ಕ್ಷೌರಿಕನೆಂಬ ಕರ್ಣ!
ಎಂದಿನಂತೆ ಕ್ಷೌರಿಕ ಬೆಳ್ಳಂಬೆಳಗ್ಗೆ ಶಾಪಿನ ಬಾಗಿಲು ತೆಗೆದ. ಅಷ್ಟರಲ್ಲೇ ಒಬ್ಬ ಸೈನಿಕ ಬಂದು, ಕಟಿಂಗು ಸೀಟಿನಲ್ಲಿ ಕೂತ. ಕಟಾವೆಲ್ಲ ಮುಗಿದ ಮೇಲೆ ಆ ಸೈನಿಕ ದುಡ್ಡು ಕೊಡಲು ಬಂದ. ..
ಎಂದಿನಂತೆ ಕ್ಷೌರಿಕ ಬೆಳ್ಳಂಬೆಳಗ್ಗೆ ಶಾಪಿನ ಬಾಗಿಲು ತೆಗೆದ. ಅಷ್ಟರಲ್ಲೇ ಒಬ್ಬ ಸೈನಿಕ ಬಂದು, ಕಟಿಂಗು ಸೀಟಿನಲ್ಲಿ ಕೂತ. ಕಟಾವೆಲ್ಲ ಮುಗಿದ ಮೇಲೆ ಆ ಸೈನಿಕ ದುಡ್ಡು ಕೊಡಲು ಬಂದ. ಆದರೆ, ಕ್ಷೌರಿಕ 'ಸರ್ ನಿಮ್ಮಿಂದ ದುಡ್ಡು ತಗೊಂಡ್ರೆ ನಮ್ಗೇ ಪಾಪ ಬರುತ್ತೆ. ನೀವು ದೇಶಸೇವೆ ಮಾಡೋರು. ಪರ್ವಾಗಿಲ್ಲ ಬೇಡ ಸರ್' ಎಂದು ಹೇಳಿದ. ಕ್ಷೌರಿಕನ ಉದಾತ್ತ ಮನಸ್ಸನ್ನು ಶ್ಲಾಘಿಸಿ ಸೈನಿಕ ಅಲ್ಲಿಂದ ಹೊರಟ. ಕ್ಷೌರಿಕನಿಗೆ ಅಂದು ದಿನವಿಡೀ ಭರ್ಜರಿ ವ್ಯಾಪಾರ.
ಮರುದಿನ ಬೆಳಗ್ಗೆ ಮುಂಚೆಯೇ ಅದೇ ಕಟಿಂಗು ಶಾಪಿಗೆ ಡಾಕ್ಟರ್ ಒಬ್ಬ ಬಂದ. ಕಟಿಂಗ್ ಮುಗಿದ ಮೇಲೆ ಆತನೂ ಕ್ಷೌರಿಕನಿಗೆ ದುಡ್ಡು ಕೊಡಲು ಮುಂದಾದ. ಆಗಲೂ ಕ್ಷೌರಿಕ, 'ಸರ್ ನಿಮ್ಮಂಥೋರಿಂದ ದುಡ್ಡು ತೆಗೆದ್ಕೊಳ್ಳೋದಾ? ಛೇ ಛೇ, ಪಾಪ ಬರುತ್ತೆ. ನೀವು ರೋಗಿಗಳ ಸೇವೆ ಮಾಡೋರು. ನೀವೇನೂ ಕೊಡುವುದು ಬೇಡ ಸರ್, ನೀವು ಬಂದಿದ್ದೇ ದೊಡ್ಡ ಖುಷಿ' ಎಂದ. ಆ ವೈದ್ಯ ಇವನ ಬೆನ್ನು ತಟ್ಟಿ, ತೆರಳಿದ. ಆ ದಿನವೂ ಕ್ಷೌರಿಕನಿಗೆ ಭರ್ಜರಿ ಲಾಭ.
ಮರುದಿನ ಬೆಳಗ್ಗೆ ಅದೇ ಸಮಯಕ್ಕೆ ಒಬ್ಬ ಸಾಹಿತಿ ಕಟಿಂಗಿಗೆಂದು ಬಂದ. ಕತ್ತರಿ ಪ್ರಯೋಗವೆಲ್ಲ ಮುಗಿದ ಮೇಲೆ ಅವನೂ ದುಡ್ಡು ಕೊಡಲು ಬಂದ. ಕ್ಷೌರಿಕ ಆಗಲೂ ಅದೇ ರಾಗ ಎಳೆದ. 'ನೀವು ಸಾಹಿತಿಗಳು ಸರ್, ಸಮಾಜದಲ್ಲಿ ಏನಾದರೂ ತಪ್ಪಾದರೆ ಅದರ ಬಗ್ಗೆ ಎಚ್ಚರಿಸೋರು. ಬದುಕಿನ ಒಳಗುಟ್ಟನ್ನೆಲ್ಲ ತಿಳಿಸೋರು. ನಿಮ್ಮಗಳಿಂದ ಕನ್ನಡಕ್ಕೆ 8 ಜ್ಞಾನಪೀಠ ಬಂದಿದೆ ಎಂದರೆ ಕಡಿಮೆಯೇ? ನೀವು ದುಡ್ಡು ಕೊಡುವುದೇ ಬೇಡ ಸರ್' ಎಂದ. ಸಾಹಿತಿಗೂ ಖುಷಿಯಾಯಿತು. ಅವನನ್ನು ಕರ್ಣನಿಗೆ ಹೋಲಿಸಿ ಮನೆಗೆ ನಡೆದ.
ಮರುದಿನ ಬೆಳಗ್ಗೆ ಕ್ಷೌರಿಕ ಬಾಗಿಲು ತೆಗೆಯುವುದಕ್ಕೂ ಮುಂಚೆ, ಸಾಹಿತಿಗಳ ದೊಡ್ಡ ಸಾಲು ಶಾಪಿನ ಎದುರು ನಿಂತಿತ್ತು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.