"ಅಮ್ಮಾ.... ಮಾ.... ಪ್ರೀಸ್ ಹೊಡಿಬೇಡ, ನನ್ನಾಣೆ, ನನ್ಗೆ ಗೊತ್ತಿಲ್ಲ! ಆ... ಆ... ನಾಲ್ಕಾಣೆ ಹೇಗೆ ಕಳೀತು ಅಂತಾ ನನಗೆ ಗೊತ್ತಿಲ್ಲ." ಹೀಗಂತ ಹತ್ತು ವರ್ಷಗಳ ಹಿಂದೆ ಅಮ್ಮನ ಮುಂದೆ ಗೋಳಿಟ್ಟಿದ್ದೆ. ಅವತ್ತು ಮುಂಜಾನೆ ಕಸ್ತೂರಿ ಕನ್ನಡ ಎಕ್ಸಾಮು. ನಾನೋ ಹಿಂದಿನ ದಿನವೇ ಎಲ್ಲ ಕಂಠಪಾಠ ಮಾಡಿ, ಯುದ್ದಕ್ಕೆ ಹೊರಟ ಸೈನಿಕನಂತೆ ಅಮ್ಮನ ಮುಂದೆ ಬಂದು, ರೊಕ್ಕಾ ಕೊಡು ಇವತ್ತು ಎಕ್ಸಾಮ್ ಐತಿ ಅಂದಿದ್ದೆ. ಅಮ್ಮ ತನ್ನ ಸಾಸುವೆ ಡಬ್ಬದಿಂದ ಹಿಡಿದು ಕೊನೆಗೆ ಅಜ್ಜಿಯ ಎಲೆ ಅಡಿಕೆಯ ಚೀಲವನ್ನು ತಡಕಾಡಿದರೂ ಕೂಡಾ ಅವತ್ತು ಹತ್ತು ಪೈಸೆಯೂ ಸಿಗಲಿಲ್ಲ! ನಾನು ಕೊಂಚ ಮಂಕಾದೆ. ಕೊನೆಗೆ ಅಂತೂ ಅಣ್ಣನ ಡಬ್ಬಿ ಗಡಿಗೆಯಿಂದ ನಾಲ್ಕಾಣೆಯೊಂದಿಗೆ ಖುಷಿ ನನ್ನ ಹೆಗಲೇರಿತ್ತು. ಅಮ್ಮನೂ ಸುಮ್ಮನಾದಳು. ಇನ್ನೇನು ಪೆನ್ನು ರಟ್ಟು ಹಿಡಿದು, ನಾಲ್ಕಾಣೆ ಸಿಕ್ಕ ಖುಷೀಲಿ ಹಗ್ಗ ಹರಿಬಿಟ್ಟ ಕರುವೊಂದು ನೆಗೆದಾಡಿ ತನ್ನ ತಾಯಿಯನ್ನ ಸೇರುವಂತೆ ನಾನು ಶಾಲೆ ಸೇರಿದ್ದೆ.
ಅಂತೂ ಶಾಲೆ ಸೇರಿದೆ. ಇನ್ನು ಪೇಪರ್ ತಗೋಬೇಕಲ್ಲಾ ಜೇಬಿಗೆ ಕೈ ಹಾಕಿದೆ, ಜೇಬಲ್ಲಿ ಹೊಕ್ಕ ನನ್ನ ಕೈ ಜೇಬಿನಿಂದಾಚೆಗೆ ಜಾರಿ ಇಣುಕಿ ನೋಡಿತ್ತು. ಅರೆ! ನನ್ಮಗಂದು ನಾಲ್ಕಾಣೆ ಇಲ್ಲ. ಕೊಂಚ ತಬ್ಬಿಬ್ಬಾದೆ. ಅಲ್ಲೆ ಬಿದ್ದಿರಬಹುದೆಂದು ಹುಡುಕಾಡಿದೆ. ಸಿಗಲಿಲ್ಲ. ಎರಡೇ ನಿಮಿಷದಲ್ಲಿ ಮನೆ ಕಡೆಗೆ ಓಡಿದೆ, ನಂತರ ನಡೆದ ಸಂಗತಿಯನ್ನೆಲ್ಲಾ ಹೇಳಿ ಅಮ್ಮನ ಮುಂದೆ ಮತ್ತೆ ಬಿಕ್ಷುಕನಂತೆ ನಿಂತಿದ್ದೆ. ಅಮ್ಮ, "ಶೆಟ್ರ ಅಂಗಡೀಲಿ ಶುಂಠಿ ಪೆಪ್ಪರಮಿಂಟ್ ತಿಂದು ದುಡ್ಡು ಕಳೆದೋಯ್ತು ಅಂತೀಯಾ" ಅನ್ನುತ್ತಾ ನನ್ನ ಮೇಲೆ ಕರಪ್ರಹಾರ ಮಾಡಿದ್ಲು. ನಾನು ಅತ್ತೆ, ಅತ್ತೆ, ಅಳುತ್ತಲೇ ಇದ್ದೆ. ಆದರೆ ನನ್ನದೊಂದೇ ಗೋಳು ನಾನು ರೊಕ್ಕ ಹಾಳು ಮಾಡಿಲ್ಲ ಅಂತ. ಸುಪ್ರಿಂಕೋರ್ಟ್ ಶಿಕ್ಷೆ ಕೊಟ್ಟ ಮೇಲೆ ಶಿಕ್ಷೆ ಅನುಭವಿಸಲೇ ಬೇಕಲ್ವಾ? "ಹಾಗಾದ್ರೆ ಹೋಗು, ಎಲ್ಲೋ ಬಿದ್ದಿರಬೇಕು ಹುಡ್ಕೊಂಡು ಬಾ" ಅಂದ್ಲು, ಹೊರಟೆ. ನಾಲ್ಕಾಣೆ ಅಲ್ಲೇ ಮನೆ ಹಿತ್ತಲಲ್ಲೇ ಬಿದ್ದಿತ್ತು. ಅದನ್ನು ಎತ್ತಿಕೊಂಡವನೇ ಶಾಲೆಗೆ ನೆಗೆದೆ.
ಎಕ್ಸಾಮ್ ಟೈಮೂ ಆಗಿತ್ತು. ಬಾಗಿಲಲ್ಲಿ ನಿಂತ ಮಾಸ್ತರ ವಿಚಾರಿಸಿದರು. ನಡೆದದ್ದನ್ನು ಹೇಳಿದೆ. ಅಂತೂ ಎಕ್ಸಾಮ್‌ಗೆ ಹಾಲ್ ಟಿಕೆಟ್ ಸಿಕ್ಕಂಗಾಯ್ತು, ಮಾಸ್ತರು ಒಳಗೆ ಬಿಟ್ಟಿದ್ದರು. ಖುಷೀಲಿ ಎಕ್ಸಾಮ್ ಬರೆದಿದ್ದೇ, ಬರೆದಿದ್ದು. ಎಕ್ಸಾಮು ಮುಗೀತು, ಮರುದಿನವೇ ರಿಸಲ್ಟೂ ಬಂತು. ಅರೆ! ಕ್ಲಾಸಿಗೆ ನಾನೇ ಸೆಕೆಂಡು. ಅಲ್ಲಿಯವರೆಗೆ ಅಮ್ಮನಿಗೆ ರೊಕ್ಕ ಸಿಕ್ಕಿದ್ದು ಹೇಳಿರಲಿಲ್ಲ, ಕ್ಲಾಸಿಗೆ ಸೆಕೆಂಡು ಬಂದಿದ್ದೂ ಹೇಳಿರಲಿಲ್ಲ. ಅಂತೂ ಯುದ್ಧ ಗೆದ್ದು ಮನೆಗೆ ಮರಳಿದೆ. ಅಮ್ಮಂಗೆ ಹೇಳಿದೆ, ನಾನೇ ಸೆಕೆಂಡು ಕ್ಲಾಸಿಗೆ! ಅಮ್ಮ ಖುಷಿಯಾದಳು. ಕರ ಪ್ರಹಾರ ಮಾಡಿದ ಜಾಗವನ್ನು ಕೊಂಚ ನೇವರಿಸುತ್ತಾ ನನ್ನ ತಬ್ಬಿ ಮುತ್ತಿಟ್ಟಳು. ಈಗಲೂ ಅಪರೂಪಕ್ಕೆ ನಾಲ್ಕಾಣೆ ಸಿಕ್ಕರೆ ಆ ದಿನಗಳು ನೆನಪಾಗುತ್ತವೆ.
- ರಾಘವೇಂದ್ರ ಕುಪ್ಪೇಲೂರ್, ರಟ್ಟೀಹಳ್ಳಿ