ವಾಸ್ತವವೆಲ್ಲ ಮಾಂತ್ರಿಕತೆ
ಎಡುವರ್ಡೋ ಗೆಲಿಯಾನೋ, ಲ್ಯಾಟಿನ್ ಅಮೆರಿಕದ ಬರಹಗಾರ ಮತ್ತು ಚಿಂತಕ. ಈತನ ಮೆಮೊರೀಸ್ ಆಫ್ ಫೈರ್, ಮಿರರ್, ಓಪನ್ ವೇನ್ಸ್ ಆಫ್ ಲ್ಯಾಟಿನ್ ...
ಎಡುವರ್ಡೋ ಗೆಲಿಯಾನೋ, ಲ್ಯಾಟಿನ್ ಅಮೆರಿಕದ ಬರಹಗಾರ ಮತ್ತು ಚಿಂತಕ. ಈತನ ಮೆಮೊರೀಸ್ ಆಫ್ ಫೈರ್, ಮಿರರ್, ಓಪನ್ ವೇನ್ಸ್ ಆಫ್ ಲ್ಯಾಟಿನ್ ಅಮೆರಿಕಾ ಪ್ರಸಿದ್ಧ ಕೃತಿಗಳು. ತನ್ನ ಸಾಹಿತ್ಯರಚನೆಯ ಬಗ್ಗೆ ಸಂದರ್ಶನವೊಂದರಲ್ಲಿ ಆತ ಹೇಳಿದ್ದು:
- ಪುಸ್ತಕಗಳೇ ನನ್ನನ್ನು ಬರೆಯುತ್ತವೆ. ಅದು ಹೇಗೆ ಸಂಭವಿಸುತ್ತದೆ ಅನ್ನುವುದು ನನಗಿನ್ನೂ ಗೊತ್ತಿಲ್ಲ. ಪದಗಳು ಮೆಲ್ಲನೆ ನನ್ನೊಳಗೆ ನುಸುಳಿ ಬಂದು ಕತೆಯಾಗಿಬಿಡುತ್ತವೆ. ಪುಸ್ತಕವಾಗಲಿದೆಯೋ ಇಲ್ಲವೋ ಗೊತ್ತಿಲ್ಲದೇ ನಾನು ಅವನ್ನು ಬರೆಯಲು ಶುರು ಮಾಡಿಬಿಡುತ್ತೇನೆ. ಅದು ತನ್ನಿಂತಾನೇ ಸೃಷ್ಟಿಸಿಕೊಳ್ಳುತ್ತದೆ. ಎಲ್ಲಿಂದಲೋ ಪ್ರತ್ಯಕ್ಷವಾಗುತ್ತವೆ. ಹೀಗಾಗಿ, ಪುಸ್ತಕವೇ ನನ್ನನ್ನು ಬರೆಯಿತು ಅನ್ನುವುದೇ ಸರಿ.
- ಹಾಸ್ಯ ಇಲ್ಲದಿದ್ದರೆ ಜನರನ್ನು ತಲುಪುವುದು ಸಾಧ್ಯವಿಲ್ಲ. ಅದು ನಾವು ಜೀವಂತವಾಗಿರುವುದರ ದ್ಯೋತಕ. ಜೀವನದ ಈ ಪ್ರವಾಹವನ್ನು ಸೌಂದರ್ಯ ಹಾಗೂ ಭಯದ ಮೂಲಕವೇ ವ್ಯಕ್ತಪಡಿಸುತ್ತೇನೆ. ವಾಸ್ತವ ಅನ್ನುವುದು ತುಂಬಾ ದ್ವಂದ್ವಾತ್ಮಕ. ಅದಕ್ಕಾಗಿಯೇ ನಾನು ನೋಡಿದ್ದನ್ನು, ಭಾವಿಸಿದ್ದನ್ನು, ಓದಿದ್ದನ್ನು, ಕೇಳಿದ್ದನ್ನು ಅದರದೇ ರೂಪದಲ್ಲಿ ಮಂಡಿಸುತ್ತೇನೆ- ಚಿಂತನೆಯನ್ನು ಅನುಭವಿಸುತ್ತಿರುವ ಸ್ವರೂಪದಲ್ಲಿ.
- ಬರೆಯುವುದು ನನಗೆ ಕರ್ತವ್ಯವಲ್ಲ, ಖುಷಿ. ಖುಷಿಯಿಲ್ಲದೆ ಅದನ್ನು ಕೊಡುವುದಕ್ಕೇ ಸಾಧ್ಯವಿಲ್ಲ. ನೀವು ಓದುಗರಿಗೆ ಖುಷಿ ನೀಡದಿದ್ದರೆ ಅವರು ಖಂಡಿತ ನಿಮ್ಮಿಂದ ದೂರ ಓಡಿ ಹೋಗುತ್ತಾರೆ. ಭಯಾನಕ ಕತೆಗಳನ್ನೇ ನೀವು ಹೇಳುತ್ತಿದ್ದರೂ, ಅವರಿಗೆ ಚೆಲುವು ಹಾಗೂ ನಗುವನ್ನು ಪಡೆಯುವ ಹಕ್ಕಿದೆ.
- ಮುಖ್ಯವಾದುದೆಂದರೆ, ಪ್ರಾಮಾಣಿಕವಾಗಿ ಬರೆಯುವುದು. ನಾವು ಪರಸ್ಪರರಿಗೆ ತಿಳಿದಿರುವುದು ನಮ್ಮ ಮಾತಿನಿಂದಲೇ. ನನ್ನ ಮಾತುಗಳನ್ನು ನಿಮಗೆ ಕೊಡುವುದೆಂದರೆ, ನನ್ನನ್ನೇ ನಿಮಗೆ ಕೊಟ್ಟಂತೆ.
- ವಾಸ್ತವವೆಲ್ಲ ಮಾಂತ್ರಿಕತೆಯೇ. ಜಗತ್ತಿನೆಲ್ಲೆಡೆಯೂ ಅದು ಹಾಗೇ. ನಾವದಕ್ಕೆ ಕುರುಡರಾಗಿದ್ದರೂ, ಅದರೊಳಗೆ ಅಚ್ಚರಿ, ನಿಗೂಢಗಳಿವೆ. ಬರೆಯುವುದರ ಮೂಲಕ ಅದನ್ನು ಸ್ವಲ್ಪವಾದರೂ ಹಿಡಿಯಬಹುದೇನೋ.
ಹರೀಶ್ ಕೇರ