ಈ ಮಳೆಯಲ್ಲಿ ನೆನೆದಾಗ ಕಣ್ಣೀರು ಕೂಡಾ ಮಳೆಹನಿಯೊಂದಿಗೆ ಸೇರಿ ಮನಸ್ಸು ಹಗುರವಾಗುತ್ತದೆ. ಹೀಗೆ ಅದೆಷ್ಟು ಮಳೆ ಹನಿಗಳು ಒಬ್ಬರ ಕಣ್ಣೀರಾಗಿ ಸುರಿದು ಇನ್ನೊಬ್ಬರ ಕಣ್ಣೀರು ಒರೆಸಿರಬಹುದು ಅಲ್ವಾ? ಈ ಮಳೆಯೊಂದಿಗೆ ಬೆರೆತಿರಬಹುದಾದ ಸಂತಸದ ಕ್ಷಣಗಳಿಗೆ ಲೆಕ್ಕವುಂಟೆ? ಎಲ್ಲ ನೋವು ನಲಿವುಗಳನ್ನು ತನ್ನ ಗರ್ಭದಲ್ಲಡಗಿಸಿ ಮಳೆ ಸುರಿಯುತ್ತಿದೆ..ಈ ಕ್ಷಣ ನನ್ನದು ಎಂಬಂತೆ...ಎಲ್ಲವನ್ನೂ ಮರೆತು, ಅಲ್ಲ... ಮರೆತಂತೆ ನಟಿಸಿ ಹೆಜ್ಜೆ ಹಾಕಿದ್ದೇನೆ...ಈ ಮಳೆಯೊಂದಿಗೆ...
ಈ ಕ್ಷಣ ನನ್ನದು. ನನ್ನದು ಮಾತ್ರ.

- ರಶ್ಮಿ ಕಾಸರಗೋಡು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪೊಲೀಸ್ ಕಮಿಷನರ್ ಕಚೇರಿ ಮುಂದೆ HDK ಧರಣಿ: ಸ್ಟಿಂಗ್‌ ರೂವಾರಿಯ ಬಂಧನಕ್ಕೆ ಆಗ್ರಹ; 2 ದಿನಗಳ ಡೆಡ್‌ಲೈನ್‌!

ಸಂಶಯ ಬಂದ್ರೆ ಕುಮಾರಸ್ವಾಮಿಯನ್ನೂ ವಶಕ್ಕೆ ಪಡೆಯುತ್ತೇವೆ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

SIR ವಿವಾದ: ಚುನಾವಣಾ ಆಯೋಗ, ಜ್ಞಾನೇಶ್ ಕುಮಾರ್​ಗೆ ಸುಪ್ರೀಂ ಕೋರ್ಟ್ ನೋಟಿಸ್; ರಾಹುಲ್ ಗಾಂಧಿಗೂ ತರಾಟೆ

ಸ್ಟಿಂಗ್‌ ಆಪರೇಷನ್‌ ರೂವಾರಿ, ರೌಡಿಶೀಟರ್‌ ಫೋಟೋ ರಿಲೀಸ್‌ ಮಾಡಿದ ಕುಮಾರಸ್ವಾಮಿ!

ಮದುವೆಯಾಗುವುದಾಗಿ ನಂಬಿಸಿ ಕೈಕೊಟ್ಟ ಪ್ರಿಯಕರ? ಮನೆ ಮುಂದೆ ಯುವತಿ ಪ್ರತಿಭಟನೆ!-Video