ನಿತ್ಯದಂತೆ ಬೆಳಗ್ಗೆ 6.15ಕ್ಕೆ ಮನೆಯಿಂದ ಹೊರಬಿದ್ದೆ. ಎಂದಿನ ಗತಿಯಲ್ಲಿ ಓಡಲು ಪ್ರಾರಂಭಿಸಿದೆ. ಹತ್ತೇ ನಿಮಿಷದಲ್ಲಿ ನನ್ನ ರಸ್ತೆಯಲ್ಲಿದ್ದೆ. ಅದನ್ನು ನಿತ್ಯ ತುಳಿಯುತ್ತೇನೆ; ಅಷ್ಟೇ ಪ್ರೀತಿಸುತ್ತೇನೆ. ರಸ್ತೆಯ ಇಕ್ಕೆಲಗಳಲ್ಲಿ ಹಿಟಾನೋ ಜನಾಂಗಕ್ಕೆ ಸೇರಿದ ಜನ ಗುಲಾಬಿ ಹೂಗಳನ್ನು ಮಾರಲು ಸಿದ್ಧತೆ ನಡೆಸಿದ್ದರು. ಘಮಘಮ ಎನ್ನುವ ಗುಲಾಬಿ ಪರಿಮಳ ಸುಪ್ತ ಮನಸ್ಸಿನ ನನ್ನ ಭಾವನೆಗಳನ್ನು ಥಟ್ಟನೆ ಎಬ್ಬಿಸುತ್ತಿತ್ತು. ಏನೋ ವಿಶೇಷವಿದೆಯಲ್ಲ ಎನ್ನಿಸಿತು. ಅರೆಘಳಿಗೆಯಲ್ಲಿ ಮರೆವು ಆವರಿಸಿತ್ತು.
ಥಟ್ಟನೆ ನೆನಪಾಯಿತು.
ಸ್ಪೇನ್‌ನ ಬಾರ್ಸಿಲೋನದಲ್ಲಿ ನನ್ನ ಜೀವನ ಪ್ರಾರಂಭಿಸಿ ಹದಿಮೂರು ವಸಂತಗಳೇ ಕಳೆದಿವೆ. ದೇಹ, ಮನಸ್ಸು ಓಟದ ಲಯಕ್ಕೆ ಹೊಂದಿಕೊಂಡಿದ್ದವು. ಅಂದಮೇಲೆ ಆಯಾಸ ಇನ್ನೆಲ್ಲಿಯದು? ಯುರೇಕ! ನೆನಪಿಗೆ ಬಂತು. ಅದು 'ದಿಯಾ ದೇ ಸಂತ ಜೊರ್ದಿ' ವಿಶೇಷ ಹಬ್ಬ. ನಾನಿರುವ ರಾಜ್ಯ ಕಾತಲುನ್ಯದಲ್ಲಿ ಇದು ಪ್ರಸಿದ್ಧ ಹಬ್ಬಗಳಲ್ಲೊಂದು. ಈ ಹಬ್ಬದಲ್ಲಿ ಪುರುಷರು ಮಹಿಳೆಯರಿಗೆ ಗುಲಾಬಿ ಉಡುಗೊರೆ ನೀಡುತ್ತಾರೆ. ಮಹಿಳೆಯರು ಪುರುಷರಿಗೆ ಪುಸ್ತಕ ಉಡುಗೊರೆ ನೀಡುತ್ತಾರೆ. ಬಗೆಬಗೆಯ ಬಣ್ಣದ ಗುಲಾಬಿಗಳು ಕೈ ಬದಲಾಯಿಸುವುದನ್ನು ನೋಡುವುದೇ ಚೆಂದ. ಸ್ನೇಹ, ಪ್ರೀತಿ, ಗೌರವ ವಿನಿಮಯವಾಗಲು ಇದೆಂಥ ಅವಕಾಶ. ಮಹಿಳೆಯರು ಪುಸ್ತಕ ಉಡುಗೊರೆಯಾಗಿ ನೀಡುವಾಗ ಗಂಡನಾಗಿರಬಹುದು, ಸ್ನೇಹಿತನಾಗಿರಬಹುದು, ದೂರದ ಸಂಬಂಧಿಯಾಗಿರಬಹುದು ಎಲ್ಲರಿಗೂ ಒಂದೇ- ಎಲ್ಲರಿಗೂ ಪುಸ್ತಕವೇ.
ಕಾತಲುನ್ಯದ ಕೃತಿ ಕಥೆ
ಹಾಗೆ ನೋಡಿದರೆ ಪುಸ್ತಕ ಉಡುಗೊರೆ ನೀಡುವುದು ಪಾರಂಪರಿಕ ಸಂಪ್ರದಾಯವೇನೂ ಅಲ್ಲ. ತೀರಾ ಈಚಿನದು. 1923ರಿಂದ ಇದು ರೂಢಿಗೆ ಬಂತು. ಅದನ್ನು ಹುಟ್ಟುಹಾಕಿದ್ದು ಕೂಡ ಕಾತಲುನ್ಯ ರಾಜ್ಯವೇ. 'ಗುಲಾಬಿ ಪ್ರೀತಿಗೆ- ಪುಸ್ತಕ ನೆನಪಿಗೆ' ಎಂಬ ಘೋಷ ವಾಕ್ಯದೊಂದಿಗೆ ಪ್ರಾರಂಭವಾದ ಈ ಪ್ರೀತಿಯ ಕೊಡುಗೆ ಸತತವಾಗಿ ಸಾಗಿದೆ. ಯುನೆಸ್ಕೋ 1995ರಿಂದ ಪ್ರತಿವರ್ಷ ಏಪ್ರಿಲ್ 23ನೇ ದಿನಾಂಕವನ್ನು 'ವಿಶ್ವ ಪುಸ್ತಕ ದಿನ'ವನ್ನಾಗಿ ಆಚರಿಸುತ್ತಿದೆ.
ಲವ್ ಆ್ಯಂಡ್ ಲಿಟರೇಚರ್
ಬಾರ್ಸಿಲೋನ, ಕಾತಲುನ್ಯ ರಾಜ್ಯದ ರಾಜಧಾನಿ. ಕತಲಾನ್ ಹಾಗೂ ಸ್ಪಾನಿಷ್ ಭಾಷೆಗಳ ಸಾಂಸ್ಕೃತಿಕ ಕೇಂದ್ರ. ಸ್ಪಾನಿಷ್‌ನ ಹೆಸರಾಂತ ಲೇಖಕ, ಕವಿ ಮ್ಯುಗೆನ್ ಸರ್ವಂತೆಸ್ 1616 ಏಪ್ರಿಲ್ 22ರಂದು ನಿಧನನಾಗಿದ್ದ. ಕವಿಯ ಗೌರವಾರ್ಥ ಗುಲಾಬಿ ವಿನಿಮಯ ಶುರುವಾಯಿತು. ಇಂಗ್ಲಿಷಿನ ಹೆಸರಾಂತ ನಾಟಕಕಾರ ಷೇಕ್ಸ್‌ಪಿಯರ್ ಸತ್ತದ್ದು 1616ರಲ್ಲೇ. ಇದು ಕೂಡ ಈ ಆಚರಣೆಗೆ ಮಹತ್ವ ತಂದುಕೊಟ್ಟಿತು. ಕಾತಲುನ್ಯ ಒಂದು ಹೆಜ್ಜೆ ಮುಂದೆ ಹೋಗಿ ಪ್ರೀತಿಯೊಂದಿಗೆ ಸಾಹಿತ್ಯವನ್ನು ಬೆಸೆಯಿತು. 'ಲವ್ ಆ್ಯಂಡ್ ಲಿಟರೇಚರ್' ಹಾಲು ಜೇನು ಸೇರಿದಂತೆ ಜನರ ಮನದಲ್ಲಿ ತಂಪೆರೆಯಿತು. ಅದನ್ನು ಪೋಷಿಸಿಕೊಳ್ಳುತ್ತಲೇ ಬಂದರು. ಬೆಳಗ್ಗೆಯಿಂದ ರಾತ್ರಿಯವರೆಗೆ ನಡೆಯುವ ಪುಸ್ತಕ, ಗುಲಾಬಿಯ ಮಾರಾಟದ ಭರಾಟೆ ನೋಡಿಯೇ ಸವಿಯಬೇಕು. ಗಂಟೆಗಟ್ಟಳೆ ಸಾಲಿನಲ್ಲಿ ನಿಂತು ಸರದಿ ಬಂದಾಗ ವಿನಮ್ರತೆಯಿಂದ ತಮ್ಮ ನೆಚ್ಚಿನ ಲೇಖಕನ ಹಸ್ತಕ್ಷಾರವನ್ನು ಪುಸ್ತಕದ ಮೇಲೆ ಪಡೆದು ತಮ್ಮವರಿಗೆ ಉಡುಗೊರೆ ನೀಡಲು ಧಾವಿಸುವ ಜನರ ಹಿಂಡು ಒಮ್ಮೊಮ್ಮೆ ನನಗೆ ಪುಳಕದ ಪರಾಕಾಷ್ಠೆಗೆ ಒಯ್ಯುತ್ತದೆ. ಲೇಖಕರೂ ಅಷ್ಟೇ. ಯಾವುದೇ ಹಮ್ಮು ಬಿಮ್ಮು ತೋರದೆ ಓದುಗರೊಂದಿಗೆ ಸಲೀಸಾಗಿ ಬೆರೆತು ನಲಿಯುತ್ತಾರೆ.
ಐಪ್ಯಾಡ್ ಯುಗದಲ್ಲೂ ಓದು
ಅಷ್ಟೇ ಏಕೆ, ಯಾವುದೇ ದಿನ ಮೆಟ್ರೋ ರೈಲು ಹೊಕ್ಕರೂ ನಮಗೆ ಕಾಣುವುದು ಪುಸ್ತಕದಲ್ಲಿ ಮುಖ ಹುದುಗಿಸಿರುವವರ ದೃಶ್ಯ. ಕಾಡುಹರಟೆ ಇಲ್ಲವೇ ಇಲ್ಲ ಎನ್ನುವಷ್ಟು ನಗಣ್ಯ. ಅದರಲ್ಲೂ ತರುಣ ತರುಣಿಯರು ಮೊಬೈಲ್, ಐ-ಪ್ಯಾಡ್ ದಿನಗಳಲ್ಲೂ ಪುಸ್ತಕದಲ್ಲಿ ತಲ್ಲೀನರಾಗಿರುತ್ತಾರೆಂದರೆ ನೀವು ನಂಬಲೇಬೇಕು. ಸ್ಪೇನ್ ಮಾತ್ರವಲ್ಲ, ಪೋರ್ಚುಗಲ್, ಇಂಗ್ಲೆಂಡ್, ಜೆಕ್ ರಿಪಬ್ಲಿಕ್, ಹಂಗೇರಿ, ಕೊಸಾವೋ, ಬಲ್ಗೇರಿಯ, ರಷ್ಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಇದರ ಆಚರಣೆ ಉಂಟು. ಸ್ಪೇನ್‌ನಲ್ಲಂತೂ ವರ್ಷದ ಅರ್ಧ ಪುಸ್ತಕ ಮಾರಾಟ ಒಂದೇ ದಿನದಲ್ಲಿ ಆಗುತ್ತದೆ.
75 ಲಕ್ಷ ಜನ ಇರುವ ಕಾತಲುನ್ಯ ರಾಜ್ಯದಲ್ಲಿ ಈ ಒಂದು ದಿನವೇ 15ರಿಂದ 20 ಲಕ್ಷ ಪುಸ್ತಕಗಳು ಮಾರಾಟವಾಗುತ್ತವೆ. ಅಷ್ಟೇ ಪ್ರಮಾಣದ ಗುಲಾಬಿ ಕೂಡ ಕೈ ಕೈ ಬದಲಾಯಿಸುತ್ತವೆ. ಸಾಮಾನ್ಯವಾಗಿ ಇಲ್ಲಿ ಒಂದು ಸಾಧಾರಣ ಪುಸ್ತಕದ ದರ ಎಂದರೆ 15ರಿಂದ 30 ಯೂರೋ.
ಸ್ವತ- 'ದಿಯಾ ದೇ ಸಂತ ಜೊರ್ದಿ'ಯಲ್ಲಿ ಪಾಲ್ಗೊಂಡ ಸಾಹಿತ್ಯ ಸಾಂಸ್ಕೃತಿಕ ಸಂಭ್ರಮದಿಂದ ಉಬ್ಬಿದ್ದ ಮನಸ್ಸು ಒಂದೆಡೆ; ಐಪಿಎಲ್ ಅಟ್ಟಹಾಸ, ಟಿಕೆಟ್‌ಗೆ ಕಾಳಸಂತೆ, ಸ್ಪಾಟ್ ಫಿಕ್ಸಿಂಗ್ ಅಬ್ಬರದ ಆ ನೋವು ಇನ್ನೊಂದೆಡೆ. ಭಾರತೀಯರ ಅಭಿರುಚಿ ಬದಲಾಗುವುದೇ? ಅಯ್ಯಾ, ಸಾವಿರ ಪುಸ್ತಕ ಮುದ್ರಿಸಿ ಖರೀದಿಸಲು ಗ್ರಂಥಾಲಯದ ಖರೀದಿಗೆ ಕಾಯುತ್ತಾರಲ್ಲಯ್ಯ! ಎತ್ತಣಿಂದೆತ್ತಣ ಸಂಬಂಧವಯ್ಯಾ!
- ಮೂಕನಹಳ್ಳಿ ರಂಗಸ್ವಾಮಿ, ಬಾರ್ಸಿಲೋನ
muraram@yahoo.com