ಮಕರಂದ/ದೋಣಿ

ಮತ್ತೆ ಬಾರದ ಆ ದಿನಗಳು

ಕಾಲೇಜು ಜೀವನ ಎಂಬುದು ನಮ್ಮ ಜೀವಿತಾವಧಿಯಲ್ಲಿನ ಅದ್ಭುತವಾದ ಕಾಲಾವಧಿ. ಈ ಅವಧಿಯಲ್ಲಿ...

ಕಾಲೇಜು ಜೀವನ ಎಂಬುದು ನಮ್ಮ ಜೀವಿತಾವಧಿಯಲ್ಲಿನ ಅದ್ಭುತವಾದ ಕಾಲಾವಧಿ. ಈ ಅವಧಿಯಲ್ಲಿ ಬದುಕಿನ ಒಂದೊಂದೇ ಪಾಠವನ್ನು ಕಲಿಯುವುದರ ಜೊತೆಗೆ ಎಂದಿಗೂ ಮರೆಯಲಾಗದ ಸುಂದರ ಸವಿನೆನಪುಗಳು ಸೃಷ್ಟಿಯಾಗುತ್ತವೆ. ಕೆಲವು ನೆನಪುಗಳು ಮನಸ್ಸಿಗೆ ಮುದ ನೀಡಿ ತುಟಿಯ ಮೇಲೆ ನಗು ತಂದರೆ ಕೆಲವು, ಕಂಬನಿಯನಿಸುತ್ತವೆ. ಅಂತಹ ನೆನಪುಗಳ ಕಣಜ ನಮ್ಮ ಸ್ನಾತಕೋತ್ತರ ಪದವಿಯ ದಿನಗಳು.

ಎರಡು ವರ್ಷಗಳ ಕೆಳಗೆ, ಅಂದರೆ ಪದವಿ ಮುಗಿಸಿ ಸ್ನಾತಕೋತ್ತರ ಪದವಿಗೆ ಕಾಲಿಟ್ಟಾಗ ತರಗತಿಯಲ್ಲಿ ಎಲ್ಲವೂ ಹೊಸ ಮುಖಗಳೇ, ಯಾರಿಗೂ ಯಾರೂ ಗೊತ್ತಿರಲಿಲ್ಲ. ಅದರೆ ಇಂದು ಹಾಗಲ್ಲ: ಎಲ್ಲರೂ ಎಲ್ಲರಿಗೂ ಗೊತ್ತು. ಹೀಗೆ ಗೆಳೆಯರ ಇಷ್ಟ ಕಷ್ಟಗಳನ್ನು ಗೊತ್ತು ಮಾಡಿಕೊಂಡು ನಾವೀಗ ಕಾಲೇಜು ಜೀವನ ಎಂಬ ಸುಂದರ ಕನಸಿನಿಂದ ದೂರ ಸರಿಯುತ್ತಿದ್ದೇವೆ.

ಗೆಳೆಯ ಗೆಳತಿಯರೊಂದಿಗಿನ ಕ್ಲಾಸ್‌ರೂಮ್, ಕ್ಯಾಂಟೀನ್, ಕ್ಯಾಂಪಸ್‌ನಲ್ಲಿನ ಹರಟೆಗಳು, ಭಯ ಆತಂಕಗಳೊಡನೆ ಮಾಡಿದ ಸೆಮಿನಾರ್‌ಗಳು, ಕೇಸ್‌ಸ್ಟಡಿ, ಗ್ರೂಪ್ ಡಿಸ್ಕಷನ್‌ಗಳು, ಅಸೈನ್‌ಮೆಂಟ್‌ಗಳು, ಬೇಕು ಬೇಕೆಂದೇ ಅಧ್ಯಾಪಕರನ್ನು ಗೋಳು ಹೊಯ್ದುಕೊಂಡ ಕ್ಷಣಗಳ ಜೊತೆ ಅವರ ತಾಳ್ಮೆ ಪರೀಕ್ಷಿಸುವ, ಅವರ ಬುದ್ದಿವಂತಿಕೆಗೆ ಸವಾಲೆಸೆಯುವ ಮತ್ತು ನಮ್ಮ ಬುದ್ದಿವಂತಿಕೆಯನ್ನು ಪ್ರದರ್ಶಿಸುವ ತರಲೆ ಪ್ರಶ್ನೋತ್ತರಗಳು, ಟ್ರಿಪ್‌ಗಳು, ಪಿಕ್‌ನಿಕ್‌ಗಳು, ಕ್ಲಾಸ್‌ಗೆ ಬಂಕ್ ಹೊಡೆದು ನೋಡಿದ ಸಿನಿಮಾಗಳು, ಬರ್ತಡೇ ಸೆಲೆಬ್ರೆಷನ್ ಮತ್ತು ಪಾರ್ಟಿಗಳು, ಗೆಳತಿ ಪ್ರಥಮವಾಗಿ ಕವಿತೆ ಬರೆದಳೆಂದು ಟ್ರೀಟ್ ಹೆಸರಿನಲ್ಲಿ ಹಾಕಿದ ಟೋಪಿಗಳು, ಎಂಜಾಯ್‌ಮೆಂಟ್‌ನ ಹೆಸರಿನಲ್ಲಿ ನಾವೇನೇ ಮಾಡಿದರೂ ತಪ್ಪೆಂದು ವಾದಿಸುವ ಉಪನ್ಯಾಸಕರುಗಳ ವಾದಗಳು, ಕೀಟಲೆ ಮಾಡಲೆಂದು ಗೆಳೆಯರ ಮಾತಿನಲ್ಲೇ ಸೃಷ್ಟಿಯಾದ ಗೆಳೆಯ ಗೆಳತಿಯರ ಅಸ್ಯೂಮ್ಡ್ ಜೋಡಿಗಳು, ಸ್ನೇಹಿತರ ಮನೆಯ ತಿಂಡಿಗಳು... ನಮ್ಮ ಕಣ್ಣೆದುರೇ ನಡೆದ ಸಂಗತಿಗಳಾದರೂ ಅವೆಲ್ಲವೂ ಈಗ ನೆನಪುಗಳಾಗಿ ಮಾರ್ಪಾಡಾಗುತ್ತಿವೆ.

ಎರಡು ವರ್ಷಗಳ ಕಾಲ ಆನಂದಿಸಿ, ಅನುಭವಿಸಿದ ಸುಂದರ ಕ್ಷಣಗಳಿಂದ ದೂರಾಗುತ್ತಿದ್ದೇವೆ ಎಂಬ ಆತಂಕದ ಜೊತೆಗೆ ನೋವು ನಲಿವಿನ ಕ್ಷಣಗಳಲ್ಲಿ ಸಮನಾಗಿ ಭಾಗಿಯಾಗಿ, ಕಷ್ಟಕಾಲಗಳಲ್ಲಿ ಸಾಂತ್ವನದ ಮಾತುಗಳನ್ನಾಡಿ ಸಂತೈಸುತ್ತಿದ್ದ ಗೆಳೆಯರು, ನಾವೆಷ್ಟೇ ತರಲೆ ತಮಾಷೆ ಮಾಡಿದರೂ ಅವೆಲ್ಲವನ್ನೂ ಸಹಿಸಿಕೊಂಡು ತಿದ್ದಿ ತೀಡಿದ ಶಿಕ್ಷಕರಿಂದ ದೂರವಾಗುತ್ತಿದ್ದೇವೆ ಎಂಬುದನ್ನು ನೆನೆದರೆ ಮನಸ್ಸಿಗೆ ಏನನ್ನೋ ಕಳೆದುಕೊಂಡ ಭಾವ. ಇನ್ನು ಮುಂದೆ ಸೆಮಿನಾರ್‌ಗಳಿಲ್ಲ, ಕೇಸ್‌ಸ್ಟಡಿ, ಡಿಸ್ಕಷನ್‌ಗಳಿಲ್ಲ. ಇಂಟರ್ನಲ್ಸ್-ಎಗ್ಸಾಮ್‌ಗಳಿಲ್ಲ, ಅಟೆಂಡೆನ್ಸ್-ಅಸೈನ್‌ಮೆಂಟ್‌ಗಳ ತಲೆನೋವಿಲ್ಲ. ಬೋರ್ ಎನಿಸುವ ಕ್ಲಾಸ್‌ಗಳಿಲ್ಲ. ಎರಡು ವರ್ಷಗಳ ಸ್ನಾತಕೋತ್ತರ ಪದವಿಯ ದಿನಗಳು ಎರಡು ನಿಮಿಷಗಳಂತೆ ಕಳೆದು ಹೋದವಲ್ಲ ಎಂದು ಮನಸ್ಸಿಗೆ ಬೇಜಾರಾಗುತ್ತದೆ.

ಹಲವು ವಿಚಾರಗಳನ್ನು ಕಲಿತು, ಹೊಸ ಅನುಭವಗಳೊಂದಿಗೆ ಬದುಕು ರೂಪಿಸಿಕೊಳ್ಳುವ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಕೋಟಿ ಕೊಟ್ಟರೂ ಬಾರದ ಕಾಲೇಜು ದಿನಗಳ ಸುಂದರ ನೆನಪುಗಳ ಗಣಿಯನ್ನೊತ್ತು ವಿದ್ಯಾರ್ಥಿ ಜೀವನದ ಕೊನೆಯ ಹಂತವನ್ನು ದಾಟಿ ಜೀವನದ ಮತ್ತೊಂದು ಮಗ್ಗುಲಿಗೆ ವಾಲುವುದರೊಂದಿಗೆ ಬಾಳ ದಾರಿಯನ್ನರಸುತ್ತಾ ಹೊರಡಲು ಮನಸ್ಸಿಲ್ಲದ ಮನಸ್ಸಿನಿಂದ ಅಣಿಯಾಗುತ್ತಿದ್ದೇವೆ.

-ರಾಘವೇಂದ್ರ. ಕೆ, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇಂಧನ ಸ್ಥಾವರಗಳ ಮೇಲಿನ ದಾಳಿಯನ್ನು ನಿಲ್ಲಿಸಲು ರಷ್ಯಾ-ಉಕ್ರೇನ್ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

ಕೊನೆಯ ಓವರ್‌ನಲ್ಲಿ ಭಾರತಕ್ಕೆ ವಿಂಡೀಸ್ ವಿರುದ್ಧ ರೋಚಕ ಜಯ: T20 ಸರಣಿಯಲ್ಲಿ 2-1 ಮುನ್ನಡೆ!

'We're Sorry': ಅಭಿಜಿತ್ ದೀಪ್ಕೆಗೆ ಅಜ್ಜಿಯ ಸಾವಿನ ಬಗ್ಗೆ ತಿಳಿಸಿದ್ದ ಮಹಿಳಾ ಪೊಲೀಸ್; ಹೇಗಿತ್ತು CJP ನಾಯಕನ ಪ್ರತಿಕ್ರಿಯೆ...: ವಿಡಿಯೋ ವೈರಲ್!

'ಮತದಾನದ ಹಕ್ಕನ್ನೇ ಕಸಿದರೆ ಯಾವ ಪಕ್ಷವೂ ಸುರಕ್ಷಿತವಾಗಿರಲ್ಲ': SIR ವಿರುದ್ಧ ದೇಶಾದ್ಯಂತ ಹೋರಾಟಕ್ಕೆ CJP ಕರೆ

ಸ್ಟಿಂಗ್‌ ಆಪರೇಷನ್ ಆರೋಪ: ಶಾಂಗ್ರೀಲಾ ಹೋಟೆಲ್‌ನಲ್ಲಿ ಯಾರ ಜೊತೆ ಕುಳಿತಿದ್ರಿ; ಸಿಎಂ ಶಿವಕುಮಾರ್ ವಿರುದ್ಧ HDK ಹೊಸ ಬಾಂಬ್